ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಮೇಶ್ವರರ ಪುಣ್ಯಾರಾಧನೆ, ಕಳಸಾರೋಹಣ

Last Updated 5 ಡಿಸೆಂಬರ್ 2012, 8:20 IST
ಅಕ್ಷರ ಗಾತ್ರ

ಬನಹಟ್ಟಿ: ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಬಳಿ ಕೃಷ್ಣಾ ನದಿ ಉತ್ತರಾಭಿಮುಖವಾಗಿ ಹರಿಯುತ್ತದೆ. ನದಿಗಳು ಉತ್ತರಾಭಿಮುಖವಾಗಿ ಹರಿದರೆ ಆ ಸ್ಥಳ ಪುಣ್ಯ ಸ್ಥಳವೆಂದು ನಿರ್ಮಿತವಾಗುತ್ತದೆ. ಈ ಪುಣ್ಯ ಸ್ಥಳದಲ್ಲಿ ಇಂಚಗೇರಿಯ ಗುರು ಪರಂಪರೆಯ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರ ಕರ್ಮಭೂಮಿ ಹಾಗೂ ತಪೋಭೂಮಿಯಾಗಿರುವ ಹಿಪ್ಪರಗಿ ಇದೀಗ ಬಹುದೊಡ್ಡ ಪುಣ್ಯ ಕ್ಷೇತ್ರವಾಗಿ ಬೆಳೆದು ಎಲ್ಲರ ಗಮನ ಸೆಳೆದಿದೆ.

ಜಮಖಂಡಿ ತಾಲ್ಲೂಕು ಸಾವಳಗಿಯ ಹಿರೇಮಠ ಎಂಬ ಶಿವಶರಣರ ಮನೆಯಲ್ಲಿ ಸಂಗಮೇಶ ಮಹಾರಾಜರು ಜನಿಸಿದರು. ಮಾನವೀಯ ಸದ್ಗುಣಗಳ ಗಣಿಯಾಗಿದ್ದ ಅವರು ನೊಂದವರ, ಬೆಂದವರ, ದೀನ ದಲಿತರ ಕಣ್ಮಣಿಯಾಗಿದ್ದರು. ಇಂಥ ಉದಾರ ಚರಿತ ಸತ್ಪುರುಷನನ್ನು ದಿವ್ಯ ಶಕ್ತಿಯೊಂದು ಹುಡುಕಿಕೊಂಡು ಬಂತು. ಆಧ್ಯಾತ್ಮ ಲೋಕದ ರಾಜಾಧಿರಾಜರೆಂದೇ ಖ್ಯಾತರಾಗಿದ್ದ ಗಿರಿಮಲ್ಲೇಶ್ವರ ಮಹಾರಾಜರು. ಮಾನವೀಯತೆಯ ಪ್ರತಿರೂಪವಾಗಿದ್ದ ಸಂಗಮೇಶ್ವರರಿಗೆ ಗುರು ಉಪದೇಶವನ್ನಿತ್ತು ಅನುಗ್ರಹಿಸಿದರು.

ಓದು ಬರಹ ಗೊತ್ತಿರದ, ಪ್ರವಚನ ಮಾಡಲು ತಿಳಿಯದ ಮುಗ್ಧ ಜೀವಿಯೊ ಬ್ಬನಿಗೆ `ಸರ್ವಜ್ಞ' ಗುರುವಿನ ದೀಕ್ಷೆ ದೊರಕಿತ್ತು. ಸಂಗಮೇಶ್ವರರು ನಿಜ ಜ್ಞಾನಿಗಳಾಗಿ ಗುರು ಉಪದೇಶವನ್ನು ಆಚರಣೆಯಲ್ಲಿ ರೂಢಿಸಿಕೊಂಡು ತ್ರಿವಿಧ  ದಾಸೋಹಿಗಳಾದರು.

ಸದಾಕಾಲ ನಿತ್ಯ,  ನೇಮ, ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಗುರುವನ್ನು ಪ್ರತಿಯೊಂದು ಸಂದರ್ಭದಲ್ಲಿ ಹಿಂಬಾಲಿಸುತ್ತ ಎಲ್ಲ ಉಪಾಧಿಗಳನ್ನು ದಾಟಿ ಪರಬ್ರಹ್ಮದಲ್ಲಿ ತಾವೇ ತಾವಾಗಿ ಹೋದರು. ಇಂಚಗೇರಿ ಗುರು ಪರಂಪರೆಯ ತತ್ವಾದರ್ಶಗಳ ಪ್ರತೀಕವಾಗಿದ್ದ ಸಂಗಮೇಶ್ವರ ಮಹಾರಾಜರು ತನ್ನ ಗುರುವಿನ ಸಮ್ಮುಖದಲ್ಲಿಯೇ ಲಿಂಗೈಕ್ಯರಾದರು.

ಅವರು ಲಿಂಗೈಕ್ಯರಾದ ಕಾರ್ತಿಕವದ್ಯ ಷಷ್ಠಿಯ ದಿನದಂದು ಅವರ ಪುಣ್ಯಾ ರಾಧನೆ ಕಳೆದ 80 ವರ್ಷಗಳಿಂದ ಸತತ ವಾಗಿ ನಡೆದು ಬಂದಿದೆ. ಅವರ ಮೊದಲು ಪುಣ್ಯಾರಾಧನೆಯಲ್ಲಿ ಗಿರಿ ಮಲ್ಲೇಶ್ವರ ಮಹಾರಾಜರು ಭಾಗವಹಿಸಿ ತಮ್ಮ ಶಿಷ್ಯನ ಆಧ್ಯಾತ್ಮಿಕ ಸಾಧನೆ ಕುರಿತು ಪ್ರವಚನ ಗೈದರು.

ಹಿಪ್ಪರಗಿ ಗ್ರಾಮದ ಹುಕ್ಕೇರಿ ಮನೆತನದವರ ಹೊಳೆ ಯ ದಂಡೆಯ ಮೇಲಿರುವ ಇರುವ ದೊಡ್ಡಿಯಲ್ಲಿ ಸಂಗಮೇ ಶ್ವರರ ಸಮಾಧಿ ಇದೆ. ಗಿರಿ ಮಲ್ಲೇಶ್ವರ ಮಹಾ ರಾಜರು ಕೀರ್ತನೆ ಮಾಡುತ್ತ ತಮ್ಮ ಶಿಷ್ಯರ ಗದ್ದುಗಿಗೆ  ದೀರ್ಘದಂಡ ನಮಸ್ಕಾರ ಮಾಡಿದ್ದು ಚರಿತ್ರೆಯ ಪುಣ್ಯ ಪ್ರಸಂಗವಾಗಿದೆ.

1972ರಲ್ಲಿ ಮಾಧವಾನಂದ ಪ್ರಭೂಜಿಯವರು ಇಲ್ಲಿಯೇ ಶ್ರೀ ಮಠದ ಆಶ್ರಮ ಸ್ಥಾಪಿಸಿ, ನಿತ್ಯ, ನೇಮ, ಭಜನೆ, ದಾಸೋಹ, ಆರಂಭಿ ಸಿದರು. ಗುರುಪುತ್ರೇಶ್ವರ ಮಹಾ ರಾಜರು ಆಶ್ರಮವನ್ನು ವಿಸ್ತರಿಸಿದರು. ಇದೇ ಸ್ಥಳಕ್ಕೆ ಇಂಚಗೇರಿಯಿಂದ  ಪ್ರಭು ಬೆನ್ನಾಳೆ ಮಹಾರಾಜರು ಹಿಪ್ಪರಗಿ ಪುಣ್ಯ ಕ್ಷೇತ್ರಕ್ಕೆ ಬಂದರು.  ಸಂಗಮೇಶ್ವರ ಮಹಾರಾಜರ ಮಂದಿರವನ್ನು ನಿರ್ಮಿಸಬೇಕೆಂಬ ಇಚ್ಛೆ ಅವರಲ್ಲಿ ಮನೆ ಮಾಡಿತು. ಹಿಪ್ಪರಗಿಯಲ್ಲಿ ಶ್ರಾವಣ ಸಪ್ತಾಹ, ಕಾರ್ತಿಕ ಸಪ್ತಾಹ ಹಾಗೂ ಮಾಘ ಸಪ್ತಾಹಗಳನ್ನು ಅದ್ದೂರಿಯಾಗಿ ಏರ್ಪಡಿಸುತ್ತ ಬಂದರು.

ಸಪ್ತಾಹಗಳಲ್ಲಿ ಭಾಗವಹಿಸಿದ ಭಕ್ತರಿಂದ ವಂತಿಗೆಯನ್ನು ಸಂಗ್ರಹಿಸಿದರು. ಅಂದಾಜು ಎರಡು ಕೋಟಿ ರೂಗಳ ವೆಚ್ಚದಲ್ಲಿ ಬೃಹತ್ ಮಂದಿರವನ್ನು ನಿರ್ಮಿಸಿ ತಮ್ಮ ಗುರುವಿನ ಸಂಕಲ್ಪವನ್ನು ಸಾಕಾರಗೊಳಿಸಿದರು. ಕೃಷ್ಣಾ ನದಿಯ ತೀರದಲ್ಲಿ ಪ್ರಕೃತಿ ರಮ್ಯ ತಾಣದಲ್ಲಿ ನಿರ್ಮಿತವಾದ ಈ ಗಗನಚುಂಬಿ ಮಂದಿರ ಶ್ರೀ ಪ್ರಭು ಬೆನ್ನಾಳೆ ಅವರ ಕೃತ್ವತ್ವ ಶಕ್ತಿಗೆ ಸಾಕ್ಷಿ ಯಾಗಿದೆ. ಡಿಸೆಂಬರ್ 3 ರಂದು ಅಮೃತ ಶಿಲೆಯಿಂದ ನಿರ್ಮಿತವಾದ ಸುಂದರ ಮೂರ್ತಿಯ ಪ್ರತಿಷ್ಠಾಪಣೆಯಾಗಿದ್ದು, ಒಂದು ಕಿಲೋ ಸುವರ್ಣ ಲೇಪಿತ ಕಳಸದ ಕಳಸಾರೋಹಣ ಕಾರ್ಯಕ್ರಮ ಇದೇ 5ರಂದು  ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT