ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗ ಕಟ್ಟುವಾಗ ಇದ್ದವರಾರು?

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಗೌರವಾನ್ವಿತ ಸನ್ಮಾನ್ಯ ಶ್ರಿ ಮಾಜೀ ಮುಖ್ಯಮಂತ್ರಿ ಯಡ್ಯೂರಪ್ಪನವರಿಗೆ, ನನ್ನ ವಿನಮ್ರ ನಮನ ಸಹಿತ ಪ್ರಶ್ನ (ಪ್ರಶಸ್ತಿ) ಪತ್ರ.

ಜಗತ್ತಿನ ಇಡೀ ಮಾನವಕುಲಕ್ಕೇ ಅತ್ಯಮೂಲ್ಯ ಸಂದೇಶವನ್ನಿತ್ತು, ವಚನಾಮೃತ ಸಾರದಿಂದ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವ ದಿವ್ಯ ದೇದೀಪ್ಯಮಾನವಾದ ಮಾರ್ಗವನ್ನು ತೋರಿಸಿದ, ಸಕಲ ಶರಣಶ್ರೇಷ್ಠರ ಪಾದಾರವಿಂದಗಳಿಗೆ ಶರಣಾರ್ಥಿಗಳನ್ನು ಮಾಡುತ್ತಾ, ನನ್ನ ಕೆಲವು ಸಂಶಯಗಳನ್ನು ಮಾನ್ಯ ಮಾಜೀ ಮುಖ್ಯಮಂತ್ರಿಗಳಲ್ಲಿ  ಕೇಳ ಬಯಸುತ್ತೇನೆ.

1.  40 ವರ್ಷಕ್ಕೂ ಮೀರಿ ಬಿಜೆಪಿಯನ್ನು ಕಟ್ಟಿ ಬೆಳಸಿದವ ನಾನೆಂದು ಕೂಗಿಕೂಗಿ ಹೇಳುತ್ತಿರುವ ಮಾನ್ಯರೇ, ಇಂದು  ಅದೇ ಸಂಘಕ್ಕೆ ಪವಿತ್ರ ಲಿಂಗಧಾರಣೆ ಮಾಡಿ, ಕನ್ನಡಿಗರ ಮನದಲ್ಲಿ  ಶಾಶ್ವತವಾದ  ಜಾತಿ ಬೀಜಾಂಕುರವ ಮಾಡಿದ್ದೀರಲ್ಲಾ ಹಾಗಾದರೆ ಅದೇ ಸಂಗವನ್ನು ಕಟ್ಟುವಾಗಲೂ, ನೆಟ್ಟು ಬೆಳೆಸುವಾಗಲೂ ನಿಮಗೆ ನೆರವಿತ್ತವರೆಲ್ಲಾ ಬರೀ ವೀರಶೈವರೇನಾ  ಅಥವಾ ಅನ್ಯ ಜಾತಿಯವರ ಶ್ರಮದ ಪಾಲೂ ಇದೆಯೋ?

2.ಇಡೀ ಭಾರತವೇ ಬಲ್ಲುದು, ಇಂದು ರಾಜಕೀಯ ಪಕ್ಷಗಳಾವುವೂ ಶುದ್ಧವಾಗಿಲ್ಲ ಎಂದು. ಆದರೆ ಪ್ರಜಾಪ್ರಭುತ್ವಕ್ಕಿಂತ ಉತ್ತಮವಾದ ಬೇರೊಂದು ವ್ಯವಸ್ಥೆಯೂ ಸಹ ಇಲ್ಲವೆಂಬುದೂ ಅಷ್ಟೇ ಸತ್ಯ ಮತ್ತು ಜಗತ್‌ವೇದ್ಯ.

ಆ ಕಾರಣದಿಂದಲೇ, ನಾವಿಂದು ನಿಮ್ಮಂಥವರನ್ನೆಲ್ಲಾ ಸಹಿಸಿಕೊಂಡು ಈ 65 ವರ್ಷಗಳು ಬದುಕಿರುವುದು. ರಾಜಕಾರಣದಲ್ಲಿ ಅನಿಷ್ಠದಲ್ಲಿ ಕನಿಷ್ಠ ವನ್ನು ಹುಡುಕುತ್ತಾ ಆರಿಸುವುದಾಗಿದೆ. ಸುಮಾರು 40ವರ್ಷಗಳು ಕಾದಿದ್ದು, ಕರ್ನಾಟಕದ ಆರುಕೋಟಿ   ಪೂಜ್ಯ ಕನ್ನಡಿಗರು, ಎಲ್ಲರದ್ದೂ ಆಯ್ತು ಇನ್ನು ಉಳಿದಿರುವ ಬಹುನಿರೀಕ್ಷಿತ ಬಿಜೆಪಿಯನ್ನು ಆರಿಸಿದರೆ ಬಹು ದೊಡ್ಡದಲ್ಲದಿದ್ದರೂ, ಒಂದು ಚಿಕ್ಕ ಬದಲಾವಣೆಯನ್ನಾದರೂ ತರುತ್ತಾರೆಂಬ ನಿರೀಕ್ಷೆ ನಮ್ಮದಾಗಿತ್ತು. ಆದರೆ ಆಗಿರುವುದೇನು? ಸುಮಾರು 175 ತಾಲೂಕುಗಳಲ್ಲಿ ಅಜಮಾಸು 150ಕ್ಕೂ ಹೆಚ್ಚಿನವುಗಳಲ್ಲಿ  ಘನಘೋರ ಬರ ಬಂದು, ಕೋಟ್ಯಂತರ  ಬಡರೈತರು, ಕಾರ್ಮಿಕರು ತಲ್ಲಣಿಸಿ ಹೋಗುತ್ತಿದ್ದಾಗ, ಕೃಷಿ, ನೀರಾವರಿ, ಪಿ.ಡಬ್ಲ್ಯುಡಿ. ವಿದ್ಯುಚ್ಚಕ್ತಿ, ಕೈಗಾರಿಕಾ, ವಸತಿ, ಅಬಕಾರಿ, ಮುಂತಾದ ಅತಿಮುಖ್ಯ ಖಾತಾ ಸಚಿವರ ಕೈಲಿ ರಾಜೀನಾಮೆ ಕೊಡಿಸಿ, ಅರ್ಧಕ್ಕೂ ಹೆಚ್ಚಿನ ವಿಧಾನ-ವಿಕಾಸ ಸೌಧದ ಭಾಗದ ಕಚೇರಿಗಳಿಗೆ ಮಾಸಗಟ್ಟಲೆ ಬೀಗ ಜಡಿಸಿ, ಬೆಂಗಳೂರಿಗೂ ದೆಹಲಿಗೂ ಓಡಾಡುವುದರಲ್ಲೇ ಕಾಲಹರಣ  ಮಾಡಿದಿರಲ್ಲಾ ಇದು ಯಾವ ಪುರುಷಾರ್ಥಕ್ಕೆ ಮಹಾಸ್ವಾಮಿ?

3.ಪರಮಪೂಜ್ಯ, ಜಗದಣ್ಣ, ಮಾನವಕುಲೋದ್ಧಾರಕರಾದ ಬಸವಣ್ಣನವರ, ಯಾವ ಬೋಧಾಮೃತ ವಚನ ಪಾಲನೆ ನಿಮ್ಮಿಂದ ಆಗಿದೆಯೆಂಬುದನ್ನು ಹೇಳಬಲ್ಲಿರಾ? ಜ್ಞಾಪಿಸಲೇ,.

ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿಬಹಿರಂಗ ಶುದ್ಧಿ ನಮ್ಮ ಕೂಡಲ ಸಂಗನ ಒಲಿಸುವ ಪರಿ ಹೇಳಿ, ಇದರಲ್ಲಿ  ಏನು ಪಾಲಿಸಿದ್ದೀರಿ. ಕಳಬೇಡ-ಸರ್ಕಾರೀ ಜಮೀನಿನ ಗತಿ: ಕೊಲಬೇಡ-6 ಕೋಟಿ ಕನ್ನಡಿಗರ ನಂಬಿಕೆಯ ಕೊಲೆ, ಬಿಜೆಪಿಯ ಕಗ್ಗೊಲೆ. ಹುಸಿಯ ನುಡಿಯಲು ಬೇಡ-ಹುಸಿಯ ಆಧಿಪತ್ಯದಲ್ಲಿ ಸತ್ಯಕ್ಕೇ ಬಡತನ ಬಂದಿಲ್ಲವೇ. ಅನ್ಯರಿಗೆ ಅಸಹ್ಯಪಡ ಬೇಡ-ಪಾಪ ನೀವೇ ಆರಿಸಿದ, ಈಗ ಬೇಡವೆನ್ನುತ್ತಿರುವ ಗೌಡರನ್ನು,ಆಗ ಬೇಡವೆಂದು ಈಗ ಬೇಕೆನ್ನುತ್ತಿರುವ ಜಗದೀಶರ ಬಗ್ಗೆ ತಾವು ಪಟ್ಟಿದ್ದೇನು. ತನ್ನಬಣ್ಣಿಸ ಬೇಡ-ಪರಪ್ಪನ ಅಗ್ರಹಾರಕ್ಕೆ ಹೋಗುವಾಗಲೂ,ನೀವು ಅಲ್ಲಾಡಿಸಿದ ಕೈನ ಎರಡು ಬೆರಳುಗಳ ಅರ್ಥವೇನು. ಇದಿರ ಹಳಿಯಲು ಬೇಡ-ನಿಮ್ಮ ಹಳಿಯುವ ತುಳಿತಕ್ಕೆ ನಿಮ್ಮ ಪಕ್ಷದ ಹೈ(ಜಿನಿಕ್)ಕಮ್ಯೋಂಡ್ ನಾಯಕರೆಲ್ಲಾ   ತತ್ತರಿಸಿ ತೂರಿಹೋದರಲ್ಲಾ, ಇಂಥಾ ತಾವು ಅಂತರಂಗದಲ್ಲಾಗಲೀ, ಬಹಿರಂಗದಲ್ಲಾಗಲೀ ಅಥವಾ ನಮ್ಮ ಕೂಡಲ ಸಂಗನ ಕೃಪಾದೃಷ್ಟಿಯಲ್ಲಾಗಲೀ ಎಷ್ಟು ಶುದ್ಧರೆಂಬುದಕ್ಕೆ ಒಮ್ಮೆ,. ಒಮ್ಮೆ,. ಒಂದೇ ಒಂದು ಸಲ ನಿಮ್ಮ ಆತ್ಮ (ಅದಿನ್ನೂ ಇದ್ದರೆ) ಸಂಶೋಧನೆ ಮಾಡಿಕೊಳ್ಳಿ.

ದಯವಿಟ್ಟು ಈ ನನ್ನ ಪತ್ರಕ್ಕೆ ಸಿಟ್ಟಾಗಬೇಡಿ. ಬದಲಿಗೆ  ತುಳಿದು ಬಾಳುವುದ ಬಿಟ್ಟು, ತಿಳಿದು ಬಾಳಿ-ಆಗ ನೀವು ಅಳಿದ ಮೇಲೂ ಉಳಿಯುವಿರಿ.  ಪೂಜ್ಯ ಮತದಾರನಿಗೆ ವಂಚಿಸಿದರೆ, ಆತ್ಮವಂಚನೆಯಾದೀತು. ದೇವರು ಗುಡಿಯಲ್ಲಿಲ್ಲ, ನಿಮ್ಮ ನುಡಿಯಲ್ಲಿದ್ದಾನೆ.

ನಿಮ್ಮ ಹಿತೈಷಿ, ಮಾಸ್ಟರ್ ಹಿರಣ್ಣಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT