ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದ ಸ್ಥಿತಿಯಲ್ಲಿ ಅಮೃತ್‌ಮಹಲ್‌ ರಾಸು

Last Updated 16 ಸೆಪ್ಟೆಂಬರ್ 2013, 19:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದೇಶದ ಉತ್ಕೃಷ್ಟ ತಳಿಯ ಅಮೃತ್‌ಮಹಲ್‌ ರಾಸುಗಳು ಜಿಲ್ಲೆಯ ತರೀಕೆರೆ ಮತ್ತು ಕಡೂರು ತಾಲ್ಲೂಕಿನ ಅಮೃತ್‌ಮಹಲ್‌ ಕಾವಲುಗಳಲ್ಲಿ ಈಗ ಸರಿಯಾದ ಪೋಷಣೆ ಮತ್ತು ನಿರ್ವಹಣೆ ಇಲ್ಲದೆ ಅಳಿವನಂಚಿಗೆ ತಲುಪಿವೆ.

ಕಾಯಂ ಸಿಬ್ಬಂದಿ ಕೊರತೆ­ಯಿಂದಾಗಿ ಈ ತಳಿ ಸಂವರ್ಧನಾ ಕೇಂದ್ರ­ಗಳು ಅನಾದರಕ್ಕೆ ತುತ್ತಾಗಿವೆ. ಕೊಟ್ಟಿಗೆಗಳಲ್ಲಿ ಸೆಗಣಿ ಬಾಚುವವರಿಲ್ಲ. ರಾಸುಗಳಿಗೆ ಕಾಲಕಾಲಕ್ಕೆ ಮೇವು ಒದಗಿ­ಸು­ತ್ತಿಲ್ಲ. ಕೊಟ್ಟಿಗೆಯಿಂದ ಹೊರ­ಗಟ್ಟಿಕೊಂಡು ಹೋಗಿ ಮೇಯಿಸಲು ಅಗತ್ಯ ಸಂಖ್ಯೆಯ ಗೋಪಾಲಕರು ಇಲ್ಲ. ರಾಶಿ ರಾಶಿಬಿದ್ದಿರುವ ಸೆಗಣಿ,ಗಂಜಲದ ತಿಪ್ಪೆಗುಂಡಿಯಲ್ಲಿ ರಾಸುಗಳು ಬಿದ್ದುಕೊಂಡಿವೆ.

ತರೀಕೆರೆ ತಾಲ್ಲೂಕಿನ ಅಜ್ಜಂಪುರ­ದಲ್ಲಿರುವ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ರಾಸುಗಳ ಸಂವರ್ಧನೆಗಾಗಿ ಅಳವಡಿಸಿದ್ದ ಸೌಕರ್ಯಗಳು ಬಳಕೆಯಾಗುತ್ತಿಲ್ಲ. ಕೊಟ್ಟಿಗೆಗಳಲ್ಲಿ ಅಕ್ಷರಶಃ ತಿಪ್ಪೆಗುಂಡಿ ನಿರ್ಮಾಣವಾಗಿದ್ದು, ಅದರ ಮೇಲೆಯೇ ಮಲಗೇಳುವ ಶ್ವೇತ­ವರ್ಣದ ರಾಸುಗಳು ಬಣ್ಣ ಬದಲಿಸಿವೆ. ಕೊಚ್ಚೆಗುಂಡಿಯಲ್ಲಿ ನಿಲ್ಲುವುದರಿಂದ ರಾಸುಗಳ ಕಾಲಿನ ಗೊರಸುಗಳಲ್ಲಿ ಗಾಯಗಳು ಉಂಟಾಗಿವೆ.

ಅಜ್ಜಂಪುರ, ಹಬ್ಬನಘಟ್ಟ, ಬಾಸೂರು, ಲಿಂಗದಹಳ್ಳಿ, ಚಿಕ್ಕ ಎಮ್ಮಿ­ಗನೂರು, ರಾಮಗಿರಿ, ಬೀರೂರು ಕಾವಲುಗಳಲ್ಲಿ ಸುಮಾರು 1,317 ಅಮೃತ್‌­ಮಹಲ್ ರಾಸುಗಳಷ್ಟೇ ಉಳಿದಿವೆ. ಬೀರೂರು ಕೇಂದ್ರದಲ್ಲಿರುವ 62 ಬೀಜದ ಹೋರಿಗಳು ತಳಿ ಅಭಿವೃದ್ಧಿಗೆ ಬಳಕೆಯಾಗುತ್ತಿವೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ  63 ಅಮೃತ್ ಮಹಲ್ ಕಾವಲುಗಳಿಗೆ ಅಜ್ಜಂಪುರದ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ ಪ್ರಧಾನ ಕಚೇರಿ. ಅಧಿಕಾರಿಗಳ ಅನುಕೂಲಕ್ಕಾಗಿ ಅಜ್ಜಂಪುರ­ದಲ್ಲಿರುವ ಕೇಂದ್ರವನ್ನು ಬೀರೂರಿಗೆ ಸ್ಥಳಾಂತರಿಸುವ ಹುನ್ನಾರವೂ ನಡೆಯುತ್ತಿದೆ ಎನ್ನು­ತ್ತಾರೆ ಅಮೃತ ಮಹಲ್‌ ಕಾವಲುಗಳ ಮೇಲೆ ಅಧ್ಯಯನ ನಡೆಸುತ್ತಿರುವ ತಿಪಟೂರಿನ ಮನೋಹರ್‌.

ಈ ರಾಸುಗಳನ್ನು ಕಾಯುವುದಕ್ಕೆ ಕಾಯಂ ನೌಕರರಿಲ್ಲ. 33 ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಗೋಪಾಲಕರಿಗೆ ನಾಲ್ಕೈದು ತಿಂಗಳಿಂದ ಸಂಬಳವೂ ಸಿಕ್ಕಿಲ್ಲ. ಪ್ರತಿದಿನ ಇಬ್ಬರು ಗೋಪಾಲಕರು ಕೆಲಸಕ್ಕೆ ಹಾಜರಾದರೆ ಹೆಚ್ಚು. ಹಾಜರಿ ಪುಸ್ತಕದಲ್ಲಿ ಮಾತ್ರ ಎಲ್ಲರೂ ಹಾಜರಿ! ಎಂದು ದೂರು­ತ್ತಾರೆ ಸ್ಥಳೀಯರು.

ಕಳೆದ ಸರ್ಕಾರದ ಅವಧಿಯಲ್ಲಿ ಅಜ್ಜಂಪುರ ಕೇಂದ್ರ ಕಚೇರಿಗೆ 5 ಕೋಟಿ ಅನುದಾನ ಸಿಕ್ಕಿದೆ. ಕಾವಲು ನಿರ್ವಹಣೆಗೆ ಪ್ರತಿ ವರ್ಷ  ₨25 ಲಕ್ಷ  ಅನುದಾನ ಲಭಿಸುತ್ತಿದೆ. ಆದರೂ ಅಮೃತ್‌ಮಹಲ್ ರಾಸುಗಳಿಗೆ ಮಾತ್ರ ನರಕಯಾತನೆಯಿಂದ ಮುಕ್ತಿ ಸಿಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT