ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಪರಿವರ್ತನೆಗೆ ಪರ್ವಕಾಲ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜಾಗತೀಕರಣ ನಂತರದ ಬೆಳವಣಿಗೆಗಳು ಬಹುಶಃ ಷೇರುಪೇಟೆ ನಿಯಂತ್ರಕರು, ಹೂಡಿಕೆದಾರರು, ಅಲ್ಲದೆ ಸರ್ಕಾರ ಸಹ ಊಹಿಸಿರಲಾರದ ಮಟ್ಟದಲ್ಲಿ ನಡೆಯುತ್ತಿವೆ. ಇದ್ಯಾವುದೂ ಸಹ ಸಣ್ಣ ಗ್ರಾಹಕರು, ಜನಸಾಮಾನ್ಯರಿಗೆ ನೆಮ್ಮದಿ ತಂದಿಲ್ಲ, ಬದಲಿಗೆ ತೊಂದರೆಗಳೇ ಹೆಚ್ಚಾಗುವ ಸನ್ನಿವೇಶವನ್ನು ಸೃಷ್ಟಿಸಿವೆ.

ಇಂದು ಜಾಗತಿಕ ಮಟ್ಟದಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ಅಸ್ಥಿರತೆ ಇದೆ. ಆದರೆ ಭಾರತದಂತಹ ವೈವಿಧ್ಯಮಯ ಪರಿಸರ, ಭಾಷೆ, ಕೌಶಲಗಳ ದೇಶದಲ್ಲಿ ಸರ್ಕಾರ, ಹಣಕಾಸು ಕ್ಷೇತ್ರದ ಯೋಜನೆ, ನಿಯಮಗಳನ್ನು ಜಾರಿಗೊಳಿಸುವ ಮುನ್ನ ಜನಸಾಮಾನ್ಯರ ಹಿತದ ಬಗ್ಗೆಯೂ ಯೋಚಿಸಬೇಕಿದೆ.

ಈ ಹಿಂದೆ ಕೌಟುಂಬಿಕ ಉಳಿತಾಯ ಯೋಜನೆ, ಬ್ಯಾಂಕ್ ಠೇವಣಿ, ಕಾರ್ಪೊರೇಟ್ ಠೇವಣಿ, ಉತ್ತಮ ಲಾಭಾಂಶ ನೀಡುತ್ತಿದ್ದ ಕಂಪೆನಿಗಳು `ಹೂಡಿಕೆ'ಗೆ ಸಕಾರಾತ್ಮಕ ಭಾವನೆ ಮೂಡಿಸುತ್ತಿದ್ದವು. ಇದು ಹಣದುಬ್ಬರ ನಿರ್ವಹಣೆಯನ್ನೂ ಸುಲಭವಾಗಿಸಿತ್ತು. ಆದರೆ ಈಗ ಅಸ್ಥಿರತೆ ಎಂಬುದೇ ದೊಡ್ಡದಾಗಿ ಹೂಡಿಕೆಗೆ ಎಲ್ಲ ಕ್ಷೇತ್ರಗಳೂ ಜನರ ನಂಬಿಕೆ ಕಳೆದುಕೊಳ್ಳುತ್ತಿವೆ.

ಕಾರ್ಪೊರೇಟ್ ಬೆಳವಣಿಗೆಗಳು ಕಂಪೆನಿಗಳ ಠೇವಣಿ ಮತ್ತು ಷೇರುಗಳ ಮೇಲಿನ ನಂಬಿಕೆಯನ್ನು ಕ್ಷೀಣಗೊಳಿಸುತ್ತಿವೆ. `ಸುರಕ್ಷಿತ ಹೂಡಿಕೆ' ಎಂಬುದನ್ನು ನಿಘಂಟಿನಲ್ಲಷ್ಟೇ ಕಾಣುವಂತಾಗಿದೆ. ಇಲ್ಲಿ ಪ್ರಮುಖವಾಗಿ ಯಾವುದೇ ಯೋಜನೆ ರೂಪಿಸಿ ಜಾರಿಗೊಳಿಸುವಾಗ ಕೇವಲ ಸೈದ್ಧಾಂತಿಕ ಆಧಾರದ ಮೇಲೆ ನಡೆಯುತ್ತಿದ್ದು, ಪ್ರಾಯೋಗಿಕವಾಗಿ ಅಳವಡಿಕೆ ಎಷ್ಟರಮಟ್ಟಿಗೆ ಸಾಧ್ಯ ಮತ್ತು ಪರಿಣಾಮಕಾರಿ ಎಂಬ ಅಂಶಕ್ಕೆ ಆದ್ಯತೆ ಇಲ್ಲ. ಸಿದ್ಧಾಂತಗಳು ಪ್ರವೇಶದ ಹಂತದಲ್ಲಿಯಷ್ಟೇ ಇದ್ದು, ನಂತರ ಪ್ರಾಯೋಗಿಕ ಅಳವಡಿಕೆಗೆ ಆದ್ಯತೆ ನೀಡಿದರೆ ಮಾತ್ರ ಯೋಜನೆ ಯಶಸ್ಸು ಕಾಣಲು ಸಾಧ್ಯ.

ಇತ್ತೀಚೆಗೆ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ) 2,000ಕ್ಕೂ ಅಧಿಕ ಕಂಪೆನಿಗಳ ಷೇರುಗಳನ್ನು `ಇಲ್ ಲಿಕ್ವಿಡ್' (ನಗದೀಕರಿಸಲು ಆಗದವು) ಎಂದು ಘೋಷಿಸಿ `ಕಾಲ್ ಆಕ್ಷನ್ ಪಟ್ಟಿಗೆ' ಸೇರಿಸಲಿದೆ. ಇವುಗಳಲ್ಲಿ ಅನೇಕ ಕಂಪೆನಿಗಳು ಹೂಡಿಕೆದಾರ ಸ್ನೇಹಿ ಆದಂತಹವಾಗಿವೆ.

ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿನ ಗಾತ್ರ ಕ್ಷೀಣಿಸಿದ ಮಾತ್ರಕ್ಕೆ ಕಂಪೆನಿ ಯೋಗ್ಯವಲ್ಲ ಎಂಬುದು ಸರಿಯಲ್ಲ. ಕಂಪೆನಿಗಳು ಅಸಹಜ ಚಟುವಟಿಕೆಗೆ ಯತ್ನಿಸಲು ಪ್ರೇರಕವಾಗುವ ಅಂಶ ಇದಾಗಿದೆ. ಈ ನಿಯಮವನ್ನು ಜಾರಿಗೊಳಿಸಲು ಶಿಫಾರಸು ಮಾಡಿದ `ಸೆಕೆಂಡರಿ ಮಾರ್ಕೆಟ್ ಅಡ್ವೈಸರಿ ಕಮಿಟಿ' ಸದಸ್ಯರುಮತ್ತು ಅವರ ಪದವಿಗಳು ಅದ್ಭುತವಾದರೂ, `ಬಿಎಸ್‌ಇ' ವ್ಯವಸ್ಥಾಪಕ ನಿರ್ದೇಶಕರನ್ನು ಹೊರತುಪಡಿಸಿದರೆ ಉಳಿದವರಿಗೆ ಸೈದ್ಧಾಂತಿಕ ಅರ್ಹತೆಯೇ ಹೆಚ್ಚು, ಪ್ರಾಯೋಗಿಕ ಅನುಭವ ಉಳ್ಳವರಾರೂ ಇಲ್ಲ.

ಇನ್ನೊಂದೆಡೆ, ಸಣ್ಣ ಹೂಡಿಕೆದಾರರ ನಿರಾಸಕ್ತಿಯಿಂದಾಗಿ ಷೇರುಪೇಟೆ ವಹಿವಾಟು ಕ್ಷೀಣಿಸುತ್ತಿದ್ದು, ಕ್ಷಿಪ್ರಗತಿ ಏರಿಳಿತ ಪ್ರದರ್ಶಿಸುತ್ತಿರುವುದನ್ನೂ, ಅಸ್ಥಿರತೆ ಮೂಡಿರುವುದನ್ನೂ ಕಾಣುತ್ತಿದ್ದೇವೆ. ಈ ದಿಶೆಯಲ್ಲಿ ನಿಯಂತ್ರಕರು ಶೀಘ್ರವಾಗಿ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿದೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಕಂಪೆನಿಗಳನ್ನು ಲೀಸ್ಟಿಂಗ್ ಮಾಡಿಕೊಂಡಿರುವ `ಬಿಎಸ್‌ಇ'ಯಲ್ಲಿ ಹೊಸ ಪದ್ಧತಿ ಮತ್ತಷ್ಟು ಡಿ-ಲೀಸ್ಟಿಂಗ್‌ಗೆ ಕಾರಣವಾಗಬಹುದು.

ಪ್ರಮುಖವಾಗಿ ಕಂಪೆನಿಗಳ ಪ್ರವರ್ತಕರ ಭಾಗಿತ್ವ ಅಡವಿಟ್ಟಿರುವ ಅಂಶವು ಸಕಾರಾತ್ಮಕ ಪ್ರಭಾವ ಬೀರುತ್ತಿದ್ದು, ಆಂಜನೇಯ ಲೈಫ್‌ಕೇರ್, ಕೋರ್ ಎಜುಕೇಷನ್, ಝೈಲಾಗ್ ಸಿಸ್ಟಂನಂತಹವು ಈ ಅಂಶಕ್ಕೆ ತಕ್ಕ ಉದಾಹರಣೆಯಾಗಿವೆ. ಈ ದಿಶೆಯಲ್ಲಿ ನಿಯಂತ್ರಕರು ಪ್ರವರ್ತಕರ ಭಾಗಿತ್ವ ಅಡವಿಟ್ಟ ಕಂಪೆನಿಗಳಲ್ಲಿ ಆ ಮಟ್ಟವು ಶೇ 50ಕ್ಕೂ ಹೆಚ್ಚಾದಲ್ಲಿ ಅವನ್ನು `ಟಿ' ಗುಂಪಿಗೆ ಸೇರಿಸಿ ಅಘಾತಕರ ಇಳಿಕೆಗೆ ತಡೆಯೊಡ್ಡಬಹುದು. ಪ್ರವರ್ತಕರು ಸಾರ್ವಜನಿಕ ಹೂಡಿಕೆದಾರರಿಗಿಂತ ಹಲವಾರು ಆದ್ಯತೆಗಳನ್ನು ಹೊಂದಿರುವಾಗ ಷೇರುಗಳನ್ನು ಅಡವು ಮಾಡುವ ಕ್ರಮವನ್ನೇ ನಿಷೇಧಿಸಿದಲ್ಲಿ ಹೆಚ್ಚು ಆರೋಗ್ಯಕರವಾಗಬಹುದು.

ಪ್ರತ್ಯೇಕ ಸಮೂಹ
ಉತ್ತಮ ಲಾಭಾಂಶ ನೀಡುವ ಕಂಪೆನಿಗಳನ್ನು ಅದರ ಪ್ರಮಾಣ ಆಧರಿಸಿ ಸುರಕ್ಷಿತ ಹೂಡಿಕೆಗೆ ಯೋಗ್ಯ ಎಂದು ಪ್ರತ್ಯೇಕ ಸಮೂಹದಡಿ ವಹಿವಾಟಿಗೆ ಅನುವು ಮಾಡಿಕೊಟ್ಟಲ್ಲಿ ಸಣ್ಣ ಹೂಡಿಕೆದಾರರು ಆಕರ್ಷಿತರಾಗುವರು.

ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಕಡಿತ ಮಾಡಲಿದೆ ಎಂಬ ನಿರೀಕ್ಷೆಯಿಂದ ರೂ. 25,000 ಕೋಟಿಯಷ್ಟು ಹೂಡಿಕೆಯನ್ನು ಅನಿವಾಸಿ ಭಾರತೀಯರು ದಿಢೀರ್ ಎಂಬಂತೆ ಸಾಲಪತ್ರ ಪೇಟೆಯಲ್ಲಿ ಹೂಡಿದ್ದಾರೆಂಬ ಸುದ್ದಿ ಇದೆ. ಸುರಕ್ಷಿತ ಹೂಡಿಕೆ ವಿಧಾನ ಸಹ ಏರಿಳಿತದ ವ್ಯಾಪ್ತಿಗೆ ಬರುತ್ತಿದ್ದು, ಇದು ಸಣ್ಣ ಹೂಡಿಕೆದಾರರ ದೃಷ್ಟಿಯಿಂದ ಹಿತಕರ ಬೆಳವಣಿಗೆ ಅಲ್ಲ. ಈಗಲಾದರೂ ಸಣ್ಣ ಹೂಡಿಕೆದಾರರನ್ನಾಕರ್ಷಿಸಿ ಪೇಟೆಯಲ್ಲಿ ಸ್ಥಿರತೆ ಮೂಡಿಸಲು ನಿಯಂತ್ರಕರು ವಿನಿಮಯ ಕೇಂದ್ರಗಳು ಕಾರ್ಯಮಗ್ನರಾಗುತ್ತಾರೆಂದು ಭಾವಿಸೋಣವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT