ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಷ್ಠ ಸ್ನೇಹಿತೆ: ಬೌದ್ಧಧರ್ಮದ ವಿಶ್ಲೇಷಣೆ

Last Updated 11 ಮೇ 2012, 19:30 IST
ಅಕ್ಷರ ಗಾತ್ರ

ತಾಯಿಯ ಪ್ರೀತಿಯು ಅತಿಶ್ರೇಷ್ಠವಾದುದೆನ್ನುತ್ತಾನೆ ಬುದ್ಧ. ತಾಯ್ತನದ ಬಗೆಗೆ ಬುದ್ಧನ ಮಾತುಗಳು ಇವು:

* `ಭಿಕ್ಷುಗಳೇ, ಮಹಾ ಬ್ರಹ್ಮನು ಇಡೀ ಭೂಮಂಡಲವನ್ನು ಕರುಣೆ, ಸಹಾನುಭೂತಿ, ಮೃದುತ್ವ ಹಾಗೂ ಸಮಚಿತ್ತತೆಯಿಂದ ಪ್ರೀತಿಸುವಂತೆ ಮಾತೆಯು ಮಕ್ಕಳನ್ನು ಪ್ರೀತಿಸುತ್ತಾಳೆ. ಮಗು ಹುಟ್ಟುತ್ತಿದ್ದ ಹಾಗೆಯೇ ಕರುಣೆಯಿಂದಲೂ, ಬೆಳೆಯುವ ಕಾಲದಲ್ಲಿ ಸೌಮ್ಯವಾದ ಮಾನಸಿಕವಾದ ಬಂಧದಿಂದಲೂ, ಸದೃಢವಾಗಿ ಬೆಳೆದು ತನ್ನನ್ನು ತಾನೇ ನೋಡಿಕೊಳ್ಳುವ ಕಾಲದಲ್ಲಿ ಸಮಚಿತ್ತತೆಯಿಂದಲೂ ಆಕೆ ಪ್ರೀತಿಸುತ್ತಾಳೆ. ದಿಟವಾಗಿಯೂ ಮಗುವಿನ ಅತಿಶ್ರೇಷ್ಠವಾದ ಸ್ನೇಹಿತೆಯೆಂದರೆ ಮಾತೆಯೇ!~

* ಗರ್ಭಿಣಿ ಹಾಗೂ ಮಗುವಿನ ಮಾನಸಿಕ ಬಂಧವನ್ನು ಬೌದ್ಧಧರ್ಮ ಬಹಳವಾಗಿ ಗೌರವಿಸಿದೆ. ಮಗುವನ್ನು ಭೂಮಿಗೆ ತರುವವರೆಗೂ ಅಪಾಯಗಳನ್ನು ತಾಯಿ ಎದುರಿಸಬೇಕಾಗುತ್ತದೆ. ಬೌದ್ಧಧರ್ಮೀಯರು ಗರ್ಭಿಣಿಯ ರಕ್ಷಣೆಗೆ ಹಲವಾರು ಧಾರ್ಮಿಕ ಆಚರಣೆಗಳನ್ನು ಕೈಗೊಳ್ಳುತ್ತಾರೆ.

ಇದರಿಂದ ಮಗುವಿಗೆ ಪರಮೋಚ್ಚ ಮಾನಸಿಕ ಆಧಾರ ದೊರೆತು  ತನ್ನ ಭವಿಷ್ಯದಲ್ಲಿ ಆರೋಗ್ಯಕರವಾಗಿ, ಶೀಲವಂತನಾಗಿ, ಸಮೃದ್ಧಿಯನ್ನು ಪಡೆದು ಅತ್ಯಂತ ಸುಖಿಯಾಗಿ ಬಾಳುತ್ತದೆಂಬ ನಂಬಿಕೆ ಅವರಲ್ಲಿದೆ. ಗರ್ಭಿಣಿಯ ಹಾಗೂ ಮಗುವಿನ ಆರೋಗ್ಯಕ್ಕಾಗಿ ಆಚರಿಸುವ ಹಲವಾರು ಧಾರ್ಮಿಕ ವಿಧಿಗಳು ಇಂತಿವೆ:

* ಗರ್ಭಿಣಿಯರಿಗೆ ಉಂಟಾಗುವ ಖಿನ್ನತೆಯನ್ನು ದೂರಮಾಡಲು ವೈದ್ಯಕೀಯ ನೆರವಿನ ಜೊತೆಗೆ ಆಧ್ಯಾತ್ಮಿಕ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಇದರಿಂದ ತಾಯಿ- ಮಗು ಮಾನಸಿಕ ಶಾಂತತೆಯನ್ನನುಭವಿಸುತ್ತಾರೆ. ಈ ರೀತಿಯ ಧಾರ್ಮಿಕ ವಿಧಿಯಿಂದ ಗರ್ಭಾವಸ್ಥೆಯ ಕಷ್ಟಗಳನ್ನು ಭರವಸೆಯಿಂದ ಎದುರಿಸುವ ದೈಹಿಕ ಹಾಗೂ ಮಾನಸಿಕ ಸ್ಥೈರ್ಯವು ತಾಯಿಯಲ್ಲಿ ಹೆಚ್ಚುತ್ತದೆ. ತಾಯಿಯ ಧಾರ್ಮಿಕ ಶ್ರದ್ಧೆಯಿಂದ ಮಗುವಿನಲ್ಲಿ ಧನಾತ್ಮಕವಾದ ತರಂಗಗಳುಂಟಾಗಿ ಒಳ್ಳೆಯ ಆರೋಗ್ಯವನ್ನನುಭವಿಸುತ್ತದೆ.

* ಭ್ರೂಣಾವಸ್ಥೆಯಿಂದಲೇ ಮಗುವಿನ ಆರೋಗ್ಯಕ್ಕೆ ಮಹತ್ವವನ್ನೀಯುವ ಬೌದ್ಧಧರ್ಮವು ಗರ್ಭಿಣಿ ಸ್ತ್ರೀಯರಿಗೆ ಪರಮೋಚ್ಚ ಧಾರ್ಮಿಕ ವಿಧಿಯಾದ `ಪರಿತ್ತ ಸೂತ್ತ~ ಪಠಣ ಹಾಗೂ ಧ್ಯಾನವನ್ನು ಮಾಡಲು ಸೂಚಿಸುತ್ತದೆ. ಈ ವಿಧಿಯಿಂದ ತಾಯಿ-ಮಗುವಿನ ಮಾನಸಿಕ ಸಂಬಂಧವು ಆರೋಗ್ಯಕರವಾಗಿ ಏರ್ಪಡುವುದೇ ಅಲ್ಲದೆ ಭವಿಷ್ಯದಲ್ಲಿ ಮಗುವು ಉತ್ತಮ ಮಾನವನಾಗಿ ಬೆಳೆಯಲನುಕೂಲವಾಗುತ್ತದೆ.

* ಸೂತ್ತಗಳನ್ನು ಪಠಿಸುವವರಿಗೂ, ಕೇಳುವವರಿಗೂ ನೋವು, ದುಃಖ, ವೈಯಕ್ತಿಕ ವೇದನೆ ಹಾಗೂ ಖಿನ್ನತೆಗಳು ದೂರಾಗಿ, ಬಲವಾದ/ ಧನಾತ್ಮಕವಾದ ಮಾನಸಿಕ ಆರೋಗ್ಯ ಉಂಟಾಗುತ್ತದೆ.

ಬೌದ್ಧಧರ್ಮದ ವಿಹಾರಗಳಿಗೆ ಗರ್ಭಿಣಿ ಸ್ತ್ರೀಯು ಆಗಿಂದಾಗ್ಗೆ ಭೇಟಿಕೊಡುವುದರಿಂದ, `ಧಮ್ಮ ಸೂತ್ತ~ಗಳನ್ನು ಪಠಿಸುವುದರಿಂದ ಆಕೆಯ ಸುತ್ತಲೂ ಒಂದು ರೀತಿಯ ಪ್ರಭೆಯು ಉಂಟಾಗುತ್ತದೆ. ಈ ಪ್ರಭೆಯ ಶ್ರವಣದ ತರಂಗಗಳು ಆಕೆಯೊಳಗೆ ಪಸರಿಸಿ ಆಕೆಯು ಹೊತ್ತಿರುವ ಮಗುವು ಉತ್ತಮ ನಡವಳಿಕೆಯುಳ್ಳ ಜೀವಿಯಾಗುವಂತೆ ಪ್ರಭಾವಿಸುತ್ತದೆ.

* ~ಅಂಗುಲಿಮಾಲ ಪರಿತ್ತ~ವನ್ನು ಪಠಿಸಿ ಗರ್ಭಿಣಿ ಸ್ತ್ರೀಯ ಕುಡಿಯುವ ನೀರನ್ನು ಹಾರೈಸುವ ಧಾರ್ಮಿಕ ವಿಧಿಯಿಂದ ಪ್ರಸವವು ಯಾವ ತೊಂದರೆಯೂ ಇಲ್ಲದಂತೆ ಸುಖಕರವಾಗಿ ಆಗುತ್ತದೆಂದು ಬೌದ್ಧಧರ್ಮದಲ್ಲಿ ನಂಬಿಕೆ ಇದೆ. ಈ ಪರಿತ್ತದ ಪಠಣದಿಂದ ಮೂರು ಶ್ರೇಷ್ಠ ರತ್ನ (ಬುದ್ಧ, ಧಮ್ಮ ಮತ್ತು ಮಹಾಸಂಘ) ಹಾಗೂ ದೇವಾನುದೇವತೆಗಳ ಆಶೀರ್ವಾದ ದೊರೆಯುತ್ತದೆ.

* ಗರ್ಭಿಣಿಯು ಶ್ರದ್ಧೆಯಿಂದ ಧಮ್ಮದ ಆಚರಣೆಯನ್ನು ಪಾಲಿಸಿದಲ್ಲಿ-~ಬುದ್ಧ ವಚನ~ದಲ್ಲಿ ದಿಟವಾದ ನಂಬಿಕೆ ಇಟ್ಟಲ್ಲಿ-ಆಂತರ್ಯದಲ್ಲಿ ಹುಟ್ಟುವ ಋಣಾತ್ಮಕ ಗುಣಗಳಾದ ಕೋಪ, ಅಸೂಯೆ, ದ್ವೇಷ, ಕಟುತ್ವ, ಒಂಟಿತನ, ನಿರಾಶೆ, ಅಸಹಾಯಕತೆ ಹಾಗೂ ಮಾನಸಿಕಕ್ಲೇಷಗಳು ದೂರಾಗಿ `ಬ್ರಹ್ಮ ವಿಹಾರ~ಗಳೆಂದು ಕರೆಯಲಾಗುವ ಧನಾತ್ಮಕ ಗುಣಗಳುಂಟಾಗುತ್ತವೆ. ಇವು ತಾಯಿ-ಮಗುವಿನ ದೈಹಿಕ,ಮಾನಸಿಕ ಆರೋಗ್ಯಕ್ಕೆ ಅತ್ಯಂತ ಅವಶ್ಯವೆಂದು ಬೌದ್ಧಧರ್ಮವು ಪ್ರತಿಪಾದಿಸುತ್ತದೆ.

* ಬೌದ್ಧಧರ್ಮದಲ್ಲಿ `ಧ್ಯಾನ~ಕ್ಕೆ ಹೆಚ್ಚಿನ ಪ್ರಾಮುಖ್ಯ.  ಗರ್ಭಿಣಿ ಸ್ತ್ರೀ ತನ್ನ ದಿನನಿತ್ಯದ ಕಾರ್ಯಕ್ರಮಗಳಲ್ಲಿ `ಪಂಚ ನೈತಿಕ ಉಪದೇಶ~ಗಳ ವಾಚನ (ಅಹಿಂಸೆ, ಅಪಹರಿಸದಿರುವುದು, ಲೈಂಗಿಕ ಅಪರಾಧಮಾಡದಿರುವುದು, ಅಸತ್ಯ ನುಡಿಯದಿರುವುದು, ಅಮಲುತರಿಸುವ ಪದಾರ್ಥಗಳನ್ನು ಬಳಸದಿರುವುದು), ಸೂತ್ತಗಳ ಪಠಣ, ಪರಿತ್ತ ವಾಚನಗಳ ಶ್ರವಣ ಹಾಗೂ ಬೋಧಿಪೂಜೆಯ ಆಚರಣೆಗಳನ್ನು ಕೈಗೊಳ್ಳಬೇಕು.

* ದಂಪತಿ ತಂದೆ-ತಾಯಿಯರಾಗಬೇಕಾದಲ್ಲಿ ಹಲವಾರು ತಯಾರಿ ನಡೆಸಬೇಕಾಗುತ್ತದೆ. ವಿಶೇಷವಾಗಿ ಸ್ತ್ರೀಗೆ ತಾಯ್ತನವೆನ್ನುವುದು ಬಹಳ ದೊಡ್ಡ ಜವಾಬ್ದಾರಿ. ಮಗುವನ್ನು ಹಲವಾರು ತಿಂಗಳು ತನ್ನ ಗರ್ಭದಲ್ಲಿಟ್ಟುಕೊಂಡು ಬೆಳೆಸುವ ಆಕೆಗೆ ಉತ್ತಮವಾದ ಆಂತರಿಕ ಹಾಗೂ ಬಾಹ್ಯ ಪ್ರಚೋದನೆ, ಸಹಾಯ ಮತ್ತು ಮಾರ್ಗದರ್ಶನಗಳ ಅವಶ್ಯಕತೆಯಿರುತ್ತದೆ.
 
ಈ ಜವಾಬ್ದಾರಿಯನ್ನು ಆಕೆಯ ಕುಟುಂಬದ ಸದಸ್ಯರು ಹೊರಬೇಕು. ವೈದ್ಯಕೀಯ ಸಹಾಯದ ಜೊತೆಗೆ ಕುಟುಂಬದವರ ಹಾರೈಕೆ/ಒತ್ತಾಸೆ ಮತ್ತು ಧಾರ್ಮಿಕ ಮಾರ್ಗದರ್ಶನಗಳು ದೊರೆತಲ್ಲಿ ಆಕೆಯು ಉತ್ತಮ ಮಗುವಿನ ಮಾತೆಯಾಗಬಲ್ಲಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT