ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಕ್ರಾಂತಿಯ ಹರಿಕಾರ

Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ಮಿನುಗು ಮಿಂಚು

ಭಾರತದಲ್ಲಿ ಹಾಲಿನ ಸಹಕಾರ ಚಳವಳಿಯನ್ನು ಪ್ರಾರಂಭಿಸಿದ್ದು ಯಾರು?
ತ್ರಿಭುವನ್‌ದಾಸ್ ಕೆ.ಪಟೇಲ್ ಇದನ್ನು ಪ್ರಾರಂಭಿಸಿದರು. ರೈತರಿಂದ ಕಡಿಮೆ ಬೆಲೆಗೆ ಹಾಲು ಕೊಂಡು ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದ ಖಾಸಗಿಯವರ ಕಾಟ ತಪ್ಪಿಸಲು ಅವರು ಈ ಚಳವಳಿಗೆ ನಾಂದಿ ಹಾಡಿದರು. `ಕೈರಾ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ'ವನ್ನು ಅವರು ಗುಜರಾತ್‌ನ ಆನಂದ್‌ನಲ್ಲಿ 1946ರಲ್ಲಿ ಸ್ಥಾಪಿಸಿದರು. ಅದೇ `ಅಮೂಲ್' ಹೆಸರಿನಲ್ಲಿ ಜನಪ್ರಿಯವಾಯಿತು.

ಡಾ. ಕುರಿಯನ್ ಅಮೂಲ್‌ಗೆ ಸೇರಿದ್ದು ಯಾವಾಗ?
1949ರಲ್ಲಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾಗಿದ್ದ ಯುವಕ ಕುರಿಯನ್ ಕೈಲಿದ್ದ ಸರ್ಕಾರಿ ಕೆಲಸವನ್ನು ಬಿಟ್ಟು ಆನಂದ್‌ನಲ್ಲಿನ ಹಾಲು ಉತ್ಪಾದಕರ ಉದ್ಧಾರಕ್ಕೆ ಟೊಂಕಕಟ್ಟಿದರು.

ಕುರಿಯನ್ ಅವರ ನಾಯಕತ್ವದಲ್ಲಿ ಅಮೂಲ್ ಮಾಡಿದ ಸಾಧನೆಗಳಾವುವು?
ಆನಂದ್‌ನಲ್ಲಿ ಹಾಲು ಸಂಸ್ಕರಣಾ ಘಟಕ ಸ್ಥಾಪಿಸಿದ್ದೇ ಅಲ್ಲದೆ ಅಲ್ಲಿನ ಡೇರಿಯನ್ನು ಕುರಿಯನ್ ಆಧುನೀಕರಿಸಿದರು. ಅವರ ಸೇವಾವಧಿಯಲ್ಲಿ ಮಾಡಿದ ಗಮನಾರ್ಹ ಕೆಲಸವೆಂದರೆ ಹಾಲಿನ ಪುಡಿಯನ್ನು ತಯಾರಿಸಿದ್ದು ಹಾಗೂ ಎಮ್ಮೆಹಾಲನ್ನು ಘನೀಕೃತ ರೂಪದಲ್ಲಿ ದೀರ್ಘ ಕಾಲ ಸಂರಕ್ಷಿಸಿ ಇಡುವಂತೆ ಮಾಡಿದ್ದು. ಗುಜರಾತ್‌ನ ಇತರೆ ಜಿಲ್ಲೆಗಳಿಗೂ ಸಹಕಾರ ಚಳವಳಿ ಹಬ್ಬಲು ಕೂಡ ಅವರ ಕಾರ್ಯವೈಖರಿಯೇ ಕಾರಣ.

ಇಂದು ಅಮೂಲ್ ನೇತೃತ್ವದ ಸಹಕಾರ ಸಂಸ್ಥೆಗಳ ವಾರ್ಷಿಕ ವಹಿವಾಟು 10 ಸಾವಿರ ಕೋಟಿಯಷ್ಟಿದೆ. 15 ಜಿಲ್ಲೆಗಳಲ್ಲಿ 30 ಲಕ್ಷ ರೈತರಿಗೆ ಇದು ಅನುಕೂಲ ಮಾಡಿಕೊಟ್ಟಿದೆ. ಆ ರೈತರಲ್ಲಿ ಸಿಂಹಪಾಲು ಮಹಿಳೆಯರು ಎಂಬುದು ವಿಶೇಷ.

ಶ್ವೇತ ಕ್ರಾಂತಿಗೆ ಏನು ಕಾರಣ?
ಅಮೂಲ್ ಮಾದರಿಯ ಹಾಲಿನ ಸಹಕಾರ ವ್ಯವಸ್ಥೆ ಎಷ್ಟು ಯಶಸ್ವಿಯಾಯಿತೆಂದರೆ, ಅದನ್ನು ದೇಶದಾದ್ಯಂತ ಜಾರಿಗೆ ತರಲು ಲಾಲ್ ಬಹದ್ದೂರ್ ಶಾಸ್ತ್ರಿ ಬಯಸಿದ್ದರು. ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) 1965ರಲ್ಲಿ ಸ್ಥಾಪಿತವಾಯಿತು. ಡಾ. ಕುರಿಯನ್ ಅದರ ಅಧ್ಯಕ್ಷರಾಗಿ ಆಯ್ಕೆಗೊಂಡರು. `ಆಪರೇಷನ್ ಫ್ಲಡ್' ಪ್ರಾರಂಭವಾದದ್ದು ಆಗಲೇ. ವಿಶ್ವದಲ್ಲೇ ಭಾರತ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಬೇಕು ಎಂಬುದು ಈ ಕಾರ್ಯ ಯೋಜನೆಯ ಮಹತ್ವಾಕಾಂಕ್ಷೆಯಾಗಿತ್ತು. 2010-11ರಲ್ಲಿ ವಿಶ್ವದ ಹಾಲು ಉತ್ಪಾದನೆಯ 17 ಪ್ರತಿಶತ ಪಾಲು ಭಾರತದ್ದು. ಈ ಯೋಜನೆಯನ್ನೇ `ಶ್ವೇತ ಕ್ರಾಂತಿ' ಎಂದು ಕರೆಯಲಾಯಿತು. ಇದರ ಹರಿಕಾರ ಡಾ.ವರ್ಗೀಸ್ ಕುರಿಯನ್ ಕಳೆದ ಸೆಪ್ಟೆಂಬರ್ 9ರಂದು ನಿಧನರಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT