ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರತ್ತುಉಲ್ಲಂಘಿಸದಿರಿ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡು ಮತ್ತು ಮೂರನೇ ದೂರುಗಳಿಗೆ ಸಂಬಂಧಿಸಿದಂತೆ 22 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ ಕಠಿಣ ಷರತ್ತುಗಳನ್ನು ವಿಧಿಸಿದೆ. ದೊಡ್ಡ ಮೊತ್ತದ ಬಾಂಡ್‌ನ ಭದ್ರತೆಯನ್ನೂ ಪಡೆದುಕೊಂಡಿದೆ.

ಮೂರನೇ ಮೊಕದ್ದಮೆಯಲ್ಲಿ ಆರೋಪಿಗಳಾಗಿರುವ ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್‌ಕುಮಾರ್, ಶಾಸಕ ಡಾ.ಡಿ.ಹೇಮಚಂದ್ರ ಸಾಗರ್, ಉದ್ಯಮಿ ಪ್ರವೀಣ್ ಚಂದ್ರ, ಎಲಿಯಾನ್ ಡೆವಲಪರ್ಸ್ ನಿರ್ದೇಶಕ ಎಸ್.ಎಸ್.ಉಗೇಂದರ್, ಕೋರಮಂಗಲ ಮೂರನೇ ಬ್ಲಾಕ್‌ನ ನಮ್ರತಾ ಶಿಲ್ಪಿ, ರಿಯಲ್ ಎಸ್ಟೇಟ್ ಉದ್ಯಮಿ ರೆಡ್ಡಿ ವೀರಣ್ಣ ಅವರ ಪತ್ನಿ ಆರ್.ಸುಗುಣಾ ಅವರಿಗೆ ತಲಾ ಹತ್ತು ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರು ವ್ಯಕ್ತಿಗಳ ಭದ್ರತೆಯ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ.

ಎರಡನೇ ದೂರಿನಲ್ಲಿ ಆರೋಪಿಗಳಾಗಿರುವ ಶಿವಮೊಗ್ಗ ತಾಲ್ಲೂಕಿನ ಕುಂಸಿ ಹೋಬಳಿಯ ಎನ್.ಅಕ್ಕಮಹಾದೇವಿ, ಹೊನ್ನಾಳಿ ಪಟ್ಟಣದ ಎನ್.ಎಸ್.ಮಹಾಬಲೇಶ್ವರ, ಬೆಂಗಳೂರಿನ ಬಿಟಿಎಂ ಬಡಾವಣೆಯ ಸತ್ಯಕುಮಾರಿ, ದೊಮ್ಮಲೂರಿನ ಮೋಹನ್ ರಾಜ್, ಜೆ.ಪಿ.ನಗರ ಮೂರನೇ ಹಂತದ ವಿ.ಪ್ರಕಾಶ್, ದೇವರಚಿಕ್ಕನಹಳ್ಳಿಯ ಕಾಮಾಕ್ಷಮ್ಮ, ಶಿವಮೊಗ್ಗ ತಾಲ್ಲೂಕಿನ ಕುಂಸಿಯ ಎಂ.ಮಂಜುನಾಥ್, ಬೆಂಗಳೂರಿನ ಜಯನಗರ 4ನೇ `ಟಿ~ ಬ್ಲಾಕ್‌ನ ವಿ.ಅನಿಲ್‌ಕುಮಾರ್, ಬನಶಂಕರಿ ಎರಡನೇ ಹಂತದ ಬಿ.ರಮೇಶ್, ಗೆದ್ದಲಹಳ್ಳಿಯ ಶಾಂತಾ ದೇವಿ, ಫ್ರೇಜರ್ ಟೌನ್‌ನ ಶಾಂತಾ ಬಾಯಿ, ನ್ಯೂ ಬಂಬೂ ಬಜಾರ್‌ನ ಇಸ್ಮಾಯಿಲ್ ಷರೀಫ್, ಜಯನಗರ 4ನೇ `ಟಿ~ ಬ್ಲಾಕ್‌ನ ವಿ.ಮಂಜುನಾಥ್ ಮತ್ತು ಪುಟ್ಟೇನಹಳ್ಳಿಯ ಕೆ.ಶಿವಪ್ಪ ಇವರಿಗೆ ತಲಾ ಐದು ಲಕ್ಷ ರೂಪಾಯಿ ಮೊತ್ತದ ಬಾಂಡ್ ಮತ್ತು ಇಬ್ಬರ ವೈಯಕ್ತಿಕ ಭದ್ರತೆ ಆಧಾರದಲ್ಲಿ ಜಾಮೀನು ನೀಡಲಾಗಿದೆ.

ಬ್ಯಾಂಕ್ ದಾಖಲೆ ಸಲ್ಲಿಸಲು ಆದೇಶ:
ಪ್ರಕರಣದ ಜೊತೆ ನಂಟು ಹೊಂದಿರುವ ಧವಳಗಿರಿ ಡೆವಲಪರ್ಸ್ ಅಂಡ್ ಪ್ರಾಪರ್ಟೀಸ್, ಭಗತ್ ಹೋಮ್ಸ ಪ್ರೈವೇಟ್ ಲಿಮಿಟೆಡ್ ಮತ್ತು ಸಹ್ಯಾದ್ರಿ ಹೆಲ್ತ್‌ಕೇರ್ ಅಂಡ್ ಡಯಾಗ್ನಾಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗಳ ಹಿಂದಿನ ಮೂರು ವರ್ಷಗಳ ಬ್ಯಾಂಕ್ ವಹಿವಾಟು ಮತ್ತು ಸಂಪೂರ್ಣ ವ್ಯವಹಾರದ ದಾಖಲೆ ಸಲ್ಲಿಸುವಂತೆ ನ್ಯಾಯಾಲಯ ಯಡಿಯೂರಪ್ಪ ಅವರ ಪುತ್ರರು ಮತ್ತು ಅಳಿಯನಿಗೆ ಆದೇಶಿಸಿದೆ.

ಮೂರೂ ಕಂಪೆನಿಗಳ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸದಿದ್ದರೆ ಜಾಮೀನು ರದ್ದುಮಾಡುವ ಎಚ್ಚರಿಕೆಯನ್ನೂ ರಾಘವೇಂದ್ರ, ವಿಜಯೇಂದ್ರ ಮತ್ತು ಸೋಹನ್‌ಕುಮಾರ್ ಅವರಿಗೆ ನ್ಯಾಯಾಧೀಶರು ನೀಡಿದ್ದಾರೆ.
ಸಾಕ್ಷಿಗಳಿಗೆ ಬೆದರಿಕೆ ಒಡ್ಡುವುದು, ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವುದು, ವಿಚಾರಣೆಗೆ ಗೈರು ಹಾಜರಾಗುವಂತಹ ಪ್ರಯತ್ನಗಳನ್ನೂ ಮಾಡಬಾರದು ಎಂದು ಜಾಮೀನು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT