ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಸಾಮಾನ್ಯನನ್ನು ಬೆತ್ತಲಾಗಿಸುವ ಸಿಎಂಎಸ್

ಇ - ಹೊತ್ತು
Last Updated 21 ಜುಲೈ 2013, 19:59 IST
ಅಕ್ಷರ ಗಾತ್ರ

ನೀವು ಇ-ಮೇಲ್ ಬಳಸುತ್ತಿದ್ದೀರಾ? ಇಂಟರ್‌ನೆಟ್‌ನಲ್ಲಿ ಮಾಹಿತಿಯನ್ನು ಹುಡುಕುವ ಅಭ್ಯಾಸ ನಿಮಗಿದೆಯೇ? ಆನ್‌ಲೈನ್‌ನಲ್ಲಿ ಬ್ಯಾಂಕ್ ವ್ಯವಹಾರ ನಡೆಸುವುದು, ಇಂಟರ್‌ನೆಟ್‌ನಲ್ಲಿ ನಿಮಗೆ ಬೇಕಿರುವ ವಸ್ತುಗಳನ್ನು ಖರೀದಿಸುವುದು ಇತ್ಯಾದಿಗಳನ್ನು ಮಾಡುತ್ತೀರಾ? ಹಾಗಿದ್ದರೆ ಈ ವರ್ಷದ ಏಪ್ರಿಲ್ ತಿಂಗಳಿನಿಂದೀಚೆಗೆ ನೀವು ಆನ್‌ಲೈನ್‌ನಲ್ಲಿ ನಡೆಸಿರಬಹುದಾದ ಒಳ್ಳೆಯ, ಕೆಟ್ಟ ಅಥವಾ ಇವರೆಡೂ ಅಲ್ಲದ ಎಲ್ಲಾ ಕೆಲಸಗಳನ್ನು ಯಾವಾಗ, ಎಲ್ಲಿಂದ, ಯಾವ ಕಂಪ್ಯೂಟರಿನಿಂದ ಮಾಡಿದ್ದೀರಿ ಎಂಬ ವಿವರ ನಿಮ್ಮ ಪಾಸ್‌ವರ್ಡ್‌ಗಳ ಸಮೇತ ಭಾರತ ಸರ್ಕಾರದ ಬಳಿ ಇದೆ!

ಇದೆಲ್ಲಾ ಕಂಪ್ಯೂಟರ್ ಬಳಸುವವರ ವಿಚಾರ ಎಂದು ನೀವು ಸುಮ್ಮನಿರುವಂತಿಲ್ಲ. ನೀವು ಕನಿಷ್ಠ ಮೊಬೈಲ್ ಫೋನ್ ಬಳಸಿರುತ್ತೀರಿ. ಎಸ್‌ಎಂಎಸ್ ಕಳುಹಿಸಿರುತ್ತೀರಿ. ಇಲ್ಲವೇ ಯಾರೋ ಮಾಡಿದ ಕರೆಗಳು ನಿಮ್ಮ ಮೊಬೈಲ್‌ಗೆ ಬಂದಿರುತ್ತವೆ. ಯಾರೋ ಕಳುಹಿಸಿದ ಎಸ್‌ಎಂಎಸ್ ಅಥವಾ ಎಂಎಂಎಸ್  ನಿಮ್ಮ ಮೊಬೈಲ್ ಫೋನ್‌ಗೆ ಬಂದಿರುತ್ತದೆ. ಏಪ್ರಿಲ್‌ನಿಂದ ಈಚೆಗೆ ನೀವು ಫೋನ್ ಬಳಸಿದಾಗ ಎಲ್ಲಿದ್ದೀರಿ ಎಂಬುದರಿಂದ ಆರಂಭಿಸಿ ನೀವು ಆಡಿದ ಮಾತಿನ ಧ್ವನಿ ಮುದ್ರಿತ ಪ್ರತಿ ಭಾರತ ಸರ್ಕಾರದ ಬಳಿ ಇವೆ. ನೀವು ಎಸ್‌ಎಂಎಸ್ ಮಾಡಿದ್ದರೆ ಆ ಎಸ್‌ಎಂಎಸ್‌ನ ಪಠ್ಯ ಭಾರತ ಸರ್ಕಾರ ಇಂಥದ್ದನ್ನು ಸಂಗ್ರಹಿಸುವುದಕ್ಕಾಗಿಯೇ ಇಟ್ಟುಕೊಂಡಿರುವ ಬೃಹತ್ ಕಂಪ್ಯೂಟರ್‌ನಲ್ಲಿ ದಾಖಲಾಗಿದೆ.

ಇದೇನು ಗುಟ್ಟಿನ ವಿಷಯವಲ್ಲ. ಇದನ್ನು ಬಯಲು ಮಾಡುವುದಕ್ಕೆ ನಮಗೊಬ್ಬ ಎಡ್ವರ್ಡ್ ಸ್ನೊಡೆನ್ ಅಗತ್ಯವೂ ಇರದಂತೆ ಸರ್ಕಾರ ಈ ಕೆಲಸದಲ್ಲಿ ತೊಡಗಿದೆ. ಈ ವರ್ಷದ ಏಪ್ರಿಲ್‌ನಿಂದ ದೆಹಲಿ, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳ ದೂರವಾಣಿ, ಮೊಬೈಲ್, ಇಂಟರ್‌ನೆಟ್ ಬಳಕೆದಾರರ ಪ್ರತಿಯೊಂದು ಚಟುವಟಿಕೆಯನ್ನೂ ಸರ್ಕಾರ ಅಧಿಕೃತವಾಗಿಯೇ ದಾಖಲಿಸಿಕೊಳ್ಳುತ್ತಿದೆ. ಸದ್ಯವೇ ಈ ವ್ಯವಸ್ಥೆ ಭಾರತದ ಎಲ್ಲಾ ಪ್ರದೇಶಗಳನ್ನೂ ತನ್ನ ತೆಕ್ಕೆಯೊಳಕ್ಕೆ ತೆಗೆದುಕೊಳ್ಳಲಿದೆ. ಈ ಯೋಜನೆಗೆ ಒಂದು ಸುಂದರವಾದ ಹೆಸರನ್ನೂ ನೀಡಲಾಗಿದೆ. ಅದೇ `ಸೆಂಟ್ರಲ್ ಮಾನಿಟರಿಂಗ್ ಸಿಸ್ಟಂ' (ಸಿಎಂಎಸ್) ಅಥವಾ ಕೇಂದ್ರೀಯ ನಿಗಾವಣಾ ವ್ಯವಸ್ಥೆ.

ಪ್ರಭುತ್ವ ತನ್ನ ಪ್ರಜೆಗಳ ಮೇಲೆ ಒಂದು ಕಣ್ಣಿಡುವುದು ಹೊಸ ವಿಚಾರವೇನೂ ಅಲ್ಲ. ರಾಮನ ಆದರ್ಶ ರಾಜ್ಯದಲ್ಲಿಯೂ ಈ ವ್ಯವಸ್ಥೆಯಿತ್ತು. ಅದರಿಂದಾಗಿಯೇ ಸೀತೆಯ ಪಾತಿವ್ರತ್ಯದ ಕುರಿತಂತೆ ಅಗಸ ಆಡಿದ ಮಾತು ರಾಮನ ಕಿವಿ ತಲುಪಿತ್ತು. ಸೀತೆಯ ಅಗ್ನಿ ಪ್ರವೇಶದಿಂದ ತೊಡಗಿ ಉತ್ತರ ರಾಮಾಯಣದ ಎಲ್ಲಾ ಘಟನೆಗಳಿಗೂ ಒಂದು ರೀತಿಯಲ್ಲಿ ಈ `ಕಣ್ಣಿಡುವ' ವ್ಯವಸ್ಥೆಯೇ ಕಾರಣ. ಪ್ರಭುತ್ವ ಪ್ರಜೆಗಳ ಒಂದೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುವ ಸ್ಥಿತಿಯಲ್ಲಿ ಬದಲಾವಣೆ ಬಂದದ್ದು ಪ್ರಜಾಪ್ರಭುತ್ವ ಸ್ಥಾಪನೆಯಾದ ನಂತರ. ಪ್ರಭುತ್ವ ಪ್ರಜೆಗಳನ್ನು ನೋಡುವ ಸ್ಥಿತಿಯಿಂದ ಪ್ರಜೆಗಳಿಗೂ ಪ್ರಭುತ್ವವನ್ನು ನೋಡಲು ಸಾಧ್ಯವಾಗುವಂಥ ಸ್ಥಿತಿಯೊಂದನ್ನು ನಿರ್ಮಿಸುವ ಸತತ ಪ್ರಯತ್ನಗಳ ಪರಿಣಾಮವಾಗಿ ಮಾಹಿತಿ ಹಕ್ಕು ಕಾಯ್ದೆಯಂಥ ಸವಲತ್ತುಗಳು ದೊರೆತವು. ಆದರೆ ಇದೇ ವೇಳೆ ಪ್ರಭುತ್ವವೂ ಪ್ರಜೆಗಳ ಬದುಕಿನಲ್ಲಿ ಇಣುಕುವ ಕ್ರಿಯೆಯೂ ಹೆಚ್ಚು ತೀವ್ರಗೊಂಡಿತು. ಭಾರತದ ಪ್ರಜೆಗಳಿಗೆ `ಮಾಹಿತಿ ಹಕ್ಕು ಕಾಯ್ದೆ'ಯನ್ನು ಕೊಟ್ಟ ಯುಪಿಎ ಸರ್ಕಾರವೇ ತನ್ನ ಎರಡನೇ ಅವಧಿಯಲ್ಲಿ `ಸಿಎಂಎಸ್' ಯೋಜನೆಯನ್ನೂ ಜಾರಿಗೆ ತಂದಿದೆ ಎಂಬುದರಲ್ಲಿಯೇ `ಪಾರದರ್ಶಕ ಸರ್ಕಾರ'ದ ಅಭದ್ರತೆಗಳು ಕಾಣಿಸುತ್ತವೆ.

ಯಾವ ಪ್ರಭುತ್ವವೂ ತನ್ನ ಅಭದ್ರತೆಯ ಕಾರಣಕ್ಕೆ ಈ ಮಾಹಿತಿ ಸಂಗ್ರಹ ನಡೆಸುತ್ತಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ರಾಷ್ಟ್ರೀಯ ಭದ್ರತೆಯನ್ನು ಈ ಕ್ರಿಯೆಗೆ ಸಮರ್ಥನೆಯಾಗಿ ಮುಂದೊಡ್ಡುತ್ತದೆ. ಈ ವಿಷಯದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಮಿಲಿಂದ್ ದೇವ್ರಾ ಇಬ್ಬರೂ ಒಂದೇ ರೀತಿ ಮಾತನಾಡುತ್ತಾರೆ. ಸ್ವಲ್ಪ ಮಟ್ಟಿಗೆ ಕಠಿಣ ಎನ್ನುವಂಥ ಪ್ರೈವೆಸಿ ಕಾನೂನುಗಳನ್ನು ಹೊಂದಿರುವ ಅಮೆರಿಕ ಸರ್ಕಾರ ತನ್ನ `ಇಣುಕುವಿಕೆ'ಯನ್ನು ಗುಟ್ಟಾಗಿ ಮಾಡುತ್ತಿತ್ತು. ಆದರೆ ಭಾರತದಲ್ಲಿ ವ್ಯಕ್ತಿಯ ಖಾಸಗಿ ಮಾಹಿತಿಗಳಿಗೆ ಸಂಬಂಧಿಸಿದ ಕಾನೂನು ಎಂಬುದು ಸಂವಿಧಾನ 21ನೇ ವಿಧಿಗೆ ಸುಪ್ರೀಂ ಕೋರ್ಟ್ ನೀಡಿದ ವ್ಯಾಖ್ಯಾನಗಳಿಗಷ್ಟೇ ಸೀಮಿತವಾಗಿದೆ. ಆದರೆ ಇಲ್ಲಿ ಪ್ರಜೆಗಳು ನಡೆಸುವ ಎಲೆಕ್ಟ್ರಾನಿಕ್ ಸಂವಹನವಷ್ಟನ್ನೂ ಸಂಗ್ರಹಿಸಿಡುವ ಕೆಲಸವನ್ನು ಸರ್ಕಾರ ಬಹಿರಂಗವಾಗಿಯೇ ಮಾಡುತ್ತಿದೆ. ಅಂದರೆ ಈ ಮಾಹಿತಿ ದುರುಪಯೋಗದ ಸಾಧ್ಯತೆಯ ವಿರುದ್ಧ ಹೋರಾಡುವುದಕ್ಕೆ ಸಾಮಾನ್ಯ ಪ್ರಜೆಗೆ ಕಾನೂನಿನ ಅಸ್ತ್ರವೂ ಇಲ್ಲ. ಹೀಗೆ ಸಂಗ್ರಹಿಸಲಾಗುವ ಮಾಹಿತಿಯನ್ನು ಹೇಗೆ ಸುರಕ್ಷಿತವಾಗಿ ಇಡಲಾಗುತ್ತದೆ ಎಂಬ ಪ್ರಶ್ನೆಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯವಾಗಲೀ ಗೃಹ ಸಚಿವಾಲಯವಾಗಲೀ ಒಂದು ಸ್ಪಷ್ಟ ಉತ್ತರವನ್ನು ಈ ತನಕ ನೀಡಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಅಲ್ಪ ಸ್ವಲ್ಪ ಸರ್ಕಾರಿ ಸಾಹಿತ್ಯದಲ್ಲಿ ಮಾಹಿತಿಯ ಭದ್ರತೆಯ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಭಾರತ ಸರ್ಕಾರ ಅಧಿಕೃತ `ಇಣುಕುವಿಕೆ' ಯೋಜನೆಯನ್ನು ಆರಂಬಿಸಿದ ಮೂರು ತಿಂಗಳ ನಂತರ ಭಾರೀ ಸದ್ದು ಗದ್ದಲದ ಜೊತೆ `ರಾಷ್ಟ್ರೀಯ ಸೈಬರ್ ಭದ್ರತಾ ನೀತಿ'ಯೊಂದನ್ನು ಪ್ರಕಟಿಸಿತು. ಇದರಲ್ಲಿಯೂ ಬಹಳ ಸ್ಥೂಲವಾದ `ನೀತಿ ಮಾತು'ಗಳನ್ನು ಹೊರತು ಪಡಿಸಿದರೆ `ಸರ್ಕಾರಿ ಇಣುಕುವಿಕೆ'ಯಲ್ಲಿ ಸಂಗ್ರಹವಾದ ಮಾಹಿತಿಯ ಭದ್ರತೆಯ ಬಗ್ಗೆ ಒಂದಕ್ಷರವೂ ಇರಲಿಲ್ಲ. ಈ ನೀತಿ ಘೋಷಣೆಯ ಹಿಂದೆ ಸಿಎಂಎಸ್ ಯೋಜನೆಯ ಪರಿಣಾಮಗಳನ್ನು ಮರೆಮಾಚುವ ಪ್ರಯತ್ನವಿರುವಂತೆ ಕಾಣಿಸುತ್ತದೆ.

ಸರ್ಕಾರದ ಈ ಯೋಜನೆಗೆ ಸಂಬಂಧಿಸಿದಂತೆ ಬರುತ್ತಿರುವ ಎಲ್ಲಾ ವಿರೋಧಗಳನ್ನು `ರಾಷ್ಟ್ರೀಯ ಭದ್ರತೆ'ಯ ಹೆಸರಿನಲ್ಲಿ ಮಟ್ಟ ಹಾಕುವ ಪ್ರಯತ್ನವೊಂದು ಈಗಾಗಲೇ ಚಾಲನೆಯಲ್ಲಿದೆ. ಇದರ ಮೂಲಕ ನೆಲದ ಕಾನೂನಿಗೆ ಬದ್ಧವಾಗಿ ತಮ್ಮ ವ್ಯವಹಾರಗಳನ್ನು ನಡೆಸುವ ಸಾಮಾನ್ಯ ಪ್ರಜೆಗಳು ಸಿಎಂಎಸ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಸಂದೇಶವೊಂದನ್ನು ಸರ್ಕಾರ ರವಾನಿಸುತ್ತಿದೆ. ಆದರೆ ವಿಷಯ ಇಷ್ಟೊಂದು ಸರಳವಾಗಿಲ್ಲ. ಸಿಎಂಎಸ್ ಯೋಜನೆಯಡಿಯಲ್ಲಿ ಸಂಗ್ರಹಿಸುವ ಮಾಹಿತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ವಿವರಗಳಿವೆ. ಇ-ಮೇಲ್ ಪಾಸ್‌ವರ್ಡ್‌ಗಳು, ಬ್ಯಾಂಕು ಇತ್ಯಾದಿ ವ್ಯವಹಾರಗಳಿಗೆ ಬಳಸುವ ಪಾಸ್‌ವರ್ಡ್‌ಗಳು ಇತ್ಯಾದಿಗಳೆಲ್ಲವೂ ಇದರಲ್ಲಿ ಒಳಗೊಂಡಿವೆ. ಸೈಬರ್ ಭದ್ರತೆಗಾಗಿ ಭವಿಷ್ಯವನ್ನೇ ವ್ಯಯಿಸುತ್ತಿರುವ ಅಮೆರಿಕ, ಇಸ್ರೇಲ್‌ನಂಥ ದೇಶಗಳ ಮಾಹಿತಿ ಭಂಡಾರಗಳಿಗೆ ಹ್ಯಾಕರ್‌ಗಳು ಹಲವು ಬಾರಿ ಕನ್ನ ಹಾಕಿದ ಉದಾಹರಣೆಗಳು ನಮ್ಮ ಮುಂದಿವೆ. ಅಷ್ಟೇಕೆ ಪ್ರಖ್ಯಾತ ಅಂತರರಾಷ್ಟ್ರೀಯ ಬ್ಯಾಂಕುಗಳ ಮಾಹಿತಿ ಭಂಡಾರಕ್ಕೆ ಲಗ್ಗೆಯಿಟ್ಟು ಹಲವು ಗ್ರಾಹಕರ ವೈಯಕ್ತಿಕ ವಿವರಗಳನ್ನು ಅಪಹರಿಸಿದ ಉದಾಹರಣೆಗಳು ನಮ್ಮ ಮುಂದಿವೆ. ಇಂಥದ್ದರಲ್ಲಿ ಭಾರತದಂಥ ಭ್ರಷ್ಟ ಸರ್ಕಾರಿ ವ್ಯವಸ್ಥೆಯೊಳಗೆ ಮಾಹಿತಿ ಸುಭದ್ರ ಎಂದು ನಂಬುವುದು ಹೇಗೆ? ಸಿಎಂಎಸ್ ಯೋಜನೆಯ ಭಾಗವಾಗಿರುವ ಒಬ್ಬ ಭ್ರಷ್ಟ ಅಧಿಕಾರಿ ಮನಸ್ಸು ಮಾಡಿದರೆ ರಾಷ್ಟ್ರೀಯ ಭದ್ರತೆಯ ಉದ್ದೇಶದಲ್ಲಿ ಸರ್ಕಾರ ಸಂಗ್ರಹಿಸಿಟ್ಟಿರುವ ಮಾಹಿತಿಯಷ್ಟೂ ರಾಷ್ಟ್ರೀಯ ಭದ್ರತೆಗೆ ಸವಾಲಾಗಿಬಿಡಬಹುದು. ಅಷ್ಟೇಕೆ ಭಯೋತ್ಪಾದಕ ಸಂಘಟನೆಯೊಂದು ಈ ಮಾಹಿತಿ ಭಂಡಾರಕ್ಕೆ ಲಗ್ಗೆಯಿಟ್ಟರೆ...?

ಇವೆಲ್ಲವೂ ಬಹಳ ಸ್ಥೂಲ ಸ್ವರೂಪದ ಸಮಸ್ಯೆಗಳು. ಸದ್ಯ ಈ ಸಿಎಂಎಸ್ ಯೋಜನೆಯಲ್ಲಿ ಸಂಗ್ರಹವಾದ ಮಾಹಿತಿಯನ್ನು ರಾ, ಸಿಬಿಐ, ಎನ್‌ಐಎ, ಕೇಂದ್ರ ನೇರ ತೆರಿಗೆಗಳ ಮಂಡಳಿ, ಜಾರಿ ನಿರ್ದೇಶನಾಲಯ, ಮಾದಕ ವಸ್ತು ನಿಯಂತ್ರಣ ಬ್ಯೂರೋಗಳ ಜತೆ ಹಂಚಿಕೊಳ್ಳಲಾಗುತ್ತದೆಯಂತೆ.  ಈ ಸಂಸ್ಥೆಗಳು ಮಾಹಿತಿಯನ್ನು ಬಳಸಿಕೊಳ್ಳಬಹುದಾದ ವಿಧಾನದ ಬಗ್ಗೆ ಯೋಚಿಸಿದರೆ ಇಂಟರ್‌ನೆಟ್, ಮೊಬೈಲ್ ಪೋನ್ ಮತ್ತು ಸ್ಥಿರ ದೂರವಾಣಿಗಳನ್ನು ಬಳಸುವ ಪ್ರತಿಯೊಬ್ಬರೂ ಭಯಪಡಬೇಕಾಗುತ್ತದೆ. ಪ್ರತಿನಿತ್ಯ ಸಂಗ್ರಹವಾಗುವ ಈ ಮಾಹಿತಿಯೊಳಗೆ `ಅಪರಾಧಿ'ಗಳನ್ನು, `ಅನುಮಾನಾಸ್ಪದ' ಚಟುವಟಿಕೆಗಳನ್ನು ಹುಡುಕುವುದೇನೂ ಸಾಮಾನ್ಯ ಕೆಲಸವಲ್ಲ. ಭಾರೀ ಪ್ರಮಾಣದ ಮಾಹಿತಿಯನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ನಡೆಯುವ ಸಣ್ಣ ತಪ್ಪೂ ಮುಗ್ಧರನ್ನು ಅಪರಾಧಿಗಳನ್ನಾಗಿಸಬಹುದು. ಅನುಮಾನಾಸ್ಪದವಾದ ಸಂವಹನವನ್ನು ಪತ್ತೆ ಹಚ್ಚುವುದಕ್ಕೆ ಸಂವಹನದ ವಿನ್ಯಾಸವನ್ನು ಪತ್ತೆ ಮಾಡುವ ತಂತ್ರಾಂಶಗಳನ್ನು ಬಳಸಬೇಕಾಗುತ್ತದೆ. ದತ್ತಾಂಶದ ಗಾತ್ರ ಹೆಚ್ಚಾದಷ್ಟೂ ಈ ಬಗೆಯ ತಂತ್ರಜ್ಞಾನದ ನೆರವಿನ ಹುಡುಕಾಟ ನೀಡುವ ತಪ್ಪು ಫಲಿತಾಂಶಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಸಿಎಂಎಸ್‌ನಲ್ಲಿ ಸಂಗ್ರಹವಾಗುವ ದತ್ತಾಂಶವಂತೂ ಪ್ರತೀ ಸೆಕೆಂಡ್‌ಗೂ ಹೆಚ್ಚುತ್ತಲೇ ಇರುತ್ತದೆ. ಹುಡುಕಾಟದ ತಪ್ಪುಗಳ ಪ್ರಮಾಣವೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತದೆ. ಅಂದರೆ ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಜನಸಾಮಾನ್ಯರು ಎದುರಿಸಬೇಕಾದ ಕಷ್ಟಗಳ ಪ್ರಮಾಣ ಹೆಚ್ಚುತ್ತದೆ. ಮುಗ್ಧರು ಭಯೋತ್ಪಾದಕರಾಗಿಬಿಡುವ ಪ್ರಕರಣಗಳ ಸುದ್ದಿಯನ್ನು ದಿನ ನಿತ್ಯ ಓದಬೇಕಾಗುತ್ತದೆ.

ವೈಯಕ್ತಿಕ ಮಾಹಿತಿಯ ಸುರಕ್ಷೆಗೆ ಕಾಯ್ದೆಯೊಂದಿಲ್ಲದೆ ಅದನ್ನು ಸರ್ಕಾರ ಸಂಗ್ರಹಿಸಲು ಹೊರಟರೆ ಪ್ರಜೆಗಳು ಸಹಜವಾಗಿಯೇ ತಮ್ಮ ಮಾಹಿತಿಯ ಸುರಕ್ಷೆಗೆ ತಾವೇ ಒಂದು ಹಾದಿಯನ್ನು ಕಂಡುಕೊಳ್ಳಲು ಹೊರಡುತ್ತಾರೆ. ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮಾಹಿತಿಗಳನ್ನು ಭದ್ರವಾಗಿಟ್ಟುಕೊಳ್ಳಲು ಅಗತ್ಯವಿರುವ ತಂತ್ರಜ್ಞಾನವೂ ಈಗ ಲಭ್ಯವಿದೆ. ಮುಕ್ತ ತಂತ್ರಾಂಶ, ಸ್ವತಂತ್ರ ತಂತ್ರಾಂಶ, ಆನ್‌ಲೈನ್ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಅನೇಕ ಗುಂಪುಗಳು ಈಗಾಗಲೇ ಹಲಬಗೆಯ `ಎನ್‌ಕ್ರಿಪ್ಷನ್' ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ.  ಹಣ ಖರ್ಚು ಮಾಡಲು ಸಿದ್ಧರಿರುವವರಿಗೆ ಇನ್ನಷ್ಟು `ಎನ್‌ಕ್ರಿಪ್ಷನ್' ತಂತ್ರಜ್ಞಾನಗಳು ಲಭ್ಯವಿವೆ. ಇವುಗಳನ್ನು ಬಳಸಿದರೆ ನಮ್ಮ ಮಾಹಿತಿ ಸುರಕ್ಷಿತ ಎಂದೂ ಭಾವಿಸುವಂತಿಲ್ಲ. ಇಂಥದ್ದೊಂದು ತಂತ್ರಜ್ಞಾನವನ್ನು ಅಳವಡಿಸಿಕೊಂಡದ್ದೇ ಸರ್ಕಾರ ಕಣ್ಣಿಗೆ ಅದೇ ಅನುಮಾನಾಸ್ಪದವಾಗಿ ಕಾಣುವ ಸಾಧ್ಯತೆ ಇದೆ. ಅದರ ಪರಿಣಾಮವನ್ನಂತೂ ವಿವರಿಸಲೇ ಬೇಕಾಗಿಲ್ಲ. ನಮ್ಮ ಮಾಹಿತಿ ತಂತ್ರಜ್ಞಾನ ಕಾಯ್ದೆಯಂತೂ ಮೊದಲು ಬಂಧನ ಆಮೇಲೆ ಮೂಲಭೂತ ಹಕ್ಕು ಎಂಬಂತೆ ರೂಪುಗೊಂಡಿದೆ. ಬಾಳಾ ಠಾಕ್ರೆ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ `ಸ್ಟೇಟಸ್' ಹಾಕಿದ ಯುವತಿ ಮತ್ತು ಅದನ್ನು `ಲೈಕ್' ಮಾಡಿದಾಕೆಯ ಬಂಧನ ನಡೆದದ್ದು ಈ ಕಾಯ್ದೆಯ ಅಡಿಯಲ್ಲೇ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಏಕಕಾಲದಲ್ಲಿ ವಿಕೇಂದ್ರೀಕರಣ ಮತ್ತು ಕೇಂದ್ರೀಕರಣದ ಸವಲತ್ತನ್ನು ಒದಗಿಸಿಕೊಟ್ಟಿದೆ. ಇದು ಪ್ರಭುತ್ವಕ್ಕೆ ತಂತ್ರಜ್ಞಾನ ವಿಧಿವಾದವನ್ನು (technological determinism)  ಅನುಸರಿಸುವುದಕ್ಕೆ ಪ್ರೇರಣೆಯೂ ಆಗಿದೆ. ಆದರೆ ಈ ತಂತ್ರಜ್ಞಾನದ ಒಡಲೊಳಗೇ ಅದನ್ನು ವಿಫಲಗೊಳಿಸುವ ಸಾಧ್ಯತೆಗಳೂ ಇವೆ. `ನಾವು ಅನಾಮಿಕರು, ನಾವು ಅಸಂಖ್ಯರು, ನಾವು ಮರೆಯುವುದಿಲ್ಲ, ನಮ್ಮನ್ನು ನಿರೀಕ್ಷಿಸಿ' ಇದು `ಅನಾನಿಮಸ್' ಎಂಬ ಹ್ಯಾಕರ್ ಬಳಗದ ಘೋಷಣೆ. ನಮ್ಮ ಸಿಎಂಎಸ್ ಯೋಜನೆ ಏನನ್ನು ನಿರೀಕ್ಷಿಸಬೇಕು ಎಂಬುದನ್ನು ಈ ಘೋಷಣೆಯೇ ಹೇಳುತ್ತಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT