ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಷೇಕ್ಸ್‌ಪಿಯರ್ ಪ್ರತಿಭೆಗೆ ಕುಮಾರವ್ಯಾಸ ಸರಿಸಾಟಿ'

Last Updated 21 ಡಿಸೆಂಬರ್ 2012, 20:09 IST
ಅಕ್ಷರ ಗಾತ್ರ

ಬೆಂಗಳೂರು: `ಕುಮಾರವ್ಯಾಸ, ಪಂಪ, ರನ್ನ, ಜನ್ನರ ಮಹಾಕಾವ್ಯಗಳನ್ನು ಇನ್ನಷ್ಟು ಅಧ್ಯಯನ ಮಾಡಬೇಕಿತ್ತು, ಆದರೆ, ಇಂಗ್ಲಿಷ್‌ನ ಉಪನ್ಯಾಸಕನಾಗಿ ಈ ಕೃತಿಗಳೆಡೆಗೆ ಹೆಚ್ಚಿನ ತನ್ಮಯತೆ ಸಾಧಿಸಲಾಗಲಿಲ್ಲ' ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಖೇದ ವ್ಯಕ್ತಪಡಿಸಿದರು.

ಅಭಿನವ ಪ್ರಕಾಶನದ ವತಿಯಿಂದ ಅನಂತಮೂರ್ತಿ ಅವರ 80ನೇ ಹುಟ್ಟುಹಬ್ಬದ ಪ್ರಯುಕ್ತ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ನಿಜದ ಬೆಳಕಿನೆಡೆಗೆ ಒಂದು ಧ್ಯಾನ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

`ಹಿಂಸೆಯನ್ನು ಸಮರ್ಪಕವಾಗಿ ಎದುರಿಸುವ ಸೂಕ್ಷ್ಮತೆಯನ್ನು ಪಡೆದ ಷೇಕ್ಸ್‌ಪಿಯರ್‌ನಂತಹ ಪ್ರತಿಭೆಗೆ ಈ ನೆಲದ ಕುಮಾರವ್ಯಾಸ ಸರಿಸಮ. ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ದಿನಗಳಲ್ಲೂ ಬ್ರಿಟನ್ನಿನ ಯುವಜನತೆಯ ಕೈಯಲ್ಲಿ ಷೇಕ್ಸ್‌ಪಿಯರ್‌ನ ಕೃತಿಗಳು ರಾರಾಜಿಸುತ್ತವೆ. ಆದರೆ ನಮ್ಮ ಮಕ್ಕಳಿಗೆ ಕುಮಾರವ್ಯಾಸ, ಪಂಪರ ಕೃತಿಗಳು ಲಭ್ಯವಾಗಿವೆಯೇ?' ಎಂದು ಪ್ರಶ್ನಿಸಿದರು.

`ನಿಷ್ಠುರತೆ ಮತ್ತು ಸೌಜನ್ಯದ ನಡುವೆ ಸಮನ್ವಯತೆ ಸಾಧಿಸುವತ್ತ ಲೇಖಕ ಸದಾ ತುಡಿಯಬೇಕು. ಅಣ್ಣಾ ಹಜಾರೆ ಅವರು ಒಂದು ಪಕ್ಷಕ್ಕೆ ನಿಷ್ಠುರರಾಗುತ್ತಲೇ ಮೋದಿಯವರಿಗೆ ಹೆಚ್ಚು ಸೌಜನ್ಯ ತೋರಿಸಿದರು. ಆದರೆ ಗಾಂಧಿಗೆಯಂತಹ ಧೀಮಂತ ನಾಯಕನಿಗೆ ಮಾತ್ರ ಬ್ರಿಟಿಷ್‌ರೆಡೆಗೆ ಸೌಜನ್ಯ ಮತ್ತು ನಿಷ್ಠುರಭಾವಗಳನ್ನು ಸ್ಪಷ್ಟವಾಗಿ ತಿಳಿಸುವ ಚಾಕಚಕ್ಯತೆಯಿತ್ತು' ಎಂದು ಹೇಳಿದರು.

`ರಾಮಾಯಣ, ಮಹಾಭಾರತ ಸೇರಿದಂತೆ ಬಹುಮುಖ್ಯ ಕೃತಿಗಳೆಲ್ಲವೂ ವಜಾತ್ಯತೀತ ಮಾದರಿಯಲ್ಲಿಯೇ ಇವೆ. ಲೇಖಕನ ಯಾವ ವಿಚಾರಕ್ಕೂ ಸಾವಿಲ್ಲ ಎಂಬ ಸತ್ಯವನ್ನು ಬರಹಗಾರರು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ದೇಶ ಮತ್ತು ಭಾಷೆಗಳನ್ನು ಮೀರಿ ಮಾನವೀಯತೆಯು ಜೀವಾಳವಾದಾಗ ಲೇಖಕನ ಅಸ್ತಿತ್ವ ದೀರ್ಘವಾಗುತ್ತದೆ' ಎಂದರು.

ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, `ತನಗೆ ಒಪ್ಪುವ, ಒಪ್ಪದೇ  ಇರುವ ಯಾವುದೇ ತತ್ವವಿರಲಿ, ಪಕ್ಷವಿರಲಿ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸುವ ಗಟ್ಟಿತನವಿರುವುದು ಅನಂತಮೂರ್ತಿ ಅವರಿಗೆ ಮಾತ್ರ. ಹಾಗಾಗಿ ನನ್ನಂತಹ ಅದೆಷ್ಟೋ ಬರಹಗಾರರಿಗೆ ಅವರು ಸ್ಫೂರ್ತಿ' ಎಂದು ಶ್ಲಾಘನೆ ಮಾಡಿದರು.

`ನನಗೂ ಆಹ್ವಾನ'
`ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೆಜೆಪಿ ಪಕ್ಷದ ಚಿಂತನಾ ಚಾವಡಿಗೆ ನನಗೆ ಆಹ್ವಾನ ನೀಡಲಾಗಿದೆ. ಆದರೆ ಈ ಚಾವಡಿಯ ಮೊದಲ ಸಭೆಯಲ್ಲಿ ಯಡಿಯೂರಪ್ಪ ಅವರು ಮಾಡಿರುವ ಅಷ್ಟೂ ತಪ್ಪುಗಳನ್ನು ಒಪ್ಪಿಕೊಳ್ಳಬೇಕು, ಆ ಮೂಲಕ ಅವರು ಶುದ್ಧರಾಗಬೇಕು' ಎಂದು ಅನಂತಮೂರ್ತಿ ತಾಕೀತು ಮಾಡಿದರು.

`ಯಡಿಯೂರಪ್ಪ ಅವರ ರಾಜಕೀಯ ಬದುಕನ್ನು ಗಣಿಗಾರಿಕೆಯೆಂಬುದು ಹಾಳುಗೆಡವಿತು. ಮಾಡಿರುವ ತಪ್ಪುಗಳನ್ನು ಒಪ್ಪಿಕೊಂಡು ಬಿಟ್ಟರೆ ಒಟ್ಟು ರಾಜಕೀಯ ವಲಯವೇ ಶುದ್ಧಿಯಾಗುವ ಪ್ರಕ್ರಿಯೆಗೆ ಮೇಲ್ಪಂಕ್ತಿ ಹಾಕಿಕೊಟ್ಟಂತೆ ಆಗುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT