ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಗೀತ, ನೃತ್ಯದಿಂದ ಉತ್ತಮ ಆರೋಗ್ಯ'

Last Updated 26 ಡಿಸೆಂಬರ್ 2012, 20:14 IST
ಅಕ್ಷರ ಗಾತ್ರ

ಬೆಂಗಳೂರು: `ಸಂಗೀತ ಮತ್ತು ನೃತ್ಯ ಥೆರಪಿ ಚಿಕಿತ್ಸೆ ಮೂಲಕ ಉತ್ತಮ ಆರೋಗ್ಯ ಹೊಂದಲು ಸಾಧ್ಯ' ಎಂದು ಅಮೆರಿಕದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದ ಸಂಸ್ಥಾಪಕ ಬಿ.ವಿ.ವೆಂಕಟಕೃಷ್ಣ ಶಾಸ್ತ್ರಿ ಅಭಿಪ್ರಾಯಪಟ್ಟರು.

ಸೃಷ್ಟಿ ರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಉತ್ಸವದ ಅಂಗವಾಗಿ ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ `ನೃತ್ಯ, ನೃತ್ಯ ಥೆರಪಿ, ಸಂಗೀತ' ಕುರಿತು ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

`ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನೃತ್ಯವನ್ನು ಮನೋರಂಜನೆಗೆ ಮಾತ್ರ ಬಳಸದೆ ಥೆರಪಿಯಾಗಿ ಬಳಸುತ್ತಿದ್ದಾರೆ. ಆಧ್ಯಾತ್ಮ, ಶಿಕ್ಷಣದಲ್ಲಿಯೂ ಸಹ ನೃತ್ಯವನ್ನು ಬಳಸಲಾಗುತ್ತಿದೆ' ಎಂದರು.

`ಟಿ.ವಿ, ಸಿನಿಮಾಗಳಿಂದಾಗಿ ನೃತ್ಯದ ಪರಿಕಲ್ಪನೆ ಬದಲಾಗುತ್ತಿದೆ. ಸಿನಿಮಾ, ರಂಗಭೂಮಿ, ನಾಟಕಗಳಲ್ಲಿ ನೃತ್ಯವನ್ನು ಕೇವಲ ಪ್ರದರ್ಶನಕ್ಕಾಗಿ ಮಾತ್ರ ಬಳಸಲಾಗುತ್ತಿದೆ' ಎಂದು ಹೇಳಿದರು.

`ಸ್ಥೂಲಕಾಯ, ಗರ್ಭಿಣಿ ಮಹಿಳೆಯರಿಗೆ ಚಿಕಿತ್ಸೆ ಮತ್ತು ಸಾಮಾಜಿಕ, ಶಾರೀರಿಕ, ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನೃತ್ಯ ಥೆರಪಿ ಚಿಕಿತ್ಸೆ ಬಹಳ ಮುಖ್ಯ ವಿಧಾನವಾಗಿದೆ' ಎಂದರು.

ಕಾರ್ಯಕ್ರಮದಲ್ಲಿ ನೃತ್ಯ ಥೆರಪಿ ಸರ್ಟಿಫಿಕೇಟ್ ಕೋರ್ಸ್‌ಗಳ ಪರಿಚಯ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಸೃಷ್ಟಿ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಅಂಡ್ ಇನ್‌ಸ್ಟಿಟ್ಯೂಟ್ ಅಫ್ ಡಾನ್ಸ್ ಥೆರಪಿಯ ನಿರ್ದೇಶಕ ಡಾ.ಎ.ವಿ.ಸತ್ಯನಾರಾಯಣ, ಆಧ್ಯಾತ್ಮ ಚಿಂತಕ ಶೇಷಾದ್ರಿ ಕೈಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಲಾ ವಿಮರ್ಶಕ ಎಸ್.ಎನ್.ಚಂದ್ರಶೇಖರ್ ಮಾತನಾಡಿ, `ಪ್ರಾಮಾಣಿಕತೆಯಿಂದ ಮಾಡಿರುವ ಕಾರ್ಯ ಸಾರ್ಥಕತೆಯನ್ನು ಕಾಣುತ್ತದೆ. ಕಲೆಗಳು ಮನುಷ್ಯನಿರುವವರೆಗೂ ಜೀವಂತವಾಗಿರುತ್ತವೆ. ಕಲೆಯನ್ನು ನಿರ್ಮಲ ಭಾವದಿಂದ ಆರಾಧಿಸಿದರೆ ಒಲಿಯುತ್ತವೆ. ನಾನು ನಂಬಿದ ಸಂಗೀತ, ನಾಟಕ, ಕಲೆಯು ನನಗೆ ತೃಪ್ತಿಯನ್ನು ನೀಡಿದೆ' ಎಂದರು.

`ನಮ್ಮ ದೇಶದಲ್ಲಿ ಈಗ ಮಾದರಿ ವ್ಯಕ್ತಿಗಳಿಲ್ಲ. ಮುಖ್ಯವಾಗಿ ದೇಶವನ್ನು ಮುನ್ನಡೆಸುವ ನಾಯಕರಿಲ್ಲ. ಹಿಂಬಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈಗ ಎಲ್ಲ ಹಿಂಬಾಲಕರು ನಾಯಕರಾಗಲು ಹೊರಟಿದ್ದಾರೆ. ಇದರಿಂದ ದೇಶವು ಅಧಃಪತನದತ್ತ ಸಾಗುತ್ತಿದೆ' ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT