ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ರೈತ; ಕಡಿಮೆ ಬೆಲೆಗೆ ಮಾರಾಟ

ಆರಂಭಗೊಳ್ಳದ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ
Last Updated 10 ಡಿಸೆಂಬರ್ 2013, 5:28 IST
ಅಕ್ಷರ ಗಾತ್ರ

ಬಾಗಲಕೋಟೆ: ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಂದ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಮತ್ತು ಬಿಳಿಜೋಳ ಖರೀದಿಸಲು ಜಿಲ್ಲೆಯ 7 ಸ್ಥಳಗಳಲ್ಲಿ ಆರಂಭಿಸಲಾಗಿದ್ದ ಮೆಕ್ಕೆಜೋಳ ಖರೀದಿ ಕೇಂದ್ರಗಳು ಒಂದು ತಿಂಗಳಾದರೂ ಖರೀದಿ ಪ್ರಕ್ರಿಯೆ ಆರಂಭಿಸದೇ ಇರುವುದರಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ರೂ 1310ರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವ ಉದ್ದೇಶದಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ಬಾಗಲಕೋಟೆ ಎಪಿಎಂಸಿ ಆವರಣ, ಬಾದಾಮಿ, ಕುಳಗೇರಿ ಕ್ರಾಸ್‌, ಹುನಗುಂದ, ಬೀಳಗಿ, ಜಮಖಂಡಿ ಮತ್ತು ಮಹಾಲಿಂಗಪುರದಲ್ಲಿ ಸರ್ಕಾರ ಮೆಕ್ಕೆ ಜೋಳ ಖರೀದಿ ಕೇಂದ್ರಗಳನ್ನು ನವೆಂಬರ್‌ 7ರಂದೇ ಆರಂಭಿಸಿದೆ.

ಆದರೆ, ಇದುವರೆಗೂ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಆರಂಭಿಸದೇ ಇರುವುದರಿಂದ ಸಂಕಷ್ಟದಲ್ಲಿರುವ ರೈತರು ಅನಿವಾರ್ಯವಾಗಿ ಪ್ರತಿ ಕ್ವಿಂಟಾಲ್‌ಗೆ ರೂ 1000 ದಿಂದ ರೂ 1079ರ ದರದಲ್ಲಿ ವರ್ತಕರಿಗೆ ಮಾರಾಟ ಮಾಡತೊಡಗಿದ್ದಾರೆ.

ಜಿಲ್ಲೆಯಲ್ಲಿ ಪ್ರತಿದಿನ ರೈತರು 10 ಸಾವಿರ ಕ್ವಿಂಟಾಲ್‌ಗೂ ಅಧಿಕ ಮೆಕ್ಕೆಜೋಳವನ್ನು ವರ್ತಕರಿಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವ ಮುನ್ನವೇ ರೈತರ ಬಹುತೇಕ ಮೆಕ್ಕೆಜೋಳ ಕಡಿಮೆ ದರದಲ್ಲಿ ವರ್ತಕರ ಪಾಲಾಗಲಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಶಶಿಧರ, ‘ಬೆಂಬಲ ಬೆಲೆಯಲ್ಲಿ ರೈತರಿಂದ ಮೆಕ್ಕೆಜೋಳ  ಖರೀದಿಸುವ ಸಂಬಂಧ ಅಗತ್ಯ ಉಗ್ರಾಣ ಮತ್ತು ಸಾರಿಗೆ ಟೆಂಡರ್‌ ಕರೆಯಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೆಕ್ಕೆಜೋಳ ಖರೀದಿ ಆರಂಭವಾಗಲಿದೆ’ ಎಂದರು.

‘ಈಗಾಗಲೇ ಖರೀದಿ ಕೇಂದ್ರಗಳಿಗೆ ಬರುವ ರೈತರಿಂದ ಮೆಕ್ಕೆಜೋಳದ ಮಾದರಿ­ಯನ್ನು ಪಡೆದುಕೊಳ್ಳಲಾ­ಗುತ್ತಿದೆ. ಗುಣಮಟ್ಟ ಪರೀಕ್ಷಿಸಿದ ಬಳಿಕ ಅರ್ಹ ಮೆಕ್ಕೆಜೋಳವನ್ನು ಶೀಘ್ರದಲ್ಲೇ ಖರೀದಿಸಲಾಗುತ್ತದೆ’ ಎಂದು ತಿಳಿಸಿದರು.

‘ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗುವವರೆಗೆ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಲಾಗುವುದು, ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT