ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಕ್ಷೇತ್ರಕ್ಕೆ ಸಪ್ತಕ್ ಸೇವೆ

Last Updated 19 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

`ಸಂಗೀತಗಾರರು ಸಾಧನೆ ಮಾಡಬೇಕೆಂದರೆ, ಅವರಿಗೆ ಪ್ರೋತ್ಸಾಹಕರ ಆಶೀರ್ವಾದ ಬೇಕು. ಮನೆಯವರ ಸಹಕಾರವಿದ್ದಲ್ಲಿ ಮಾತ್ರ ಬೆಳವಣಿಗೆ ಸಾಧ್ಯ. ಒಳ್ಳೆ ಪತಿ, ಗುರುಗಳು ಜೊತೆಗೆ ಉತ್ತಮ ಶಿಷ್ಯಂದಿರನ್ನೂ ಪಡೆಯುವುದರೊಂದಿಗೆ ನಾನು ಅದೃಷ್ಟಶಾಲಿ~ ಎಂದು ಆಘ್ರಾ ಘರಾಣೆಯ ಹೆಸರಾಂತ ಖಯಾಲ್ ಗಾಯಕಿಯಾದ ವಿದುಷಿ. ಲಲಿತ್ ಜೆ. ರಾವ್ ಹೇಳಿದರು.

ಸಪ್ತಕ ಸಂಸ್ಥೆಯ ಗೌರವವನ್ನು ಸ್ವೀಕರಿಸಿ ಮಾತನಾಡುವಾಗ ಅವರ ಮಾತಿನಲ್ಲಿ ತಮ್ಮಂದಿಗಿದ್ದವರ ಬಗ್ಗೆ ಋಣ ಸಂದಾಯದ ಭಾವವಿತ್ತು.ಸಂಗೀತದ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುವ ಸಪ್ತಕ ಸಂಸ್ಥೆ ಇದೇ ಆಗಸ್ಟ್ 15ರಂದು ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್, ಬೆಂಗಳೂರು, ಇವರ ಸಹಯೋಗದೊಂದಿಗೆ ಲಲಿತಾ ಹರೀಶ್ ಕಾಯ್ಕಿಣಿ ಸ್ಮರಣಾರ್ಥ ಸಂಗೀತ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಸಪ್ತಕ, ಉದಯೋನ್ಮುಖ ಪ್ರತಿಭೆಗಳನ್ನು ಬೆಳೆಸುವ ಗುರುತರ ಕೆಲಸ ಮಾಡುತ್ತಿದೆ. ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ದುಡಿಯುವ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುತ್ತದೆ. ಅಂಥವರ ಸೇವೆ ಹಾಗೂ ಸಾಧನೆ ಗುರುತಿಸಿ  ಸನ್ಮಾನಿಸುತ್ತದೆ. ಎರಡೂ ಗಮನೀಯವಾದ ಅನನ್ಯ ಕೆಲಸಗಳು.  

 ಕೈಲಾಶ್ ಕುಲಕರ್ಣಿಯವರ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭೀಮ್ ಪಲಾಸ್ ರಾಗದೊಂದಿಗೆ ತಮ್ಮ ಕಛೇರಿ ಆರಂಭಿಸಿದರು. ಸಿಯಾ ಸಂಘ ಝೂಲೆ, ಎಂಬ  ಝೂಲಾ  ಹಾಡಿದರು. ಇವರಿಗೆ  ಶಶಿಭೂಷಣ್ ಗುರ್ಜಾರ್ ತಬಲಾದಲ್ಲಿ ಹಾಗೂ ಹಾರ್ಮೋನಿಯಂನಲ್ಲಿ ಅಶ್ವಿನ್ ವಾಲ್‌ವಲ್‌ಕರ್ ಉತ್ತಮ ಸಾಥ್ ನೀಡಿದರು. ಗುರು ಲಲಿತ್ ಅವರ ಶಿಷ್ಯ ಕೈಲಾಶ್.
 ಲಲಿತ್ ರಾವ್ ಅವರನ್ನು ಸಂಗೀತ ಪ್ರೇಮಿ ಹಾಗೂ ಲಲಿತ್ ಅವರ ಗೆಳತಿ ತಾರಾ ಚಂದಾವರ್ಕರ್ ಸನ್ಮಾನಿಸಿದರು. ತಾವು ಲಲಿತ್ ಅವರೊಂದಿಗೆ ಕಳೆದ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ಸನ್ಮಾನದ ನಂತರ, ವಿನಾಯಕ ಹೆಗಡೆ ಅವರ ಗಾಯನ ಕಛೇರಿ ಏರ್ಪಡಿಸಲಾಗಿತ್ತು. ವಿಲಂಬಿತ್ ಏಕ್ ತಾಳದಲ್ಲಿ ಮಾರು ಬಿಹಾಗ್ ರಾಗವನ್ನು ಹಾಡುವುದರೊಂದಿಗೆ ತಮ್ಮ ಕಾರ್ಯಕ್ರಮ ಆರಂಭಿಸಿದರು. `ಪರಿ ಮೊರಿ ನಾವ್..~  ಬಂದೀಶನ್ನು ಹಾಗೂ  `ಕೈಸೆ ಜಾವೋರಿ~  ಎಂಬ ಛೋಟಾಖ್ಯಾಲ್‌ನ ಹಾಡುಗಾರಿಕೆಗೆ ಕೇಳುಗರಿಂದ ಮೆಚ್ಚುಗೆಯ ಕರತಾಡನವೂ ದೊರೆಯಿತು.

ಅವರ ಆಲಾಪ್ ಹಾಗೂ ಸರ್ಗಮ್‌ಗಳ ಗಾಯಕಿಯನ್ನು ಆನಂದಿಸುತ್ತಿದ್ದ ಸಭಿಕರಿಗೆ, ಧ್ವನಿ ವರ್ಧಕದ ತಾಂತ್ರಿಕ ದೋಷ ಕಿರಿಕಿರಿ ಎನಿಸಿದ್ದು ಸುಳ್ಳಲ್ಲ. ಅದಕ್ಕೆ ವಿಚಲಿತರಾಗದೇ ಭೂಪ್ ರಾಗದಲ್ಲಿ ಹಾಡಿದ `ಗರಜ ಘಟಾವೋ~  ಎಂಬ ಬಂದೀಶ್ ಹಾಗೂ `ಘನ ಘನ ಘೋರಾ~ ಚೋಟಾ ಖ್ಯಾಲ್‌ನ ಹಾಡುಗಾರಿಕೆಯೂ ಉತ್ತಮವಾಗಿ ಮೂಡಿಬಂದಿತು.

ಕೊನೆಗೆ `ಶಿವನ ಭಜಿಸಿರೋ~ ಎಂಬ ಹಾಡಿನೊಂದಿಗೆ ಕಾರ್ಯಕ್ರಮ ಮುಗಿಸಿದರು. ಯುವ ಪ್ರತಿಭೆ ಗಣೇಶ್ ಭಾಗವತ್ ಅವರು ತಬಲಾದಲ್ಲಿ ಉತ್ತಮ ಸಾಥ್  ನೀಡಿದರು. ಹಾರ್ಮೋನಿಯಂನಲ್ಲಿ ಪ್ರಕಾಶ್ ಹೆಗಡೆ ಸಾಥ್ ನೀಡಿದರು. 

ಇದೇ ಸಂದರ್ಭದಲ್ಲಿ ಯುವ ಪ್ರತಿಭೆ ಯಶ್ ಗೋಲ್ಚಾ (ಗಾಯನ) ಅವರಿಗೆ ಪಂ. ಮಂಗೇಶನಾತ್ ಗೋವೇಕರ್ ಸ್ಮರಣಾರ್ಥ ಹಾಗೂ ವಿಜೇತಾ ಹೆಗಡೆ (ತಬಲಾ) ಅವರಿಗೆ ಪಂ. ಮಾರುತಿ ಕುರ್ಡಿಕರ್ ಸ್ಮರಣಾರ್ಥ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT