ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದ ಸುಳಿಯಲ್ಲಿ ಆದರ್ಶ ಶಾಲೆ...

Last Updated 7 ಜೂನ್ 2011, 10:00 IST
ಅಕ್ಷರ ಗಾತ್ರ

ಚಿಟಗುಪ್ಪಾ: ಕೇಂದ್ರ ಸರ್ಕಾರದ ಪುರಸ್ಕೃತ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ 2010-11ರಲ್ಲಿ ರಾಜ್ಯದ 74 ಶೈಕ್ಷಣಿಕ ಹಿಂದುಳಿದ ಬ್ಲಾಕ್‌ಗಳಲ್ಲಿ ಆರಂಭಿಸಲಾಗಿದೆ.ಬೀದರ್ ಜಿಲ್ಲೆಯಲ್ಲಿ ನಾಲ್ಕು  ಶಾಲೆಗಳನ್ನು ಆರಂಭಿಸಲಾಗಿದೆ. ಆ  ಪೈಕಿ ಆದರ್ಶ ವಿದ್ಯಾಲಯವೂ ಒಂದು.

ಹುಮನಾಬಾದ್ ತಾಲ್ಲೂಕಿನ ಬೇಮಳಖೇಡಾ ಗ್ರಾಮದಲ್ಲಿ ಆರಂಭಿಸಲಾದ ವಿದ್ಯಾಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ವಿದ್ಯಾರ್ಥಿ ಪಾಲಕರು ಆತಂಕದಲ್ಲಿದ್ದಾರೆ.

5ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ತಾಲ್ಲೂಕು ಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಿಕೊಂಡು, 6ನೇ ತರಗತಿಗೆ ಆಂಗ್ಲ ಮಾಧ್ಯಮದಲ್ಲಿ ಪ್ರವೇಶ ಪಡೆದು, ದಿನದ ಶಾಲೆ (ಡೇ ಸ್ಕೂಲ್)ಆಗಿ ಭೋಧನೆ ಮಾಡುವ ಪದ್ಧತಿ ಆದರ್ಶ ವಿದ್ಯಾಲಯದ್ದಾಗಿದೆ.

ಕಳೆದ ವರ್ಷ 80 ಮಕ್ಕಳಿಗೆ ಪ್ರವೇಶ ನೀಡಲಾಗಿತ್ತು. ಅವರಲ್ಲಿ ಪ್ರತಿಶತ 80 ರಷ್ಟು ಮಕ್ಕಳು, ಪಾಲಕರು ಸಂಕಷ್ಟದಲ್ಲಿ ದಿನ ಕಳೆಯುವಂತಾಗಿತ್ತು, ಪ್ರತಿ ದಿನ ಮಕ್ಕಳು ತರಗತಿಯಲ್ಲಿ ಶಿಕ್ಷಕರಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುವುದರ್ಲ್ಲಲೇ ದಿನ ಕಳೆಯುವಂತಾಗಿತ್ತು. ದಿನದ ಶಾಲೆ ಆಗಿರುವುದರಿಂದ ಮಕ್ಕಳು ಪ್ರತಿ ದಿನ ತಮ್ಮ ಊರಿನಿಂದ ಬಸ್‌ಗೆ ಬರಬೇಕಾಗುತ್ತಿದೆ, ಬೇಮಳಖೇಡಾ ಗ್ರಾಮ ತಾಲ್ಲೂಕು ಕೇಂದ್ರದಿಂದ 45 ಕಿ.ಮೀ ದೂರದಲ್ಲಿದ್ದು, ಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯವೂ ಇಲ್ಲ. ಬೋಧನಾ ಸಿಬ್ಬಂದಿ ಕೊರತೆಯೂ ದೊಡ್ಡ ಸಮಸ್ಯೆ ಆಗಿತ್ತು, ಶೈಕ್ಷಣಿಕ ವರ್ಷ ಕಳೆದರೂ ಶಿಕ್ಷಣ ಇಲಾಖೆ ಶಿಕ್ಷಕರನ್ನು ನೇಮಿಸಲಿಲ್ಲ. ಹೀಗಾಗಿ ಮಕ್ಕಳ ಶಿಕ್ಷಣ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಪಾಲಕ ಬಾಬುರಾವ ತಿಳಿಸುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ  ಆದೇಶದಲ್ಲಿ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ ಅಂತರದಲ್ಲಿ ಆದರ್ಶ ವಿದ್ಯಾಲಯ ಆರಂಭಿಸಬೇಕು ಎಂಬುದ್ದಾಗಿ ನಿಯಮಾವಳಿ ಇದ್ದರು,  ಸ್ಥಳೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶವನ್ನು ಪರಿಗಣಿಸದೆ ಬೇಮಳಖೇಡಾ ಗ್ರಾಮದಲ್ಲಿ ಶಾಲೆಯನ್ನು ಆರಂಭಿಸಿದ್ದಾರೆ ಎಂದು ವಿದ್ಯಾರ್ಥಿ ಪಾಲಕರಾದ ಜಯವಂತ ಹಿಬಾರೆ, ಜ್ಞಾನೇಶ್ವರಿ, ರಾಜ್ ಪಟೇಲ್, ಮಲ್ಲಿಕಾರ್ಜುನ ಫಾತ್ಮಾಪೂರ. ಕರಬಸಪ್ಪ ಹಳ್ಳಿಖೇಡ್, ಚಂದ್ರಕಾಂತ ಮಾಶೆಟ್ಟಿ ಲೋಕಸಭಾ ಸದಸ್ಯ ಧರ್ಮಸಿಂಗ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 80 ವಿದ್ಯಾರ್ಥಿಗಳು ಆಯ್ಕೆ ಆಗಿದ್ದು, ಬಹುತೇಕ ಪಾಲಕರಿಗೆ ಬೇಮಳಖೇಡಾ ಗ್ರಾಮಕ್ಕೆ ಹೋಗಲು ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವುದು ಬಹುದೊಡ್ಡ ಚಿಂತೆ ಆಗಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಮಕ್ಕಳು ಆಯ್ಕೆ ಆಗಿರುವುದರಿಂದ ಸರ್ವರಿಗೂ ಯೋಗ್ಯವಾಗುವ ತಾಲ್ಲೂಕು ಕೇಂದ್ರದಿಂದ ಕನಿಷ್ಠ 5 ಕಿ.ಮೀ ಅಂತರದ ಯಾವುದೇ ಗ್ರಾಮದಲ್ಲಿ ಶಾಲೆ ನಡೆಸಿದರು ದಿನಾವೂ ಹೋಗಿ ಬರಲು ಸಾಧ್ಯವಾಗುತ್ತದೆ ಎಂದು ರಮೇಶ ಪಂಚಾಳ, ಶ್ರೀನಿವಾಸ ಹರಿದಾಸ್, ಶಿವಶಂಕರ ಬೇನ ಚಿಂಚೋಳಿ, ಲಕ್ಷ್ಮಣ ತೂರೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಕ್ಕಳ  ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಸರ್ಕಾರ, ಸ್ಥಳೀಯ ಶಾಸಕರು ಹೆಚ್ಚಿನ ಆಸಕ್ತಿ ವಹಿಸಿ, ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬರುವ ಮಕ್ಕಳಿಗೆ ಅನುಕೂಲವಾಗುವ ತಾಲ್ಲೂಕು ಕೇಂದ್ರಕ್ಕೆ ಹತ್ತಿರ ಇರುವ ಯಾವುದೇ ಗ್ರಾಮದಲ್ಲಿ ಶಾಲೆ ನಡೆಸಲಿ ಅಥವಾ ವಸತಿ ಸಹಿತ ಶಾಲೆಯನ್ನಾಗಿ ಪರಿವರ್ತಿಸಲಿ ಎಂಬುದ್ದು ಹಲವು ಪಾಲಕರ ಒತ್ತಾಯ. ಈ ಮಧ್ಯೆ ಬೇಮಳಖೇಡಾ ಗ್ರಾಮದ ನಾಗರಿಕರು ಮೂಲ ಸೌಕರ್ಯ ಕಲ್ಪಿಸಿ, ಶಾಲೆ ಸ್ಥಳಾಂತರ ಗೊಳಿಸದೆ ಇದೆ ಗ್ರಾಮದಲ್ಲಿಯೇ  ಮುಂದುವರೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ, ಶಾಸಕರು, ಅಧಿಕಾರಿಗಳು ತಕ್ಷಣ ಎಚ್ಚೆತ್ತು, ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT