ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮುಲು ನಡೆ: ಬಿಜೆಪಿಯಲ್ಲಿ ತಳಮಳ

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು/ಮಡಿಕೇರಿ: ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಬಳ್ಳಾರಿಯ ಶಾಸಕರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದರಿಂದ ಬಂಡೆದ್ದಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನೇತೃತ್ವದ ಬಿಜೆಪಿ ಸರ್ಕಾರ ತಿಂಗಳು ಪೂರೈಸಿದ ಬೆನ್ನಲ್ಲೇ ಬಿಕ್ಕಟ್ಟಿಗೆ ಸಿಲುಕಿದೆ.

ಶನಿವಾರ ಬಳ್ಳಾರಿಯಲ್ಲಿ ವಿಧಾನ ಪರಿಷತ್ ಸದಸ್ಯ ಜಿ.ಜನಾರ್ದನ ರೆಡ್ಡಿ ಜೊತೆಗೂಡಿ ಬೆಂಬಲಿಗ ಶಾಸಕರು, ಸ್ಥಳೀಯ ಮುಖಂಡರ ಸಭೆ ನಡೆಸಿದ್ದ ಶ್ರೀರಾಮುಲು ಶಾಸಕ ಸ್ಥಾನ ತ್ಯಜಿಸುವ ಸುಳಿವು ನೀಡಿದ್ದರು. ನಿರೀಕ್ಷೆಯಂತೆ ಭಾನುವಾರ ನಗರದ ಅಶೋಕ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು.

ಬಳಿಕ ರೇಂಜ್ ರೋವರ್ ಕಾರಿನಲ್ಲಿ ಮಡಿಕೇರಿಗೆ ತೆರಳಿ ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ ರಾತ್ರಿ 9.30ಕ್ಕೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಪತ್ರ ಸ್ವೀಕರಿಸಿದ ಬೋಪಯ್ಯ, ಪರಿಶೀಲಿಸಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸುವ ಭರವಸೆ ನೀಡಿದರು.

ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತಾವು ಸ್ವಇಚ್ಛೆಯಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಶ್ರೀರಾಮುಲು ಅವರು ಬೋಪಯ್ಯ ಅವರಿಗೆ ತಿಳಿಸಿದರು. ಕೂಡಲೇ ರಾಜೀನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದರು. ರಾಜೀನಾಮೆ ಅಂಗೀಕಾರದ ಕಾಲಮಿತಿ ಕುರಿತು ಮಾಧ್ಯಮ ಪ್ರತಿನಿಧಿಗಳು ಬೋಪಯ್ಯ ಅವರನ್ನು ಪ್ರಶ್ನಿಸಿದಾಗ ಅವರಿಂದ ಯಾವುದೇ ಖಚಿತ ಪ್ರತಿಕ್ರಿಯೆ ದೊರೆಯಲಿಲ್ಲ.

ಸ್ವಾಭಿಮಾನವೇ ಕಾರಣ: ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿರುವ ತನಿಖಾ ವರದಿಯಲ್ಲಿ ತಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವುದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದೇ ರಾಜೀನಾಮೆ ನಿರ್ಧಾರಕ್ಕೆ ಕಾರಣ ಎಂದು ಶ್ರೀರಾಮುಲು ತಿಳಿಸಿದರು. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ತಮ್ಮನ್ನೇ ಪಕ್ಷವು ದೂರ ಇಟ್ಟಿದೆ ಎಂಬ ಅಸಮಾಧಾನವನ್ನು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ಹೊರಹಾಕಿದರು.

ಶ್ರೀರಾಮುಲು ರಾಜೀನಾಮೆ ಸಲ್ಲಿಸುವ ನಿರ್ಧಾರ ಪ್ರಕಟಿಸುವಾಗ ಅವರ ಜೊತೆ ಆಪ್ತ ಸ್ನೇಹಿತ ಜಿ.ಜನಾರ್ದನ ರೆಡ್ಡಿ ಅವರಾಗಲೀ, ಬಳ್ಳಾರಿಯ ಇತರೆ ಬಿಜೆಪಿ ಶಾಸಕರಾಗಲೀ ಇರಲಿಲ್ಲ. ತಮ್ಮ ಬೆಂಬಲಿಗರ ಜೊತೆ ಪತ್ರಿಕಾಗೋಷ್ಠಿಗೆ ಆಗಮಿಸಿದ ರಾಮುಲು, ತಮ್ಮನ್ನು ಬೆಂಬಲಿಸುತ್ತಿರುವ ಶಾಸಕರು ರಾಜೀನಾಮೆ ಸಲ್ಲಿಸುವುದಿಲ್ಲ. ಅವರೆಲ್ಲರೂ ಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಾರೆ ಎಂಬ ಇಂಗಿತ ವ್ಯಕ್ತಪಡಿಸಿದರು.

`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ. ಶಾಸಕ ಸ್ಥಾನ ತ್ಯಜಿಸಿ ಜನತೆಯ ಬಳಿ ತೆರಳಲು ನಾನು ಸಿದ್ಧನಾಗಿದ್ದೇನೆ.

ಈ ಸಂದರ್ಭದಲ್ಲಿ ಸರ್ಕಾರಕ್ಕೆ ಗಂಡಾಂತರ ಬರಬಾರದು. ರಾಜ್ಯದ ಜನತೆ ನೀಡಿದ ಬೆಂಬಲದಂತೆ ಈ ಸರ್ಕಾರ ಅವಧಿ ಪೂರೈಸಬೇಕು. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಆದ್ದರಿಂದ ಬಳ್ಳಾರಿ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ನನ್ನನ್ನು ಬೆಂಬಲಿಸುತ್ತಿರುವ ಶಾಸಕರು ಬಿಜೆಪಿ ಸರ್ಕಾರಕ್ಕೆ ಬೆಂಬಲ ಮುಂದುವರಿಸಿಕೊಂಡು ಹೋಗಬೇಕು ಎಂದು ವಿನಂತಿ ಮಾಡಿದ್ದೇನೆ~ ಎಂದು ತಿಳಿಸಿದರು.

ನಿಗೂಢ ನಡೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರ ಪ್ರಕಟಿಸಿದರೂ, ಮುಂದಿನ ನಡೆಯ ಬಗ್ಗೆ ಸ್ಪಷ್ಟ ನಿಲುವು ಹೊರಹಾಕದೇ ಶ್ರೀರಾಮುಲು ನಿಗೂಢತೆ ಕಾಯ್ದುಕೊಂಡಿದ್ದಾರೆ. ತಮ್ಮ ಮೇಲಿನ ಕಳಂಕವನ್ನು ತೊಡೆದುಕೊಳ್ಳಲು ರಾಜೀನಾಮೆಯ ನಂತರ ರಾಜ್ಯದಾದ್ಯಂತ `ಸ್ವಾಭಿಮಾನ ಯಾತ್ರೆ~ ನಡೆಸುವುದಾಗಿ ತಿಳಿಸಿದರು. ಆದರೆ ಅದರ ಸ್ವರೂಪವನ್ನು ಬಹಿರಂಗಪಡಿಸಲಿಲ್ಲ.

`ಲೋಕಾಯುಕ್ತರ ವರದಿಯಲ್ಲಿ ನನ್ನ ಹೆಸರು ಏಕೆ ಉಲ್ಲೇಖವಾಯಿತು? ಇದೆಲ್ಲ ಹೇಗೆ ಸೃಷ್ಟಿಯಾಯಿತು? ಯಾರು ಇದಕ್ಕೆ ಕಾರಣ? ಎಂಬುದು ಇನ್ನೂ ನನಗೆ ತಿಳಿದಿಲ್ಲ. ಒಂದು ರೀತಿಯಲ್ಲಿ ಈಗ ನಾನು ಚಕ್ರವ್ಯೆಹದಲ್ಲಿ ಸಿಲುಕಿದ್ದೇನೆ. ನಾನು ಯಾವತ್ತೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. `ಪ್ರಾಮಾಣಿಕತೆ ಎಂದರೆ ಶ್ರೀರಾಮುಲು~ ಎಂಬಂತೆ ಬದುಕಿದ್ದೇನೆ. 14 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಸಂದರ್ಭದಲ್ಲೂ ನನ್ನ ಮೇಲೆ ಆರೋಪ ಬಂದಿರಲಿಲ್ಲ. ಈಗ ನನ್ನ ವ್ಯಕ್ತಿತ್ವದ ಮೇಲೆ ಕಪ್ಪುಚುಕ್ಕೆ ಬಿದ್ದಿದೆ. ಇಂತಹ ಸಮಯದಲ್ಲಿ ಹೆದರಿ ಓಡಿ ಹೋಗುವುದಿಲ್ಲ. ಜನತೆಯ ಬಳಿ ಹೋಗಿ ಎಲ್ಲವನ್ನೂ ಎದುರಿಸುತ್ತೇನೆ~ ಎಂದರು.

ಲಿಂಗಾಯತರೆಂದು ಬೆಂಬಲ: ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದು ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, `ನಾವು 12 ಜನ ಶಾಸಕರೊಂದಿಗೆ ಜಗದೀಶ ಶೆಟ್ಟರ್ ಅವರನ್ನು ಬೆಂಬಲಿಸಿದ್ದು ಲಿಂಗಾಯತ ಮುಖಂಡರೊಬ್ಬರು ಮುಖ್ಯಮಂತ್ರಿಯಾಗಲಿ ಎಂಬ ಕಾರಣದಿಂದ. ಇದರ ಹಿಂದೆ ನಮ್ಮ ಸ್ವಾರ್ಥ ಅಡಗಿರಲಿಲ್ಲ~ ಎಂದು ಶೆಟ್ಟರ್ ಅವರನ್ನು ಬೆಂಬಲಿಸಿದ್ದನ್ನು ಸಮರ್ಥಿಸಿಕೊಂಡರು.

`2008ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇತ್ತು. ಆಗ ಎಲ್ಲ ನಾಯಕರೂ ವಿಜಯೋತ್ಸವ, ದೇವಾಲಯ ಪ್ರವಾಸದಲ್ಲಿ ಮಗ್ನರಾಗಿದ್ದರು. ನಾನು ಮತ್ತು ಸ್ನೇಹಿತ ಜನಾರ್ದನ ರೆಡ್ಡಿ ಪಕ್ಷೇತರ ಶಾಸಕರ ಬೆಂಬಲವನ್ನು ಪಡೆದು ಬಿಜೆಪಿ ಸರ್ಕಾರ ರಚನೆಗೆ ವೇದಿಕೆ ಸಿದ್ಧಪಡಿಸಿದ್ದೆವು. ಆಗಲೂ ನಮಗೆ ಯಾವುದೇ ಸ್ವಾರ್ಥ ಭಾವನೆ ಇರಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎಂಬುದಷ್ಟೇ ನಮ್ಮ ಬಯಕೆ ಆಗಿತ್ತು~ ಎಂದರು.

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ವರದಿ ಸಲ್ಲಿಕೆಯಾದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತು. ಆಗ ಮತ್ತೊಬ್ಬ ನಾಯಕನನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಲಿಂಗಾಯತ ಮುಖಂಡ ಶೆಟ್ಟರ್ ಅವರನ್ನು ತಾವು ಬೆಂಬಲಿಸಿದ್ದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್ ಕೂಡ ತಮ್ಮ ಜೊತೆಗಿದ್ದರು ಎಂದು ಹೇಳಿದರು.

ಅವಮಾನದಿಂದ ಸನ್ಮಾನದವರೆಗೆ: ತಮ್ಮ ರಾಜಕೀಯ ಜೀವನದ ಆರಂಭದಿಂದ ಇಲ್ಲಿಯವರೆಗಿನ ಘಟನಾವಳಿಗಳನ್ನು ಸುದೀರ್ಘ ಪತ್ರಿಕಾಗೋಷ್ಠಿಯಲ್ಲಿ ಬಿಡಿಸಿಟ್ಟ ಶ್ರೀರಾಮುಲು, `ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಎದುರು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಸೋತಾಗ ಎಲ್ಲರಿಗೂ ಅವಮಾನ ಆಗಿತ್ತು. ಅದೇ ಸ್ಥಳದಲ್ಲಿ ಬಿಜೆಪಿ ಬಾವುಟ ಮತ್ತು ನಾಯಕರಿಗೆ ಸನ್ಮಾನ ದೊರೆಯುವಂತೆ ಮಾಡಬೇಕು ಎಂಬ ಛಲದಿಂದ ಮುಂದುವರಿದಿದ್ದೆ. ಈ ಪ್ರಯತ್ನದಲ್ಲಿ ಸಫಲತೆಯನ್ನೂ ಪಡೆದಿದ್ದೆ~ ಎಂದರು. ಪತ್ರಕರ್ತರಿಂದ ಯಾವುದೇ ಪ್ರಶ್ನೆಗಳನ್ನೂ ಎದುರಿಸದೇ ಮಡಿಕೇರಿಯತ್ತ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT