ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಕುರಿಗಾರ ಸಮುದಾಯ

ಗಂಟಲು ಮತ್ತು ಕಾಲುಬೇನೆಯಿಂದ ಬಳಲುತ್ತಿರುವ ಕುರಿಗಳು
Last Updated 8 ಡಿಸೆಂಬರ್ 2012, 9:07 IST
ಅಕ್ಷರ ಗಾತ್ರ

ಶಿರಹಟ್ಟಿ: ಗಂಟಲು ಬೇನೆಯಿಂದ ನರಳುತ್ತಿರುವ ಕುರಿಗಳು ಸಾವನ್ನಪ್ಪುತ್ತಿದ್ದು, ಸೂಕ್ತ ಚಿಕಿತ್ಸೆ ಇಲ್ಲದೇ ಕುರಿಗಾರರ ಸಮುದಾಯ ಕೆಂಗೆಟ್ಟಿದೆ. ಗಂಟಲು ಬೇನೆ ಮಾತ್ರವಲ್ಲದೆ ಹಲವು ರೋಗಗಳ ಭೀತಿ ಕುರಿಗಳಿಗೆ ವ್ಯಾಪಿಸಿಕೊಂಡಿದೆ. ಇದರ ಪರಿಣಾಮ ಕುರಿ ಉದ್ಯಮ ಸಂಕಷ್ಟದ ಸುಳಿಗೆ ಸಿಲುಕಿ ಕುರಿಗಾರರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಹೆಚ್ಚು ಕುರಿಗಳನ್ನು ಹೊಂದಿರುವ ತಾಲ್ಲೂಕು ಎಂದು ಹೆಗ್ಗಳಿಕೆಗೆ ಹೆಸರಾಗಿದ್ದು, ಶಿರಹಟ್ಟಿ ತಾಲ್ಲೂಕಿನಲ್ಲಿ ಶೇ 40ಕ್ಕೂ ಅಧಿಕ ಕುಟುಂಬಗಳು ಕುರಿಗಾರಿಕೆಯನ್ನು ಉಸಿರಾಗಿಸಿ ಕೊಂಡು ಬದುಕು ನಡೆಸುತ್ತಿವೆ. ಆದರೆ, ಕುರಿಗಳಿಗೆ ಬರುತ್ತಿರುವ ಹಲವು  ಕಾಯಿಲೆಗಳಿಂದ ಕುರಿ ಕಾಯುವ ಸಮುದಾಯ  ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. 

ಕುರಿಗಳಿಗೆ ಗಂಟಲು ಬೇನೆ, ನೆಗಡಿ, ಕಾಲು ಮತ್ತು ಜ್ವರ ಬಾಯಿ, ಕಾಲು ಹುಣ್ಣು ಸೇರಿದಂತೆ ಹತ್ತಕ್ಕೂ ಅಧಿಕ ಬಗೆಯ ರೋಗಗಳು ಕಾಡುತ್ತಿವೆ. ಇಂಥ ರೋಗಗಳ ನಿಯಂತ್ರಣಕ್ಕೆ ಸಾಕಷ್ಟು ಚಿಕಿತ್ಸೆ ಒದಗಿಸಿದರೂ ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿದೆ.

ಪ್ರಕೃತಿ ವಿಕೋಪ ಅಥವಾ ನೈಸರ್ಗಿಕ ಕಾಯಿಲೆ ಗಳಿಂದ ಮರಣ ಹೊಂದುವ ಕುರಿಗಳಿಗೆ ಸರ್ಕಾರದಿಂದ 1650 ರೂಗಳ ಪರಿಹಾರವಿದ್ದು, ಅದರ ಬೆಲೆ ಕನಿಷ್ಠ ಐದು ಸಾವಿರದಿಂದ ಏಳು ಸಾವಿರ ಮೌಲ್ಯದ್ದಾಗಿರುತ್ತದೆ. ಪರಿಹಾರ ನೀಡುವ ಲ್ಲಿಯೂ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಕುರಿಗಾರರ ಪ್ರಮುಖ ಆರೋಪವಾಗಿದೆ. ತಾಲ್ಲೂ ಕಿನ ಹಲವಾರು ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಸರಿಯಾಗಿ ಔಷಧಿಗಳ ಪೂರೈಕೆ ಇಲ್ಲ. ಕುರಿಗಳು ಇರುವ ಸ್ಥಳಗಳಿಗೆ ವೈದ್ಯರು ಬರುವುದಿಲ್ಲ. ಇಂತಹ ಹಲವಾರು ಕೊರತೆಗಳಿಂದ ಕುರಿಗಳು ಸಾವನ್ನಪ್ಪುತ್ತಿವೆ ಎಂದು ಕುರಿಗಾರರ ಸಮುದಾಯ ಅಸಹಾಯಕತೆ ವ್ಯಕ್ತಪಡಿಸಿದೆ. 

ಅಧಿಕಾರಿಗಳು ಅಥವಾ ರಾಜಕೀಯ ಮುಖಂಡರು ಕುರಿಗಾರರ ಸಮುದಾಯ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಾರೆ ವಿನ: ಅವರ ನೆರವಿಗೆ ದಾವಿಸುವುದಿಲ್ಲ ಎಂಬದು ವಿಷಾದನೀಯ ಸಂಗತಿ.ಕುರಿಗಳಿಗೆ ಬರುವ ಕಾಯಲೆ ಮತ್ತು ಅನುಸರಿಸಬೇಕಾದ ಕೆಲ ಮಾಹಿತಿಗಳು ಇಲ್ಲಿವೆ. 

ಗಂಟಲು ಬೇನೆ (ಎಚ್‌ಎಸ್) ರೋಗದಿಂದ ಸಾಮಾನ್ಯವಾಗಿ ಕುರಿ, ಮೇಕೆ, ದನ ಮತ್ತು ಎಮ್ಮೆಗಳಲ್ಲಿ ಕಂಡು ಬರುತ್ತದೆ. ವ್ಯಾಸ್ಟಿರೆಲ್ಲಾ ಮಲ್ಟಿ ಸಿಡ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತಿದ್ದು, ರೋಗಕ್ಕೆ ಒಳಗಾದ ಕುರಿಗಳು ಅತಿ ಜ್ವರದಿಂದ ಬಳಲುತ್ತವೆ. ಗಂಟಲು ಮತ್ತು ನಾಲಿಗೆ ಊದಿ ಶ್ವಾಸಕೋಶದ ತೊಂದರೆ ಮತ್ತು ಭೇದಿ ಕಾಣಿಸಿ ಕೊಂಡು ಒಂದೆರಡು ದಿನಗಳಲ್ಲಿ ಸಾವನ್ನಪ್ಪುತ್ತಿವೆ.

ನೆಗಡಿ: ಬ್ಯುಸಲಸ್ ಆಂಥ್ರಾಸಿಸ್ ಎಂಬ ಬ್ಯಾಕ್ಟಿರಿ ಯಾದಿಂದ ಈ ರೋಗ ಕಾಣಿಸಿ ಕೊಳ್ಳುತ್ತಿದ್ದು, ರೋಗ ಪ್ರಾಣಿಗಳಿಂದ ಮನುಷ್ಯ ನಿಗೂ ಬರುವ ಸಾಧ್ಯತೆಗಳಿವೆ. ರೋಗ ಕಾಣಿಸಿ ಕೊಂಡ ಕುರಿ, ಮೇಕೆಗಳು ನಿಗದಿತ ದಿನಗಳಲ್ಲಿ ಜ್ವರ ಕಾಣಿಸಿಕೊಂಡು ಗುದದ್ವಾರ ಮತ್ತು ಮೂಗಿನ ಮೂಲಕ ರಕ್ತ ಸ್ರಾವವಾಗುತ್ತದೆ. ರೋಗ ಕಾಣಿಸಿಕೊಂಡ 24-36 ಗಂಟೆಗಳಲ್ಲಿ ಕುರಿ, ಮೇಕೆಗಳು ಸಾಯುತ್ತವೆ.

ಟ್ರಿಫನಾಸೋಮಿಯಾಸಿಸ್: ಟ್ರಿಫನ್‌ಸೋಸೊಮ ಇವಾನ್ಸಿ ಎಂಬ ರಕ್ತ ಪರ ರೋಪಜೀವಿಯಿಂದ ಬರುತ್ತಿದ್ದು. ತೀವ್ರ ಜ್ವರ ಕಾಣಿಸಿಕೊಂಡು ನರ ದೌರ್ಬಲ್ಯತೆಯಿಂದ ಬಳಲು ತ್ತಿವೆ. ಮರ ಗಿಡಗಳಿಗೆ ಒತ್ತಿಕೊಂಡು ನಿಲ್ಲುವುದು. ನಡೆಯುವಾಗ ಒಂದೇ ಕಡೆ ವಾಲುವುದು ಇದರ ಮುಖ್ಯ ಲಕ್ಷಣಗಳಾಗಿವೆ.

ಕಾಲು  ಬಾಯಿಜ್ವರ: ಇದು ವೈರಾಣುವಿನಿಂದ ಬರುವ ರೋಗವಾಗಿದೆ. ಕುರಿ, ಮೇಕೆ ಹಾಗೂ ದನ, ಎಮ್ಮೆ, ಹಂದಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಜ್ವರ, ಬಾಯಿಯಿಂದ ಜೊಲ್ಲು ಸುರಿಸುವುದು, ನಾಲಿಗೆ ಮತ್ತು ಕಾಲಿನಂತಹ ಸೂಕ್ಷ್ಮ ಸ್ಥಳಗಳಲ್ಲಿ ಹುಣ್ಣಾಗುವುದು, ಕಾಲುಗಳಲ್ಲಿ ಹುಳಗಳು ಕಾಣಿಸಿಕೊಳ್ಳುವುದು ವಿಶೇಷವಾಗಿ ಚಿಕ್ಕ ವಯಸ್ಸಿನ ಮರಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.

ಅಂಫ್ರಿಸ್ಟೋಮ್ ಫೆಸಿಯೋಲಾಷ್ಕಿಸ್: ಅಂಫಿ ಸ್ಟೋಮ್ ಮತ್ತು ಫೆಸೀಯಾಲು ಎಂಬ ಜೀವಿಗಳಿಂದ ಬರುವ ಈ ಕಾಯಿಲೆ ಕೆರೆ, ಹೊಂಡ ಮತ್ತು ತಗ್ಗು ಪ್ರದೇಶಗಳಲ್ಲಿ ನಿಂತ ನೀರನ್ನು ಕುಡಿಯುವುದರಿಂದ ಇಂತಹ ರೋಗ ಕಾಣಿಸಿ ಕೊಳ್ಳುತ್ತವೆ. ವಾಸನೆಯುಕ್ತ ಭೇದಿ, ನಿಶ್ಯಕ್ತಿ, ಗಂಟಲು ಊದಿ ಕೊಳ್ಳುವುದು ಮತ್ತು ದೂಡ್ಡ ಗಾತ್ರ (ಉಬ್ಬು) ಹೊಟ್ಟೆ ರೋಗದ ಲಕ್ಷಣಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT