ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ'

Last Updated 7 ಸೆಪ್ಟೆಂಬರ್ 2013, 8:31 IST
ಅಕ್ಷರ ಗಾತ್ರ

ಮೈಸೂರು: `ಕನ್ನಡ ಸಾಹಿತ್ಯ ಸಂಕ್ರಮಣ ಸ್ಥಿತಿಯಲ್ಲಿದೆ' ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ `ಹೊರಳು ದಾರಿಯಲ್ಲಿ ಕನ್ನಡ ಸಾಹಿತ್ಯ ಹುಡುಕಾಟದ ಹೊಸ ನೆಲೆಗಳು' ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕನ್ನಡ ಸಾಹಿತ್ಯ ನಿಂತು ಹೋಗಿರುವಂತೆ ಭಾಸವಾಗುತ್ತದೆ. ಆದರೆ ಹಾಗಿರುವುದಿಲ್ಲ. ನಿರಂತರವಾಗಿ ಹರಿಯುವ ನೀರಿನ ಹಾಗೆ ಅದು. ವೇಗವಾಗಿ, ಮಂದವಾಗಿ, ಗಂಭೀರವಾಗಿ ಹರಿಯಬಹುದು.

ಆದರೆ ಎಂದೂ ನಿಂತಿಲ್ಲ. ನಿಲ್ಲಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯ ಸ್ಥಾವರ ಸ್ಥಿತಿ- ಜಂಗಮ ಗತಿ ಎನ್ನುವ ಶಬ್ದಗಳು ನಮ್ಮ ಅಧ್ಯಯನ, ವಿಶ್ಲೇಷಣೆ ಸಲುವಾಗಿ ಆರೋಪ ಮಾಡಿದ ಪರಿಕಲ್ಪನೆಗಳಷ್ಟೇ. ಅಲ್ಲದೇ ತೀರ್ಮಾನಗಳನ್ನು ಸ್ಪಷ್ಟಪಡಿಸಿಕೊಳ್ಳಲು, ತೀರ್ಮಾನವನ್ನು ಭಾಷೆಯ ಮೂಲಕ ಖಚಿತಪಡಿಸಿಕೊಳ್ಳಲು ಕೆಲವರು ಸೂತ್ರ, ಚೌಕಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ಹೀಗೆ ಸಾಹಿತ್ಯವನ್ನು ಸಾಮಾನ್ಯೀಕರಣ, ಸೂತ್ರೀಕರಣ ಹಾಗೂ ಸರಳೀಕರಣ ಮಾಡುವವರು ಇದ್ದಾರೆ' ಎಂದು ಹೇಳಿದರು.

`ಇಂಥ ವಿಚಾರ ಸಂಕಿರಣಗಳಿಂದ ಸೃಜನಶೀಲ ಲೇಖಕರಿಗೆ ಹೆಚ್ಚು ಪ್ರಯೋಜನವಾಗುವುದಿಲ್ಲ. ಚಾಲ್ತಿ ಮಾರುಕಟ್ಟೆ ಗೊತ್ತಾಗುತ್ತದೆ. ಜತೆಗೆ ಎಂ.ಫಿಲ್, ಪಿಎಚ್.ಡಿ. ಅಧ್ಯಯನ ಕೈಗೊಂಡವರಿಗೆ ಪರಿಭಾಷೆಗಳು ಸಿಗುತ್ತವೆ. ಬರೆಯುವವರಿಗೆ ಪ್ರಚೋದನೆ ಸಿಗುತ್ತದೆ. ಆದರೆ ಸೃಜನಶೀಲ ಲೇಖಕರಿಗೆ ಮಿತಿ ಇದ್ದೇ ಇರುತ್ತದೆ. ಮಿತಿ ಇದ್ದಾಗಲೇ ದಾಟಲು ಸಾಧ್ಯವಾಗುತ್ತದೆ. ಇದಕ್ಕೆ ರಾಮಾಯಣದ ಸೀತೆ ಉತ್ತಮ ಉದಾಹರಣೆ.

ಹೋಗುವ ಮುಂದ
ಲಕ್ಷ್ಮಣ ಗೆರೆ ಹೊಡೆದು ಹೋದ
ಆಮೇಲೆ ಬಂದ ರಾವಣ
ಲೈನು ಹೊಡೆದ
ಹೀಗೆ ಗೆರೆ ಇದ್ದುದಕ್ಕೆ ಉಲ್ಲಂಘನೆಯಾಯಿತು. ಉಲ್ಲಂಘನೆ ಪ್ರತಿ ಲೇಖಕನ ಹಕ್ಕು ಎಂದು ವಿವರಿಸಿದರು.

ಸಾಂಸ್ಕೃತಿಕ ನೀತಿ: ಯಾವುದೇ ಸರ್ಕಾರ ಬಂದಾಗಲೂ ಸಾಂಸ್ಕೃತಿಕ ನೀತಿ ರೂಪುಗೊಳ್ಳುತ್ತದೆ. ಅದು ಪ್ರಭುತ್ವದ ನೀತಿಯಾಗುತ್ತದೆ. ಅದು ಪ್ರಭುತ್ವಕ್ಕೆ ಪೂರಕವಾಗಿರುತ್ತದೆ. ಆದರೆ ಸೋ ಕಾಲ್ಡ್ ಸಾಂಸ್ಕೃತಿಕ ನೀತಿಗೆ ಮಿತಿ ಹಾಕಬೇಕು ಎಂದರು.

`ಯಾವುದೇ ಕೃತಿಗೆ ಬೆನ್ನುಡಿ, ಚೆನ್ನುಡಿಗಳಿಂದ ಏನೂ ಆಗುವುದಿಲ್ಲ. ಭಾಷೆಯ ಮೂಲ ಪರಿಕರಗಳನ್ನು ಹದಗೊಳಿಸಿ ಮೈತುಂಬಾ ಕಣ್ಣಾಗಿ ಚಿಂತನ-ಮಂಥನ ಮಾಡಬೇಕು' ಎಂದು ಸಲಹೆ ನೀಡಿದರು.

ಕುವೆಂಪು ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಕುಮಾರ ಚಲ್ಯ ಆಶಯ ನುಡಿಗಳ್ನಾಡಿದರು. ಹಿರಿಯ ವಿಮರ್ಶಕ ಡಾ.ಜಿ.ಎಸ್. ಆಮೂರ ಅಧ್ಯಕ್ಷತೆ ವಹಿಸಿದ್ದರು.

ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ತಳವಾರ, ಕಾಲೇಜಿನ ಪ್ರಾಚಾರ್ಯ ಪ್ರೊ.ಎನ್.ಪಿ. ಪದಕಿ, ಶೈಕ್ಷಣಿಕ ಡೀನ್ ಡಾ.ಎಚ್.ಸಿ. ಹೊನ್ನಪ್ಪ ವೇದಿಕೆ ಮೇಲಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥೆ ಎಸ್.ಪಿ. ಉಮಾದೇವಿ ಸ್ವಾಗತಿಸಿದರು. ಸಂಕಿರಣದ ಸಂಚಾಲಕ ನಂದೀಶ್ ಹಂಚೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT