ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ಷೀಪ್ತ ಸುದ್ಧಿ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೆಲಿಕಾಪ್ಟರ್ ಅಪಘಾತ: 4 ಸಾವು
ಬೀಜಿಂಗ್ (ಐಎಎನ್‌ಎಸ್):
ಪೊಲೀಸ್ ಹೆಲಿಕಾಪ್ಟರ್ ಒಂದು ಅಪಘಾತಕ್ಕೆ ಒಳಗಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಒಟ್ಟು ಐವರು ಈ ಕಾಪ್ಟರ್‌ನಲ್ಲಿದ್ದು, ಒಬ್ಬನನ್ನು ಅಫಘಾತ ಸಂಭವಿಸಿದ ಕೂಡಲೇ ರಕ್ಷಿಸಲಾಗಿದೆ.

ಬಿರುಗಾಳಿಗೆ ಐವರು ಬಲಿ
ಬ್ರಸೆಲ್ಸ್, ಬೆಲ್ಜಿಯಂ (ಎಎಫ್‌ಪಿ):
ಹೊರಾಂಗಣದಲ್ಲಿ ಆಯೋಜಿಸಲಾದ ರಾಕ್ ಸಂಗೀತೋತ್ಸವದ ಸಂದರ್ಭದಲ್ಲಿ ಬೀಸಿದ ಬಿರುಗಾಳಿಗೆ ಐವರು ಬಲಿಯಾದ ಘಟನೆ ಗುರುವಾರ ಸಂಜೆ ಜರುಗಿದೆ. ಹೆಸ್ಸೆಲ್ಟ್ ಪಟ್ಟಣದ ಬಳಿ ಕೀವಿಟ್‌ಲ್ಲಿ ಆಯೋಜಿತವಾಗಿದ್ದ ಸಂಗೀತ ಮೇಳದಲ್ಲಿ ಸಾವಿರಾರು ಜನರು ಸೇರಿದ್ದಾಗ ಈ ಘಟನೆ ನಡೆದಿದೆ. ಬಿರುಗಾಳಿಯ ರಭಸಕ್ಕೆ ಎರಡು ವೇದಿಕೆಗಳು ಮುರಿದುಬಿದ್ದಿದ್ದು, ಮರಗಿಡಗಳು ಬುಡ ಮೇಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕ  ಪ್ರಜೆ ಬಿಡುಗಡೆಗೆ ತಾಕೀತು
ಇಸ್ಲಾಮಾಬಾದ್ (ಐಎಎನ್‌ಎಸ್):
ಲಾಹೋರ್‌ನಿಂದ ಅಪಹರಣಕ್ಕೊಳಗಾಗಿರುವ ತನ್ನ ಪ್ರಜೆಯ ಸುರಕ್ಷತೆ ಬಗ್ಗೆ ಖಚಿತಪಡಿಸುವಂತೆ ಪಾಕ್‌ಗೆ ಅಮೆರಿಕ ತಾಕೀತು ಮಾಡಿದೆ.

ಲಾಹೋರ್‌ನಲ್ಲಿ ವಾಸವಾಗಿದ್ದ ಪ್ರೊ. ವಾರೆನ್ ವೆನ್‌ಸ್ಟೇನ್ ಆ.13ರಂದು ತಮ್ಮ ಮನೆಯಿಂದ ಕಣ್ಮರೆಯಾಗಿದ್ದರು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಈ ಬಗ್ಗೆ ವಿಚಾರಿಸಿದ್ದಾರೆ.

ಕಕ್ಷೆ ಸೇರದ ಚೀನಾ ಉಪಗ್ರಹ
ಬೀಜಿಂಗ್ (ಐಎಎನ್‌ಎಸ್):
ಕ್ಷಿಪಣಿ ಉಡಾವಣಾ ನಿರ್ವಹಣೆಯಲ್ಲಿ ಕಂಡುಬಂದ ದೋಷದ ಪರಿಣಾಮ ಚೀನಾದ ಎಸ್‌ಜೆ-11-04 ಉಪಗ್ರಹ ಉದ್ದೇಶಿತ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.

`ಗಾನ್ಸು ಪ್ರಾಂತ್ಯದಿಂದ ಬುಧವಾರ ಸಂಜೆ 5.28ಕ್ಕೆ ಉಪಗ್ರಹವನ್ನು ಮೇಲಕ್ಕೆ ಹಾರಿಬಿಡಲಾಗಿತ್ತು. ಅದನ್ನು ಹೊತ್ತೊಯ್ಯುವ ಲಾಂಗ್‌ಮಾರ್ಚ್ 2-ಸಿ ಕ್ಷಿಪಣಿ ನಿರ್ವಹಣೆಯಲ್ಲಿ ದೋಷ ಎಸಗಿದ್ದರಿಂದ ಈ ಪ್ರಮಾದ ಸಂಭವಿಸಿದೆ. ಇದೇ ಮೊದಲ ಬಾರಿಗೆ ಲಾಂಗ್‌ಮಾರ್ಚ್ 2-ಸಿ ಕ್ಷಿಪಣಿ ಕಾರ್ಯಾಚರಣೆ ವೈಫಲ್ಯ ಅನುಭವಿಸಿದೆ~ ಎಂದು ಬೀಜಿಂಗ್ ನ್ಯೂಸ್ ಪ್ರಕಟಿಸಿದೆ.

ಯುದ್ಧ ವಿಮಾನ ಪ್ರದರ್ಶನ: ಭಾರತವೂ ಭಾಗಿ
ಕೊಲಂಬೊ (ಐಎಎನ್‌ಎಸ್):
ಈ ತಿಂಗಳ 22ರಿಂದ ಇಲ್ಲಿನ ರತ್‌ಮಲಾನಾ ವಿಮಾನ ನಿಲ್ದಾಣದಲ್ಲಿ ನಡೆಯುವ ಅಮೆರಿಕ ಹಾಗೂ ಶ್ರೀಲಂಕಾ ವಾಯು ಪಡೆಗಳ ಯುದ್ಧ ವಿಮಾನ ಪ್ರದರ್ಶನದಲ್ಲಿ ಭಾರತ ಸಹ ಭಾಗವಹಿಸಲಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸಂಜಾತನಿಗೆ ಶಿಕ್ಷೆ
ಮೆಲ್ಬರ್ನ್ (ಪಿಟಿಐ):
ವಲಸೆ ಅಧಿಕಾರಿ ಎಂದು ಹೇಳಿಕೊಂಡು ವಿದ್ಯಾರ್ಥಿನಿಯಿಂದ ಹಣ ಸುಲಿಗೆ ಮಾಡಿದ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಆಸ್ಟ್ರೇಲಿಯಾದ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯನ್ನು ಜಸ್ಬೀರ್ ಸಿಂಗ್ ಎನ್ನಲಾಗಿದ್ದು ಈತ ತಾನು ವಲಸೆ ಅಧಿಕಾರಿ ಎಂದು ಹೇಳಿ, 2009ರಲ್ಲಿ ವಿದ್ಯಾರ್ಥಿನಿಯಿಂದ ಪಾಸ್‌ಪೋರ್ಟ್, ಹಣಕಾಸಿನ ವಿವರ ಪತ್ರ ಸೇರಿದಂತೆ 2,300 ಡಾಲರ್ ಹಣವನ್ನು ಬಲತ್ಕಾರವಾಗಿ ವಸೂಲಿ ಮಾಡಿದ ಆರೋಪವಿತ್ತು. ಈ ಬಗ್ಗೆ ವಿಚಾರಣೆ ಮಾಡಿದ ವಿಕ್ಟೋರಿಯನ್ ಕೌಂಟಿ ಕೋರ್ಟ್ ಜಸ್ಬೀರ್‌ಗೆ ಶಿಕ್ಷೆ ಪ್ರಕಟಿಸಿದೆ.

ಚೀನಾ: ಯುವ ವಿಜ್ಞಾನಿ ನಾಪತ್ತೆ
ಬೀಜಿಂಗ್(ಪಿಟಿಐ):
ಸ್ವಾಯತ್ತತೆಯಿರುವ ದೇಶದ ವಾಯವ್ಯ ಕ್ಸಿಜಿಯಾಂಗ್ ಉಗುರ ಪ್ರಾಂತ್ಯದ ನೀರ್ಗಲ್ಲ ಪ್ರದೇಶದಲ್ಲಿ ಯುವ ವಿಜ್ಞಾನಿ ನಾಪತ್ತೆಯಾಗಿರುವುದಾಗಿ ಚೀನಾದ ವಿಜ್ಞಾನ ಅಕಾಡೆಮಿ ಹೇಳಿದೆ.ಕಾಣೆಯಾಗಿರುವ ವಿಜ್ಞಾನಿಯನ್ನು ಲಿನ್ ಶುಬಿಯೊ ಎಂದು ಗುರುತಿಸಲಾಗಿದ್ದು, 29 ಮಂದಿಯಿರುವ ರಕ್ಷಣಾ ತಂಡ ಈತನ ಹುಡಕಾಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ನಾಯಿಗೆ ಹೆದರಿದ 600 ಮೊಲಗಳ ಸಾವು
ಬೀಜಿಂಗ್ (ಐಎಎನ್‌ಎಸ್): 
ಪೂರ್ವ ಚೀನಾದ `ಫಾರ್ಮ್~ ವೊಂದದಲ್ಲಿ ಮೂರು ನಾಯಿಗಳು ನುಗ್ಗಿದ್ದರಿಂದ ಭಯಬಿದ್ದ 600 ಮೊಲಗಳು ಸಾವನ್ನಪ್ಪಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೆಕ್ಸಿನ್ ಎಂಬ ಗ್ರಾಮದಲ್ಲಿ ನಾಯಿಗಳು ಮೊಲಗಳ ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿದಾಗ 1000 ಮೊಲಗಳು ಸತ್ತಿವೆ. ಅವುಗಳಲ್ಲಿ 600 ಮೊಲಗಳಿಗೆ ಯಾವುದೇ ಗಾಯಗಳಾಗಿರಲಿಲ್ಲ. ಕೇವಲ ಭಯಬಿದ್ದು, ಒತ್ತಡದಿಂದಾಗಿ ಮೃತಪಟ್ಟಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ.

ಪ್ರಾಣಿಗಳಲ್ಲಿನ `ಒತ್ತಡ~ದಿಂದ ಇವು ಮೃತಪಟ್ಟಿವೆ. ಮೊಲಗಳು ಭಯಬಿದ್ದಾಗ, ಆಂಡ್ರಿಲೈನ್ ಗ್ರಂಥಿ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಇದು ಮೊಲಗಳ ನರವ್ಯೆಹ ವ್ಯವಸ್ಥೆಯನ್ನು ಉದ್ರೇಕಿಸುತ್ತದೆ. ಹಾಗಾಗಿ ಹೃದಯ ಬಡಿತ ಹೆಚ್ಚಾಗುತ್ತದೆ. ದೇಹದ ಅವಯವಗಳು ಕಾರ್ಯ ನಿರ್ವಹಿಸುವಲ್ಲಿ ತಪ್ಪುತ್ತವೆ. ಮೊಲಗಳು ಈ ಭಯದಿಂದಾಗಿಯೇ ಸಾವನ್ನಪ್ಪುತ್ತವೆ ಎಂದು ಪಶುಪಾಲನಾ ತಜ್ಞ ಚೆನ್ ಡಾಕ್ಸಿಯಾಂಗ್ ಹೇಳಿದ್ದಾರೆ.

ಭ್ರಷ್ಟಾಚಾರ: ಪಾಕ್‌ನಲ್ಲೂ ಚಳವಳಿ ಬೆದರಿಕೆ
ಇಸ್ಲಾಮಾಬಾದ್ (ಪಿಟಿಐ):
ಭಾರತದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರಿಂದ ಪ್ರೇರಿತವಾಗಿರುವ ಪಾಕಿಸ್ತಾನದ ವ್ಯಾಪಾರಿಯೊಬ್ಬರು, ತಾವೂ ಶೀಘ್ರ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಮತ್ತು ದಕ್ಷಿಣ ಏಷ್ಯಾದಲ್ಲಿ ಸೇನಾ ವೆಚ್ಚ ಕಡಿತಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

68 ವರ್ಷದ ರಾಜಾ ಜಹಾಂಗೀರ್ ಅಖ್ತರ್ ಅವರು ರಂಜಾನ್ ಉಪವಾಸದ ನಂತರ ಮುಂದಿನ ತಿಂಗಳ 12ರಿಂದ ಈ ಪ್ರತಿಭಟನೆ ಆರಂಭಿಸಲಿದ್ದು, ಲೋಕಪಾಲ ಮಸೂದೆಯ ಮಾದರಿಯಲ್ಲೇ ಪಾಕ್ ಸಂಸತ್ತಿನಲ್ಲೂ ಭ್ರಷ್ಟಾಚಾರ ನಿಗ್ರಹ ಮಸೂದೆ ಅಂಗೀಕರಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.

`ಅಭಿವೃದ್ಧಿಯಿಂದ ಭಯೋತ್ಪಾದನೆ ನಿರ್ಮೂಲನೆ~
ಇಸ್ಲಾಮಾಬಾದ್ (ಐಎಎನ್‌ಎಸ್) :
ಜನರ ಜೀವನಮಟ್ಟ ಸುಧಾರಣೆ ಹೊಂದದ ಹೊರತು ಭಯೋತ್ಪಾದನೆ ನಿರ್ಮೂಲನೆ ಅಸಾಧ್ಯ ಎಂದು ಪಾಕಿಸ್ತಾನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಹೇಳಿದ್ದಾರೆ.  ವಿಶ್ವ ಮಾನವೀಯತೆ ದಿನಾಚರಣೆಯ ಅಂಗವಾಗಿ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, `ನಾವಿಂದು ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ಬದುಕು ಸವೆಸುತ್ತಿದ್ದೇವೆ ಹಾಗೂ ಊಹಿಸಲಾಗದ ಸವಾಲುಗಳನ್ನು ಎದುರಿಸುತ್ತಿದ್ದೇವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT