ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮುಲು ಉಪವಾಸ ಆರಂಭ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಮುನಿರಾಬಾದ್: ತುಂಗಭದ್ರಾ ಜಲಾಶಯದಲ್ಲಿನ ಹೂಳನ್ನು ತೆಗೆಸುವಂತೆ ಸರ್ಕಾರವನ್ನು ಆಗ್ರಹಿಸಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಎರಡು ದಿನಗಳ ಉಪವಾಸ ಸತ್ಯಾಗ್ರಹವನ್ನು ಮುನಿರಾಬಾದ್‌ನಲ್ಲಿ ಭಾನುವಾರ ಆರಂಭಿಸಿದರು.

ತುಂಗಭದ್ರೆಗೆ ಪೂಜೆ ಸಲ್ಲಿಸಿ, ಹುಲಿಗಿಯ ಹುಲಿಗೆಮ್ಮದೇವಿ ದರ್ಶನ ಪಡೆದು, ಹೊಸನಿಂಗಾಪುರದಿಂದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಬಂದ ಶ್ರೀರಾಮುಲು, “ನದಿಯಲ್ಲಿ ತುಂಬಿರುವ ಹೂಳಿನಿಂದ ಲಕ್ಷಾಂತರ ರೈತರು ಅನುಭವಿಸುವ ಸಮಸ್ಯೆಗಳ ಕುರಿತು ಸರ್ಕಾರಗಳ ಕಣ್ತೆರೆಸುವ ನಿಟ್ಟಿನಲ್ಲಿ ಎರಡು ದಿನಗಳ ಈ ಉಪವಾಸ ಕೈಗೊಂಡಿದ್ದೇನೆ” ಎಂದರು.

ಪ್ರಾಸ್ತಾವಿಕ ಮಾತನಾಡಿದ ಪಕ್ಷದ ವಕ್ತಾರ ವೈ.ಎನ್.ಗೌಡರ್, “ಬಡವರ, ಶ್ರಮಿಕರ, ರೈತರ ಮುಖಂಡರಾದ ಶ್ರೀರಾಮುಲು ಈ ಮೊದಲು ಉತ್ತರಕ್ಕಾಗಿ ಉಪವಾಸ, ಬೀದರ್‌ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದರು. ಈಗ ರೈತರ ಸಲುವಾಗಿ ಹೂಳು ತೆಗೆದು ನೀರನ್ನು ಉಳಿಸಿ ಎಂದು ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಹಾಗೂ ತುಕ್ಕುಹಿಡಿದಿರುವ ಕಾಂಗ್ರೆಸ್ ಪಕ್ಷವನ್ನು ಬದಿಗಿರಿಸಿ ಜನರ ಸಮಸ್ಯೆ ಪರಿಹಾರಕ್ಕೆ ಹೋರಾಡುವ ಬಿಎಸ್‌ಆರ್ ಕಾಂಗ್ರೆಸ್‌ಗೆ ಬೆಂಬಲ ನೀಡಿ” ಎಂದು ಕೋರಿದರು. “ವಿಶ್ವ ಪ್ರಸಿದ್ಧ ಸೋನಾಮಸೂರಿ ಭತ್ತವನ್ನು ಬೆಳೆಯುವುದು ನಮ್ಮ ಭಾಗದಲ್ಲಿ ಮಾತ್ರ. ಭತ್ತದ ರಫ್ತಿನಿಂದ ದೊರೆಯುವ ಆದಾಯದಲ್ಲಿಯಾದರೂ ಸರ್ಕಾರ ಈ ನದಿಯ ಹೂಳು ತೆಗೆಸಬೇಕು” ಎಂದು ಮುಖಂಡ ಕೆ. ವಿರೂಪಾಕ್ಷಪ್ಪ ಆಗ್ರಹಿಸಿದರು.

ಶಾಸಕ ಸೋಮಶೇಖರ ರೆಡ್ಡಿ, ಡಾ. ವಿ.ಮಹಿಪಾಲ್ ಮಾತನಾಡಿದರು. ಶಾಸಕ ಮೃತ್ಯುಂಜಯ ಜಿನಗಾ, ಸಂಸದರಾದ ಸಣ್ಣಫಕೀರಪ್ಪ ಮತ್ತು ಜೆ.ಶಾಂತಾ, ಶಾಸಕರಾದ ನಾಗೇಂದ್ರ ಮತ್ತು ಸುರೇಶ್‌ಬಾಬು, ಕೆ.ಎಂ.ಸೈಯದ್, ಚಿತ್ರನಟಿ ರಕ್ಷಿತಾ, ಮಾಜಿ ಶಾಸಕ ಸಿರಾಜ್‌ಶೇಕ್, ಮುಖಂಡ ಶಿವಪುತ್ರಪ್ಪ ಬೆಲ್ಲದ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT