ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಗೆ ಪಿಂಚಣಿ ಹಣ?

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಉದ್ಯೋಗಿಗಳ ನಿವೃತ್ತಿ ಮತ್ತು ಪಿಂಚಣಿ ಹಣವು ಬಂಡವಾಳ ಪೇಟೆಯತ್ತ ಹರಿದು ಬರಲು ಸಂಪತ್ತು  ನಿರ್ವಹಣಾ ಸಂಸ್ಥೆಗಳು (ಎಎಂಸಿ) ಹೊಸ ಪಿಂಚಣಿ ಯೋಜನೆಗಳನ್ನು ಆರಂಭಿಸಬೇಕು ಎಂದು ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಭಿಪ್ರಾಯಪಟ್ಟಿದೆ.

ನಿವೃತ್ತಿ ಮತ್ತು ಪಿಂಚಣಿ ಹಣವು ಷೇರುಪೇಟೆಯತ್ತ ನಿರೀಕ್ಷಿಸಿದ ಪ್ರಮಾಣದಲ್ಲಿ ಹರಿದು ಬರುತ್ತಿಲ್ಲ. ನಿವೃತ್ತರ ಉಳಿತಾಯ ಹಣವು ಷೇರುಪೇಟೆಯ ವಹಿವಾಟಿನಲ್ಲಿ ಹೂಡಿಕೆ ಮಾಡಲು ಹಣಕಾಸು ಸಂಸ್ಥೆಗಳು ಸೂಕ್ತ  ಯೋಜನೆ ರೂಪಿಸಬೇಕಾದ ಅಗತ್ಯ ಇದೆ. ನಿವೃತ್ತಿ ನಂತರ ಬರುವ ಹಣವನ್ನು ಷೇರುಪೇಟೆಯಲ್ಲಿ ತೊಡಗಿಸುವುದಕ್ಕೆ ಯಾವುದೇ ಕಾನೂನು ನಿರ್ಬಂಧಗಳಿಲ್ಲ. ಈ ನಿಟ್ಟಿನಲ್ಲಿ `ಎಎಂಸಿ~ಗಳು ಸೂಕ್ತ `ಪಿಂಚಣಿ ನಿಧಿ~ಗಳನ್ನೇಕೆ ಆರಂಭಿಸಬಾರದು ಎಂದು `ಸೆಬಿ~ ಅಧ್ಯಕ್ಷ ಯು. ಕೆ. ಸಿನ್ಹಾ ಶುಕ್ರವಾರ  ಇಲ್ಲಿ ಅಭಿಪ್ರಾಯಪಟ್ಟರು. ಹೂಡಿಕೆಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

ನಾವು ಈಗ ಆರ್ಥಿಕ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದೇವೆ. ಬಂಡವಾಳ ಹೂಡಿಕೆ, ಲಾಭದ ಪ್ರಮಾಣ ಮತ್ತು ಹಣದ ಹರಿವು ಕಡಿಮೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ `ಎಎಂಸಿ~ಗಳು ಷೇರುಪೇಟೆಯತ್ತ ಹೂಡಿಕೆ ಆಕರ್ಷಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇಂತಹ ಧೋರಣೆ ಬದಲಾಗಬೇಕು. ಷೇರುಪೇಟೆಯ ಚೇತರಿಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ  ಎಂದರು.

ಷೇರುಪೇಟೆ ವಹಿವಾಟಿನಲ್ಲಿ ಸಾಮಾನ್ಯ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಕಡಿಮೆ ಪ್ರಮಾಣದಲ್ಲಿ ಇದೆ. ಸದ್ಯಕ್ಕೆ ಹೂಡಿಕೆ ಸಲಹೆಗಾರರು ಮತ್ತು ವಿತರಕರನ್ನು ನಿಯಂತ್ರಿಸಲು `ಸೆಬಿ~ ಕ್ರಮ ಕೈಗೊಂಡಿದೆ. ಮ್ಯೂಚುವಲ್ ಫಂಡ್‌ಗಳ ಶೇ 50ರಷ್ಟು ವಹಿವಾಟು  ವಿತರಕರ ಮೂಲಕವೇ ನಡೆಯುತ್ತಿದೆ. ಈ ವಿತರಕರನ್ನು ನಿಯಂತ್ರಿಸುವ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ ಎಂದರು.

ಆರಂಭಿಕ ಸಾರ್ವಜನಿಕ ಕೊಡುಗೆಗಳ (ಐಪಿಒ) ಹೊಸ ನಿಯಮಗಳ ಬಗ್ಗೆ ಮಾತನಾಡಿದ ಸಿನ್ಹಾ, ಒಟ್ಟಾರೆ `ಐಪಿಒ~ ಪ್ರಕ್ರಿಯೆ ಬದಲಿಸಲು `ಸೆಬಿ~ ಉದ್ದೇಶಿಸಿದೆ. ಷೇರು ವಹಿವಾಟಿನಲ್ಲಿ `ಒಳಗಿನವರ ಕೈವಾಡ~ ನಿರ್ಬಂಧಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಸಿನ್ಹಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT