ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಅರಿಶಿಣ ಬೆಳೆಗಾರ

Last Updated 3 ಮೇ 2012, 7:40 IST
ಅಕ್ಷರ ಗಾತ್ರ

ಹುಮನಾಬಾದ್: ಸೂಕ್ತಬೆಲೆ ಇಲ್ಲದ ಕಾರಣ ತಾಲ್ಲೂಕು ಕೇಂದ್ರ ಮತ್ತು ವಿವಿಧ ಗ್ರಾಮಗಳಲ್ಲಿ ಅರಿಶಿಣ ಬೆಳೆದ ನೂರಾರು ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಪ್ರತೀ ಕ್ವಿಂಟಲ್ ಬಿತ್ತನೆ ಬೀಜಕ್ಕೆ ರೂ. 17ರಿಂದ 20ಸಾವಿರ ಬೇಕು. ರೂ. 15ಸಾವಿರ ಗೊಬ್ಬರ, ಕಳೆ ತೆಗೆಯುವುದು ಮೊದಲಾದವುಗಳಿಗೆ ಕನಿಷ್ಟ ರೂ. 10ಸಾವಿರ ಖರ್ಚಾಗುತ್ತದೆ. ಇದಾದ ಬಳಿಕ ಪ್ರತೀ ಎಕರೆ ಅರಿಶಿಣ ಕುದಿಸುವದಕ್ಕೆ ರೂ. 1ಸಾವಿರ ತಗಲುತ್ತದೆ. ಪ್ರತೀ ಎಕರೆ ಅರಿಶಿಣ ಬಿತ್ತನೆಗೆ ರೂ. 40ರಿಂದ 50ಸಾವಿರ ತಗಲುತ್ತದೆ. ಆದರೇ ಸದ್ಯ ಮಾರುಕಟ್ಟೆಯಲ್ಲಿ ಪ್ರತೀ ಕ್ವಿಂಟಲ್ ಅರಿಶಿಣದ ಬೆಲೆ ರೂ. 3ರಿಂದ 4ಸಾವಿರ ಇದೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆಯುವ ಅರಿಶಿಣಕ್ಕೆ ಸರಾಸರಿ ರೂ. 18ರಿಂದ 20ಸಾವಿರ ಬರುತ್ತದೆ. ಆದರೇ ಬಿತ್ತನೆ ಸಂಬಂಧ ಮಾಡಲಾದ ಖರ್ಚು ಹಾಗೂ ಮಾರಾಟದ ನಂತರ ಬರುವ ಹಣ ಕೇವಲ 50ಪ್ರತಿಶತ ಮಾತ್ರ. ಹೀಗಾಗಿ ಬಿತ್ತನೆಗೆ ಮಾಡಿದ ಖರ್ಚು ಪೂರ್ಣ ಪ್ರಮಾಣದಲ್ಲಿ ವಾಪಸ್ ಬರದ ಸ್ಥಿತಿಯಿಂದ ನಾವು ತೀವ್ರ ಸಂಕಷ್ಟಕ್ಕೀಡಾಗಿದ್ದೇವೆ ಎನ್ನುತ್ತಾರೆ ಹೊಲದ ಮಾಲಿ ಮೈನೋದ್ದೀನ್, ಜಜಮಾನ ಶಿವಾರೆಡ್ಡಿ ಮೊದಲಾದವರು.

ಬೆಂಬಲ ಬೆಲೆಗೆ ಆಗ್ರಹ: ಕಾರಣ ಸರ್ಕಾರ ತೊಗರಿ ಮೊಲಾದವುಗಳಿಗೆ ನೀಡಿದಂತೆ ಅರಿಶಿಣಕ್ಕೂ ಸಾಧ್ಯವಾದಷ್ಟು ಶೀಘ್ರ ಪ್ರತೀ ಕ್ವಿಂಟಲ್‌ಗೆ ರೂ. 6ರಿಂದ 7ಸಾವಿರ ಬೆಂಬಲ ಬೆಲೆನಿಗದಿ ಮಾಡುವುದರ ಜೊತೆಗೆ ಪೂರ್ಣಪ್ರಮಾಣ ಅರಿಶಿಣ ಖರೀದಿಸಬೇಕು ಎನ್ನುವುದು ರೈತರಾದ ಶಿವಪೂರ ಓಣಿ ಶಿವಾರೆಡ್ಡಿ ಮುಡಬಿ, ರೈತ ಮುಖಂಡ ಹಾಗೂ ಗಡವಂತಿ ರೈತ ಸಿದ್ಧಣ್ಣ ಭೂಶೆಟ್ಟಿ, ಸಾವಯವ ಕೃಷಿಕ ಹುಮನಾಬಾದ್ ಶಿವಶಂಕರ ತರನಳ್ಳಿ ಮೊದಲಾದವರ ಒತ್ತಾಸೆ,

ಸರ್ಕಾರಕ್ಕೆ ಪ್ರಸ್ತಾವ: ವಿವಿಧ ಬೆಳೆಗಳಿಗೆ ನೀಡುವಂತೆ ಅರಿಶಿಣಕ್ಕೂ ಬೆಂಬಲ ಬೆಲೆ ನಿಗದಿ ಮಾಡುವ ಕುರಿತು ರೈತರಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಹೋಗಿದೆ. ಆ ಬಗ್ಗೆ ಸರ್ಕಾರ ಮಟ್ಟದಲ್ಲಿ ಚಿಂತನೆ ಸಹ ನಡೆಯುತ್ತಿದೆ. ಆದರೇ ಈವರೆಗೆ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ. ಪ್ರತೀ ಎಕರೆ ಅರಿಶಿಣ ಬಿತ್ತನೆಗೆ ಸಾದಾ ಆದರೇ ರೂ. 4ರಿಂದ 50ಸಾವಿರ ಖರ್ಚು ತಗಲುತ್ತದೆ. ಅದೇ ಹನಿ ನಿರಾವರಿ ಆದರೆ ರೂ. 60ರಿಂದ 70ಸಾವಿರ ತಗಲುತ್ತದೆ. ತಾಲ್ಲೂಕಿನಲ್ಲಿ ಒಟ್ಟು 4ಸಾವಿರ ಎಕರೆ ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗಿದೆ.

ಪ್ರತೀ ಕ್ವಿಂಟಲ್ ಅರಿಶಿಣಕ್ಕೆ ಸರ್ಕಾರ ರೂ. 3ರಿಂದ 4ಸಾವಿರ ಬೆಂಬಲ ಬೆಲೆ ನೀಡಿದಲ್ಲಿ ರೈತರಿಗೆ ಲಾಭ ಆಗುವುದು ಕಷ್ಟಸಾಧ್ಯ. ಆದರೇ ಆಗಬಹುದಾದ ನಷ್ಟವನ್ನಾದರೂ ತಡೆಗಟ್ಟಬಹುದು ಎನ್ನುತ್ತಾರೆ ಹುಮನಾಬಾದ್ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ.

ಅರಿಶಿಣ ಬೆಳೆದು ಈಗಾಗಲೇ ಕೈ ಸುಟ್ಟುಕೊಂಡ ನಾವು ಮೊದಲೇ ಸಂಕಷ್ಟದ್ಲ್ಲಲಿದ್ದೇವೆ. ಸರ್ಕಾರ ಈಗಲೂ ನಮ್ಮ ತಾಳ್ಮೆಶಕ್ತಿ ಪರೀಕ್ಷಿಸದೇ ತಾಳ್ಮೆಕಟ್ಟೆ ಒಡೆಯುವ ಮುನ್ನ ಬೆಂಬಲಬೆಲೆ ನಿಗದಿ ಮಾಡುವ ಮೂಲಕ ವಿಶ್ವಾಸ ಉಳಿಸಿಕೊಳ್ಳಬೇಕು ಎನ್ನುವುದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶಕುಮಾರ ನನ್ನೂರೆ, ಪ್ರಮುಖರಾದ ಪರಮೇಶ್ವರ ಪಾಟೀಲ ಮೊದಲಾದವರ ಒತ್ತಾಸೆ.
   -                              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT