ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸವಿರುಚಿ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ಸುಗ್ಗಿ ಸಮೃದ್ಧಿಯ ಸಂಕೇತದ ಹಬ್ಬ ಸಂಕ್ರಾಂತಿ. ಈ ಹಬ್ಬಕ್ಕೆ ದೇಸೀ ಸೊಗಡಿದೆ. ಸಂಕ್ರಾಂತಿ ಸಂಭ್ರಮದ ಹಬ್ಬ; ಹಾಗೆಯೇ ಹಬ್ಬದ ಆಚರಣೆ ಕೂಡ ವಿಶಿಷ್ಟವಾದದ್ದು. ಸ್ವಂತ ಸ್ಥಳದಿಂದ ದೂರ ಇರುವವರಿಗೆ ಕೆಲವೊಮ್ಮೆ ಕಾರಣಾಂತರಗಳಿಂದ ಹಬ್ಬಕ್ಕೆ ಊರಿಗೆ  ಹೋಗಲಾಗುವುದಿಲ್ಲ. ಅಂತಹವರಿಗೆ ಹಬ್ಬದ ದಿನ ತಮ್ಮೂರಿನ ಮನೆಯ ಸಂಭ್ರಮ, ವಿಶಿಷ್ಟ ಭಕ್ಷ್ಯ ಎಲ್ಲವೂ ನೆನಪಾಗಿ ಮನಸ್ಸು ಸ್ವಲ್ಪ ಕಳವಳಗೊಳ್ಳುತ್ತದೆ. ಹಬ್ಬಕ್ಕೆಂದು ಊರಿಗೆ ಹೋಗಲು ಆಗದವರು ಈ ಬಾರಿ ಚಿಂತಿಸಬೇಕಿಲ್ಲ. ಏಕೆಂದರೆ ನಗರದ ಹಲವು ಹೋಟೆಲ್‌ಗಳು ಸಂಕ್ರಾಂತಿಯನ್ನು ಗ್ರಾಹಕರೊಟ್ಟಿಗೆ ಆಚರಿಸಲು ಸಜ್ಜುಗೊಂಡಿವೆ. ಇಲ್ಲಿ ಹಬ್ಬದ ವಾತಾವರಣ ಸೃಷ್ಟಿಗೊಂಡಿದೆ. ಅಲ್ಲೆಲ್ಲಾ ಹಬ್ಬದ ಖುಷಿ ಅನುಭವಿಸುವುದರ ಜತೆಗೆ, ಭರ್ಜರಿ ಹಬ್ಬದೂಟವನ್ನು ಸವಿಯಬಹುದು. 

ಸಂಕ್ರಾಂತಿ ಪರಿಷೆ
ಬಸವನಗುಡಿಯಲ್ಲಿ ನಡೆವ ಕಡಲೆಕಾಯಿ ಪರಿಷೆ ಇತಿಹಾಸ ಪ್ರಸಿದ್ಧ. ಅದೇ ರೀತಿ ಸಂಕ್ರಾಂತಿ ಹಬ್ಬದಂದು ಸೋಂಪುರ ಬಳಿ ಇರುವ ಚನ್ನವೀರಯ್ಯನಪಾಳ್ಯದಲ್ಲಿ ನಡೆವ ಕಡಲೆಕಾಯಿ ಪರಿಷೆ ಅಷ್ಟೇ ವೈಭವದಿಂದ ನಡೆಯುತ್ತದೆ. ಇಲ್ಲಿ ಭಕ್ತರಿಗೆ ತಿನ್ನುವಷ್ಟು ಗಿಣ್ಣು, ಕಡಲೆಕಾಯಿಯನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಈ ಪರಿಷೆಯ ವಿಶೇಷ ಆಕರ್ಷಣೆ.

ಗ್ರಾಮೀಣ ಪ್ರದೇಶದ ಸೊಗಡನ್ನು ಯುವಜನತೆಗೆ ತಿಳಿಸುವುದು ಈ ಆಚರಣೆಯ ಹಿಂದಿನ ಉದ್ದೇಶ. ಈ ಸಂದರ್ಭದಲ್ಲಿ ಗ್ರಾಮ ದೇವರ ಉತ್ಸವ ಕೂಡ ಅದ್ಧೂರಿಯಾಗಿ ನಡೆಯುತ್ತವೆ. ಪರಿಷೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸುತ್ತಾರೆ.
`ಚೋಳರ ಕಾಲದ ನಂದಿ, ಬಸವಣ್ಣ ದೇವಸ್ಥಾನ ಶಿಥಿಲಗೊಂಡಿದ್ದಾಗ ಸುತ್ತಮುತ್ತಲ ಗ್ರಾಮಸ್ಥರು ಸೇರಿಕೊಂಡು ದೇವಸ್ಥಾನ ಜೀರ್ಣೋದ್ಧಾರ ಮಾಡಿದರು. ಆಗಿನಿಂದಲೂ ಕಡಲೆಕಾಯಿ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ. ಪರಿಷೆಗೆ ಬರುವ ಎಲ್ಲಾ ಭಕ್ತರಿಗೂ ಪೊಂಗಲ್, ಗಿಣ್ಣು, ಕಬ್ಬು, ಬೇಯಿಸಿದ ಕಡಲೆಕಾಯಿ ಮತ್ತು ಗೆಣಸನ್ನು ಉಚಿತವಾಗಿ ವಿತರಿಸಲಾಗುತ್ತದೆ. ಹಾಗೆಯೇ ಮನೆಗೆ ತೆಗೆದುಕೊಂಡು ಹೋಗಲು ಇಷ್ಟಪಡುವವರಿಗೆ ಒಬ್ಬರಿಗೆ ಎರಡು ಸೇರು ಕಡಲೇಕಾಯಿ, ಒಂದು ಜೊಲ್ಲೆ ಕಬ್ಬನ್ನು ಕೇವಲ ರೂ.6ಕ್ಕೆ ನೀಡಲಾಗುತ್ತದೆ~ ಎನ್ನುತ್ತಾರೆ ಉತ್ಸವ ಸಮಿತಿ ಅಧ್ಯಕ್ಷ ರುದ್ರೇಶ್.

ಜನಪದ ಕಲೆಗಳಾದ ಪೂಜಾ ಕುಣಿತ, ಪಟ್ಟದ ಕುಣಿತ, ವೀರಗಾಸೆ, ಕಂಸಾಳೆ, ಡೊಳ್ಳು ಕುಣಿತ, ಕರಡಿ ಕುಣಿತ, ಕೋಲಾಟ, ಭಜನೆ ಜೊತೆಗೆ ಐದು ಗ್ರಾಮಗಳ ದೇವೆತೆಗಳ ಪೂಜಾ ಕುಣಿತ ನಡೆಯಲಿದೆ

ವೈಟ್‌ಫೀಲ್ಡ್ ಎಂಟಿಆರ್
ವೈಟ್‌ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್‌ನಲ್ಲಿರುವ ಎಂಟಿಆರ್ ರೆಸ್ಟೋರಾದಲ್ಲಿ ಹಬ್ಬದ ದಿನ ಬೆಳಗಿನ ಉಪಾಹಾರ ಮಾಡಬಹುದು.

ಇದಕ್ಕೆಂದೇ ವಿಶೇಷವಾದ ಇಡ್ಲಿ ವಡೆ, ರವಾ ದೋಸಾ, ಉತ್ತಪ್ಪ, ಮಸಾಲ ದೋಸಾ, ಕೇಸರಿ ಭಾತ್, ಪೂರಿ, ಬಾದಾಮಿ ಹಲ್ವಾ, ಮತ್ತು ಕಾಫಿ, ಬಾದಾಮಿ ಹಾಲು ನಿಮಗಾಗಿ ಕಾದಿದೆ. ಮಲ್ಲಿಗೆ ಹೂವಿನಂತೆ ಮೃದುವಾಗಿರುವ ಇಡ್ಲಿ ಮತ್ತು ಗರಿಗರಿಯಾದ ವಡೆ ನಾಲಗೆ ರುಚಿ ತಣಿಸಲು ಸಜ್ಜುಗೊಂಡಿವೆ. ನೀವು ನಿಮ್ಮ ಕುಟುಂಬದವರೊಟ್ಟಿಗೆ ಸೇರಿ ಹಬ್ಬದ ಖುಷಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

ಬೆಂಗಳೂರು ಟೆಕ್‌ಪಾರ್ಕ್...
ವಿಶ್ವದರ್ಜೆಯ ಆತಿಥ್ಯ ನೀಡುವ ಬೆಂಗಳೂರು ಟೆಕ್‌ಪಾರ್ಕ್ ಸಂಕ್ರಾಂತಿ ಹಬ್ಬಕ್ಕಾಗಿ ವಿಶೇಷ ಮೆನು ತಯಾರಿಸಿದೆ.

ಗುಜಿಯಾ, ಪಲಕುರಾ ಪಪ್ಪು, ಪರಪು ಉರಂಡೈ ಕಾರಾ ಕೊಜಂಬು, ಬುರೇಲು, ಹೋಳಿಗೆ, ಎಳನೀರು ಪಾಯಸ, ರಾಗಿ ಸುನ್ನದಾಳು ಮೊದಲಾದ ಸ್ವಾದಿಷ್ಟಕರ ತಿನಿಸುಗಳು ವಿಶೇಷ ಮೆನುವಿನಲ್ಲಿ ಸೇರಿಕೊಂಡಿವೆ.
ಸ್ಥಳ; ಸ್ಪೈಸ್ ಇಟ್, ಐಬಿಐಎಸ್ ಬೆಂಗಳೂರು ಟೆಕ್‌ಪಾರ್ಕ್, ಇಂಟೆಲ್ ಕ್ಯಾಂಪಸ್ ಎದುರು, ಸರ್ಜಾಪುರ್ ಹೊರವರ್ತುಲ ರಸ್ತೆ.

ಹಳ್ಳಿಮನೆಯಲ್ಲಿ ಸಂಕ್ರಾಂತಿ... 
ಹೊಸ ಪೀಳಿಗೆಗೂ ಹಬ್ಬ ಹರಿದಿನಗಳ ಆಚರಣೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಮಲ್ಲೇಶ್ವರಂನಲ್ಲಿರುವ ಹಳ್ಳಿಮನೆ ಹೋಟೆಲ್ ಸಜ್ಜುಗೊಂಡಿದೆ. ನಮ್ಮ ಸಂಸ್ಕೃತಿಗೆ ಅನುಗುಣವಾಗಿ  ತಳಿರು-ತೋರಣ, ಬಾಳೆಕಂಬ, ತಿರಿ-ಭತ್ತ, ಕಬ್ಬಿನಜಲ್ಲೆ, ರಂಗೋಲಿ, ಅಕ್ಕಿಮುಡಿ, ದನ-ಕರು ಪೂಜೆ ಪುನಸ್ಕಾರ ಮಾಡಿ ಹಳ್ಳಿಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗುತ್ತದೆ. ಜತೆಗೆ 30 ಬಗೆಯ ಭಕ್ಷ್ಯಗಳನ್ನು ಒಳಗೊಂಡ ಹಬ್ಬದೂಟ ಗ್ರಾಹಕರ ಮನ ತಣಿಸಲಿದೆ.

ಈ ದಿನಗಳಂದು ಹಳ್ಳಿಮನೆಗೆ ಬಂದವರಿಗೆಲ್ಲ ಸುಮಂಗಲಿಯರಿಂದ ಎಳ್ಳು-ಬೆಲ್ಲ ವಿತರಣೆಯೊಂದಿಗೆ ಸ್ವಾಗತಿಸಿ, ಭಾರತೀಯ ಶೈಲಿಯ ಶುಭ್ರ ಉಡುಪು ಧರಿಸಿದ ಸಿಬ್ಬಂದಿ ಹಬ್ಬದೂಟ ಉಣಬಡಿಸಲಿದ್ದಾರೆ.

ಈಗ ಅವರೇಕಾಳಿನ ಸೀಸನ್. ಅದರಲ್ಲೂ ಮಾಗಡಿ ಮಣ್ಣಿನಲ್ಲಿ ಬೆಳೆದ ಅವರೆ ಹೆಸರು ಕೇಳಿದರೆ ಬಾಯಲ್ಲಿ ನೀರೂರುವುದು. ಈ ವಿಶೇಷ ಅವರೆ ಕಾಳಿನ ಉಸುಲಿ, ಅವರೆ ಗಸಿ, ಅವರೆಕಾಳು ಬಾತ್ ಹೀಗೆ ಬಗೆ ಬಗೆಯ ಅವರೆಕಾಳಿನ ಭಕ್ಷ್ಯಗಳು ಹಬ್ಬದೂಟದಲ್ಲಿ ಲಭ್ಯ.

ಇದರ ಜೊತೆಗೆ ಖಾರ ಪೊಂಗಲ್, ಸಿಹಿ ಪೊಂಗಲ್, ಹೋಳಿಗೆ, ರಸಾಯನ ಹೀಗೆ ಸುಮಾರು 30 ಬಗೆಯ ಭಕ್ಷ್ಯಗಳು ಗ್ರಾಹಕರ ಬಾಯಿರುಚಿ ತಣಿಸಲಿವೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಮಾಗಡಿ ಅವರೆಕಾಯಿ ಪರಿಷೆ ಕೂಡ ನಡೆಯಲಿದೆ.

ಹಳ್ಳಿಮನೆಯಲ್ಲಿ ಶನಿವಾರ ಮತ್ತು ಭಾನುವಾರ ವಿಶೇಷ ಹಬ್ಬದೂಟ ಸವಿದು ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಬಹುದು ಎನ್ನುತ್ತಾರೆ ಹಳ್ಳಿಮನೆ ವ್ಯವಸ್ಥಾಪಕ ನಿರ್ದೇಶಕ ನೀಲಾವರ ಸಂಜೀವ ರಾವ್.

ಮಧ್ಯಾಹ್ನ 12ರಿಂದ 3.30 ಮತ್ತು ಸಂಜೆ 7ರಿಂದ ರಾತ್ರಿ 10.30ರವರೆಗೆ ಹಬ್ಬದೂಟವನ್ನು ಸವಿಯಬಹುದು. ಮಾಹಿತಿಗೆ 4113 9523, 99457 61283.

ನಂದನ, ನಂದಿನಿ ಪ್ಯಾಲೇಸ್...
ನಗರದ ಪ್ರತಿಷ್ಠಿತ ಹೋಟೆಲ್‌ಗಳಾದ ಶ್ರೀ ನಂದನ ಪ್ಯಾಲೇಸ್ ಮತ್ತು ಶ್ರೀ ನಂದಿನಿ ಪ್ಯಾಲೇಸ್‌ನಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಬಹುದು.

ಹಬ್ಬದ ಅಂಗವಾಗಿ ಈ ಎರಡು ಹೋಟೆಲ್‌ಗಳು ಸಂಕ್ರಾಂತಿ ಫುಡ್ ಫೆಸ್ಟಿವಲ್ ಆಯೋಜಿಸಿವೆ. ಚೆರುಕಾ ರಸಂ, ಚಕ್ರ ಪೊಂಗಲ್, ಚನ್ನಾ ಕಾರ್ನ್ ಸಲಾಡ್, ಮಸಾಲ ಪೂರಿ, ಗೊಂಗುರ ಪಪ್ಪು, ಕೊಟ್ಟಿಮೀರಾ ಪಚಡಿ, ಪೆರುಗು, ಅಪ್ಪಡಲು, ಅರತಿ ಪಂಡು, ಬೀನ್ಸ್ ಕೊಬ್ಬರಿ ವೆಪುಡು ಮೊದಲಾದ ತಿನಿಸುಗಳು ಗ್ರಾಹಕರ ಬಾಯಿ ರುಚಿ ತಣಿಸಲಿವೆ. ಹಬ್ಬದದೂಟದ ಜತೆಗೆ ಗ್ರಾಹಕರನ್ನು ಖುಷಿಯಾಗಿರಿಸಲು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.  

`ಶ್ರೀ ನಂದನ ಪ್ಯಾಲೇಸ್ ಗ್ರೂಪ್ ಆಫ್ ರೆಸ್ಟೋರೆಂಟ್ ಸಂಕ್ರಾಂತಿ ಹಬ್ಬವನ್ನು ಗ್ರಾಹಕರೊಟ್ಟಿಗೆ ಆಚರಿಸಿಕೊಳ್ಳುತ್ತಿರುವುದಕ್ಕೆ ಸಂತೋಷವೆನಿಸಿದೆ. ಸುಗ್ಗಿ ಹಬ್ಬದ ಖುಷಿಯನ್ನು ಸಂಕ್ರಾಂತಿಯ ವಿಶಿಷ್ಟ ಭಕ್ಷ್ಯಗಳೊಂದಿಗೆ ಆಚರಿಸಲಾಗುವುದು~ ಎನ್ನುತ್ತಾರೆ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ರವಿಚಂದರ್.

ರಾಜಾಜಿನಗರ, ಕಮ್ಮನಹಳ್ಳಿ, ಇಂದಿರಾನಗರ, ದೊಮ್ಮಲೂರು ಮತ್ತು ಕೋರಮಂಗಲದಲ್ಲಿರುವ ಹೋಟೆಲ್‌ಗಳಲ್ಲಿ ಶನಿವಾರ ಮತ್ತು ಭಾನುವಾರ (ಮಧ್ಯಾಹ್ನದ ಊಟ ಮಾತ್ರ) ಆಹಾರೋತ್ಸವ ನಡೆಯಲಿದೆ. ಮಾಹಿತಿಗೆ: 2335 0055.

ಜಾನುವಾರು ಸ್ಪರ್ಧೆ
ಸಂಕ್ರಾಂತಿಯ ಗ್ರಾಮೀಣ ಸೊಗಡನ್ನು ನಗರವಾಸಿಗಳಿಗೆ ಪರಿಚಯಿಸುವ ಸಲುವಾಗಿ ಸಾಯಿಗೋಲ್ಡ್ ಪ್ಯಾಲೆಸ್ ಶನಿವಾರ ಸಂಕ್ರಾಂತಿ ಆಚರಣೆ ಹಾಗೂ ಜಾನುವಾರುಗಳ ಸೌಂದರ್ಯ ಸ್ಪರ್ಧೆ ಏರ್ಪಡಿಸಿದೆ.

ವಿಭಿನ್ನವಾಗಿ ಅಲಂಕೃತಗೊಂಡಿರುವ ಜಾನುವಾರುಗಳಿಗೆ ಬಹುಮಾನವಾಗಿ ರೂ.10 ಸಾವಿರ ನೀಡಲಿದೆ. ನಂತರ ಜಾನುವಾರುಗಳಿಂದ ಕಿಚ್ಚು ಹಾಯಿಸಲಾಗುವುದು.
ಸ್ಥಳ: ನೆಟ್ಟಕಲ್ಲಪ್ಪ ವೃತ್ತದ ಮೈದಾನ, ಬಸವನಗುಡಿ, ಸಂಜೆ 4.

ಸೌತ್ ಇಂಡೀಸ್...
ಸಂಕ್ರಾಂತಿಯನ್ನು ಸೌತ್‌ಇಂಡೀಸ್ ಹೋಟೆಲ್‌ನಲ್ಲಿ ಆಚರಿಸುವುದಕ್ಕೆ ವಿಶೇಷ ಕಾರಣವಿದೆ. ಹಬ್ಬದ ಅಂಗವಾಗಿ ಖ್ಯಾತ ಬಾಣಸಿಗ ಸುರೇಶ್ ಪಾಂಡಿಯನ್ ದಕ್ಷಿಣ ಭಾರತದ ವಿಶೇಷ ತಿನಿಸುಗಳನ್ನು ತಯಾರಿಸಿದ್ದಾರೆ.

ಹಬ್ಬಕ್ಕೆಂದು ರೆಸ್ಟೊರಾವನ್ನು ಬಾಳೆಕಂಬ, ಕಬ್ಬು, ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ ಆಕರ್ಷಕವಾಗಿ ಸಿಂಗರಿಸಲಾಗಿದೆ. ತಕ್ಕಲಿ ಪಚಡಿ, ಮೊಚಾಯ್ ಮುರುಂಗೈ ಮಂಡಿ, ಫೊರಿಚಾ ಕೊಜಂಬು, ತಟ್ಟಾ ಪಯ್ಯರ್ ಕೊಜಂಬು, ಪೋಡಿ ಸಾಧಂ, ಧನಿಯಂ ಸಾಧಂ,  ಪೊಂಗಲ್, ವಿಶಿಷ್ಟ ರುಚಿಯ ಪಾಯಸ ಮೊದಲಾದವು ಗ್ರಾಹಕರ ಬಾಯಿರುಚಿ ತಣಿಸಲಿವೆ. ಈ ವಿಶಿಷ್ಟ ತಿನಿಸುಗಳು ಶನಿವಾರ ಮತ್ತು ಭಾನುವಾರ ಮಾತ್ರ ಲಭ್ಯ.
ಸ್ಥಳ: ಸೌತ್ ಇಂಡೀಸ್, 840/ಎ, 100 ಅಡಿ ರಸ್ತೆ, ಇಂದಿರಾನಗರ. ಮಾಹಿತಿಗೆ: 4163 6363, 4163 6362. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT