ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷಿಪ್ತ ರಾಷ್ಟ್ರೀಯ ಸುದ್ದಿಗಳು

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ರಾಯಭಾರಿಗೆ ನಿರ್ಬಂಧ:  ಆದೇಶ ರದ್ದುಗೊಳಿಸಿದ ಸುಪ್ರೀಂ
ನವದೆಹಲಿ (ಪಿಟಿಐ): ಕೇರಳದ ಇಬ್ಬರು ಮೀನುಗಾರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿ ರಾಯಭಾರಿ ಡೇನಿಯಲ್ ಮನ್ಸಿನಿ, ಭಾರತ ಬಿಟ್ಟು ಹೋಗಬಾರದು ಎಂದು ತಾನು ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ಮಂಗಳವಾರ ತೆರವುಗೊಳಿಸಿದೆ. ನಿರ್ಬಂಧ ತೆರವುಗೊಳಿಸಿ ಆದೇಶ ಹೊರಡಿಸಿದ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ನ್ಯಾಯಪೀಠ,  ಪ್ರಕರಣದ ವಿಚಾರಣೆಗೆ ಶೀಘ್ರ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.

ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ಸೋಮವಾರ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾವಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶೇಷ ಅನುಮತಿ ಮೇಲೆ ತಾಯ್ನಾಡಿಗೆ ತೆರಳಿದ್ದ ನೌಕಾಪಡೆಯ ಯೋಧರಾದ ಮ್ಯಾಸಿಮಿಲಿಯಾನೊ ಲಾಟ್ಟೊರೆ ಮತ್ತು ಸಾಲ್ವಟೋರ್ ಗಿರ್ಯೋನೆ ಅವರನ್ನು ಪುನಃ ಭಾರತಕ್ಕೆ ಕಳುಹಿಸಲು ಇಟಲಿ ನಿರಾಸಕ್ತಿ ತೋರಿತ್ತು. ಉಭಯದೇಶಗಳ ನಡುವೆ ರಾಜತಾಂತ್ರಿಕ ಸಂಘರ್ಷ ಉದ್ಭವಿಸಿದಾಗ ಮಧ್ಯಪ್ರವೇಶಿಸಿದ್ದ ಸುಪ್ರೀಂಕೋರ್ಟ್, ಭಾರತದಲ್ಲಿರುವ ಇಟಲಿ ರಾಯಭಾರಿ ದೇಶ ಬಿಟ್ಟು ತೆರಳದಂತೆ ಮಾರ್ಚ್ 14ರಂದು ನಿರ್ಬಂಧ ವಿಧಿಸಿತ್ತು.

ಪಂಜಾಬ್ ಮಾದಕ ವಸ್ತು ಜಾಲ: ಪ್ರಕರಣ ದಾಖಲು
ನವದೆಹಲಿ/ಚಂಡೀಗಡ (ಪಿಟಿಐ): ಪಂಜಾಬ್ ಮಾದಕ ವಸ್ತು ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಗಳ ವಿರುದ್ಧ ಮಂಗಳವಾರ ಅಕ್ರಮ ಹಣ ಚಲಾವಣೆ ಪ್ರಕರಣ ದಾಖಲಿಸಿಕೊಂಡಿದೆ.

`ಅಕ್ರಮ ಹಣ ಚಲಾವಣೆ ನಿಗ್ರಹ ಕಾಯಿದೆ' ಅಡಿ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ., ಮಾದಕ ವಸ್ತು ಜಾಲದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿಚಾರಣೆ ನಡೆಸಲಿದೆ. ಜತೆಗೆ ಹಣಕಾಸಿನ ವಹಿವಾಟು ಮತ್ತು ಬ್ಯಾಂಕ್ ಮೂಲಕ ನಡೆದಿರಬಹುದಾದ ಹಣಕಾಸಿನ ವರ್ಗಾವಣೆಯ ಜಾಡು ಹಿಡಿದು ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದು ಶಂಕಿಸಲಾಗಿರುವ ಈ ಪ್ರಕರಣದ ಹಿಂದೆ ಹವಾಲಾ ಮೂಲಕ ದೇಶ- ವಿದೇಶಗಳಲ್ಲಿ ಅಕ್ರಮವಾಗಿ ಹಣ ಚಲಾವಣೆ ನಡೆದಿರುವ ಸಾಧ್ಯತೆ ಇದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.

ತ್ವರಿತಗತಿ ಕೋರ್ಟ್ ಸ್ಥಾಪನೆಗೆ ಪರಿಶೀಲನೆ
ನವದೆಹಲಿ (ಪಿಟಿಐ):
ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಜೈಲು ಸೇರಿರುವ ಅಮಾಯಕ ಮುಸ್ಲಿಂ ಯುವಕರ ವಿರುದ್ಧದ ಪ್ರಕರಣಗಳ  ಇತ್ಯರ್ಥಕ್ಕೆ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ಈ ಸಂಬಂಧ ತಮ್ಮನ್ನು ಭೇಟಿ ಮಾಡಿದ ಸಿಪಿಐ ಮುಖಂಡ ಎ.ವಿ. ಬರ್ಧನ್ ನೇತೃತ್ವದ ಸಂಸದರು ಮತ್ತು ರಾಜಕೀಯ ನಾಯಕರ ನಿಯೋಗದೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು, `ನಿಯೋಗದ ಬೇಡಿಕೆಯನ್ನು ಪರಿಶೀಲಿಸಲಾಗುವುದು' ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಸಚಿವ ಕೆ. ರೆಹಮಾನ್ ಖಾನ್ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದ ಶಿಂಧೆ, ಅಮಾಯಕ ಮುಸ್ಲಿಂ ಯುವಕರ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಗೃಹ ಸಚಿವಾಲಯ ಬಲವಾಗಿ ಬೆಂಬಲಿಸಲಿದೆ ಎಂದು ತಿಳಿಸಿದ್ದರು.

ಅಮಾಯಕರ ಬಿಡುಗಡೆಗೆ ಯತ್ನ: `ತಪ್ಪು ಮಾಡದಿದ್ದರೂ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಮಾಯಕರನ್ನು ಬಿಡುಗಡೆ ಮಾಡಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುವುದು' ಎಂದು ಗೃಹ ಖಾತೆಯ ರಾಜ್ಯ ಸಚಿವ ಆರ್.ಪಿ.ಎನ್. ಸಿಂಗ್ ತಮ್ಮನ್ನು ಭೇಟಿ ಮಾಡಿದ ಮುಸ್ಲಿಂ ಸಂಸದರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಪತ್ರಕರ್ತ ಮತಿವುರ್ ರೆಹಮಾನ್ ಸಿದ್ಧಿಕಿ ಹಾಗೂ ಡಿಆರ್‌ಡಿಒ ವಿಜ್ಞಾನಿ ಅಜೀಜ್ ಅಹಮದ್ ಮಿರ್ಜಾ ಅವರನ್ನು ಭಯೋತ್ಪಾದನಾ ಆರೋಪದ ಅಡಿ ಬೆಂಗಳೂರು ಪೊಲೀಸರು ಬಂಧಿಸಿದ್ದರು. ಈ ಇಬ್ಬರ ವಿರುದ್ಧ ಯಾವುದೇ ಸಾಕ್ಷ್ಯ ಲಭಿಸದ ಕಾರಣ ಎನ್‌ಐಎ ಆರು ತಿಂಗಳ ನಂತರ ಅವರನ್ನು ದೋಷಮುಕ್ತಗೊಳಿಸಿತ್ತು.

ಹೆಣ್ಣುಶಿಶು ತೊರೆಯುವ ಪಾಲಕರ ಮೇಲೆ ಸಿಸಿಟಿವಿಕಣ್ಣು!
ಶ್ರೀನಗರ (ಐಎಎನ್‌ಎಸ್):
ಪಾಲಕರು ತಮ್ಮ ಹೆಣ್ಣುಶಿಶುಗಳನ್ನು ತೊರೆದು ಹೋಗುವುದನ್ನು ನಿಯಂತ್ರಿಸಲು ಕಾಶ್ಮೀರ ಕಣಿವೆಯ  ಅತಿದೊಡ್ಡ  ಮಕ್ಕಳ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಹಾಗೂ ಹೊರರೋಗಿ ವಿಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅವಡಿಸಲಾಗಿದೆ.

ಕಳೆದ ಎಂಟು ತಿಂಗಳುಗಳಲ್ಲಿ ಜಿ.ಬಿ. ಪಂತ್ ಮಕ್ಕಳ ಆಸ್ಪತೆಯಲ್ಲಿ ದಾಖಲಾಗಿದ್ದ 12 ಮಹಿಳೆಯರು ತಮ್ಮ ಹೆಣ್ಣು ಶಿಶುಗಳನ್ನು ಬಿಟ್ಟು ಹೋಗಿದ್ದಾರೆ ಎಂದು   ಆಸ್ಪತ್ರೆಯ ಮೇಲ್ವಿಚಾರಕ ಮುನೀರ್ ಮಸೂದಿ ಸುದ್ದಿಗಾರರಿಗೆ ಹೇಳಿದ್ದಾರೆ.

`ಹೆಣ್ಣು ಶಿಶುಗಳನ್ನು ಬಿಟ್ಟು ಹೋಗುತ್ತಿರುವುದು ಪ್ರಮುಖ ಸಮಸ್ಯೆಯಾಗಿದೆ. ನಿರ್ದಯಿ ಪಾಲಕರು ಕಳೆದ ಎಂಟು ತಿಂಗಳುಗಳಲ್ಲಿ    12 ಹೆಣ್ಣು ಮಕ್ಕಳನ್ನು ತೊರೆದು ಹೋಗಿದ್ದಾರೆ. ಇದನ್ನು ನಿಯಂತ್ರಿಸಲು ಆಸ್ಪತ್ರೆ ವಾರ್ಡ್‌ಗಳಲ್ಲಿ ಹಾಗೂ ಹೊರರೋಗಿ ವಿಭಾಗದಲ್ಲಿ ನಾವು 51 ಸಿಸಿಟಿವಿಗಳನ್ನು ಅಳವಡಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.

ಸೌದಿಯಲ್ಲಿ ಹೊಸ ಉದ್ಯೋಗ ನೀತಿ ಭಾರತೀಯರು ಅತಂತ್ರ
ತಿರುವನಂತಪುರ/ನವದೆಹಲಿ(ಐಎಎನ್‌ಎಸ್):
ಸೌದಿ ಅರೇಬಿಯಾ ಸರ್ಕಾರದ `ಹೊಸ ಉದ್ಯೋಗ ನೀತಿ'ಯಿಂದಾಗಿ ಉದ್ಯೋಗನಿರತ ಸಹಸ್ರಾರು ಭಾರತೀಯರ ಬದುಕು ಬೀದಿಗೆ ಬಿದ್ದಿದೆ.

ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಸಲುವಾಗಿ ಸೌದಿ ಅರೇಬಿಯಾ ಸರ್ಕಾರ ಹೊಸ ವೃತ್ತಿ ನೀತಿಯನ್ನು ಅನುಷ್ಠಾನಗೊಳಿಸಿದ್ದು, ಇದು ಸಹಸ್ರಾರು ಭಾರತೀಯರು ಅದರಲ್ಲೂ ಬಹುಸಂಖ್ಯೆಯ ಕೇರಳಿಗರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಸೆಟ್‌ಟಾಪ್ ಬಾಕ್ಸ್ ಅಳವಡಿಕೆಗೆ ಗಡುವು ವಿಸ್ತರಣೆ
ನವದೆಹಲಿ (ಪಿಟಿಐ):
ದೇಶದ ನಗರ ಪ್ರದೇಶಗಳ 1.6 ಕೋಟಿ ಮನೆಗಳ ಪೈಕಿ ಶೇ 25ರಷ್ಟು ಮನೆಗಳಲ್ಲಿ ಇನ್ನೂ ಸೆಟ್‌ಟಾಪ್ ಬಾಕ್ಸ್ ಅಳವಡಿಸದ ಕಾರಣ, ಕೇಂದ್ರ ಸರ್ಕಾರ ಸೆಟ್‌ಟಾಪ್ ಬಾಕ್ಸ್ ಅಳವಡಿಕೆಗೆ ನಿಗದಿಪಡಿಸಿದ್ದ ಗಡುವನ್ನು ಇನ್ನೂ ಹದಿನೈದು ದಿನಗಳ ಕಾಲ ವಿಸ್ತರಿಸಿದೆ.

ವಾಸ್ತವ ಸ್ಥಿತಿ ಅರಿತು ಜನರಿಗೆ ತೊಂದರೆ ನೀಡದಿರಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಉದಯ್‌ಕುಮಾರ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT