ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ-ನೃತ್ಯ ಸಂಭ್ರಮ

Last Updated 21 ಜನವರಿ 2013, 19:59 IST
ಅಕ್ಷರ ಗಾತ್ರ

ಲಯ- ಲಾಸ್ಯ

ಕರ್ನಾಟಕ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ ಖ್ಯಾತಿಯನ್ನು ಹೊಂದಿರುವ ಪಿ (ಪುಸ್ತಕಂ). ರಮಾ ಕೇವಲ ಪ್ರದರ್ಶಕ ಕಲಾವಿದೆಯಷ್ಟೇ ಅಲ್ಲ, ಸಮರ್ಥ ಸಂಘಟಕಿಯೂ ಹೌದು. ಪ್ರತಿವರ್ಷವೂ ಸಂಗೀತ `ನಿರಂತರ' ಹೆಸರಿನ ಸಂಗೀತ ನತ್ಯೋತ್ಸವ ಏರ್ಪಡಿಸಿ ಅದನ್ನು ಸಾಬೀತು ಮಾಡುತ್ತಿದ್ದಾರೆ.

ವಾರ್ಷಿಕ ಕಲಾ ಉತ್ಸವದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸುವ ಪರಿಪಾಠವನ್ನೂ ಅವರು ಪ್ರಾರಂಭಿಸಿದ್ದಾರೆ. ಈ ಬಾರಿಯ ಸಂಭ್ರಮವು ಕಳೆದ ವಾರ ಮಲ್ಲೇಶ್ವರದ ಸೇವಾಸದನ ಮತ್ತು ಗಾಯನ ಸಮಾಜದಲ್ಲಿ ಯಶಸ್ವಿಯಾಗಿ ನಡೆಯಿತು. ಅದರಲ್ಲಿ ಪಾಲ್ಗೊಂಡಿದ್ದ ಕಲಾವಿದರಿಗೆ ಕಡಗವನ್ನು ತೊಡಿಸಿ ಗೌರವಿಸಿದುದು ಚೆನ್ನಾಗಿತ್ತು.

ಪರಿಣತ ಗಾಯನ
ಆತಿಥೇಯ ಕಲಾವಿದೆಯಾದ ರಮಾ ಅವರು ಗಾಯನ ಸಮಾಜದ ಸಭಾಂಗಣದಲ್ಲಿ ಕಛೇರಿ ಮಾಡಿ ಮುದನೀಡಿದರು. ಉತ್ಸವದ ಸುವ್ಯವಸ್ಥೆಯ ಜವಾಬ್ದಾರಿಯ ನಡುವೆ ಸಂಪದ್ಭರಿತವಾದ ಗಾಯನದಿಂದ ತಮ್ಮ ಪರಿಣತಿ ತೋರಿದರು. ಲತಾಂಗಿ ರಾಗದ ಸಕಲ ವಿವರಗಳು ಸಾಂದ್ರವಾಗಿದ್ದ ಅವರ ಆಲಾಪನೆ, ಮರಿವೇರಿ ದಿಕ್ಕೆವರು ಕೀರ್ತನೆಯ ಗಾಯನ, ಧರಲೋನಿ ನೀ ಸಾಟಿ ಎಂಬಲ್ಲಿ ನೆರೆವಲ್ ಮತ್ತು ಸ್ವರಕಲ್ಪನೆ ಅವರ ಅಗಾಧ ಮನೋಧರ್ಮದಲ್ಲಿ ಬೆಳೆದು ನಿಂತಿತು. ಬಿರ್ಕಾಗಳಿಂದ ತುಂಬಿದ್ದ ಅವರ ಪಲುಕುಗಳಂತೂ ವಿಶಿಷ್ಟತೆಯಿಂದ ಮೆರೆದವು.

ಅವರ ಕಛೇರಿಯಲ್ಲಿ ಬುದ್ಧಿ ಮತ್ತು ಹೃದಯಗಳೆರಡೂ ಸಮನ್ವಯಕಾರಿಯಾಗಿ ಕೆಲಸ ಮಾಡಿದವು. ಬುದ್ಧಿಯ ಅಂಶ ಲಯದಲ್ಲಿ, ಹೃದಯದ ಅಂಶ ಭಾವ ಪ್ರಕಟಣೆಯಲ್ಲಿ ವ್ಯಕ್ತಗೊಂಡಿತು. ಹಾಗಾಗಿ ಅವರ ವಿಸ್ತರಣೆ ಪ್ರಭಾವ ಬೀರಿತು. ಇತ್ತಿಚೆಗೆ ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪಡೆದುಕೊಂಡಿರುವ ಡಾ.ಟಿ.ಟಿ.ಶ್ರೀನಿವಾಸನ್ ಅವರ ಪರಿಣತಿ ಪಿಟೀಲು ವಾದನ ಅದರ ಶೋಭೆಯನ್ನು ಮತ್ತಷ್ಟು ಹೆಚ್ಚಿಸಿತು.

`ಬಾರೋ ಕಷ್ಣಯ್ಯ', `ಬಂಟನಾಗಿ ಬಾಗಿಲ ಕಾಯುವೆ' (ಕನಕದಾಸರು, `ಎಂಜಲು ಹರಿವಾಣವ' ಎಂಬ ಉಗಾಭೋಗದೊಂದಿಗೆ), `ಭೋ ಶಂಭೋ' (ರೇವತಿ) ಮುಂತಾದ ರಚನೆಗಳು ಭಾವಮಯವಾಗಿದ್ದವು. ಕದನ ಕುತೂಹಲ ತಿಲ್ಲಾನ ಚೇತೋಹಾರಿಯಾದ ಲಯದಲ್ಲಿ ಕಛೇರಿಯ ಕೊನೆಯ ರಚನೆಯಾಗಿ ಮೂಡಿಬಂದಿತು. ಡಾ.ಶ್ರೀನಿವಾಸನ್ (ಪಿಟೀಲು), ಎಂ.ಸುಧಾಕರ (ಮೃದಂಗ), ಎಂ.ಎ. ಕೃಷ್ಣಮೂರ್ತಿ (ಘಟ) ಮತ್ತು ಎಂ.ಗುರುರಾಜ್ (ಮೋರ್ಸಿಂಗ್) ಅವರ ಅನುಸರಣೆ ಅಭಿನಂದನೀಯ.

ಪುರುಷ ನರ್ತನ ವೈಭವ
ಉತ್ಸಾಹಿ ಯುವ ನರ್ತಕರಾದ ಕಾರ್ತಿಕ್ ದಾತಾರ್, ಶ್ರೀನಿವಾಸ್, ಸೋಮಶೇಖರ್ ಮತ್ತು ಉಜ್ವಲ್ `ತಾಂಡವ' ಎಂಬ ಹೆಸರಿನಲ್ಲಿ ಒಗ್ಗೂಡಿ ನೃತ್ಯ ಪ್ರದರ್ಶನಗಳನ್ನು ನೀಡಿ ಜನಪ್ರಿಯತೆ ಗಳಿಸಿಕೊಳ್ಳುತ್ತಿದ್ದಾರೆ. ಸೇವಾಸದನದಲ್ಲಿ ನಡೆದ ಅವರ ಪ್ರದರ್ಶನ ರೋಮಾಂಚನಗೊಳಿಸಿತು. ಕಲಾತ್ಮಕವಾದ ನೆಗೆತ, ಹಾರುವಿಕೆ, ಚಿಮ್ಮುವಿಕೆ ಮುಂತಾದ ಪುರುಷ ಪ್ರಧಾನ ಚಲನವಲನಗಳು, ಸೊಗಸಿನ ಅರೆಮಂಡಲಿಗಳು, ನವಿರಾದ ಕೈ ಮತ್ತು ಕಾಲಿನ ಚಾಚುವಿಕೆಗಳಿದ್ದ ಅವರ ನೃತ್ಯವು ಪುರುಷ ನರ್ತನದ ವೈಭವ- ವಿಜೃಂಭಣೆಯನ್ನು ಪ್ರತಿಪಾದಿಸಿತು.

ವೇದಿಕೆಯನ್ನು ಸಂಪೂರ್ಣವಾಗಿ ಬಳಸಿಕೊಂಡು ಎಲ್ಲಾ ದಿಕ್ಕುಗಳಲ್ಲೂ ಚಲನೆಗಳನ್ನು ಸೃಷ್ಟಿಸಿ ಚತುಷ್ಟಯರು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿದರು. ಆ ಪುರುಷ ವಿಶೇಷತೆಗಳೊಂದಿಗೆ ನಾಲ್ಕೂ ನರ್ತಕರ ಅಭಿನಯ ಕೌಶಲ ಸುಂದರವಾಗಿ ಬೆಸೆದುಕೊಂಡು ಅದೊಂದು ಸಮಗ್ರ ಪ್ರದರ್ಶನವೆನಿಸಿಕೊಂಡಿತು.

ಕೃಷ್ಣ, ಸುದಾಮ, ರಾಮ, ಭೀಮ, ಜರಾಸಂಧ ಇತ್ಯಾದಿ ಪಾತ್ರಗಳನ್ನು ಜೀವಂತಗೊಳಿಸುವಲ್ಲಿ ಅವರ ವೈಯಕ್ತಿಕ ಪ್ರತಿಭೆಗಳು ಮಿಂಚಿದವು. ರಾಗಮಾಲಿಕಾ ಸ್ವರಪಲ್ಲವಿ (ಷಣ್ಮುಖಪ್ರಿಯ, ರತಿಪತಿಪ್ರಿಯ ಮತ್ತು ಖರಹರಪ್ರಿಯ) ಯಲ್ಲ ರಾಗ, ತಾನ ಮತ್ತು ಪಲ್ಲವಿಯನ್ನು ಆಧಾರವಾಗಿಸಿಕೊಂಡು ಅವರು ಧೀರೋದ್ಧಟ (ಭೀಮ), ಧೀರೋದಾತ್ತ (ರಾಮ), ಧೀರಲಲಿತ (ಕೃಷ್ಣ) ಮತ್ತು ಧೀರಶಾಂತ (ಚಾರುದತ್ತ) ನಾಯಕರ ಚಿತ್ರಣದ ಮೂಲಕ ಮನರಂಜಿಸಿದರು.

ದೂರದ ಅಮೆರಿಕೆಯಲ್ಲಿ ಹುಟ್ಟಿ, ಬೆಳೆದು ಕರ್ನಾಟಕ ಸಂಗೀತದ ಸೂಕ್ಷ್ಮತೆಗಳನ್ನು ಕೂಲಂಕಷವಾಗಿ ಅರಗಿಸಿಕೊಂಡು ಅತ್ಯಂತ ಪ್ರೌಢವಾಗಿದ್ದ ಗಾಯನ ಕಛೇರಿಯನ್ನು ಹದಿಹರೆಯದ ಬಾಲ ಪ್ರತಿಭೆ ಸುದರ್ಶನ್ ಅಜಯ್ ತಿರುಮಲೇ ಮಾಡಿ ರಸಿಕರು ತಲೆದೂಗುವಂತೆ ಮಾಡಿದನು. ತಾಯಿ ಶ್ರೀದೇವಿ ಉತ್ತಮ ಭರತನಾಟ್ಯ ಕಲಾವಿದೆ ಹಾಗೂ ಬೋಧಕಿಯಾಗಿದ್ದು, ಸಂಗೀತವು ಆತನಿಗೆ ಹುಟ್ಟಿನಿಂದಲೇ ವರದಾನವಾಗಿ ಬಂದಿದೆ. ಅವನ ಗಾಯನದಲ್ಲಿ ಕಳಂಕರಹಿತ ಅನುರಾಗ, ಬೆಡಗು ಮತ್ತು ಸಮಚಿತ್ತತೆ ತುಂಬಿತ್ತು. ಆ ಪುಟ್ಟ ದೇಹದ ಇನ್ನೂ ಹೊಡೆಯದ ಕಂಠದಲ್ಲಿ ಶಾಸ್ತ್ರೀಯ ಸಂಗೀತದ ನುಡಿಕಾರಗಳು, ಶೃತಿ ಶುದ್ಧತೆ ಮತ್ತು ಬದ್ಧತೆ, ಸಾರ್ಥಕ ಉಚ್ಚಾರಣೆಗಳು ಮತ್ತು ಲಯ ಪ್ರಭುತ್ವ ಹೊರಹೊಮ್ಮಿದ ಪರಿ ಬೆರಗುಗೊಳಿಸುವಂತಿತ್ತು.

ಆತನ ಸಹಜ ಪ್ರತಿಭೆ ಹಾಗೂ ವರ, ಕಠಿಣ ಸಾಧನೆ ಮತ್ತು ಶಿಸ್ತು ಅಂದು ಅವನು ಹಾಡಿದ ಪ್ರತಿಯೊಂದು ಸಂಗತಿಯಲ್ಲೂ ಹಾದು ಹೊಕ್ಕಿತ್ತು. ಕಛೇರಿಯನ್ನು ಪ್ರತಿಪಾದಿಸಿದ ರೀತಿ-ನೀತಿ ಮತ್ತು ಆತನ ಆತ್ಮವಿಶ್ವಾಸ ನಿಜಕ್ಕೂ ಮೆಚ್ಚಬೇಕಾದದ್ದೇ. ತೋಡಿ ರಾಗದ ಪ್ರಸರಣದಲ್ಲಿ ಪುಟ್ಟ ಕಲಾವಿದನ ಸೃಜನಶೀಲ ಸಂವೇದನೆಗಳು, ಚಿಂತನಕ್ರಮ, ಅಭಿವ್ಯಕ್ತಿ ವಿಧಾನ ವಿಶೇಷ ರೀತಿಯದಾಗಿತ್ತು. ತ್ಯಾಗರಾಜರ `ರಾಜುವೆಡಲ' ಕೀರ್ತನೆಯನ್ನು ಮೌಲಿಕ ಸ್ವರವಿನ್ಯಾಸದೊಂದಿಗೆ ಹಾಡಿ ಗಮನ ಸೆಳೆದ ಸುದರ್ಶನ್ `ತುಂಗಾತೀರವಿಹಾರಿ' (ಪೂಜ್ಯಾಯ ರಾಘವೇಂದ್ರಾಯ ಶ್ಲೋಕದ ಮುನ್ನುಡಿಯೊಂದಿಗೆ), ಮೀರಾ ಪದ (ಹರಿ ತುಮ್ ಹರೊ ) ಮತ್ತು ತಿಲ್ಲಾನದ ಗಾಯನದ ನಂತರ ತಮ್ಮ ಕಛೇರಿಯನ್ನು ಕೊನೆಗೊಳಿಸಿದರು.

ಅಪೂರ್ವ ಕಥಕ್ ರಂಗಾರೋಹಣ
ಭರತನಾಟ್ಯ ಮತ್ತು ಇತರೆ ನೃತ್ಯ ಪ್ರಕಾರಗಳಲ್ಲಿರುವಂತೆ ಕಥಕ್‌ನಲ್ಲೂ ವಿವಿಧ ಶೈಲಿಗಳು ಅಥವಾ ಘರಾಣೆಗಳೂ ಮಹತ್ವದ್ದಾಗಿವೆ. ಭಾನುವಾರ ಎಡಿಎ ರಂಗಮಂದಿರದಲ್ಲಿ ನಡೆದ ಶ್ವೇತಾ ವೆಂಕಟೇಶ್ ಅವರ ಕಥಕ್ ರಂಗಾರೋಹಣವು ಆ ಕೆಲವು ಘರಾಣೆಗಳ ವೈಶಿಷ್ಟ್ಯ ಹಾಗೂ ವೈವಿಧ್ಯಗಳ ಮೇಲೆ ಬೆಳಕು ಚೆಲ್ಲಿ ಅಪೂರ್ವವೆನಿಸಿಕೊಂಡಿತು. ಗುರು ಎಂ.ಬಿ.ನಾಗರಾಜ್ ಅವರ ಶಿಷ್ಯೆಯಾಗಿರುವ ಶ್ವೇತಾ ಭರತನಾಟ್ಯದಲ್ಲೂ ಪ್ರವೀಣೆ. ತಾಯಿ ಡಾ.ಸುಪರ್ಣ ಸಾಯಿವೆಂಕಟೇಶ್ ಅವರೇ ಅವರ ಗುರು.

ಶ್ವೇತಾ ತುಂಬಿದ ಆತ್ಮ ಸ್ಥೈರ್ಯದೊಂದಿಗೆ ಕಥಕ್‌ನ ಬನಾರಸ್, ಜೈಪುರ ಮತ್ತು ಲಖನೌ ಘರಾಣೆಗಳ ವಿಶೇಷತೆಗಳನ್ನು ತಮ್ಮ ಪ್ರದರ್ಶನದಲ್ಲಿ ತೋರಿದರು. ಬನಾರಸ್ ಶೈಲಿಯಲ್ಲಿ ಧ್ರುಪದ್ ಸಂಗೀತದ ಬಳಕೆಯನ್ನು ಕಾಣಬಹುದು. ಶಿವಮಾನಸ ಪೂಜೆಯನ್ನು ಅಭಿನಯಿಸಿ ಧಮಾರ್ (ಹರಿಹರ್ ಭಜೆ) ಮತ್ತು ಛಂದ್-ಕವಿತ್ (ನೃತ್ತ ಮತ್ತು ಸಾಹಿತ್ಯ) ಮಂಡಿಸಿದರು. ಜೈಪುರ ಘರಾಣೆಯನ್ನು ವಿಶದಪಡಿಸಲು ಥಾಟ್‌ಅಂಗ್ (ಕೃಷ್ಣನ ಸೌಂದರ್ಯ ವರ್ಣನೆ), ಛಂದ್-ಕವಿತ್ ಮತ್ತು ಅತ್ಯಂತ ವಿಶೇಷವಾಗಿ ವಿಜಯವಿಠಲದಾಸರ `ನಿನ್ನನಗಲಿ ಪೋಗಲಾರೆನು' (ಜೋನ್‌ಪುರಿ ಮತ್ತು ದೇಶ್‌ರಾಗಗಳು) ಪದವನ್ನು ಕಲಾತ್ಮಕವಾಗಿ ಅಭಿನಯಿಸಿದರು.

ಮುಸಲ್ಮಾನ ಶಾಸಕರ ಕೊಡುಗೆಯ ಪ್ರಾಧಾನ್ಯ ಇರುವ ಲಖನೌ ಘರಾಣೆಯನ್ನು ಗಜಲ್ (ಆಜ್ ಜಾನೆ ಕಾ ಜಿದ್ ನಾ ಕರೋ), ರಾಗ-ತಾಳಮಾಲ (ನೃತ್ತದ ವಿಸ್ತರಣೆ) ಮತ್ತು ಖಜರಿಯೊಂದರ ಪ್ರಸ್ತುತಿಯ ಮೂಲಕ ವ್ಯಾಖ್ಯಾನಿಸಿದರು. ಅವರ ಮಂಡನೆಗಳಲ್ಲಿ ತಲ್ಲೆನತೆ, ಲಯ ಬಿಗುವು, ಅಭಿನಯ ಸೊಗಸು ಮತ್ತು ಪ್ರತಿಪಾದನಾ ಕುಶಲತೆಗಳು ರಂಜಿಸಿದವು. ಎಂ.ಬಿ. ನಾಗರಾಜ್ (ಪಢಂತ್) ಮತ್ತು ಗಣೇಶ್ ದೇಸಾಯಿ (ಗಾಯನ) ಅವರ ನೇತೃತ್ವದ ಸಂಗೀತ ಸಹಕಾರ ಪ್ರೇರಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT