ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ರಾಷ್ಟ್ರೀಯ ಸುದ್ದಿ

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಮತ್ತೆ ಅಣ್ಣಾ ಉಪವಾಸ
ನವದೆಹಲಿ (ಪಿಟಿಐ):
ಜನಲೋಕಪಾಲ ಮಸೂದೆಯ ಜಾರಿಗೆ ಆಗ್ರಹಿಸಿ ಆಕ್ಟೋಬರ್‌ನಿಂದ ದೆಹಲಿಯಲ್ಲಿ ಮತ್ತೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಸಿದ್ದಾರೆ.

2011ರಲ್ಲಿ ಜನಲೋಕಪಾಲ ಮಸೂದೆಯನ್ನು ಅಂಗೀಕರಿಸುವುದಾಗಿ ನೀಡಿದ ಭರವಸೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಉಳಿಸಿಕೊಂಡಿಲ್ಲ. ಆದ್ದರಿಂದ ಉಪವಾಸ ಕೈಗೊಳ್ಳುವುದಾಗಿ ಶನಿವಾರ ಪತ್ರದ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.

ಎಲ್‌ಪಿಜಿ ಸಬ್ಸಿಡಿ ಹೊರೆ ಕಡಿತ
ಹೈದರಾಬಾದ್ (ಪಿಟಿಐ):
ಅಡುಗೆ ಅನಿಲ (ಎಲ್‌ಪಿಜಿ) ದುರ್ಬಳಕೆಯನ್ನು ತಡೆಯಲು ಜಾರಿ ಮಾಡಿದ `ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ' ಕಾರ್ಯಕ್ರಮದಿಂದ ಕೇಂದ್ರದ ಮೇಲಿದ್ದ ಸಬ್ಸಿಡಿ ಹೊರೆಯು ರೂ1.61 ಲಕ್ಷ ಕೋಟಿಗಳಿಂದ 97 ಸಾವಿರ ಕೋಟಿಗೆ ಇಳಿಯುವ ನಿರೀಕ್ಷೆ ಇದೆ. ಈಗ ನೇರ ಹಣ ವರ್ಗಾವಣೆ ಯೋಜನೆಯನ್ನು ಜಾರಿ ಮಾಡುತ್ತಿರುವುದರಿಂದ ಸರ್ಕಾರದ ಮೇಲಿನ ಸಬ್ಸಿಡಿ ಹೊರೆ ಇನ್ನಷ್ಟು ತಗ್ಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವೆ ಪನಬಾಕ ಲಕ್ಷ್ಮಿ ತಿಳಿಸಿದ್ದಾರೆ.

`ಅಂಚೆ ಕಚೇರಿಗಳ ಆಧುನೀಕರಣ'
ವಿಶಾಖಪಟ್ಟಣ (ಪಿಟಿಐ):
ಗ್ರಾಹಕರಿಗೆ ಒದಗಿಸುವ ಸೇವೆಗಳ ಸುಧಾರಣೆ ಮತ್ತು ಖಾಸಗಿ ಕೊರಿಯರ್ ಕಂಪೆನಿಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುವ ರೀತಿಯಲ್ಲಿ ದೇಶದ ಎಲ್ಲಾ ಅಂಚೆ ಕಚೇರಿಗಳನ್ನು ಆಧುನೀಕರಣಗೊಳಿಸಲಾಗುವುದು ಎಂದು ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವೆ ಕಿಲ್ಲಿ ಕೃಪಾರಾಣಿ ತಿಳಿಸಿದರು.

ರಕ್ಷಣಾ ಖರೀದಿ: ಹೊಸ ನೀತಿ ಜಾರಿ
ನವದೆಹಲಿ (ಪಿಟಿಐ):
ಅತಿಗಣ್ಯರ ಹೆಲಿಕಾಪ್ಟರ್ ಖರೀದಿಯಂತಹ ಹಗರಣಗಳ ಹಿನ್ನೆಲೆಯಲ್ಲಿ ಸೇನೆಗೆ ಅಗತ್ಯವಾದ ಉಪಕರಣಗಳ ಖರೀದಿಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ರೂಪಿಸಲಾಗಿರುವ ಹೊಸ ರಕ್ಷಣಾ ಖರೀದಿ ನೀತಿ ಶನಿವಾರದಿಂದ ಜಾರಿಗೆ ಬಂದಿದೆ.

ಆಂಧ್ರ ಆರೋಗ್ಯ ಸಚಿವ ವಜಾ
ಹೈದರಾಬಾದ್ (ಪಿಟಿಐ):
ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸಿದ್ದ ಆರೋಗ್ಯ ಸಚಿವ ಡಿ.ಎಲ್. ರವೀಂದ್ರ ರೆಡ್ಡಿ ಅವರನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಸಂಪುಟದಿಂದ ವಜಾ ಮಾಡಿದ್ದಾರೆ.

ಪತ್ನಿ ಪರ ನಿಂತ ಕರುಣಾನಿಧಿ
ಚೆನ್ನೈ (ಪಿಟಿಐ):
2ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆಗೆ ಸಂಬಂಧಿಸಿದಂತೆ ತಮ್ಮ ಪತ್ನಿ ದಯಾಳು ಅಮ್ಮಾಳ್ ಅವರ ವೈಯಕ್ತಿಕ ಹಾಜರಾತಿಗೆ ವಿನಾಯಿತಿ ಪಡೆಯುವ ಕುರಿತು ವಕೀಲರ ಸಲಹೆ ಕೇಳಲಾಗುವುದು ಎಂದು ಡಿಎಂಕೆ ಅಧ್ಯಕ್ಷ ಕರುಣಾನಿಧಿ ಹೇಳಿದ್ದಾರೆ.

ಚೌಹಾಣ್ ಪ್ರಶಂಸಿದ ಅಡ್ವಾಣಿ
ಗ್ವಾಲಿಯರ್ (ಪಿಟಿಐ):
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರಂತೆ ತುಂಬಾ ಸಾಧು ಸ್ವಭಾವದ ವ್ಯಕ್ತಿ. ಚೌಹಾಣ್ ಮತ್ತು ನರೇಂದ್ರ ಮೋದಿ ಅವರು ಸೇರಿಕೊಂಡು ಭಾರತಕ್ಕೆ ವಿಶ್ವದಲ್ಲಿ ಉತ್ತಮ ಸ್ಥಾನ ಕಲ್ಪಿಸಬೇಕೆಂಬುದು ಬಿಜೆಪಿ ಆಶಯವಾಗಿದೆ ಎಂದು ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.

ದತ್‌ಗೆ ಚೀಲ ಮಾಡುವ ಕಾಯಕ
ಪುಣೆ (ಪಿಟಿಐ):
ಇಲ್ಲಿನ ಯೆರವಡಾ ಜೈಲಿನಲ್ಲಿರುವ ಬಾಲಿವುಡ್ ನಟ ಸಂಜಯ್ ದತ್‌ಗೆ ಕಾಗದದ ಚೀಲ ತಯಾರಿಸುವ ಕೆಲಸ ವಹಿಸಲಾಗಿದೆ. ಇದಕ್ಕಾಗಿ ಅವರಿಗೆ ದಿನಕ್ಕೆರೂ25 ಕೂಲಿ ದೊರೆಯುವ ಸಾಧ್ಯತೆ ಇದೆ.

ಸಾಕ್ಷಿ ಹಾಜರಿ: `ಸುಪ್ರೀಂ' ಹಸ್ತಕ್ಷೇಪವಿಲ್ಲ
ನವದೆಹಲಿ (ಐಎಎನ್‌ಎಸ್):
ವಿಶೇಷ ಪ್ರಕರಣಗಳನ್ನು ಹೊರತುಪಡಿಸಿದರೆ ಸಾಮಾನ್ಯವಾಗಿ ಪ್ರಾಸಿಕ್ಯೂಷನ್ ಹಾಜರುಪಡಿಸುವ ಸಾಕ್ಷಿಗಳ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

`ನ್ಯಾಯಾಲಯಕ್ಕೆ ಸಲ್ಲಿಸಲಾದ ಸಾಕ್ಷಿಗಳ ಪಟ್ಟಿಯಲ್ಲಿ ಇರುವವರೆಲ್ಲರನ್ನೂ ಸಾಕ್ಷಿ ಹೇಳಲು ಕರೆಯಿಸಬೇಕು ಎಂದೇನಿಲ್ಲ. ಸಾಕ್ಷಿಗಳ ಹೇಳಿಕೆಗಳು ಪುನರಾವರ್ತನೆಯಾಗುವಂತಹ ಸಂದರ್ಭದಲ್ಲಿ ಪ್ರಾಸಿಕ್ಯೂಟರ್ ತಮ್ಮ ವಿವೇಚನೆಯನ್ನು ಬಳಸಿ ಕೆಲವು ಸಾಕ್ಷಿಗಳ ಹೇಳಿಕೆಯನ್ನು ಪಡೆಯದೆ ಇರಬಹುದು' ಎಂದು ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಮತ್ತು ದೀಪಕ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದೆ.

ಶಿರಡಿಗೆ ರಾಷ್ಟ್ರಪತಿ ಪ್ರಣವ್ ಭೇಟಿ
ಶಿರಡಿ, ಮಹಾರಾಷ್ಟ್ರ (ಪಿಟಿಐ):
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಇಲ್ಲಿನ ಸಾಯಿಬಾಬಾ ದೇವಸ್ಥಾನಕ್ಕೆ  ಶನಿವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ರಾಜ್ಯಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಸಾಯಿಬಾಬಾ ದೇವಸ್ಥಾನದಲ್ಲಿ 15 ನಿಮಿಷಗಳ ಕಾಲ ಇದ್ದರು. ರಾಷ್ಟ್ರಪತಿ ಭೇಟಿ ನಿಮಿತ್ತ ದೇವಸ್ಥಾನದ ಸುತ್ತಮುತ್ತ ಬಿಗಿಭದ್ರತೆ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT