ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೋತೃಗಳ ಮನಗೆದ್ದ ಧಾರವಾಡ ಆಕಾಶವಾಣಿ

ಸಂಶೋಧನಾ ಸಮೀಕ್ಷೆ
Last Updated 3 ಜೂನ್ 2013, 10:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೃಶ್ಯ ಮಾಧ್ಯಮಗಳ ಮೇಲಾಟ, ಖಾಸಗಿ ವಾಹಿನಿಗಳ ಅಬ್ಬರದ ನಡುವೆಯೂ ಆಕಾಶವಾಣಿ ಧಾರವಾಡ ಕೇಂದ್ರ ತನ್ನ ಶ್ರೋತೃಗಳ ಮೆಚ್ಚುಗೆಯನ್ನು ಉಳಿಸಿಕೊಂಡಿದೆ ಎಂದು ಆಕಾಶವಾಣಿಯ ಶ್ರೋತೃ ಸಂಶೋಧನಾ ವಿಭಾಗದ ಸಮೀಕ್ಷೆ ಹೇಳಿದೆ.

ಧಾರವಾಡ ಆಕಾಶವಾಣಿ ವ್ಯಾಪ್ತಿಯ ನೂರು ಹಳ್ಳಿ, ನೂರು ಪಟ್ಟಣಗಳಲ್ಲಿ ನಡೆಸಿದ ಸ್ಯಾಂಪಲ್ ಸರ್ವೆ ಈ ಮಾಹಿತಿ ಹೊರಗೆಡವಿದೆ.
40 ಸಾವಿರ ಚದರ ಕಿ.ಮೀ ವ್ಯಾಪ್ತಿಯ ಪ್ರಸಾರ ವಲಯವನ್ನು ಹೊಂದಿರುವ ಆಕಾಶವಾಣಿ ಧಾರವಾಡ 3.40 ಕೋಟಿ ಕೇಳುಗರನ್ನು ತಲುಪುವ ಸಾಮರ್ಥ್ಯ ಹೊಂದಿದೆ.  ಸುಮಾರು 16 ಲಕ್ಷ ರೆಡಿಯೊ ಮನೆಗಳಿದ್ದು 80 ಲಕ್ಷ ಜನ ಪ್ರತಿನಿತ್ಯ ಒಂದಲ್ಲ ಒಂದು ರೆಡಿಯೊ  ಕಾರ್ಯಕ್ರಮ ಕೇಳುತ್ತಿದ್ದಾರೆ.

ಎಲ್ಲರ ಪ್ರೀತಿಯ ಚಿತ್ರಗೀತೆಗಳ ಸಂಗಡ ಪ್ರದೇಶ ಸಮಾಚಾರ, ವಾರ್ತೆ, ಆರೋಗ್ಯ ಸಂಬಂಧಿ ಕಾರ್ಯಕ್ರಮ, ವಿಶೇಷ ಬಾನುಲಿ ಸರಣಿಗಳು, ಕರಂಗ ಹೀಗೆ ಹತ್ತಾರು ಕಾರ್ಯಕ್ರಮಗಳಿಂದ ಆಕಾಶವಾಣಿ ಧಾರವಾಡ ಕೇಳುಗರ ನಿತ್ಯ ಸಂಗಾತಿಯಾಗಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ರೆಡಿಯೊ  ಕೇಳುವುದರಲ್ಲಿ ಪಟ್ಟಣದವರಿಗಿಂತ ಗ್ರಾಮೀಣರು, ಗಂಡಸರಿಗಿಂತ ಹೆಣ್ಣುಮಕ್ಕಳು ಮುಂದಿದ್ದಾರೆ ಎಂದೂ ಸಮೀಕ್ಷೆ ಹೇಳಿದೆ. ರೆ ಡಿಯೊ ಸೆಟ್‌ಗಳ ಲಭ್ಯತೆ ಮಾರುಕಟ್ಟೆಯಲ್ಲಿ ಕಡಿಮೆಯಾಗಿರುವುದನ್ನೂ, ಕೇಳುಗರು ಮೊಬೈಲ್‌ನಲ್ಲಿಯೇ ರೆಡಿಯೊ ಆಲಿಸುವುದು ಹೆಚ್ಚಾಗಿರುವುದನ್ನೂ ಈ ಸಮೀಕ್ಷೆ ಗುರುತಿಸಿದೆ.

ಮನರಂಜನೆ, ಮಾಹಿತಿ  ವಿವಿಧ ಭಾರತಿ ಧಾರವಾಡದ ಸುತ್ತಲಿನ ಬೆಳಗಾವಿ ಗದಗ ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಸಾರ ವ್ಯಾಪ್ತಿ ಹೊಂದಿರುವ ಧಾರವಾಡದ ವಿವಿಧ ಭಾರತಿ ವಾಣಿಜ್ಯ ಪ್ರಸಾರ ಕೇಂದ್ರ ಎಫ್.ಎಂ. ತರಂಗಗಳ ಮೂಲಕ ಜನಪ್ರಿಯವಾಗಿದೆ ಎಂದು ಶ್ರೋತೃ ಸಂಶೋಧನೆ ಅಭಿಪ್ರಾಯಪಟ್ಟಿದೆ. ಜನರಂಜನೆಯ ನಿತ್ಯಸಂಗಾತಿಯಾಗಿ ವಿವಿಧ ಭಾರತಿ ಪ್ರತಿನಿತ್ಯ 56 ಲಕ್ಷ ಕೇಳುಗರನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಆಧುನಿಕ ತಂತ್ರಜ್ಞಾನದ ಬೆಂಬಲದಿಂದ ಮನರಂಜನೆ ಮಾಹಿತಿಗಳನ್ನು ಕೇಳುಗರಿಗೆ ಮಧುರವಾಗಿ ತಲುಪಿಸುತ್ತಿರುವ ವಿವಿಧ ಭಾರತಿ ಪಟ್ಟಣ, ಹಳ್ಳಿಗಳೆರಡರಲ್ಲೂ ಜನಪ್ರಿಯ. ಮುಂಜಾನೆಯ ಅರ್ಪಣಾ ಮತ್ತು ನಂದನ ಕಾರ್ಯಕ್ರಮಗಳು, ಜೊತೆಯಲ್ಲೆೀ ಪ್ರಸಾರವಾಗುವ ಎಫ್. ಎಂ. ಸುದ್ದಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನ ಪಡೆದಿವೆ. ಮೊಬೈಲ್‌ನಲ್ಲಿ ಎಫ್.ಎಂ. ಪ್ರಸಾರವನ್ನು ಕೇಳುವ ಸೌಲಭ್ಯವಿರುವುದರಿಂದ ವಿವಿಧ ಭಾರತಿ ಪ್ರಸಾರ ಹೆಚ್ಚು ಕೇಳುಗರನ್ನು ತಲುಪುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಈ ಸಮೀಕ್ಷೆಯ ಫಲಿತಾಂಶ ಆಕಾಶವಾಣಿಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ ಎಂದಿರುವ ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾದ ಸಿ.ಯು.ಬೆಳ್ಳಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT