ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ: ವ್ಯಾಪಾರ ಭರಾಟೆ ಜೋರು

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಆನೇಕಲ್:  ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬದ ಆಚರಣೆಗಾಗಿ ತಾಲ್ಲೂಕಿನಲ್ಲಿ ಜನತೆ ಸಂಭ್ರಮದ ಸಿದ್ಧತೆಯಲ್ಲಿ ತೊಡಗಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.

ಪಟ್ಟಣದ ಮಾರುಕಟ್ಟೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾವಣೆಯಾಗಿ ಹಬ್ಬಕ್ಕಾಗಿ ಸರಕು ಸಾಮಗ್ರಿಗಳನ್ನು ಕೊಳ್ಳುತ್ತಿದ ದೃಶ್ಯ ಕಂಡುಬಂದಿತು.

ಹಬ್ಬದ ಆಚರಣೆಗಾಗಿ ಕಬ್ಬು ಗೆಣಸು, ಎಳ್ಳು-ಬೆಲ್ಲ ಕೊಳ್ಳುತಿದ್ದರು. ಬೆಲೆಗಳು ತುಟ್ಟಿಯಾಗಿದ್ದರೂ ಸಹ ವ್ಯಾಪಾರ ಭರ್ಜರಿಯಾಗಿ ಸಾಗಿತ್ತು. ಅವರೆಕಾಯಿ 30 ರಿಂದ 35ರೂ., ಕಬ್ಬು ಜಲ್ಲೆಗೆ 50 ರಿಂದ 60ರೂ. ವರೆಗೂ ಮಾರಾಟ ನಡೆದಿತ್ತು. ಜನವರಿಯಲ್ಲಿ ಹೂಗಳ ಪೂರೈಕೆ ಕಡಿಮೆಯಿರುವುದರಿಂದ ಹೂವಿನ ಬೆಲೆ ಗಗನಕ್ಕೇರಿತ್ತು. ಕನಕಾಂಬರ, ಮಲ್ಲಿಗೆ ಹೂಗಳು ಮೊಳ 30 ರಿಂದ 40 ರೂ. ಬೆಲೆಯಾಗಿತ್ತು.

ಪಟ್ಟಣದಲ್ಲಿ ಮಹಿಳೆಯರು ಎಳ್ಳು-ಬೆಲ್ಲ ಸಿದ್ದಗೊಳಿಸಿ ಕಬ್ಬಿನ ಜೊತೆಯಲ್ಲಿ ನೀಡುವ ಪದ್ಧತಿಯಿದೆ ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬ ಭಾವನೆಯೊಂದಿಗೆ ನೀಡುವ ಪರಂಪರೆ ನಡೆದು ಬಂದಿದೆ. ಗ್ರಾಮಾಂತರ ಪ್ರದೇಶದಲ್ಲಿ ತಮ್ಮ ನೆಚ್ಚಿನ ಆಕಳುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣಹಚ್ಚಿ ಸಂಭ್ರಮದಿಂದ ಗೋಪೂಜೆ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ರೈತರು ಸಂಕ್ರಾಂತಿಯ ಹಬ್ಬ ಆಚರಿಸಲು ಸಿದ್ಧತೆ ನಡೆಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.

 ಹಲವು ವರ್ಷಗಳ ಹಿಂದೆ ಸಂಕ್ರಾಂತಿಯ ದಿನದಂದು ಎತ್ತುಗಳ ಕೊಂಬುಗಳಿಗೆ ಕುಚ್ಚು ಕಟ್ಟಿ ಓಡಿಸುವ ಸ್ಪರ್ಧೆಗಳು ಎಲ್ಲಾ ಗ್ರಾಮಗಳಲ್ಲಿ ನಡೆಯುತ್ತಿದ್ದವು ಆದರೆ ಇತ್ತೀಚೆಗೆ ಇವುಗಳು ಕಡಿಮೆಯಾಗಿವೆ.

ಸಂಕ್ರಾಂತಿಗೆ ಬೆಲೆ ಏರಿಕೆ ಬಿಸಿ...
ದೇವನಹಳ್ಳಿ: ತಾಲ್ಲೂಕಿನಲ್ಲಿ ಸಂಕ್ರಾಂತಿ ಸಡಗರಕ್ಕೆ ಬೆಲೆ ಏರಿಕೆ ಬಿಸಿ ತುಸು ಚನ್ನಾಗಿಯೇ ತಟ್ಟಿದೆ. ವ್ಯಾಪಾರಿಗಳು ವಾರದಿಂದಲೇ ಇಲ್ಲಿನ ಹಳೆ ಬಸ್ ನಿಲ್ದಾಣದ ರಸ್ತೆ ಬದಿ ಸೇರಿದಂತೆ, ಪ್ರಮುಖ ರಸ್ತೆಗಳಲ್ಲಿ ಹಬ್ಬಕ್ಕೆ ಅಗತ್ಯವಿರುವ ಎಳ್ಳು,ಬೆಲ್ಲ, ಹೂವು, ಹಣ್ಣು, ಕಬ್ಬು, ಸಕ್ಕರೆ ಅಚ್ಚು ಮತ್ತಿತರ ಪದಾರ್ಥಗಳನ್ನು ಮಾರಾಟಕ್ಕೆ ಸಜ್ಜುಗೊಳಿಸಿದ್ದಾರೆ.

 ಆದರಲ್ಲೂ ಹಬ್ಬದ ಮುನ್ನಾ ದಿನವಾದ ಶನಿವಾರ ವ್ಯಾಪಾರ ಚನ್ನಾಗಿ ನಡೆಯಲಿದೆ ಎಂದು ನಿರೀಕ್ಷಿಸಿ ಸರಕುಗಳನ್ನು ಹೆಚ್ಚಿನದಾಗಿಯೇ ತಂದಿದ್ದಾರೆ. ಆದರೆ ಬೆಲೆ ಏರಿಕೆ ಬಿಸಿಯಿಂದ ಸಾಮಾನ್ಯ ವರ್ಗದವರು ಮಾರುಕಟ್ಟೆಯತ್ತ ಸುಳಿಯುವುದು ಕಡಿಮೆಯಾಗಿದೆ.

ಬೇಳೆ ಕಾಳುಗಳು ತರಕಾರಿಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾದರೆ ರೈತರು, ಬಡವರು, ಕಾರ್ಮಿಕರು ಹಬ್ಬ ಆಚರಿಸಲು ಸಾಧ್ಯವೇ, ಮಾರುಕಟ್ಟೆಗಳಲ್ಲಿ ಪದಾರ್ಥಗಳ ಬೆಲೆ ಕೇಳಿದರೆ ಬೆಚ್ಚಿಬೀಳುವಂತಾಗುತ್ತದೆ ಎನ್ನುತ್ತಾರೆ ಗ್ರಾಹಕ ವಿಶ್ವನಾಥಪುರದ ಶಿವರಾಮಯ್ಯ. ಯಲಹಂಕದ ಮಾರುಕಟ್ಟೆಗೂ ಇಲ್ಲಿಗೂ ಹೋಲಿಸಿದರೆ ಬೆಲೆ ಇಲ್ಲಿ ಹೆಚ್ಚಿದೆ. ಯಲಹಂಕ ಮತ್ತು ಕೆ.ಆರ್.ಮಾರ್ಕೆಟ್‌ನಲ್ಲಿ ಕಡಲೇ ಬೀಜದ ಬೆಲೆ ಒಂದು ಕೆ.ಜಿಗೆ 60 ರೂಪಾಯಿ ಇದ್ದರೆ, ಇಲ್ಲಿ 80 ರಿಂದ 90ರೂಪಾಯಿ ಇದೆ.  ಕಬ್ಬಿನ ಒಂದು ಜಲ್ಲೆ 30ರೂ, ಕನಕಾಂಬರ ಕೆ.ಜಿಗೆ 400 ರೂಪಾಯಿ.

ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ರೂ. 800 ತಂದಿದ್ದೆ, 2 ಕೆ.ಜಿ ಅವರೆ ಕಾಯಿಗೆ ರೂ 70 , ರೂ 40ಗೆ ಬಿಳಿ ಎಳ್ಳು ಕೊಂಡಿದ್ದೇನೆ.  ಹೂವಿನ ಬೆಲೆ ಹೆಚ್ಚಿದೆ. ಇದ್ದ ಸ್ವಲ್ಪ ಸ್ವಲ್ಪದರಲ್ಲೇ ಹಬ್ಬ ಆಚರಣೆ ಮಾಡಬೇಕಲ್ಲ ಎನ್ನುತ್ತಾರೆ ಕೂಲಿ ಕಾರ್ಮಿಕ ಮಹಿಳೆ ಲಕ್ಷ್ಮಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT