ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ ದೊಡ್ಡದಲ್ಲ; ಸಾಂಸ್ಕೃತಿಕವಾಗಿ ಮಹತ್ವದ್ದು

ಸಾಹಿತ್ಯ ಪ್ರಕಾಶನ
Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ನನ್ನ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಂಥ ಪ್ರಕಾಶನವೊಂದರ ಬಗ್ಗೆ ನಾನೇ ಬರೆದುಕೊಳ್ಳುವುದು ಮುಜುಗರದ ಸಂಗತಿ. ಅಂಕೋಲೆಯ ಅಂಬಾರಕೊಡ್ಲದ ರಾಘವೇಂದ್ರ ಪ್ರಕಾಶನಕ್ಕೆ ಇದೀಗ ಸರಿಯಾಗಿ 40 ವರ್ಷ. ಈ ಪ್ರಕಾಶನದ ಪ್ರಧಾನ ಸಂಚಾಲಕನಾಗಿ ನಾನು ಅಂದಿನಿಂದ ಇಂದಿನವರೆಗೆ ಇದರ ಕಷ್ಟ – ಸುಖಗಳೊಂದಿಗೆ ಹೆಜ್ಜೆಹಾಕಿದ್ದೇನೆ. ನೆನಪುಗಳೇ ಸಿಹಿ ಎಂಬ ಮಾತಿನಂತೆ ಪ್ರಕಾಶನಕ್ಕೆ ಸಂಬಂಧಿಸಿದಂತೆ ನೆನಪಿನ ಮಧುರ ಒರತೆಗಳೇ ನನ್ನ ಮನದಲ್ಲಿ ಒಸರುತ್ತವೆ.

ಈ ಪ್ರಕಾಶನ ಹುಟ್ಟಿದ ಸಂದರ್ಭವೇ ಒಂದು ರೋಚಕ ಕಥೆ. ಅದು 1970ರ ದಶಕದ ಆರಂಭದ ಸಂದರ್ಭ, ದಿನಕರ ದೇಸಾಯಿ ಅವರು ಹುಟ್ಟುಹಾಕಿದ ಉತ್ತರ ಕನ್ನಡದ ದಾಂಡೇಲಿಯ ಜನತಾ ವಿದ್ಯಾಲಯ ಎಂಬ ಸಂಸ್ಥೆಯಲ್ಲಿ ನಾನು ಕನ್ನಡ ಶಿಕ್ಷಕನಾಗಿದ್ದೆ. ದಾಂಡೇಲಿಯಲ್ಲಿ ಆಗ ಕಾಲೇಜು ಇರಲಿಲ್ಲ. ನೆರೆಯ ಹಳಿಯಾಳ, ಯಲ್ಲಾಪುರ, ಜೊಯಿಡಾ ತಾಲ್ಲೂಕುಗಳಲ್ಲಿಯೂ ಇರಲಿಲ್ಲ. ಎಸ್‌.ಎಸ್‌.ಎಲ್‌.ಸಿ.ಯ ನಂತರ ಗಂಡುಮಕ್ಕಳನ್ನು ಕುಟುಂಬದ ಹಿರಿಯರು ಹೆಚ್ಚಿನ ಓದಿಗಾಗಿ ಧಾರವಾಡಕ್ಕೆ ಕಳುಹಿಸುತ್ತಿದ್ದರು. ಹೆಣ್ಣುಮಕ್ಕಳ ಪಾಲಿಗೆ ಎಸ್‌.ಎಸ್‌.ಎಲ್‌.ಸಿ.ಯೇ ಕೊನೆಯ ಓದು. ಇದನ್ನು ಗಮನಿಸಿದ ನಾನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಕಾವ, ಜಾಣ ಮತ್ತು ರತ್ನ ಎಂಬ ತರಗತಿಗಳ ಒಂದು ಶಿಕ್ಷಣ ಕೇಂದ್ರವನ್ನು ದಾಂಡೇಲಿಯಲ್ಲಿ ಪ್ರಾರಂಭಿಸಿದೆ.

1973 ರಲ್ಲಿ ಕನ್ನಡ ರತ್ನ ತರಗತಿಯ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಸಂದರ್ಭ. 115 ವಿದ್ಯಾರ್ಥಿಗಳಿದ್ದರು. 8 ಜನ ಹೊರತುಪಡಿಸಿ ಉಳಿದವರೆಲ್ಲ ಹೆಣ್ಣುಮಕ್ಕಳು. ಕನ್ನಡ ಉನ್ನತಾಭ್ಯಾಸದ ಈ ಮೂರು ವರ್ಷಗಳ ಸಂದರ್ಭದಲ್ಲಿ ಅವರಿಗೆ ಪತ್ರಿಕೆಯಲ್ಲಿ ಬರುತ್ತಿದ್ದ ನನ್ನ ಕವನಗಳ ಪರಿಚಯ ಆಗಿತ್ತು. ನನ್ನದೊಂದು ಸಂಕಲನ ಹೊರತರುವ ವಿಚಾರವನ್ನು ಸಾಕಷ್ಟು ಸಲ ನನ್ನ ಮುಂದೆ ಪ್ರಸ್ತಾಪ ಮಾಡಿದ್ದರು. ‘ಬರಹಗಾರನಿಗೆ ಪ್ರಕಟಣೆಯ ವಿಚಾರದಲ್ಲಿ ಅವರಸರ ಸಲ್ಲ’ ಎಂಬ ಕವಿ ದಿನಕರ ದೇಸಾಯಿಯವರ ಮಾತು ನನ್ನನ್ನು ಆಗಲೇ ಪ್ರಭಾವಿಸಿತ್ತು. ಆದುದರಿಂದ ಆ ನನ್ನ ವಿದ್ಯಾರ್ಥಿಗಳ ಬೇಡಿಕೆಯನ್ನು ನಾನು ನಯವಾಗಿ ನಿರಾಕರಿಸುತ್ತ ಬಂದಿದ್ದೆ.

ಬೀಳ್ಕೊಡುವ ದಿನ ಆ ವಿದ್ಯಾರ್ಥಿಗಳಲ್ಲಿ ಕೆಲವರು ನನ್ನ ಕೈಗೆ ಒಂದು ಲಕೋಟೆಯನ್ನು ಕೊಟ್ಟರು. ಅದರ ಮೇಲೆ ‘ಇದನ್ನು ಮನೆಗೆ ಹೋಗಿ ತೆರೆಯಬೇಕು’ ಎಂದು ಬರೆದಿತ್ತು. ಮನೆಗೆ ಹೋಗಿ ನೋಡಿದಾಗ ಅದರಲ್ಲಿ ಅವರು ನನ್ನ ಕವಿತೆಗಳನ್ನು ಪುಸ್ತಕವಾಗಿ ತರಲು ನಿರ್ಧರಿಸಿದ್ದು, ಅದರ ಖರ್ಚಿನ ಮೊದಲ ಕಂತಾಗಿ 108 ರೂಪಾಯಿ ಅದರಲ್ಲಿ ಇಟ್ಟಿದ್ದು ತಿಳಿಯಿತು. ಇದನ್ನು ಒಪ್ಪಿಕೊಳ್ಳಬೇಕೆ ? ಬೇಡವೇ ? ಎಂಬ ಹೊಯ್ದಾಟದಲ್ಲಿ ಆ ರಾತ್ರಿ ಕಳೆಯಿತು. ಮರುದಿನ ವಿದ್ಯಾರ್ಥಿಗಳ ವರಾತೆಗೆ ಮಣಿಯಬೇಕಾಗಿ ಬಂತು. ಪ್ರಕಾಶನಕ್ಕೆ ಹೆಸರು ಸೂಚಿಸಿದವರೂ ಅವರೇ. ಅಥವಾ ಅದನ್ನು ಹೀಗೂ ಹೇಳಬಹುದು; ಅವರ ಇಚ್ಛೆಯಂತೆ ರಾಘವೇಂದ್ರ ಪ್ರಕಾಶನ ಎಂಬ ಹೆಸರು ಬಂತು.

ಹೀಗೆ ವಿದ್ಯಾರ್ಥಿಗಳಿಂದ ಹುಟ್ಟಿದ ಈ ಪ್ರಕಾಶನ ಮುಂದೆ ತಮ್ಮ ಕೃತಿಗಳಿಗೆ ಪ್ರಕಟಣೆಯ ಸೌಲಭ್ಯ ಇರದ ಯುವ ಲೇಖಕರ ಪ್ರಕಟಣೆಗಾಗಿ ತನ್ನ ಮೊದಲ ದಶಕವನ್ನು ಮೀಸಲಾಗಿಟ್ಟಿತು. ವಯಸ್ಸಿನಲ್ಲಿ ಹಿರಿಯರ ಕೃತಿಗಳನ್ನು ಎತ್ತಿಕೊಳ್ಳುವಾಗಲೂ ಪ್ರಕಟಣೆಯ ಸೌಲಭ್ಯ ಇಲ್ಲದ ಲೇಖಕರಿಗೇ ಆದ್ಯತೆ ನೀಡಲಾಯಿತು.

ನಾವು ಮೊದಲ ದಶಕದಲ್ಲಿ ಈ ನಿರ್ಧಾರ ಕೈಕೊಂಡಿದ್ದರ ಹಿಂದೆ ಒಂದು ನೈತಿಕ ಒತ್ತಡ ಇತ್ತು ಎಂದೇ ಹೇಳಬೇಕು. ಪ್ರಕಾಶನ ಆರಂಭ ಮಾಡಿದ್ದು ನನ್ನ ಮೊದಲ ಕೃತಿ ಹೊರತರುವ ಉದ್ದೇಶದಿಂದ. ನನ್ನ ಹಾಗೆಯೇ ಪ್ರಕಟಣೆಯ ಅವಕಾಶವಿಲ್ಲದ ಯುವ ಲೇಖಕರೂ, ಹಿರಿಯ ಬರಹಗಾರರೂ ಸಾಕಷ್ಟಿದ್ದಾರೆ. ವಿದ್ಯಾರ್ಥಿಗಳ ಮೊದಲ ಕೊಡುಗೆಯ ಹಿಂದೆ ಅಪ್ರಕಟಿತ ಸಾಹಿತ್ಯ ಜನರಿಗೆ ಓದಲು ಸಿಗಬೇಕೆಂಬ ಹೆದ್ದಾಸೆ ಇರುವುದರಿಂದ ಅವರ ಇಚ್ಛೆಯಂತೆ ಇನ್ನುಳಿದ ಲೇಖಕರಿಗೂ ಈ ಪ್ರಕಾಶನದ ಸೇವೆ ಸಲ್ಲಬೇಕು ಎಂಬುದು ನನ್ನ ಉದ್ದೇಶವಾಗಿತ್ತು.

ಪ್ರಕಾಶನ ಈಗ ನಾಲ್ಕನೆಯ ದಶಕ ಪೂರೈಸುತ್ತಿರುವ ಹೊತ್ತಿನಲ್ಲಿ 220 ಪುಸ್ತಕಗಳನ್ನು ಪ್ರಕಟಿಸಿದೆ. ಈ ಸಂಖ್ಯೆ ದೊಡ್ಡದಲ್ಲ; ಆದರೆ, ಸಾಂಸ್ಕೃತಿಕವಾಗಿ ಮಹತ್ವದ್ದು ಎಂಬುದು ನನ್ನ ನಂಬಿಕೆ. ಅವುಗಳಲ್ಲಿ 120 ಪುಸ್ತಕಗಳು ಉತ್ತರ ಕನ್ನಡ ಜಿಲ್ಲೆಯ ಲೇಖಕರದೇ ಆಗಿವೆ. 220 ರಲ್ಲಿ 100 ರಷ್ಟು ಪುಸ್ತಕಗಳು ಹೊಸ ತಲೆಮಾರಿನ ಉದಯೋನ್ಮುಖ ಲೇಖಕರ ಕೃತಿಗಳು. ಇನ್ನೂ ಒಂದು ವಿಶೇಷವೆಂದರೆ, ನಾವು ಪ್ರಕಟಿಸಿರುವ ಒಟ್ಟೂ ಗ್ರಂಥಗಳಲ್ಲಿ ಅರ್ಧದಷ್ಟು ಕವನ ಸಂಕಲನಗಳಾಗಿವೆ! ಇದು ನಮ್ಮ ಪ್ರಕಾಶನದ ಕೆಲಸಗಳ ಹಿಂದೆ ಅಗೋಚರವಾಗಿಯೇ ಇದ್ದ ಕಾವ್ಯ ಪ್ರೀತಿ ಎಂದು ಈಗ ಅನ್ನಿಸುತ್ತದೆ.

ಪ್ರಕಾಶನಕ್ಕೆ 25ವರ್ಷ ತುಂಬಿದಾಗ ಇಡೀ ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಮನಸುಗಳು ಅದರ ಬೆನ್ನಿಗಿದ್ದವು. ‘ನೀವು ಹೇಳಿ ನಾವು ಮಾಡಿಸಿತೋರಿಸುತ್ತೇವೆ’ ಎಂಬಂಥ ಭರವಸೆಯ ಮಾತುಗಳು ಜಿಲ್ಲೆಯ ಎಲ್ಲ ದಿಕ್ಕುಗಳಿಂದ ಕೇಳಿ ಬಂದಿತ್ತು. ಅದಕ್ಕೆ ಕಾರಣವೂ ಇತ್ತು. ಆ ವೇಳೆಗಾಗಲೇ ರಾಘವೇಂದ್ರ ಪ್ರಕಾಶನ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಪುಸ್ತಕ ಪ್ರಕಟಣೆಯ ಕ್ಷಾಮವನ್ನು ಸಾಧ್ಯವಾದಷ್ಟು ಮಟ್ಟಿಗೆ ಹೋಗಲಾಡಿಸಿದ ಗೌರವ ಪಡೆದುಕೊಂಡಿತ್ತು.

ಬೆಳ್ಳಿಹಬ್ಬದ ಸಂದರ್ಭದಲ್ಲಿ ಮೂರು ದಿನಗಳ ಸಾಹಿತ್ಯ ಸಮ್ಮೇಳನವೊಂದನ್ನು ನಡೆಸಲಾಯಿತು. ಅದಕ್ಕೆ ಸರ್ವಾಧ್ಯಕ್ಷರಾಗಿ ನಮ್ಮ ಜಿಲ್ಲೆಯವರೇ ಆದ ವಿಮರ್ಶಕ ಜಿ.ಎಚ್‌. ನಾಯಕ ಆಯ್ಕೆಯಾಗಿದ್ದರು. ಬೆಳ್ಳಿಹಬ್ಬ ಯೋಜನೆಗಳ ಅನುಷ್ಠಾನಕ್ಕಾಗಿ ಮತ್ತು ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಅಧ್ಯಕ್ಷರಾದವರು ಹಾ.ಮಾ. ನಾಯಕ. ಆ ಸಂದರ್ಭದಲ್ಲಿ ನಮ್ಮ ಪ್ರಕಟಿತ ಪುಸ್ತಕಗಳ ಸಂಖ್ಯೆ 105. 30ನೇ ವರ್ಷದಲ್ಲಿ ಅದರ ಪ್ರಕಟಿತ ಪುಸ್ತಕಗಳ ಸಂಖ್ಯೆ 150ಕ್ಕೆ ಏರಿತು. ಆ ಸಂದರ್ಭದಲ್ಲಿ ಪ್ರಕಾಶನವು ಪ್ರಕಟಿಸಿದ 150 ಪುಸ್ತಕಗಳ ಬಗ್ಗೆ ಕಿರುವಿಮರ್ಶೆಗಳನ್ನು ಬರೆಯಿಸಿ, ಅವುಗಳನ್ನು ‘ಗ್ರಂಥಸಂಗಾತಿ’ (ಸಂ: ಡಾ. ಜಿ. ಎಂ. ಹೆಗಡೆ) ಎಂಬ ಹೆಸರಿನಲ್ಲಿ ಹೊರತರಲಾಯಿತು.

ಈ ನಡುವೆ ಪ್ರಕಾಶನವು ಎರಡು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ನಿರ್ವಹಿಸಿದೆ. ಹಿರಿಯ ಚಿಂತಕ ಡಾ. ಗೌರೀಶ ಕಾಯ್ಕಿಣಿಯವರ ಸಮಗ್ರ ಸಾಹಿತ್ಯವನ್ನು ಹತ್ತು ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆ ಮೊದಲನೆಯದಾದರೆ, ಇನ್ನೊಂದು, 20ನೆಯ ಶತಮಾನ ಕೊನೆಗೊಂಡು 21ಕ್ಕೆ ಕಾಲಿಡುವ ಹಂತದಲ್ಲಿ ಜಿ.ಎಚ್‌. ನಾಯಕ ಅವರ ಪ್ರಧಾನ ಸಂಪಾದಕತ್ವದಲ್ಲಿ ‘ಶತಮಾನದ ಕನ್ನಡ ಸಾಹಿತ್ಯ’ ಎಂಬ ಶೀರ್ಷಿಕೆಯ ಎರಡು ಬೃಹತ್‌ ಸಮೀಕ್ಷಾ ಗ್ರಂಥಗಳನ್ನು ಹೊರತರುವುದು. ಮೊದಲನೆಯ ಯೋಜನೆ 1990 ರಲ್ಲಿ ಆರಂಭವಾಗಿ, 2000ನೇ ಇಸವಿಯಲ್ಲಿ ಹತ್ತು ಸಂಪುಟಗಳೊಂದಿಗೆ ಯಶಸ್ಸನ್ನು ಕಂಡಿತು. ಹತ್ತು ಸಂಪುಟಗಳಲ್ಲಿ ಗೌರೀಶ ಕಾಯ್ಕಿಣಿಯವರ ಐದು ಸಾವಿರ ಪುಟಗಳ ಸಾಹಿತ್ಯವನ್ನು ಪ್ರಕಟಿಸಲಾಯಿತು.

ಶತಮಾನದ ಕನ್ನಡ ಸಾಹಿತ್ಯ ಎಂಬ ಯೋಜನೆಯ ಮೊದಲ ಸಂಪುಟವು 2000 ರಲ್ಲೂ, ಎರಡನೆಯ ಸಂಪುಟ 2010ರಲ್ಲೂ ಪ್ರಕಟವಾದವು. ಈ ಯೋಜನೆಯಲ್ಲಿ ಇಡೀ ಶತಮಾನವನ್ನು 25 ವರ್ಷಗಳಿಗೆ ಒಂದರಂತೆ ನಾಲ್ಕು ಘಟಕವಾಗಿ ವಿಂಗಡಿಸಿ, ಪ್ರತಿಯೊಂದು ಘಟಕದಲ್ಲೂ ಕನ್ನಡ ಸಾಹಿತ್ಯದ ಎಲ್ಲ ಸೃಜನಶೀಲ ಸಾಹಿತ್ಯ ಪ್ರಕಾರಗಳ ಬಗ್ಗೆ ವಿದ್ವಾಂಸರಿಂದ ಲೇಖನಗಳನ್ನು ಬರೆಯಿಸಿ, ಅಡಕಗೊಳಿಸಲಾಗಿದೆ. ಅವುಗಳ ಹೊರತಾಗಿ ಸೃಜನೇತರ ಸಾಹಿತ್ಯ ಪ್ರಕಾರಕ್ಕೆ ಸೇರಿದ ಮತ್ತು ಮಕ್ಕಳ ಸಾಹಿತ್ಯ ಪ್ರಕಾರಕ್ಕೆ ಸೇರಿದ ಲೇಖನಗಳನ್ನು ಇಡೀ ಶತಮಾನವನ್ನೇ ಒಂದು ಘಟಕವಾಗಿ ಇಟ್ಟುಕೊಂಡು ಬರೆಯಿಸಲಾಗಿದೆ. ಇಂದು ಈ ಎರಡು ಗ್ರಂಥಗಳು ನಾಡಿನ ಓದುಗರಿಗೆ 20ನೆಯ ಶತಮಾನದ ಸಾಹಿತ್ಯಿಕ ಬೆಳೆ ಏನು? ಎಂಬುದರ ಬಗ್ಗೆ ತಕ್ಕಮಟ್ಟಿಗಾದರೂ ಮಾಹಿತಿ ಒದಗಿಸಬಲ್ಲ ಮಹತ್ವದ ಆಕರಗಳಾಗಿವೆ.

ರಾಘವೇಂದ್ರ ಪ್ರಕಾಶನವು ‘ಸಕಾಲಿಕ’ ಎಂಬ 16 ಪುಟಗಳ ವಾರಪತ್ರಿಕೆಯೊಂದನ್ನು 2002ರಲ್ಲಿ ಆರಂಭ ಮಾಡಿತು. ಪತ್ರಿಕೆಯ ಗುಣಮಟ್ಟದ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳಬಾರದೆಂಬ ಸ್ಪಷ್ಟ ತಿಳಿವಳಿಕೆ, ಯೋಜನೆಯೊಂದಿಗೆ ಪತ್ರಿಕೆ ಆರಂಭವಾಯಿತು. ಕರ್ನಾಟಕದ ಎಲ್ಲ ಮೂಲೆಗಳನ್ನು ಅಷ್ಟೇ ಏಕೆ, ಹೊರ ರಾಜ್ಯದ, ಹೊರ ದೇಶದ ಓದುಗರನ್ನೂ ಕೂಡ ‘ಸಕಾಲಿಕ’ ಮುಟ್ಟಿ, ಪ್ರಭಾವಿಸಿತು. ವೈಚಾರಿಕ ನಿಲುವಿನ–ಅಪ್ಪಟ ಸಾಹಿತ್ಯಕ ಮೌಲ್ಯದ ಇಂತಹ ಒಂದು ಪತ್ರಿಕೆಯನ್ನು ನಡೆಸುವುದಕ್ಕೆ ಸಹಜವಾಗಿಯೇ ಆರ್ಥಿಕ ಸಮಸೆ್ಯಗಳು ಎದುರಾಗುತ್ತವೆ ಎಂಬುದು ಪತ್ರಿಕೆಯ ಸಂಪಾದಕನಾಗಿದ್ದ ನನಗೆ ಮೊದಲೇ ತಿಳಿದಿತ್ತಾದರೂ ಒಂದು ಪ್ರಯತ್ನ ಮಾಡಿ ನೋಡೋಣ ಎಂಬ ನಿಲುವಿನೊಂದಿಗೆ ಆರಂಭಿಸಿದ್ದೆ. ಮೂರು ವರ್ಷಗಳ ಕಾಲ–ಒಂದೇ ಒಂದು ವಾರವೂ ಬಿಡುವು ಪಡೆಯದೇ ನಡೆದ ‘ಸಕಾಲಿಕ’ ಪತ್ರಿಕೆ ಆರ್ಥಿಕ ಮುಗ್ಗಟ್ಟಿನಿಂದ ನಿಂತಾಗ, ಅದರ ಬಗೆ್ಗ ಇಡೀ ರಾಜ್ಯದ ಓದುಗರ ಅನುಕಂಪ ಪ್ರಕಟವಾಯಿತು.

ಪ್ರಕಾಶನವು ತನ್ನ ಬೆಳ್ಳಿಹಬ್ಬದ ಸಂದರ್ಭದಲ್ಲಿ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನ ಏರ್ಪಡಿಸಿದಂತೆ, ಈಗ 40 ವರ್ಷ ತುಂಬಿದಾಗ ಹೊಸ ಯೋಜನೆಯೊಂದನ್ನು ರೂಪಿಸಿಕೊಂಡಿದೆ. ಈ ಹೊಸ ಯೋಜನೆಯಲ್ಲಿ ಪ್ರಮುಖವಾದುದೆಂದರೆ ನಾಲ್ಕು ದಶಕಗಳ ನಡಿಗೆಯ ಹೆಜ್ಜೆ ಗುರುತುಗಳನ್ನು ದಾಖಲಿಸುವ ಪುಸ್ತಕವನ್ನು ಹೊರತರುವುದಾಗಿದೆ. ಈಗ ವರ್ಷಕ್ಕೆ ಐದು ಪುಸ್ತಕಗಳನ್ನು ಮಾತ್ರ ಹೊರತರಬೇಕೆಂದು ತೀರ್ಮಾನಿಸಲಾಗಿದೆ.

ಪ್ರಕಾಶನಕ್ಕೆ ಐವತ್ತು ತುಂಬಿದಾಗ ಪ್ರಕಾಶನದ ಆಡಳಿತ ವ್ಯವಸೆ್ಥಯನ್ನು ಹೊಸ ತಲೆಮಾರಿನ ಮಂಡಳಿಯೊಂದಕ್ಕೆ ಒಪಿ್ಪಸುವ ವಿಚಾರ ಕೂಡ ಇದೆ. ರಾಘವೇಂದ್ರ ಪ್ರಕಾಶನದ ಬಗ್ಗೆ ಮಾತನಾಡುವಾಗ ಈ ಪ್ರಕಾಶನದ ಪ್ರಕಟಣೆಗಳ ಬಿಡುಗಡೆಗಾಗಿ ಮತ್ತು ಅದು ಆಯೋಜಿಸಿದ ನೂರಾರು ಗೋಷ್ಠಿಗಳಲ್ಲಿ ಭಾಗವಹಿಸುವುದಕ್ಕಾಗಿ ಈ ಕರಾವಳಿ ಜಿಲ್ಲೆಯ ಅಂಬಾರಕೊಡ್ಲ ಎಂಬ ಗಾ್ರಮಕ್ಕೆ ಭೇಟಿ ನೀಡಿದ ಸಾಹಿತಿಗಳ ನೆನಪಾಗುತ್ತಿದೆ.

ಹಾ.ಮಾ. ನಾಯಕ, ಎನ್ಕೆ ಕುಲಕರ್ಣಿ, ಪ್ರಭುಶಂಕರ, ಚದುರಂಗ, ಅಕಬರ ಅಲಿ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ,  ಚೆನ್ನವೀರ ಕಣವಿ, ಕುಂ. ವೀರಭದ್ರಪ್ಪ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ಗೌರೀಶ ಕಾಯ್ಕಿಣಿ, ಎಲ್‌.ಎಸ್‌. ಶೇಷಗಿರಿರಾವ್‌, ಎಚ್.ಎಸ್‌. ವೆಂಕಟೇಶಮೂರ್ತಿ, ಸುಮತೀಂದ್ರ ನಾಡಿಗ, ಎಚ್‌.ಎಸ್‌. ಶಿವಪ್ರಕಾಶ್‌, ರಹಮತ್‌ ತರೀಕೆರೆ, ವೈದೇಹಿ... ಹೀಗೆ ಈ ಪಟ್ಟಿಯನ್ನು ಎಷ್ಟು ಉದ್ದವಾದರೂ ಬೆಳೆಸಬಹುದು. ಏಕೆಂದರೆ ಅಂಬಾರಕೊಡ್ಲಕ್ಕೆ ಬರದ ಸಾಹಿತಿಯೇ ಇಲ್ಲ ಎನ್ನಬಹುದು.
ರಾಘವೇಂದ್ರ ಪ್ರಕಾಶನಕ್ಕೆ 2004ನೆಯ ಇಸ್ವಿಯಲ್ಲಿ ರಾಜ್ಯದ ಲೇಖಕ ಪ್ರಕಾಶಕರ ಸಂಘವು ‘ಅತ್ಯುತ್ತಮ ಪ್ರಕಾಶನ’ವೆಂದು ಗೌರವಿಸಿದೆ. 2005ರಲ್ಲಿ ರಾಜ್ಯ ಸರ್ಕಾರ ‘ಅತ್ಯುತ್ತಮ ಗ್ರಂಥ ಪ್ರಕಾಶನ’ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ಸಾರ್ವಜನಿಕರಿಂದಲೂ, ಲೇಖಕರಿಂದಲೂ, ಸರ್ಕಾರದಿಂದಲೂ ಸಮಾನ ಗೌರವವನ್ನು ಪಡೆದ ಅದೃಷ್ಟ ನಮ್ಮದು.

ಲೇಖಕ ಹಾ.ಮಾ. ನಾಯಕರು ರಾಘವೇಂದ್ರ ಪ್ರಕಾಶನದ ಬಗ್ಗೆ ಬರೆಯುತ್ತ ‘ಈ ಪ್ರಕಾಶನದ ಸಂಚಾಲಕರಾದ ವಿಷ್ಣು ನಾಯ್ಕರಲ್ಲಿ ಸಾಹಿತ್ಯ ಪ್ರೀತಿ ಕಾಣುತ್ತದೆಯೇ ಹೊರತು, ವ್ಯವಹಾರ ಜಾಣ್ಮೆ ಕಾಣುತ್ತಿಲ್ಲ’ ಎಂದು ಹೇಳಿದ್ದಿದೆ. ನಿಜ, ನನ್ನಲ್ಲಿ ವ್ಯವಹಾರ ಜಾಣ್ಮೆ ಕಡಿಮೆ ಎಂಬುದನ್ನು ಈ ಗಳಿಗೆಯಲ್ಲೂ ಒಪ್ಪಿಕೊಳ್ಳುತ್ತೇನೆ. ನನಗೆ ರಾಘವೇಂದ್ರ ಪ್ರಕಾಶನವನ್ನು ಒಂದು ವಾಣಿಜ್ಯ ಸಂಸ್ಥೆಯಾಗಿ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ.  ಪ್ರಕಾಶನದ್ದು ಏನಿದ್ದರೂ ಸಾಂಸ್ಕೃತಿಕ ಕಾಳಜಿ, ಸಾಹಿತ್ಯಿಕವಾದ ಪ್ರೀತಿ ಮಾತ್ರ. ಇಂದಿನ ಸಾಹಿತಿಗಳು ಮಾತ್ರವಲ್ಲ, ನಾಳೆಯ ಬರಹಗಾರರ ಬಗ್ಗೆ ಕೂಡ ತನ್ನ ಪಾಲಿಗೊಂದು ಕರ್ತವ್ಯ ಇದೆ ಎಂದು ನಂಬಿದವನು ನಾನು. ಪ್ರಕಾಶನವನ್ನು ಒಂದು ಟ್ರಸ್‌್ಟ ಆಗಿ ನೋಂದಾಯಿಸಲಾಗಿದೆ. ಈ ಪ್ರಕಾಶನಕ್ಕೆಂದು ಅದರದೇ ಆದ ಒಂದು ರಂಗವೇದಿಕೆ (ಸದಾನಂದ ವೇದಿಕೆ) ಹಾಗೂ ಪುಟ್ಟ ಬಯಲು ಮಂಟಪ ನಿರ್ಮಿಸಲಾಗಿದೆ.

ಇಂದು ಗ್ರಂಥ ಪ್ರಕಾಶಕರ ಬಗ್ಗೆ ಸಾಕಷು್ಟ ಅನುಕಂಪದ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಟೀಕೆಗಳೂ ಕೇಳಿಬರುತ್ತಿವೆ. ಇದರ ಹಿಂದೆ ಕಾರಣ ಇಲ್ಲದೇ ಇಲ್ಲ. ಮಹಾನಗರ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಪ್ರಕಾಶಕರ ಬಗೆ್ಗ ಲೇಖಕರ ತಕರಾರು ಹಿಂದೂ ಇತ್ತು, ಇಂದೂ ಇದೆ. ಲೇಖಕರಿಗೆ ಒಂದಷ್ಟು ಪ್ರತಿಗಳನ್ನು ಕೊಟ್ಟು ಉಳಿದುದೆಲ್ಲ ತಮ್ಮ ಹಕ್ಕು–ತಾವು ಆಡಿದ್ದೇ ಆಟ, ಆಡಿದ್ದೇ ಮಾತು ಎಂಬಂತೆ ನಡೆದುಕೊಳ್ಳುತ್ತಾರೆ ಎಂಬ ಅಭಿಪ್ರಾಯಗಳಿವೆ.

ಗ್ರಾಮೀಣ ಭಾಗಗಳಲ್ಲಿಯ ಅನೇಕ ಸಣ್ಣ ಪ್ರಕಾಶಕರು ‘ನಮ್ಮ ಧ್ವನಿ ಕೇಳುವವರೇ ಇಲ್ಲ, ಪುಸ್ತಕ ಕೊಳ್ಳುವವರೇ ಇಲ್ಲ’ ಎಂಬೆಲ್ಲ ನೋವನ್ನು ತೋಡಿಕೊಳ್ಳುತ್ತ ಇದ್ದರು. ಈಗಲೂ ಇದ್ದಾರೆ. ಇವೆಲ್ಲವಕ್ಕೂ ಒಂದು ಪರಿಹಾರೋಪಾಯದ ದಾರಿ ಎಂಬಂತೆ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಸರ್ಕಾರ ‘ಪುಸ್ತಕ ಪ್ರಾಧಿಕಾರ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಎಲ್‌.ಎಸ್‌. ಶೇಷಗಿರಿರಾವ್‌ ಅವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿದಾಗ, ಸಣ್ಣ ಪ್ರಕಾಶಕರಿಗೆ ಹೊಸ ಜೀವ ಬಂದ ಅನುಭವವಾಗಿದ್ದು ಖರೆ.

ಆದರೆ, ಮುಂದೆ ಒಬ್ಬೊಬ್ಬ ಅಧ್ಯಕ್ಷರ ಕಾಲದಲ್ಲಿ ಒಂದೊಂದು ಬಗೆಯ ಧೋರಣೆಗಳು ಹೊರಬಿದ್ದು ಪುನಃ ಲೇಖಕ–ಪ್ರಕಾಶಕರಾದವರಿಗೆ, ಗ್ರಾಮೀಣ ಭಾಗದ ಸಣ್ಣ ಪ್ರಕಾಶಕರಿಗೆ ಆತಂಕ ಹುಟ್ಟಿಕೊಂಡಿತು. ಕಳೆದ ಮೂರು ವರ್ಷಗಳಿಂದ ಪುಸ್ತಕ ಪ್ರಾಧಿಕಾರ ಪ್ರಕಾಶಕರಿಂದಾಗಲಿ, ಲೇಖಕರಿಂದಾಗಲಿ ಗ್ರಂಥ ಖರೀದಿಸಿದ ವಿಚಾರ ನನಗಂತೂ ತಿಳಿದಿಲ್ಲ. ಅದಕ್ಕೂ ಕಾರಣ ಇದಿ್ದರಬಹುದು. ಆದರೆ ಮೇಲ್ನೋಟಕ್ಕೆ ಯಾಕೆ ಹೀಗೆಲ್ಲ ವರ್ಷಕ್ಕೊಂದು ನಿಯಮ ಎಂಬ ನೋವು ಸಣ್ಣ ಪ್ರಕಾಶಕರಲ್ಲಿ ಇದ್ದೇ ಇದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಕೂಡ ನಿರ್ದಿಷ್ಟವೂ ನಿರ್ದುಷ್ಟವೂ ಆದ ಪುಸ್ತಕ ನೀತಿಯೊಂದನ್ನು ತರಬೇಕಾಗಿದೆ. ಸಗಟು ಖರೀದಿ ಯೋಜನೆ ಬಂದಿದೆ ಎಂಬ ಒಂದೇ ಕಾರಣಕ್ಕೆ ಪುಸ್ತಕ ಪ್ರಕಾಶಕರ ಸಂಖ್ಯೆಯ ಮೂರು ಪಟ್ಟು ಹೆಚ್ಚಾದದ್ದು ನಿಜವಾಗಿ ಪುಸ್ತಕ ಪ್ರೀತಿಯಿಂದಲೆ ? ಎಂದೂ ಕೇಳಬೇಕೆನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT