ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುವಿಕ್ರಯ: ಈಡೇರದ ಗುರಿ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ 40 ಸಾವಿರ ಕೋಟಿಗಳಷ್ಟು ಷೇರು ವಿಕ್ರಯ ಮಾಡುವ ಮಹತ್ವಾಕಾಂಕ್ಷೆಯ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
  ಷೇರು ವಿಕ್ರಯದ ಮೂಲಕ ರೂ 40 ಸಾವಿರ ಕೋಟಿ ಸಂಗ್ರಹಿಸುವುದು  ಸಾಧ್ಯವಿಲ್ಲ ಎನ್ನುವುದು ಈಗ ಪ್ರತಿಯೊಬ್ಬರಿಗೂ ಮನವರಿಕೆಯಾಗಿದೆ.

ಈ ವರ್ಷದ  ಷೇರುವಿಕ್ರಯದ ಖಚಿತ ಮೊತ್ತವು, ಸಚಿವರ ಉನ್ನತಾಧಿಕಾರ ಸಮಿತಿಯ ಮುಂದಿನ ಸಭೆ ಹೊತ್ತಿಗೆ ಸ್ಪಷ್ಟಗೊಳ್ಳಲಿದೆ ಎಂದು ಷೇರುವಿಕ್ರಯ ಕಾರ್ಯದರ್ಶಿ ಮೊಹಮ್ಮದ್ ಹಲೀಂ ಖಾನ್,   ತಿಳಿಸಿದ್ದಾರೆ.

ಷೇರುಪೇಟೆಯಲ್ಲಿನ ಪ್ರತಿಕೂಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸರ್ಕಾರವು ಸರ್ಕಾರಿ ಸ್ವಾಮ್ಯದ ಪ್ರಮುಖ ಉದ್ದಿಮೆಗಳ ಷೇರು ವಿಕ್ರಯ ಪ್ರಕ್ರಿಯೆಯನ್ನು ಈ ವರ್ಷ ಮುಂದೂಡುತ್ತಲೇ ಬಂದಿದೆ. ಇದುವರೆಗೆ ಪವರ್ ಫೈನಾನ್ಸ್ ಕಾರ್ಪೊರೇಷನ್ನಿನ (ಪಿಎಫ್‌ಸಿ) ಷೇರು ವಿಕ್ರಯ ಮೂಲಕ ಕೇವಲ ರೂ1,145 ಕೋಟಿಗಳನ್ನಷ್ಟೇ ಸಂಗ್ರಹಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ.

ಬಂಡವಾಳ ಮಾರುಕಟ್ಟೆಯಲ್ಲಿ ಹಿತಕರ ವಾತಾವರಣ ಇರದಿದ್ದರೂ, ಪ್ರಣವ್ ಮುಖರ್ಜಿ ನೇತೃತ್ವದಲ್ಲಿನ ಸಚಿವರ ಉನ್ನತಾಧಿಕಾರ ಸಮಿತಿಯು, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ), ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನ  (ಬಿಎಚ್‌ಇಎಲ್) ಷೇರುಗಳ ಮಾರಾಟಕ್ಕೆ ನಿರ್ಧರಿಸಿತ್ತು.
 
ಆದರೆ, ಸಚಿವರ ಸಭೆಯು ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಈ ಎರಡೂ ಕೇಂದ್ರೋದ್ಯಮಗಳಲ್ಲಿನ ಸರ್ಕಾರದ ಪಾಲು ಬಂಡವಾಳವನ್ನು ಹರಾಜಿನ ಮೂಲಕ ಮಾರಾಟ ಮಾಡುವುದೂ ಸರ್ಕಾರದ ಚಿಂತನೆಯಾಗಿತ್ತು. ಆದರೆ, ಈ ನಿರ್ಧಾರ ಜಾರಿಗೆ ತರಲು ಸಮಿತಿಯು  ಯಾವುದೇ ಕಾಲಮಿತಿಯನ್ನೂ ನಿಗದಿ ಮಾಡಿಲ್ಲ.

ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿನ ಪಾಲು ಬಂಡವಾಳ ಮಾರಾಟ ಮಾಡಿ ಸಂಪನ್ಮೂಲ ಸಂಗ್ರಹಿಸಲು ಲಭ್ಯ ಇರುವ ಎಲ್ಲ ಮಾರ್ಗೊಪಾಯಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಹಲೀಂಖಾನ್ ಹೇಳಿದ್ದಾರೆ.

`ಒಎನ್‌ಜಿಸಿ~ ಮತ್ತು `ಬಿಎಚ್‌ಇಎಲ್~ನ ಪ್ರವರ್ತಕರ  ಶೇ 5 ರಷ್ಟು ಪಾಲು ಬಂಡವಾಳವನ್ನು ಮಾರಾಟ ಮಾಡಿದರೆ ಬೊಕ್ಕಸಕ್ಕೆ ಕ್ರಮವಾಗಿ ರೂ 12 ಸಾವಿರ ಕೋಟಿ ಮತ್ತು ರೂ 5 ಸಾವಿರ ಕೋಟಿಗಳು ಭರ್ತಿಯಾಗಲಿವೆ.

ಷೇರು ವಿಕ್ರಯದಿಂದ ಅತಿ ಕಡಿಮೆ ಸಂಪನ್ಮೂಲ ಸಂಗ್ರಹವಾಗಿದೆ.  ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4.6ರಷ್ಟು ಮೀರಬಾರದು ಎನ್ನುವ ಬಜೆಟ್ ಅಂದಾಜು ಕಾರ್ಯಗತಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗದೇ  ಶೇ 5.6ರಷ್ಟಕ್ಕೆ ಹೆಚ್ಚಳಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT