ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಚುರುಕಾಗಿಸುವುದು ಹೇಗೆ?

Last Updated 21 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

 ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲದೆ, ಐಪಿಎಲ್ ಮ್ಯಾಚ್‌ಗಳೂ ಅಪಾರ ಜನಪ್ರಿಯತೆಯಿಂದ ಯಶಸ್ಸು ಕಂಡಿವೆ. ಹಾಗೆಯೇ ಜನಪ್ರಿಯ ನಟನ ಚಲನಚಿತ್ರ ಬಿಡುಗಡೆಗೆ ದೊರಕುವ ಜನಸ್ಪಂದನವೂ ಅಪಾರ!
 
ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯು ಹೊಂದಿರುವ ನಗದನ್ನು ಯಾವ ರೀತಿ ಉಪಯೋಗಿಸಬೇಕೆಂದು ನಿರ್ಧರಿಸಲು ಅಸಾಧ್ಯವಾದ ಈ ದಿನಗಳಲ್ಲಿ ಇತರೆ ಕಂಪೆನಿಗಳಾದ ಐಟಿಸಿ ಹಿಂದೂಸ್ಥಾನ್ ಯೂನಿಲೀವರ್, ನೆಸ್ಲೆ, ಕೋಲ್ಗೇಟ್, ಪಾಲ್ಮೊಲಿವ್, ಮೆರಿಕೊ, ಅಲ್ಟ್ರಾಮರೈನ್ ಪಿಗ್ಮೆಂಟ್ಸ್‌ನಂತಹ ಕಂಪೆನಿಗಳು ಅತ್ಯುತ್ತಮ ಫಲಿತಾಂಶ ಹಾಗೂ ಲಾಭಾಂಶವನ್ನು ಪ್ರಕಟಿಸುತ್ತಿವೆ.

ಇವೆಲ್ಲದರ ಯಶಸ್ಸಿನ ಹಿಂದಿನ ರಹಸ್ಯವೇನು? ಇದಕ್ಕೆ ಒಂದೇ ಉತ್ತರ; `ಭಾರತದಲ್ಲಿರುವ ಅಪಾರವಾದ ಗ್ರಾಹಕ ಸಂಪತ್ತು~.

140ಕ್ಕೂ ಹೆಚ್ಚು ದೇಶಗಳ ಆರ್ಥಿಕ ಸಾಮರ್ಥ್ಯವನ್ನು ಅಳೆಯಲು `ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕ~ವೊಂದನ್ನು ರೂಪಿಸಲಾಗಿದ್ದು, ಇದರಲ್ಲಿ 2011-12ರ ಸಾಲಿನಲ್ಲಿ ಸ್ವಿಟ್ಜರ್‌ಲೆಂಡ್ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನ ಸಿಂಗಪುರ, ಸ್ವೀಡನ್, ಫಿನ್‌ಲ್ಯಾಂಡ್, ಜರ್ಮನಿ, ನೆದರ್‌ಲೆಂಡ್, ಡೆನ್ಮಾರ್ಕ್, ಜಪಾನ್, ಯುನೈಟೆಡ್ ಕಿಂಗ್ಡಂ ಪಡೆದಿವೆ.

ಅಮೆರಿಕಕ್ಕೆ 5ನೇ ಸ್ಥಾನವಿದ್ದರೆ, ಭಾರತಕ್ಕೆ 56ನೇ ಸ್ಥಾನವಿದೆ. ಅಲ್ಲದೆ, ಭಾರತ ಆರೋಗ್ಯ ಮತ್ತು ಮೂಲ ಶಿಕ್ಷಣ ಕ್ಷೇತ್ರದಲ್ಲಿ 101ನೇ ಸ್ಥಾನ, ಸದೃಢ ಆರ್ಥಿಕ ಪೇಟೆ ಕ್ಷೇತ್ರದಲ್ಲಿ 21ನೇ ಸ್ಥಾನ, ಆನ್ವೇಷಣೆ ವಿಚಾರದಲ್ಲಿ 38ನೇ ಸ್ಥಾನ ಗಳಿಸಿದೆ.

ಆದರೆ, ಈ ಎಲ್ಲಾ ದೇಶಗಳಿಗೆ ಹೋಲಿಸಿದರೆ ಪೇಟೆಯ ಗಾತ್ರ ವಿಚಾರದಲ್ಲಿ ಭಾರತಕ್ಕೆ ಮೂರನೇ ಸ್ಥಾನವಿದೆ. ಈ ಅಂಶವೇ ಜಾಗತಿಕ ಮಟ್ಟದಲ್ಲಿ ಆಕರ್ಷಣೀಯವಾಗಿ ಕಾಣುತ್ತಿರುವ ಅಂಶ. ವಿಶ್ವದ ಶೇ 17ರಷ್ಟು ಜನಸಂಖ್ಯೆಯನ್ನೂ, ಅದರಲ್ಲಿ ಶೇ 60ರಷ್ಟು ಯುವಜನರನ್ನೂ ಒಳಗೊಂಡಿರುವ ಭಾರತದಲ್ಲಿ ಜನರ ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಾಗಿರುವುದನ್ನು ವಿದೇಶಿ ಕಂಪೆನಿಗಳು ಗಮನಿಸಿವೆ.
 
ಹಾಗಾಗಿ ನಮ್ಮ ದೇಶದಲ್ಲಿ ವ್ಯವಹಾರ ವಿಸ್ತರಿಸಲು ಅವು ಆತುರ ತೋರುತ್ತಿರುವುದು ಸ್ಪಷ್ಟ. ನಮ್ಮ ಜನರಲ್ಲಿ ಖರೀದಿಸುವ ತವಕ ಹಾಗೂ ರಿಯಾಯಿತಿ ಪ್ರಿಯತೆಯ ಕಾರಣ ಇಲ್ಲಿ ಎಂತಹ ಸಾಮಗ್ರಿಯನ್ನಾದರೂ ಮಾರಾಟ ಮಾಡಿ ಹಣ ಸಂಪಾದಿಸಬಹುದೆಂಬ ಭಾವನೆ ವಿದೇಶೀ ಕಂಪೆನಿಗಳಿಗೆ ಮೂಡಿದೆ. ಇಂತಹ ಒಂದು ಸದೃಢ ಗ್ರಾಹಕ ಸಂಪತ್ತನ್ನು ನಮ್ಮ ಪೇಟೆಯ ನಿಯಂತ್ರಕರು, ಸರ್ಕಾರಿ ಸಂಸ್ಥೆಗಳು, ಸರ್ಕಾರ ಗಣನೆಗೆ ತೆಗೆದುಕೊಂಡು ಕಾರ್ಯೋನ್ಮುಖರಾದರೆ ನಮ್ಮ ದೇಶದ ಆರ್ಥಿಕತೆ ಸದೃಢವಾಗುವುದರಲ್ಲಿ ಸಂಶಯವೇ ಇಲ್ಲ.

ನಮ್ಮಲ್ಲಿನ ಹೂಡಿಕೆದಾರರ ಪ್ರಭಾವ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಇರುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯೆಂದರೆ, ರಿಲಯನ್ಸ್ ಪವರ್ ಲಿ.  2008ರಲ್ಲಿ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು(ಐಪಿಒ) ಪ್ರತಿ ಷೇರಿಗೆ ರೂ. 430ರಂತೆ ಮಾಡಿದ್ದುದು. ಆ ಸಂದರ್ಭದಲ್ಲಿ ಹೊಸ-ಹೊಸ ಹೂಡಿಕೆದಾರರು ಡಿ-ಮ್ಯಾಟ್ ಖಾತೆ ತೆರೆದು ಹಲವು ನೂರು, ಸಾವಿರಗಟ್ಟಲೆ ಷೇರುಗಳಿಗೆ ಅರ್ಜಿ ತುಂಬಿಸಿದರು.

ಆದರೆ ಪೇಟೆಗೆ ಷೇರು ಬಿಡುಗಡೆಯಾದ ನಂತರ ಅದರ ವಹಿವಾಟಿನ ದರ ಅತಿ ಕಡಿಮೆಯಾಗಿತ್ತಾದರೂ ಇದರ ದುಷ್ಪರಿಣಾಮ ಮಾತ್ರ ಕಡೆಗಣಿಸಲ್ಪಡುವ ಮಟ್ಟಕ್ಕಿತ್ತು. ಕಾರಣ ಸಾರ್ವಜನಿಕ ಸ್ಪಂದನ ಅಪಾರವಾದ್ದರಿಂದ ಕೇವಲ 17-18 ಷೇರುಗಳನ್ನು ಮಾತ್ರ ಅರ್ಜಿದಾರರಿಗೆ ವಿತರಿಸಲು ಸಾಧ್ಯವಾಗಿ ಯಾರಿಗೂ ತೊಂದರೆಯಾಗದಂತಾಯಿತು. ಒಂದು ರೀತಿಯ ಷಾಕ್ ಅಬ್ಸಾರ್ಬರ್ ಪರಿಣಾಮ ಅಪಾರ ಜನಸ್ಪಂದನದಿಂದಾಗಿದ್ದು ಗಮನಾರ್ಹ ಅಂಶ.

ಇಂದಿನ ದಿನಗಳಲ್ಲಿ ಷೇರುಪೇಟೆಯ ಬಂಡವಾಳೀಕರಣ ಮೌಲ್ಯ ರೂ. 62 ಲಕ್ಷ ಕೋಟಿಯ ಸಮೀಪವಿದ್ದರೂ ದೈನಂದಿನ ವಹಿವಾಟು, ವಿಲೇವಾರಿಯಾಗುತ್ತಿರುವುದು, ಕೇವಲ 2 ಸಾವಿರ ಕೋಟಿ ರೂಪಾಯಿಯಷ್ಟು ಮಾತ್ರ. ಇದಕ್ಕೆ ಮೂಲ ಕಾರಣ ಸಣ್ಣ ಹೂಡಿಕೆದಾರರಿಲ್ಲದೆ ಷೇರುಪೇಟೆ ಬರಡಾಗುತ್ತಿರುವುದು.

ಹಳ್ಳಿ, ನಗರ, ಪಟ್ಟಣಗಳಲ್ಲಿನ ಜನತೆಗೆ ಷೇರುಗಳಲ್ಲಿ ಹೂಡಿಕೆ ಮಾಡಲು ಅಪಾರ ಆಸಕ್ತಿ ಇದೆ. ಆದರೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಅವರಿಗಿದೆ. ದೇಶದಾದ್ಯಂತ ಇರುವ 76 ಸಾವಿರ ಉಪ ದಲ್ಲಾಲರು(ಸಬ್ ಬ್ರೋಕರ್ಸ್) ಮತ್ತು ಹತ್ತು ಸಾವಿರಕ್ಕೂ ಹೆಚ್ಚಿನ ದಲ್ಲಾಲರ (ಸೆಬಿ ನೋಂದಾಯಿತ) ಪಡೆಯನ್ನು ಈ ನಿಟ್ಟಿನಲ್ಲಿ ಉಪಯೋಗಿಸಿಕೊಂಡು ಪೇಟೆಯ ಸದೃಢತೆಯನ್ನು ಹೆಚ್ಚಿಸಿಕೊಳ್ಳುವುದು ಸೂಕ್ತ.

ಕೇವಲ ವಹಿವಾಟಿನ ಗಾತ್ರಕ್ಕೆ ಮಣೆ ಹಾಕದೆ ಗುಣಮಟ್ಟಯುಕ್ತ ವಹಿವಾಟಿನೆಡೆಗೆ ಆದ್ಯತೆ ನೀಡುವುದೂ ಇಂದಿನ ಅಗತ್ಯ.ವಿದೇಶಿ ಹೂಡಿಕೆದಾರರಿಂದ ಬರಬಹುದಾದ ಒಳಹರಿವಿನ ಜತೆಗೆ ಸ್ಥಳೀಯರ ಹಿತರಕ್ಷಣೆಯೊಂದಿಗೆ ಬೆಳೆದರೆ ಕೇವಲ ಬೆರಳೆಣಿಕೆಯ ಹೂಡಿಕೆದಾರರ ಸಂಖ್ಯೆಯನ್ನು ಬೆಟ್ಟದೆತ್ತರಕ್ಕೆ ಬೆಳೆಸಬಹುದಾಗಿದೆ. ಇದು ದೇಶದ ಆರ್ಥಿಕ ಸುಭದ್ರತೆಯ ಬೆಳವಣಿಗೆಗೆ ಮಹತ್ತರ ಕೊಡುಗೆಯಾಗುತ್ತದೆ.

ಆರಂಭಿಕ ಷೇರು ವಿತರಣೆ ಸುಧಾರಣೆ ಹೇಗೆ?
ಈ ದಿಶೆಯಲ್ಲಿ ಕೆಲವು ಸಲಹೆ;

1. ಕಂಪೆನಿಗಳು ಹೆಚ್ಚಿನ ಪ್ರೀಮಿಯಂನೊಂದಿಗೆ ಪೇಟೆ ಪ್ರವೇಶ ಮಾಡಲಿಚ್ಚಿಸಿದಾಗ ಅವುಗಳ ಅರ್ಹತೆಯನ್ನು ದೃಢೀಕರಿಸಬೇಕು. ಮುಂದಿನ ಒಂದು ವರ್ಷದವರೆಗೂ ವಿತರಣೆ ಬೆಲೆಯಲ್ಲಿ ಹಿಂಕೊಳ್ಳುವ, ಪೇಟೆಯ ದರ ಏನೇ ಇರಲಿ, ವ್ಯವಸ್ಥೆಯನ್ನು (ಷೇರುಗಳು ಡಿ ಲಿಸ್ಟ್ ಆಗುವ ಸಂದರ್ಭದಲ್ಲಿದ್ದಂತೆ) ಮಾಡಬೇಕು.
 
ಈ ಸುರಕ್ಷಾ ಜಾಲವು ಹೂಡಿಕೆದಾರರಲ್ಲಿ ನಂಬಿಕೆ ತುಂಬುವುದರೊಂದಿಗೆ ಕಂಪೆನಿಗಳಲ್ಲಿ ಜವಾಬ್ದಾರಿಯ ಗುಣ ಬೆಳೆಸುತ್ತದೆ. ಮರ್ಚೆಂಟ್ ಬ್ಯಾಂಕರ್ ಮತ್ತು ಲೀಡ್ ಮ್ಯಾನೇಜರ್‌ಗಳಿಗೆ ಪ್ರಿಮಿಯಂ ನಿಗದಿಗೊಳಿಸಿದ್ದಕ್ಕೆ ಜವಾಬ್ದಾರರನ್ನಾಗಿಸಬೇಕು ಮತ್ತು ಈ ಸಂಸ್ಥೆಗಳ ರೇಟಿಂಗ್ ಪರಿಗಣಿಸುವುದೂ ಸಹ ಅಗತ್ಯವಿದೆ.

2. ಎಲ್ಲಾ ಹೊಸ ಷೇರುಗಳನ್ನು ಮೂರು ತಿಂಗಳ ಅವಧಿಯವರೆಗೂ ವಹಿವಾಟಿನಿಂದ ವಹಿವಾಟಿಗೆ ಚುಕ್ತಾ ಆಗುವ `ಟಿ~ ಗುಂಪಿನಲ್ಲಿ ವಹಿವಾಟು ನಡೆಸಬೇಕು. ಅಷ್ಟರಲ್ಲಿ ಕಂಪೆನಿಯ ಷೇರಿನ ಮೌಲ್ಯಾನ್ವೇಷಣೆ ಸಾಧ್ಯವಿದೆ.

3. ಕಂಪೆನಿಗಳು ಸಂಗ್ರಹಿಸುವ ಪ್ರೀಮಿಯಂ ಹಣ ರೂ. 100ಕ್ಕೂ ಹೆಚ್ಚಾಗಿದ್ದಲ್ಲಿ ಅರ್ಧದಷ್ಟು ಹಣವನ್ನು `ಎಸ್ಕ್ರೊ~ ಖಾತೆಯಲ್ಲಿರಿಸಬೇಕು. ಮುಂದೆ ಕಂಪೆನಿಯ ಅಪೇಕ್ಷಿತ ಸಾಧನೆ ಆಧರಿಸಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಬಹುದು. ಕಂಪೆನಿಯ ಗಾತ್ರ, ಪ್ರವರ್ತಕರ ಚಾರಿತ್ರ್ಯ, ಮುಂತಾದ ಅಂಶಗಳನ್ನು ಪರಿಶೀಲಿಸಿ ಪ್ರೀಮಿಯಂ ಪಡೆಯುವ ಅರ್ಹತೆ ನಿರ್ಧರಿಸಬೇಕು.

ಕೇವಲ `ಫ್ರೀ ಪ್ರೈಸಿಂಗ್~ ಆದ್ಯತೆ ನೀಡದೆ ಅದರ ಜತೆಗೆ `ಫೇರ್ ಪ್ರೈಸಿಂಗ್~ ಪದ್ಧತಿಯನ್ನೂ ಜೋಡಿಸಿದಲ್ಲಿ ಹೂಡಿಕೆದಾರರು ಮತ್ತು ಕಂಪೆನಿಗಳ ನಡುವಿನ ಸಂಬಂಧ ತುಲನಾತ್ಮಕವಾಗಿ ಬೆಸುಗೆಗೊಂಡು ಪರಸ್ಪರ ಬೆಳವಣಿಗೆಗೆ ಪೂರಕವಾಗಿರುತ್ತದೆ.

2010ರ ಅಕ್ಟೋಬರ್‌ನಲ್ಲಿ ಪ್ರತಿ ಷೇರಿಗೆ ರೂ. 985ರಂತೆ ಸಾರ್ವಜನಿಕ ವಿತರಣೆ ಮಾಡಿದ ಎಸ್.ಕೆ.ಎಸ್. ಮೈಕ್ರೊ ಫೈನಾನ್ಸ್ ಕಂಪೆನಿಯು ಈಗ ರೂ. 121ರ ಸಮೀಪ ವಹಿವಾಟಾಗುತ್ತಿದ್ದು, ರೂ. 54-40ರ ಕನಿಷ್ಠ ಮಟ್ಟದವರೆಗೂ ಕುಸಿದಿತ್ತು (ಲಿಸ್ಟಿಂಗ್‌ನ ಆರಂಭದ ದಿನಗಳಲ್ಲಿ ರೂ. 1400ರ ಮಟ್ಟವನ್ನೂ ತಲುಪಿತ್ತು).

ಪ್ರತಿ ಷೇರಿಗೆ ರೂ. 150ರಂತೆ  ವಿತರಿಸಿದ ತಕ್ಷೀಲ್ ಸಲ್ಯೂಷನ್ಸ್ ಷೇರಿನ ಬೆಲೆಯು ಆರಂಭದಲ್ಲಿನ ಕ್ಷಣಿಕ ದರ ರೂ. 185ರಿಂದ ಕನಿಷ್ಠ ದರ ರೂ. 9.74ರವರೆಗೂ ಕುಸಿದು ಈಗ ರೂ. 11ರ ಆಸುಪಾಸಿನಲ್ಲಿದೆ. ಅದೇ ರೀತಿ ಬ್ರೂಕ್ಸ್ ಲ್ಯಾಬೊರೇಟರೀಸ್‌ನ ಷೇರು ವಿತರಣೆಯು ರೂ. 100ರಲ್ಲಾಗಿದ್ದು ಕೇವಲ ಒಂದೇ ವರ್ಷದೊಳಗೆ ರೂ. 12.50ವರೆಗೂ ಕುಸಿದು ಈಗ ರೂ. 17.60ರಲ್ಲಿದೆ.

ಇಂತಹ ಸಂದರ್ಭದಲ್ಲಿ ಕಂಪೆನಿಗಳು ಸಂಗ್ರಹಿಸಿದ ಪ್ರೀಮಿಯಂ ಹಣ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇಂತಹ ಉದಾಹರಣೆಗಳು ಹೆಚ್ಚಾಗಿವೆ. ಹೂಡಿಕೆದಾರರ ಬಂಡವಾಳ ಬೆಳೆಸುವ ಬದಲು ಕರಗಿಸಿಕೊಳ್ಳುವ ವಾತಾವರಣ ಬೆಳವಣಿಗೆಗೆ ಮಾರಕವೇ ಹೊರತು ಪೂರಕ ಅಂಶವಲ್ಲ.

ಆ್ಯಂಕರ್ ಇನ್ವೆಸ್ಟರ್ಸ್‌ ಹೂಡಿಕೆ ಅವಧಿಯನ್ನು ಕನಿಷ್ಠ ಮೂರು ತಿಂಗಳವರೆಗೂ ವಿಸ್ತರಿಸಬೇಕಿದೆ.

ಸೆಕಂಡರಿ ಮಾರ್ಕೆಟ್ ಸುಧಾರಣೆ
1) ಕಂಪೆನಿಗಳ ಅಂತರ್ಗತ ಸಾಧನೆಗೆ ಆದ್ಯತೆ ನೀಡಬೇಕು ಎಂಬುದರ ಪ್ರಚಾರ ಅಗತ್ಯ. ಕಂಪೆನಿಗಳ ಬಗ್ಗೆ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಸಾರವಾಗುವ ವಿವಿಧ ನಮೂನೆಯ ವಿಶ್ಲೇಷಣೆಗಳಲ್ಲಿ ಅವರ ವಿಶ್ಲೇಷಣೆಗೆ ಮುಂಚೆ ಕಂಪೆನಿಯ ಕಿರು ಪರಿಚಯ ಸಾಧನೆ ಪ್ರಕಟಿಸುವುದು ಕಡ್ಡಾಯವಾದಲ್ಲಿ ಹೂಡಿಕೆದಾರರು ಕಂಪೆನಿಯ ಯೋಗ್ಯತೆಯ ಮಟ್ಟವನ್ನರಿಯಲು ಸಾಧ್ಯ.

2) ಪೇಟೆಯಲ್ಲಿ ಸ್ಥಿರತೆ ಮೂಡಿಸಲು ಮೂಲಾಧಾರಿತ ಪೇಟೆಯ ಕಂಪೆನಿಗಳಲ್ಲಿ ಸಂವೇದಿ ಸೂಚ್ಯಂಕದ ಷೇರುಗಳು ವಿಭಿನ್ನವಾಗಿರಬೇಕು. ಆಗ ಈ ಎರಡು ವಿಭಾಗಗಳು ಸ್ವತಂತ್ರವಾದ ದಿಶೆ ಕಂಡುಕೊಳ್ಳಲು ಸಾಧ್ಯ.

3) ಕಂಪೆನಿಗಳ ಷೇರಿನ ದರವು ವಾರ್ಷಿಕ ಕನಿಷ್ಠ ಅಥವಾ ಗರಿಷ್ಠ ಮುಂತಾದ ದಾಖಲೆ ನಿರ್ಮಿಸಲು ವಹಿವಾಟಿನ ಗಾತ್ರದ ಕನಿಷ್ಠ ಮಿತಿ ನಿಗದಿ ಪಡಿಸುವುದು ಅತ್ಯಗತ್ಯ. ಈಗಿನ ದಿನಗಳಲ್ಲಿ ಕೇವಲ ಒಂದೇ ಒಂದು ಷೇರಿನ ವಹಿವಾಟು ಅಪೇಕ್ಷಿತ ದಾಖಲೆಗೆ ಎಡೆ ಮಾಡಿಕೊಡುವುದು. ಇದು ಸಣ್ಣ ಹೂಡಿಕೆದಾರರ ನಿರ್ಧಾರದ ಮೇಲೆ ಪ್ರಭಾವಿಯಾಗುವುದು.

4) ಕಂಪೆನಿಗಳು ಕೇವಲ ದಾಖಲೆಗಾಗಿ ಲಾಭಾಂಶ ಪ್ರಕಟಿಸಿ ಕಂಪೆನಿಯ ಸಂಪತ್ತನ್ನು ಈ ಅಲ್ಪ ಲಾಭಾಂಶ ವಿತರಣೆಯಲ್ಲಿ ಹಾಳುಗೆಡುವಂತಾಗಿದೆ. ಕನಿಷ್ಠ ಶೇ 10ರ ಲಾಭಾಂಶ ಮಿತಿ ನಿಗದಿಗೊಳಿಸಿದಲ್ಲಿ ಹೂಡಿಕೆದಾರರಿಗೂ ಅನುಕೂಲ. ಕಂಪೆನಿಯ ಸಮಯ - ಹಣವೂ ಸದ್ವಿನಿಯೋಗವಾದಂತಾಗುತ್ತದೆ.

ಇತರೆ ಸಲಹೆ:

ಷೇರು ಪೇಟೆ ಪ್ರವೇಶಿಸಿದ ಹೊಸ ಹೂಡಿಕೆದಾರರು ಷೇರು ದಲ್ಲಾಳಿ ಸಂಸ್ಥೆಗಳನ್ನು       ಆಯ್ಕೆ ಮಾಡಿಕೊಳ್ಳುವಾಗ ಅದರ ಸೇವಾ ತತ್ಪರತೆಯನ್ನು ಗಮನಿಸಬೇಕು. ಈಗ ಬ್ರೋಕರೇಜ್ ಕಡಿತಗೊಳಿಸಿ ಸೇವೆ ಎಂಬುದನ್ನು ಕಾಣದಂತೆ ಮಾಡಿರುವುದು ಸೇವಾ ವಲಯದ ವೃತ್ತಿಗೆ ಕಳಂಕ ತರುವಂತಹುದಾಗಿದೆ. ಕನಿಷ್ಠ ಬ್ರೋಕರೇಜ್ ಮಿತಿ ಅಳವಡಿಸುವುದು ಒಳಿತು ಮತ್ತು ಈ ಬ್ರೋಕರೇಜ್‌ಗಳ ಬಗ್ಗೆ ಪ್ರಚಾರವನ್ನೂ ನಿಷೇಧಿಸಬೇಕಿದೆ.

ಇಂತಹ ಹತ್ತು ಹಲವಾರು ಸುಧಾರಣೆಗಳಿಂದ ಸ್ಥಳೀಯ ಹೂಡಿಕೆದಾರರ ಸುರಕ್ಷತೆಗೆ ಆದ್ಯತೆ ನೀಡಿದಲ್ಲಿ ಷೇರು ಪೇಟೆಗಳು ಸದೃಢವಾಗಿ ದೇಶದ ಆರ್ಥಿಕತೆ ಬಲವಾಗಿ ಬೆಳೆಯಲು ಪೂರಕವಾಗುತ್ತದೆ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT