ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸಂತೆ

Last Updated 13 ಜನವರಿ 2011, 11:15 IST
ಅಕ್ಷರ ಗಾತ್ರ

ವೇಗದ ಬದುಕಿಗೆ ಬ್ರೇಕ್ ಸಿಕ್ಕಂತೆ ಬರುವ ಹಬ್ಬಗಳು ವಿಶಿಷ್ಟ ಹುರುಪು ತುಂಬುತ್ತವೆ. ಹಳೆಯ ಕ್ಯಾಲೆಂಡರ್ ಮೂಲೆಗಿಟ್ಟು, ಹೊಸದನ್ನು ಗೋಡೆಗೇರಿಸಿ ಹಬ್ಬಗಳ ದಿನಾಂಕವನ್ನು ಗುರುತಿಸಿಕೊಳ್ಳುವ ಹೊತ್ತಿಗೇ ಬರುತ್ತದೆ ಸಂಕ್ರಾಂತಿ. ಸಂಕ್ರಾಂತಿಯೊಂದಿಗೆ ಉತ್ತರಾಯಣ ಪುಣ್ಯಕಾಲವನ್ನು ಸ್ವಾಗತಿಸಲು ಸಜ್ಜಾಗುವ ಜನರ ಮೊದಲ ಕೆಲಸ ಶಾಪಿಂಗ್. ಧನುರ್ಮಾಸದಲ್ಲಿ ಒಳ್ಳೆಯ ಕೆಲಸ ಮಾಡಬಾರದು, ಹೊಸದನ್ನು ಖರೀದಿಸಬಾರದು ಎಂದುಕೊಂಡಿದ್ದ ಜನ ‘ಸಂಕ್ರಾಂತಿ’ ಹಬ್ಬ ಹತ್ತಿರವಾಗುತ್ತಿದ್ದಂತೆಯೇ ಅಂಗಡಿ ಮುಂಗಟ್ಟುಗಳ ಬಾಗಿಲಿಗೆ ಬಂದು ನಿಂತುಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರ 8ನೇ ಅಡ್ಡರಸ್ತೆ, ಮಾರುಕಟ್ಟೆ ಪ್ರದೇಶ, ಯಶವಂತಪುರ ಮಾರುಕಟ್ಟೆ, ವಿಜಯನಗರ ಮಾರುಕಟ್ಟೆ, ಗಾಂಧಿ ಬಜಾರು, ಜಯನಗರ 4ನೇ ಬ್ಲಾಕ್, ಕೋರಮಂಗಲಗಳಂತೂ ಹಬ್ಬ ಸಮೀಪಿಸುತ್ತಿದ್ದಂತೆ ಥೇಟ್ ಸಂತೆಯಾಗಿ ಬಿಟ್ಟಿವೆ.ಬಟ್ಟೆ ಅಂಗಡಿಗಳ ಎದುರು ರಿಯಾಯ್ತಿ ಬೋರ್ಡ್ ತಗುಲಿಸಿಕೊಂಡಿವೆ. ಗೃಹೋಪಕರಣ ಮಾರಾಟ ಮಳಿಗೆಗಳು ಅರ್ಧ ಬೆಲೆಯ ಮಾರಾಟ ತಂತ್ರ ಆರಂಭಿಸಿವೆ. ಗ್ರಂದಿಗೆ ಅಂಗಡಿಗಳ ಸಾಲಿನಲ್ಲಿ ಎಳ್ಳು ಬೆಲ್ಲದ ಪೊಟ್ಟಣಗಳ ಸಾಲೂ ಸೇರಿಕೊಳ್ಳುತ್ತಿದೆ. ಜನ ಮತ್ತೆ ಖರೀದಿಯ ಉತ್ಸಾಹಕ್ಕೆ ತೆರೆದುಕೊಳ್ಳುತ್ತಿದ್ದಾರೆ.

ಹೆಣ್ಣು- ಗಂಡು ಸಮಾನ ಸಂತೋಷದಿಂದ ಆಚರಿಸುವ ಹಬ್ಬ ಸಂಕ್ರಾಂತಿ. ಹೆಣ್ಣುಮಕ್ಕಳು ಎಳ್ಳು ಬೀರಲು ಹೊಸ ಉಡುಪು, ಅದಕ್ಕೊಪ್ಪುವ ಅಲಂಕಾರಿಕ  ವಸ್ತುಗಳನ್ನು ಕೊಳ್ಳಲು ಮುಗಿಬಿದ್ದರೆ, ಗಂಡು ಮಕ್ಕಳು ಅದರಲ್ಲೂ ಮನೆಯಲ್ಲಿ ರಾಸುಗಳನ್ನು ಸಾಕಿರುವವರು ಅವುಗಳನ್ನು ಶೃಂಗರಿಸಿ, ತಾವೂ ಹೊಸ ಬಟ್ಟೆ ತೊಟ್ಟು ‘ಕಿಚ್ಚು’ ಹಾಯಿಸಲು ಸಜ್ಜಾಗುತ್ತಿರುತ್ತಾರೆ.

ಈಗಾಗಲೇ ಗೃಹಿಣಿಯರು ಪಟ್ಟು ಸೀರೆಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೆಲವರಿಗೆ ಸರಳತೆಯ ಆಸೆ. ಮತ್ತೆ ಕೆಲವರಿಗೆ ಗಾಢ ಅಲಂಕಾರದ ಅಭಿಲಾಷೆ. ಅದೇನೇ ಇದ್ದರೂ ಹಬ್ಬದ ಸಂಭ್ರಮ ಮಾತ್ರ ಹೊಸಬಟ್ಟೆ ಖರೀದಿಯಲ್ಲಷ್ಟೇ ಮುಗಿಯುವುದಿಲ್ಲ.ಇಂದು ಮಹಾನಗರಗಳ ಮನೆಗಳಲ್ಲಿ ಎಳ್ಳು ಬೆಲ್ಲ ಮಾಡುವ ಸಂಪ್ರದಾಯ ಕಡಿಮೆ. ಅದರಿಂದ ಅದನ್ನು ಂಗಡಿಗಳಲ್ಲಿ ಮಾರಾಟ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಸಂಕ್ರಾಂತಿ ಹಬ್ಬದ ಹಿಂದಿನ ದಿನ ಮಾರುಕಟ್ಟೆ ಪ್ರದೇಶಗಳಲ್ಲಿ ಕಬ್ಬು, ಮಾವು, ಬೇವಿನ ತೋರಣಗಳ ಮಾಲೆ, ಎಳ್ಳುಬೆಲ್ಲ ಮತ್ತು ಸಕ್ಕರೆ ಅಚ್ಚುಗಳ ಖರೀದಿಯ ಭರಾಟೆ ಎದ್ದು ಕಾಣುತ್ತದೆ. ಅಂದು ಹೂವು, ಹಣ್ಣಿನ ಬೆಲೆ ಗಗನಕ್ಕೆ ಏರುವುದಂತೂ ನಿಶ್ಚಿತ. ಅದನ್ನು ಅರಿತು ಕೆಲವರು ವಾರಕ್ಕೆ ಮುಂಚೆಯೇ ಶಾಪಿಂಗ್ ಮುಗಿಸುವುದು ಇದೆ.

ಇದರೊಂದಿಗೆ ಅಂದು ಹೊಸ ಮಡಿಕೆಯಲ್ಲಿಯೇ ಸಿಹಿ ಅಡುಗೆ ಮಾಡಬೇಕೆಂಬ ಸಂಪ್ರದಾಯ ಉಳ್ಳವರು ಮಡಿಕೆ, ಕುಡಿಕೆಗಳಿಗಾಗಿ ಊರೆಲ್ಲಾ ಹುಡುಕುತ್ತಿರುತ್ತಾರೆ. ಈ ಹಬ್ಬದ ವಿಶೇಷ ಎಂದರೆ ಹಬ್ಬದಡುಗೆಯಿಂದ ಜನರಷ್ಟೇ ಅಲ್ಲದೇ ದಾರಿಹೋಕ ಹಸುಗಳೂ ಅಂದು ತೇಗುತ್ತಿರುತ್ತವೆ. ಇನ್ನು ಕೆಲವು ಹೋಟೆಲ್‌ಗಳು ‘ಹಬ್ಬದಡುಗೆ ಊಟದ’ ಬೋರ್ಡ್ ತಗುಲಿಸಿಕೊಂಡು ಮನೆಯಲ್ಲಿ ಹಬ್ಬ ಮಾಡದವರಿಗೆ ಉಣ ಬಡಿಸುತ್ತಿರುತ್ತವೆ.ಆದರೆ ಮಹಾನಗರದಲ್ಲಿ ಹಬ್ಬ ಮಾಡಬೇಕೆಂದರೆ ಜೇಬಿನ ತುಂಬಾ ಮಹಾನ್ ಮೊತ್ತವೇ ಇರಬೇಕು ಬಿಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT