ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠ ಗೊಬ್ಬರ ಯಾವುದು..?

Last Updated 7 ಫೆಬ್ರುವರಿ 2012, 20:15 IST
ಅಕ್ಷರ ಗಾತ್ರ

ಬೆಂಗಳೂರು:  ಮೂತ್ರ ಶ್ರೇಷ್ಠ ಗೊಬ್ಬರವೋ ಅಥವಾ ಮಾನವನ ಮೂತ್ರ ಶ್ರೇಷ್ಠ ಗೊಬ್ಬರವೋ ಎಂಬ ವಿಷಯದ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಕೆಲಕಾಲ ಸ್ವಾರಸ್ಯಕರ ಚರ್ಚೆ ನಡೆಯಿತು.ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ ಕೇಳಿದ ಪ್ರಶ್ನೆ ಇಂತಹ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದ ವಿಜ್ಞಾನಿಗಳು ಐದು ವರ್ಷಗಳಿಂದ ಕೃಷಿಯಲ್ಲಿ ಮಾನವನ ಮೂತ್ರದ ಬಳಕೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ವಿವಿಯ ಸಂಶೋಧನಾ ವರದಿ ಅನ್ವಯ ರಸಗೊಬ್ಬರಗಳಿಗೆ ಪರ್ಯಾಯವಾಗಿ ವಿವಿಧ 13 ಬೆಳೆಗಳಲ್ಲಿ ಕೈಗೊಂಡ ಪ್ರಯೋಗಗಳ ಫಲಿತಾಂಶದ ಆಧಾರದ ಮೇಲೆ ಕೃಷಿಯಲ್ಲಿ ಮಾನವನ ಮೂತ್ರ ಬಳಸಿದ ಉಪಚಾರದಲ್ಲಿ ಶೇ 10ರಿಂದ 12ರಷ್ಟು ಹೆಚ್ಚಿನ ಇಳುವರಿ ಬಂದಿರುವುದು ದೃಢಪಟ್ಟಿದೆ ಎಂದು ಕೃಷಿ ಸಚಿವ ಉಮೇಶ್ ಕತ್ತಿ ಉತ್ತರಿಸಿದರು.

ಈ ಆವಿಷ್ಕಾರಗಳು ಇನ್ನೂ ಸಂಶೋಧನಾ ಹಂತದಲ್ಲಿರುವುದರಿಂದ ಸಾರ್ವಜನಿಕ ಶೌಚಾಲಯಗಳ ಮಾನವ ಮೂತ್ರವನ್ನು ಸಂಗ್ರಹಿಸಿ ಕೃಷಿಗೆ ಬಳಕೆ ಮಾಡುವ ಬಗ್ಗೆ ಸರ್ಕಾರ ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪೂರ್ಣ ಪ್ರಮಾಣದ ಸಂಶೋಧನಾ ವರದಿ ಮಾರ್ಚ್ ವೇಳೆಗೆ ಸರ್ಕಾರದ ಕೈಸೇರಲಿದ್ದು, ಆನಂತರ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಪರಿಶೀಲಿಸಲಿದೆ ಎಂದರು.

ಕಾನೂನು ಜಾರಿಗೊಳಿಸಿ: ಗೋವಿನ ಮೂತ್ರಕ್ಕಿಂತ ಮಾನವ ಮೂತ್ರ ಶ್ರೇಷ್ಠ ಗೊಬ್ಬರ ಎನ್ನುವುದಾದಲ್ಲಿ ಪ್ರತಿಯೊಬ್ಬರೂ ಕೃಷಿ ಜಮೀನಿನಲ್ಲಿಯೇ ಮೂತ್ರ ವಿಸರ್ಜನೆ ಮಾಡಲು ಕಾನೂನು ಜಾರಿಗೊಳಿಸಿ ಎಂದು ಜೆಡಿಎಸ್‌ನ  ಎಂ.ಸಿ. ನಾಣಯ್ಯ ಸಲಹೆ ಮಾಡಿದರು.

ನಾಣಯ್ಯನವರ ಮಾತಿಗೆ ದನಿಗೂಡಿಸಿದ ಸಚಿವ ಕತ್ತಿ, `ರಾಜ್ಯ ಸರ್ಕಾರ ಕಾನೂನು ಜಾರಿಗೊಳಿಸಲು ಸಿದ್ಧ. ಆದರೆ, ಇದನ್ನು ಮುಂದಿನ ದಿನಗಳಲ್ಲಿ ನೀವೇ ವಿರೋಧಿಸಿ ಹೋರಾಟ ಮಾಡುತ್ತೀರಿ~ ಎಂದರು.
ರಾಜ್ಯದಲ್ಲಿ ಸ್ವಚ್ಛತಾ ಆಂದೋಲನದಡಿ ಪ್ರತಿ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿರುವುದರಿಂದ ಕೃಷಿ ಜಮೀನಿನಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಸಚಿವ ಶೆಟ್ಟರ್ ವಿರೋಧ ಕೂಡ ವ್ಯಕ್ತಪಡಿಸಬಹುದು.

ಒಂದು ವೇಳೆ ಮಲ ವಿಸರ್ಜನೆಯನ್ನು ಶೌಚಾಲಯಗಳಲ್ಲಿ ಮಾಡಿ, ಮೂತ್ರ ವಿಸರ್ಜನೆಯನ್ನು ಕೃಷಿ ಜಮೀನಿನಲ್ಲಿ ಮಾಡಲು ಅವಕಾಶ ಕಲ್ಪಿಸಿದಲ್ಲಿ ಅದಕ್ಕೆ ಸಚಿವರು ಸಹಮತ ವ್ಯಕ್ತಪಡಿಸಬಹುದು ಎಂದು ಅವರು ಹೇಳಿದರು.
ಈ ವಿಚಾರದಲ್ಲಿ ನಾನು ಸಚಿವ ಕತ್ತಿ ಅವರೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧ ಎಂದು ಜಗದೀಶ ಶೆಟ್ಟರ್ ಹೇಳಿದರು. ಹಾಗಾದರೆ, ಸರ್ಕಾರ ಕಾನೂನು ಜಾರಿಗೊಳಿಸಲು ಸಿದ್ಧ ಎಂದು ಸಚಿವ ಕತ್ತಿ ಪ್ರತಿಕ್ರಿಯಿಸಿದರು.

ಮೂತ್ರ ವಿಸರ್ಜನೆಯಿಂದ ಸಮೃದ್ಧ ಬೆಳೆ ಬರುವುದಾದಲ್ಲಿ ರಾಸಾಯನಿಕ ಗೊಬ್ಬರಗಳ ಅವಶ್ಯಕತೆಯೇ ಇರುವುದಿಲ್ಲ. ಸುಲಭ್ ಶೌಚಾಲಯಗಳಲ್ಲಿನ ಮೂತ್ರವನ್ನು ಬಳಸಿಕೊಂಡರೆ ಸಾಕು. ಈ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಹರಿಸಲಿ ಎಂದು ನಾಣಯ್ಯ ಹೇಳಿದಾಗ ಸದನದಲ್ಲಿ ನಗೆ ಉಕ್ಕಿತು.

ಬಿಜೆಪಿ ಸದಸ್ಯ ಡಾ. ದೊಡ್ಡರಂಗೇಗೌಡ ಅವರು ಮೂತ್ರ ಶ್ರೇಷ್ಠ ಗೊಬ್ಬರ ಎನ್ನುವುದರ ಬಗ್ಗೆ ಕವನ ವಾಚಿಸಿದರು.
ಬಿಜೆಪಿಯ ಗೋ. ಮಧುಸೂದನ್, ಸಚಿವ ಗೋವಿಂದ ಕಾರಜೋಳ ಚರ್ಚೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT