ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರುತಿಬದ್ಧ ಸಂಗೀತ; ನೃತ್ಯ

Last Updated 26 ಜನವರಿ 2011, 19:30 IST
ಅಕ್ಷರ ಗಾತ್ರ

ಮೇರು ಕಲಾವಿದ ಡಾ. ಆರ್. ಕೆ. ಶ್ರೀಕಂಠನ್ ಅವರ 91ನೇ ವರ್ಧಂತಿಯನ್ನು ಸಂಕ್ರಾಂತಿ ಸಂಗೀತೋತ್ಸವದ ಮೂಲಕ ಆಚರಿಸಲಾಯಿತು. ಆರ್.ಕೆ. ಶ್ರೀಕಂಠನ್ ಟ್ರಸ್ಟ್ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಗೀತ ಕಛೇರಿಯಲ್ಲದೇ (ಗಾಯನ, ವೀಣೆ, ತನಿ ಪಿಟೀಲು) ಸಂಗೀತೋಪನ್ಯಾಸ, ಧ್ವನಿ ಸುರುಳಿ ಬಿಡುಗಡೆ, ಸನ್ಮಾನ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇಲ್ಲಿ ಹಾಡಿದ ಗಾಯಕಿ, ಬೋಧಕಿ ಹಾಗೂ ಬರಹಗಾರ್ತಿ ಡಾ. ಆರ್.ಎನ್. ಶ್ರೀಲತಾ ತಮ್ಮ ಕಛೇರಿಯ ಪ್ರಧಾನ ಭಾಗವಾಗಿ ದೀಕ್ಷಿತರ ‘ವಿಶಾಲಾಕ್ಷಿ ವಿಶ್ವೇಶೀ’ ಆಯ್ದರು. ಆಲಾಪನೆ, ನೆರವಲ್ ಹಾಗೂ ಸ್ವರಗಳಿಂದ ಕೃತಿಯ ಸಂಗೀತ ಮೌಲ್ಯ ವರ್ಧಿಸಿದರು. ಪಿಟೀಲಿನಲ್ಲಿ ನಳಿನಾ ಮೋಹನ್, ಮೃದಂಗದಲ್ಲಿ ಎನ್. ವಾಸುದೇವ ಹಾಗೂ ಮೋರ್ಚಿಂಗ್‌ನಲ್ಲಿ ಅಮೃತ್ ನೆರವಾದರು.

ಅಭೂತಪೂರ್ವ ಗಾಯನ:
92ರಲ್ಲೂ ಶ್ರುತಿಶುದ್ಧ ವಾಗೂ ಮೌಲಿಕವಾಗಿ ಹಾಡುವ ಡಾ. ಆರ್. ಕೆ. ಶ್ರೀಕಂಠನ್ ಅವರು ಕೇಳುಗರನ್ನು ಎಂದೂ ನಿರಾಸೆಗೊಳಿಸುವುದಿಲ್ಲ! ಭಾರತೀಯ ವಿದ್ಯಾಭವನದಲ್ಲಿ ನಡೆದ ಅವರ ಕಾರ್ಯಕ್ರಮದ ಪೂರ್ವಾರ್ಧದಲ್ಲಿ  ‘ರಾಗರತ್ನ ಮಾಲಿಕೆ’ಯಿಂದ ಚೇತೋಹಾರಿಯಾಗಿ ಬೆಳೆಸಿ, ‘ನಿನ್ನುಜೆಪ್ಪಗ’ ತೆಗೆದುಕೊಂಡರು. ಒಂದು ಘನವಾದ ಕೀರ್ತನೆ  ‘ಆರಾಧಯಾಮಿ ಕರ್ಣತ್ರಯೇ’ ವಿಸ್ತರಿಸಿದರು. ರಾಗಾಲಾಪನೆ, ನೆರವಲ್, ಸ್ವರಗಳು ಕಿರಿಯರಿಗೆ ಮಾರ್ಗದರ್ಶಕವಾಗಿತ್ತು. ಜನಪ್ರಿಯ ದೇವರನಾಮ, ‘ನರಜನ್ಮ ಬಂದಾಗ’ ಹಾಗೂ ಅರ್ಥಪೂರ್ಣವಾದ  ‘ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರಡನೊ’ ಮುಂತಾದವನ್ನು ಮನಮುಟ್ಟುವಂತೆ ಹಾಡಿದರು. ಎಚ್.ಕೆ. ವೆಂಕಟರಾಂ, ಎಚ್.ಎಸ್. ಸುಧೀಂದ್ರ ಹಾಗೂ ನಾರಾಯಣಮೂರ್ತಿ ಹಿತಮಿತವಾಗಿ ಪಕ್ಕವಾದ್ಯ ನುಡಿಸಿದರು.

ನೃತ್ಯ ಜೋಡಿ: ಅದೇ ಭವನದಲ್ಲಿ ಜನಪ್ರಿಯ ನೃತ್ಯ ದಂಪತಿಗಳಾದ ಶ್ರೀಧರ್ ಮತ್ತು ಅನುರಾಧಾ ಭರತನಾಟ್ಯ ಪ್ರದರ್ಶನ ನೀಡಿದರು. ದೇವರನಾಮ ಹಾಗೂ ದ್ರುತರಾಷ್ಟ್ರ ವಿಲಾಪಗಳಲ್ಲಿ ಅವರ ಅಭಿನಯ ಪ್ರಖರವಾಗಿ ಹೊಮ್ಮಿತು. ಜಿಂಜೋಟಿ ತಿಲ್ಲಾನ ಬೆಡಗು ಹಾಗೂ ಬಿಗಿ ಹಂದರದಲ್ಲಿ ಸಾಗಿ, ರಂಜಿಸಿತು. ಡಿ.ವಿ. ಪ್ರಸನ್ನಕುಮಾರ್, ಭಾರತಿ ವೇಣುಗೋಪಾಲ್, ಹರ್ಷ ಸಾಮಗ, ಮಹೇಶ್ ಸ್ವಾಮಿ ಮತ್ತು ಡಾ. ನಟರಾಜ ಮೂರ್ತಿ ಮೇಳದಲ್ಲಿ ನೆರವಾದರು. ಈ ವರ್ಷದ ಸೂರ್ಯ ಉತ್ಸವದ ಭಾಗವಾಗಿ ನಡೆದ ಮೇಲಿನ ಎರಡೂ ಕಾರ್ಯಕ್ರಮ ಭಾರತೀಯ ವಿದ್ಯಾಭವನದ ಸಹಭಾಗಿತ್ವದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT