ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ನಂತರ ಬದಲಾಗುತ್ತೇನೆ:ಯಡಿಯೂರಪ್ಪ ಶಪಥ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ~ಸಂಕ್ರಾಂತಿ ನಂತರ ಮುಖ್ಯಮಂತ್ರಿ ಬದಲಾಗುವುದಿಲ್ಲ; ನಾನು ಬದಲಾಗುತ್ತೇನೆ. ನನ್ನ ನಡವಳಿಕೆ, ಚಿಂತನೆ, ಮಾತುಕತೆ ಎಲ್ಲವೂ ಬದಲಾಗುತ್ತವೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾರ್ಮಿಕವಾಗಿ    ನುಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರೇ ಹೇಳಿರುವಂತೆ ಸರ್ಕಾರ ನೋಡಿಕೊಳ್ಳಲು ಅವರಿದ್ದಾರೆ. ಪಕ್ಷ ನೋಡಿಕೊಳ್ಳಲು ಈಶ್ವರಪ್ಪ ಇದ್ದಾರೆ. ಹಾಗಾಗಿ, ನಾನು ಈಗ ಕೆಲಸ ಇಲ್ಲದ ಕಾರ್ಯಕರ್ತ. ಪಕ್ಷದ ಶಾಸಕರು, ಉಸ್ತುವಾರಿ ಸಚಿವರುಗಳು ಕರೆದ ಕಡೆ ಹೋಗುತ್ತೇನೆ~ ಎಂದು ಸ್ಪಷ್ಟಪಡಿಸಿದರು.

ಆದರೆ, ಸದಾನಂದಗೌಡ, ಈಶ್ವರಪ್ಪ ಹೋಗಬೇಡ ಎಂದ ಕಡೆ ಹೋಗುವುದಿಲ್ಲ. ಈ ಪ್ರವಾಸ ವೈಯಕ್ತಿಕ ವರ್ಚಸ್ಸು ವೃದ್ಧಿಗಾಗಿ ಅಲ್ಲ; ಪಕ್ಷದ ಅಭಿವೃದ್ಧಿಗೆ ಎಂದು ಸಮಜಾಯಿಷಿ ನೀಡಿದರು.

ಇದೇ 24ರಂದು ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಹೋರಾಟ ಹಮ್ಮಿಕೊಂಡಿದ್ದು, ತಾವು ಈ ಹೋರಾಟದಲ್ಲಿ ಭಾಗವಹಿಸುವುದಾಗಿ ಪ್ರಕಟಿಸಿದರು.

ರಾಷ್ಟ್ರ ರಾಜಕಾರಣದಲ್ಲಿ ತಮಗೆ ಆಸಕ್ತಿ ಇಲ್ಲ ಎಂದ ಅವರು, ನನಗೆ     ಕನ್ನಡವೇ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್, ಹಿಂದಿ ಗೊತ್ತಿಲ್ಲ. ರಾಜ್ಯದಲ್ಲೇ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕಿದೆ ಎಂದು ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ತಮ್ಮ ಸ್ಥಾನಮಾನ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, `ಹೈಕಮಾಂಡ್ ಈಗ ಚುನಾವಣೆಯಲ್ಲಿ ಬ್ಯುಸಿ ಇದೆ. ಅದು ಈಗ ಎಲ್ಲವನ್ನೂ ಗಮನಿಸುತ್ತಿದೆ. ಹೈಕಮಾಂಡ್ ಸ್ವತಂತ್ರವಾಗಿ ಚಿಂತಿಸಿ, ನಿರ್ಧಾರ ತೆಗೆದುಕೊಳ್ಳುವವರೆಗೂ ಕಾಯುತ್ತೇನೆ. ರಾಜಕಾರಣದಲ್ಲಿ ಕೆಲವೊಮ್ಮೆ ಪರಿಸ್ಥಿತಿಗೆ ತಕ್ಕಂತೆ ಹೆಜ್ಜೆ ಇಡಬೇಕಾಗುತ್ತದೆ~ ಎಂದು ಹೇಳಿದರು.

ನನಗೆ ಒಂದು ಕಡೆ ಕುಳಿತು ಅಭ್ಯಾಸ ಇಲ್ಲ. ಹಾಗಾಗಿ, ಒಂದಲ್ಲ ಒಂದು ಕಾರ್ಯಕ್ರಮ ಹಮ್ಮಿಕೊಂಡು ಪ್ರವಾಸ ಮಾಡುತ್ತೇನೆ. ಬಹಳಷ್ಟು ಸಲ ಇದೇ ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿತಗೊಂಡು ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮೂಹಿಕ ನಾಯಕತ್ವ ಈಗ ಹೊಸ ಪ್ರಯೋಗ. ಪಕ್ಷ ಅಧಿಕಾರಕ್ಕೆ ಬಂದಾಗ ಈ ರೀತಿಯ ಬದಲಾವಣೆಗಳು ಆಗುತ್ತವೆ. ಆದರೆ, ಫಲಿತಾಂಶ ಬಂದಾಗಲಷ್ಟೇ ಈ ಪ್ರಯೋಗದ ಬಗ್ಗೆ ಹೇಳಲು ಸಾಧ್ಯ. ಎಂದು ತೀಕ್ಷ್ಣವಾಗಿ ನುಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲಗೊಳ್ಳುತ್ತಿದೆ; ಬಿಜೆಪಿ ಬಲಗೊಳ್ಳುತ್ತಿದೆ. ಪಕ್ಷ ಒಳ್ಳೆಯ ನಾಯಕತ್ವ ನೀಡಿ, ಉತ್ತಮ ಸರ್ಕಾರ ನಡೆಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಹಳಷ್ಟು  ಶಾಸಕರು ಬಿಜೆಪಿಗೆ ಬರುವುದರಲ್ಲಿ ಅನುಮಾನ ಇಲ್ಲ. ಸಿದ್ದರಾಮಯ್ಯ ಅವರ ಸ್ಥಾನಮಾನ ಕಾಂಗ್ರೆಸ್‌ನಲ್ಲಿಯೇ ಸ್ಪಷ್ಟವಾಗಿಲ್ಲ ಎಂದರು.

ಪಕ್ಷ ಸಂಘಟನೆಯಲ್ಲಿ ರೆಡ್ಡಿ ಸಹೋದರರ ಶ್ರಮವಿದೆ. ಆದರೆ, ಅವರ ಹಿಂದೆ ನಾವಿಲ್ಲ. ನಮ್ಮ ಜತೆ ಅವರಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿವಮೊಗ್ಗ ನಗರದಲ್ಲಿನ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಧರ್ಮಸ್ಥಳಕ್ಕೆ ಪ್ರವಾಸ ಬೆಳೆಸಿದ್ದಾರೆ. ಕೆಲವು ದಿನಗಳಿಂದ ಶಿವಮೊಗ್ಗದಲ್ಲೇ ಠಿಕಾಣಿ ಹೂಡಿದ್ದ ಈಶ್ವರಪ್ಪ ಶುಕ್ರವಾರ ಸಂಜೆಯೇ ಧರ್ಮಸ್ಥಳಕ್ಕೆ ತೆರಳಿದ್ದು ಯಡಿಯೂರಪ್ಪ ಅವರೊಂದಿಗೆ ಮುಖಾಮುಖಿಯಾಗಲಿಲ್ಲ.

ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಪಕ್ಷದ ಅಧ್ಯಕ್ಷರಾಗಿ ಅವರು ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಭಾಗವಹಿಸಬಾರದು ಎಂಬುದು ಈಶ್ವರಪ್ಪ ಅವರಿಗೆ ತಿಳಿದಿದೆ. ಈ ಬಗ್ಗೆ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT