ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಾ ಸಣ್ಣ ಖುಷಿ, ದೊಡ್ಡ ಕನಸು

Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

`ಬದುಕಿನ ಚಿಕ್ಕ ಚಿಕ್ಕ ಖುಷಿಗಳನ್ನೂ ಅನುಭವಿಸಿ'. `ಬಿಗ್‌ಬಾಸ್' ರಿಯಾಲಿಟಿ ಶೋನಿಂದ ನಟಿ ಶ್ವೇತಾ ಪಂಡಿತ್ ಕಲಿತ ಪಾಠವಂತೆ ಇದು. `ಕತ್ಲಲ್ಲಿ ಕರಡೀಗೆ ಜಾಮೂನು...' ಎಂದು ಹಾಡುತ್ತ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡರೂ ಶ್ವೇತಾ ಬೆಳಕಿನಲ್ಲಿ ಮಿಂದದ್ದು ಬಿಗ್‌ಬಾಸ್‌ನಲ್ಲಿ. ಗಾಂಧಿನಗರದ ಈ ಮಾತು ಶ್ವೇತಾರಿಗೂ ನಿಜವೆನಿಸಿದೆ. ಇಪ್ಪತ್ತು ಸಿನಿಮಾದಲ್ಲಿ ಮಾಡುವುದೂ ಒಂದೇ, ಇಂಥ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೂ ಒಂದೇ ಎಂದು ತೋರಿದೆ.

ಅಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಟ್ಟಿದೆಯಂತೆ `ಬಿಗ್‌ಬಾಸ್'. ಮೊದಲಿನಂತೆ ಬಿಡುಬೀಸಾಗಿ ಬೀದಿಯಲ್ಲಿ ಸುತ್ತುವುದು ಈಗ ಸಾಧ್ಯವಿಲ್ಲ. ಹಾದಿಹೋಕರು ಕೂಡ ಪಕ್ಕದಮನೆ ಹುಡುಗಿಯಂತೆ ಪ್ರೀತಿಯಿಂದ ಹಾರೈಸುವ ಬಗ್ಗೆ ಅವರಿಗೆ ಪುಳಕ.
ಈ ವಾರ ತೆರೆ ಕಾಣುತ್ತಿರುವ `ಕೇಸ್ ನಂ 18/9'ನಲ್ಲಿ ಶ್ವೇತಾ ಹೆಜ್ಜೆ ಗುರುತುಗಳಿವೆ.

ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ ತಮಿಳು ಚಿತ್ರದ ಕನ್ನಡ ರೂಪಾಂತರ ಇದು. ಚಿತ್ರದಲ್ಲಿ ಅವರು ಶಾಲೆಗೆ ತೆರಳುವ ಹುಡುಗಿ. ತನಗಿಂತಲೂ ಕಡಿಮೆ ವಯಸ್ಸಿನ ಪಾತ್ರಕ್ಕೆ ಜೀವ ತುಂಬಬೇಕಿತ್ತು. ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿಯೇ ಅಭ್ಯಾಸವಾಗಿದ್ದ ಶ್ವೇತಾರಿಗೆ ಶಾಲಾ ಬಾಲಕಿಯಂತೆ ನಡೆಯುವುದು ಪರೀಕ್ಷೆ ಪಾಸು ಮಾಡುವಷ್ಟೇ ಕಷ್ಟವಾಗಿತ್ತು. ನಿರ್ದೇಶಕ ಮಹೇಶ್‌ರಾವ್ ತಿದ್ದಿದರು. ಪರಿಣಾಮ ಶ್ವೇತಾ ತೂಕ ಇಳಿಸಿಕೊಂಡರು. ಶಾಲೆಗಳಿಗೆ ತೆರಳಿ ಮಕ್ಕಳ ಹಾವಭಾವವನ್ನೂ ಗ್ರಹಿಸಿದರು. ಪಿಳಿಪಿಳಿ ಕಣ್ಣುಬಿಡುವ ಹದಿಹರೆಯದ ಬಾಲೆಯಾದರು.   

`ಬಿಗ್‌ಬಾಸ್' ಮೂಡುವ ಹೊತ್ತಿಗೆ ಅವರು ನಟಿಸಿದ್ದ ತೆಲುಗಿನ `ಥಿಯೇಟರ್‌ಲೊ ನಲಗುರು' ಪೂರ್ಣಗೊಂಡಿತ್ತು. ಮೂವರು ನಾಯಕರೊಂದಿಗೆ ಶ್ವೇತಾ ನಾಯಕನಟಿಯಾಗಿದ್ದ ಚಿತ್ರ ಅದು. ದೊಡ್ಡ ಹಿಟ್ ನೀಡದಿದ್ದರೂ ಆ ಥ್ರಿಲ್ಲರ್ ಸಿನಿಮಾ ನಿರ್ಮಾಪಕರ ಜೇಬು ತುಂಬಿಸಿತ್ತು. ಈ ಮಧ್ಯೆ ತಮಿಳಿನ `ವೇರು'ವಿನಲ್ಲಿ ನಟಿಸಬೇಕಿತ್ತು. `ಬಿಗ್‌ಬಾಸ್' ಕಾರಣಕ್ಕೆ ಅದನ್ನು ಕೈ ಬಿಟ್ಟರು.

ಬಿಗ್‌ಬಾಸ್ ನಂತರ ಶ್ವೇತಾ ಅವಕಾಶಗಳ ಅಲೆಯಲ್ಲಿ ತೇಲಿದ್ದಾರೆ. ತೆಲುಗಿನಲ್ಲೂ ಕೆಲವು ನಿರ್ಮಾಪಕರು ಕತೆ ಹಿಡಿದು ಬಂದರಂತೆ. ಕನ್ನಡ ಮೊದಲು ಎಂಬ ಕಾರಣಕ್ಕೆ ಒಲ್ಲೆ ಎಂದಿದ್ದಾರೆ. ಇದುವರೆಗೆ ಕನ್ನಡದ ಆರು ಚಿತ್ರಗಳ ಕತೆ ಕೇಳಿದ್ದಾರೆ. ಎರಡು ಚಿತ್ರಗಳೆಡೆಗೆ ಮನಸ್ಸು ವಾಲಿದೆ. ಒಂದರಲ್ಲಿ ಗಯ್ಯಾಳಿ ಪಾತ್ರವಂತೆ. ಆದರೆ ಎರಡೂ ಸೆಪ್ಟೆಂಬರ್ ತಿಂಗಳಿನಲ್ಲೇ ಸೆಟ್ ಏರುತ್ತಿರುವುದು ಸಮಸ್ಯೆಯಾಗಿದೆ. ಯಾವುದನ್ನು ಆರಿಸಿಕೊಳ್ಳಲಿ ಎಂಬ ಗೊಂದಲ ಈಗ.

ಶ್ವೇತಾ ಹುಟ್ಟಿದ್ದು ಹೈದರಾಬಾದ್‌ನಲ್ಲಿ. ಅಪ್ಪ ವಿನಾಯಕ್, ಅಮ್ಮ ವೈಶಾಲಿ ಕರಾವಳಿ ಸೀಮೆಯವರು. ಕಾಲೇಜು ಓದಿದ್ದು ಮಂಗಳೂರಿನಲ್ಲಿ. ಕೊಂಕಣಿ ಅವರ ಮನೆ ಮಾತು. ಅದರ ಜೊತೆಗೆ ತೆಲುಗು, ಹಿಂದಿ, ಮರಾಠಿಯನ್ನೂ ಅವರು ಬಲ್ಲರು.
ನಟನೆಯ ಪಾಠ ಕಲಿತದ್ದು ಮುಂಬೈನ ಶಬಾನಾ ಅಜ್ಮಿ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ. ನಂತರ ಹಿಂದಿ ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳು ಅರಸಿ ಬಂದವು.

ಅದೇಕೋ ಅವನ್ನೆಲ್ಲಾ ಬಿಟ್ಟು ಬೆಂಗಳೂರಿಗೆ ಬಂದರು. ಫ್ಯಾಷನ್ ಲೋಕದಲ್ಲಿ ಕೆಲಕಾಲ ಅಡ್ಡಾಡಿದರು. ಯೋಗರಾಜ ಭಟ್ಟರ `ಪರಮಾತ್ಮ'ದಲ್ಲಿ ಇಣುಕಿದರು. ವಿಜಯ ರಾಘವೇಂದ್ರ ಅವರ `ಲವರ್ಸ್'ಗೆ ಶ್ವೇತಾ ನಾಯಕಿ ಎಂಬ ಸುದ್ದಿಯೂ ಹರಡಿತು. ಆ ನಂತರ `ಕೇಸ್ ನಂ...' ಕೈ ಹಿಡಿಯಿತು. 

`ಬಿಗ್‌ಬಾಸ್' ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಳ್ಳಬಹುದಿತ್ತು. ಆದರೆ ಅವರಿಗೆ ಅದೆಲ್ಲಾ ಇಷ್ಟವಿಲ್ಲ. ಬಂದ ಪಾತ್ರಗಳನ್ನು ತರಾತುರಿಯಲ್ಲಿ ಒಪ್ಪಿಕೊಳ್ಳುವುದೂ ಅವರಿಗೆ ಸರಿ ಕಾಣುತ್ತಿಲ್ಲ. `ಕೇಸ್ ನಂ.18/9'ನಲ್ಲಿ ಪಾತ್ರವೇ ತಾನಾಗಿದ್ದೇನೆ. ಅಂಥ ಸೃಜನಾತ್ಮಕ ಅವಕಾಶಗಳು ದೊರೆತರೆ ಇಲ್ಲ ಎನ್ನಲಾರೆ ಎನ್ನುವ ಅವರಿಗೆ `ಕೇಸ್' ಬಗ್ಗೆ ಅಪಾರ ನಿರೀಕ್ಷೆಗಳಿವೆ.

ರಿಯಾಲಿಟಿ ಶೋನ ಅಲೆ ಇಳಿದರೆ ಏನಾಗಬಹುದು? ಅದರ ಬಗ್ಗೆಯೂ ಶ್ವೇತಾ ತಲೆ ಕೆಡಿಸಿಕೊಂಡಿಲ್ಲ. `ಯಾವುದೇ ನಿರೀಕ್ಷೆಗಳನ್ನಿಟ್ಟುಕೊಂಡು ಚಿತ್ರರಂಗಕ್ಕೆ ಬರಲಿಲ್ಲ. ಹೀಗೇ ಬದುಕಬೇಕು ಎಂಬ ಕನಸುಗಳೇನೂ ಇಲ್ಲದಿರುವುದರಿಂದ ನಿರಾಸೆ ಆಗದು. ಬಿಗ್‌ಬಾಸ್ ನನ್ನ ಹೊಣೆ ಹೆಚ್ಚಿಸಿದೆ. ಉತ್ತಮ ಚಿತ್ರಗಳನ್ನು ನೀಡುವಂತೆ ಪ್ರೇರೇಪಿಸಿದೆ' ಎಂಬ ಮುಗುಳುನಗೆ ಬೆರೆತ ಮಾತು ಅವರದು. ಅಂದಹಾಗೆ `ನೀವು ನೀವಾಗಿಯೇ ಇರಿ' ಎಂದು ಬಿಗ್‌ಬಾಸ್‌ನಿಂದ ಕಲಿತ ಪಾಠ ಅವರ ಜೊತೆ ಸದಾ ಇರಲಿದೆಯಂತೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT