ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: ಸೂಚ್ಯಂಕ ಚೇತರಿಕೆ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  ಸತತ ಆರು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಬುಧವಾರದ ವಹಿವಾಟಿನಲ್ಲಿ 273 ಅಂಶಗಳಷ್ಟು ಚೇತರಿಸಿಕೊಂಡಿದ್ದು, 17 ಸಾವಿರದ ಗಡಿ ದಾಟಿದೆ.

ಕಳೆದ 6 ವಹಿವಾಟು ದಿನಗಳಲ್ಲಿ ಸೂಚ್ಯಂಕ ಒಟ್ಟು 1,456 ಅಂಶಗಳನ್ನು ಕಳೆದುಕೊಂಡು 14 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿತ್ತು. ಹೂಡಿಕೆದಾರರು ಷೇರು ಪೇಟೆಯಲ್ಲಿ ವಿಶ್ವಾಸ ಕಳೆದುಕೊಂಡು, ಹೂಡಿಕೆಯನ್ನು ವಾಪಸ್ ಪಡೆದು ಚಿನ್ನದ ಮೇಲೆ ಬಂಡವಾಳ ಹೂಡಿದ ಪರಿಣಾಮ ಚಿನ್ನದ ಬೆಲೆಯೂ ಗಗನಕ್ಕೇರಿತ್ತು.

`ಸಂಭಾವ್ಯ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಎದುರಿಸಲು ದೇಶ ಸಿದ್ಧವಿದೆ ಎಂದು ಸರ್ಕಾರ ಮತ್ತು ಆರ್‌ಬಿಐ ಭರವಸೆ ನೀಡಿರುವುದು ಮತ್ತು ದೇಶೀಯ ಮಟ್ಟದ ಸಂಗತಿಗಳು ವಹಿವಾಟಿಗೆ ಪೂರಕವಾಗಿರುವುದು~ ಈಗಿನ ಚೇತರಿಕೆಗೆ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಸ್ಥಿರಗೊಳ್ಳದ ಖರೀದಿ ಉತ್ಸಾಹ: ಅಮೆರಿಕದ ವಾಲ್ ಸ್ಟ್ರೀಟ್ ಮತ್ತು ಯೂರೋಪ್ ಷೇರುಪೇಟೆಗಳಲ್ಲಿನ ಮಂಗಳವಾರದ ಚೇತರಿಕೆಯು ಬುಧವಾರದ ವಹಿವಾಟಿನಲ್ಲಿ ಏಷ್ಯಾದ ಹಾಂಕಾಂಗ್, ಜಪಾನ್ ಷೇರುಪೇಟೆಗಳಲ್ಲಿಯೂ ಪ್ರತಿಫಲಿಸಿದರೂ ಅದು ತಾತ್ಕಾಲಿಕವಾಗಿತ್ತು.

 ವಿಶ್ವದಾದ್ಯಂತ ಹೂಡಿಕೆದಾರರನ್ನು ಕಂಗಾಲು ಮಾಡಿದ್ದ, ಅಮೆರಿಕದ ಸಾಲ ಯೋಗ್ಯತೆ ಮಟ್ಟ ಕುಸಿತಕ್ಕೆ ಸಂಬಂಧಿಸಿದ ಆತಂಕ ಸದ್ಯಕ್ಕೆ ಕೆಲಮಟ್ಟಿಗೆ ದೂರವಾದಂತೆ ಕಂಡು ಬಂದರೂ, ಮಾರುಕಟ್ಟೆಯಲ್ಲಿನ ಖರೀದಿ ಉತ್ಸಾಹ ಇನ್ನೂ ಎಲ್ಲೆಡೆ ಸ್ಥಿರಗೊಂಡಿಲ್ಲ. ಬುಧವಾರದ ಆರಂಭದ ವಹಿವಾಟಿನಲ್ಲಿ ಡೋವ್ ಜೋನ್ಸ್ 282 ಅಂಶಗಳಷ್ಟು ಕುಸಿತ ದಾಖಲಿಸಿತು.

 ಆದರೆ, ಅಮೆರಿಕದ ಕೇಂದ್ರೀಯ ಬ್ಯಾಂಕ್ (ಫೆಡರಲ್ ರಿಸರ್ವ್), ಇನ್ನೂ ಎರಡು ವರ್ಷಗಳ ಕಾಲ ಬಡ್ಡಿ ದರಗಳನ್ನು ಶೂನ್ಯದ ಹತ್ತಿರವೇ ಕಾಯ್ದುಕೊಳ್ಳಲು ನಿರ್ಧರಿಸಿರುವುದು ಅಮೆರಿಕದ ಆರ್ಥಿಕ ಆರೋಗ್ಯದ ಬಗೆಗಿನ ಆತಂಕವು ಹೂಡಿಕೆದಾರರ ಕಳವಳಕ್ಕೆ ಕಾರಣವಾಗಿದೆ. ದೇಶದ ಅರ್ಥವ್ಯವಸ್ಥೆಯ ಮಂಕುಬಡಿದ ಪರಿಸ್ಥಿತಿಗೆ ಇದು ಕನ್ನಡಿಯನ್ನೂ ಹಿಡಿದಿದೆ.

 2013ರವರೆಗೆ ಬಡ್ಡಿ ದರ ಶೂನ್ಯದ ಹತ್ತಿರ ಉಳಿಸಿಕೊಳ್ಳುವುದನ್ನು ಹೊರತುಪಡಿಸಿ ಇತರ ಯಾವುದೇ ಉತ್ತೇಜನಾ ಕ್ರಮಗಳನ್ನು ಕೈಗೊಳ್ಳದಿರಲು `ಫೆಡರಲ್ ರಿಸರ್ವ್~ ನಿರ್ಧರಿಸಿದೆ.  ಬಡ್ಡಿ ದರಗಳನ್ನು ಈಗಿರುವ ಮಟ್ಟದಲ್ಲಿಯೇ ಮುಂದುವರೆಸುವುದರಿಂದ ಸಾಲ ಲಭ್ಯತೆಯು ಅಗ್ಗವಾಗಲಿದೆ. ಇದು ಅರ್ಥ ವ್ಯವಸ್ಥೆಗೆ ಅಗತ್ಯಕ್ಕಿಂತ ಹೆಚ್ಚು ಬಲ ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT