ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಮತ್ತೆ ಕರಡಿ ಹಿಡಿತದಲ್ಲಿ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಆರ್ಥಿಕ ಬೆಳವಣಿಗೆ, ಉದ್ದಿಮೆ ಸಂಸ್ಥೆಗಳ ತ್ರೈಮಾಸಿಕ ಹಣಕಾಸು ಸಾಧನೆ ಮತ್ತು ಯೂರೋಪ್‌ನ ಆರ್ಥಿಕ ಬಿಕ್ಕಟ್ಟಿನ ಕುರಿತ ಆತಂಕಗಳ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಮತ್ತೆ ಮಾರಾಟ ಭರಾಟೆ ಕಂಡು ಬಂದಿತು.

ಸಂವೇದಿ ಸೂಚ್ಯಂಕದ ಎಲ್ಲ 13 ವಲಯಗಳ ಪ್ರಮುಖ ಷೇರುಗಳು ನಷ್ಟಕ್ಕೆ ಗುರಿಯಾದವು. ರಿಯಾಲ್ಟಿ, ಲೋಹ, ಬ್ಯಾಂಕ್ ಮತ್ತು ಭಾರಿ ಯಂತ್ರೋಪಕರಣ ಷೇರುಗಳ ಬೆಲೆಗಳು ತೀವ್ರ ಕುಸಿತ ದಾಖಲಿಸಿದವು.

ತಯಾರಿಕಾ ರಂಗದಲ್ಲಿನ ನಿಧಾನ ಪ್ರಗತಿ, ಹೆಚ್ಚುತ್ತಿರುವ ಬಡ್ಡಿ ದರ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯ ಪ್ರಗತಿ ಕುಂಠಿತಗೊಂಡಿರುವ ಕಾರಣಕ್ಕೆ  ವಿದೇಶಿ ನಿಧಿಗಳು ನಿರಂತರವಾಗಿ ಷೇರುಗಳನ್ನು ಮಾರಾಟ ಮಾಡುತ್ತಿವೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಐರೋಪ್ಯ ಒಕ್ಕೂಟವು ನಿಗದಿಪಡಿಸಿದ್ದ ಕೊರತೆ ಗುರಿ ತಲುಪುವಲ್ಲಿ ವಿಫಲವಾಗಿರುವುದಾಗಿ ಗ್ರೀಕ್ ಪ್ರಕಟಿಸಿರುವುದು ಜಾಗತಿಕ ಹೂಡಿಕೆದಾರರ ಉತ್ಸಾಹ ಕುಂದಿಸಿದೆ.

 ರಿಲಯನ್ಸ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎಲ್‌ಆಂಡ್‌ಟಿ, ಐಟಿಸಿ ಷೇರುಗಳ ಒಟ್ಟಾರೆ 180 ಅಂಶಗಳಷ್ಟು ಕುಸಿತವು ಸೂಚ್ಯಂಕವು ಗಮನಾರ್ಹವಾಗಿ ಇಳಿಯಲು ಕಾರಣವಾಯಿತು.

ಜಾಗತಿಕ ಹಣಕಾಸು ಪರಿಸ್ಥಿತಿಯ ಕಳವಳವು ಸ್ಥಳೀಯ ಪೇಟೆಯಲ್ಲಿ ವಹಿವಾಟಿನ ತೀವ್ರ ಏರಿಳಿತಕ್ಕೆ  ಕಾರಣವಾಗುತ್ತಿದೆ. ಗ್ರೀಕ್‌ನ ಸಾಲದ ಬಿಕ್ಕಟ್ಟು ಮತ್ತು ಅಮೆರಿಕವು ಮತ್ತೆ ಆರ್ಥಿಕ ಹಿಂಜರಿಕೆಯತ್ತ ಸಾಗುವ  ಸಾಧ್ಯತೆಗಳು ಷೇರುಪೇಟೆಯ ಭವಿಷ್ಯದ ಮೇಲೆ ಪ್ರಭಾವ ಬೀರುತ್ತಿವೆ ಎಂದು ಬೋನಾಂಜಾ ಪೋರ್ಟ್‌ಫೋಲಿಯೊದ ಹಿರಿಯ ಸಂಶೋಧನಾ ವಿಶ್ಲೇಷಕ ಶಾನು ಗೋಯೆಲ್ ಅವರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT