ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಪಿತಾಮಹನಿಗಿದೋ ನಮನ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಬಹುತೇಕ ಎಲ್ಲ ಕೃತಿಗಳಲ್ಲಿ ವ್ಯಕ್ತವಾಗುವುದು ಸಮಾಜ ಸುಧಾರಣೆ, ಸಾಮಾಜಿಕ ಕಳಕಳಿಯ ಅಂಶಗಳು. ಸರಿ ಸುಮಾರು 14ನೇ ಶತಮಾನದಲ್ಲಿ ಪುರಂದರದಾಸರು ರಚಿಸಿದ ಈ ದೇವರನಾಮ ಇಂದಿಗೆ ಮಾತ್ರವಲ್ಲ; ಎಲ್ಲ ಕಾಲಕ್ಕೂ ಪ್ರಸ್ತುತ. ತಮ್ಮ ರಚನೆಗಳಲ್ಲಿ ಭಕ್ತಿರಸವನ್ನು ಸೂಸುವಂತೆ ಮಾಡಿದ್ದಲ್ಲದೆ ತಮ್ಮ ದೇವರನಾಮಗಳಲ್ಲಿ ಎರಡು ಮೂರು ಭಾವಗಳನ್ನು ತುಂಬಿ ಮನಮುಟ್ಟುವಂತೆ ಬಿಂಬಿಸಿದ ಅಪ್ರತಿಮ ಸಂತ ನಮ್ಮ ಪುರಂದರದಾಸರು.

ಶಾಸ್ತ್ರೀಯ ಸಂಗೀತವನ್ನು ಶ್ರೀಮಂತಗೊಳಿಸಿ ಆ ಮೂಲಕವೇ ಸಮಾಜ ಸುಧಾರಣೆ ಮಾಡಿದ್ದ ಬಹಳ ಅಪರೂಪದ ಹರಿದಾಸ ಪುರಂದರ ದಾಸರು. ಸಮಾಜ ಸುಧಾರಣೆ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸರ್ವಕಾಲಕ್ಕೂ ಪ್ರಸ್ತುತವೆನಿಸುವ ಕೃತಿಗಳನ್ನು ರಚಿಸಿ ಅವುಗಳನ್ನು ಇಡೀ ಸಮಾಜಕ್ಕೆ ತೋರಿಸಿಕೊಟ್ಟರು. ಕಾಲಿಗೆ ಗೆಜ್ಜೆ ಕಟ್ಟಿದರು. ತಮ್ಮದೇ ಆದ `ಡ್ರೆಸ್‌ಕೋಡ್~ ಸೃಷ್ಟಿಸಿಕೊಂಡರು. ಸಂಗೀತವನ್ನು ಸಾಮಾಜಿಕ ಪಥಕ್ಕೆ ಎಳೆದುಕೊಂಡರು. ಜನರಲ್ಲಿ ಸಾತ್ವಿಕ ಮನೋಭಾವನೆಯ ಪ್ರಜ್ಞೆ ಮೂಡುವಂತೆ ಮಾಡಿದರು.

`ಎಲ್ಲನೂ ಬಲ್ಲೆ ಎಂಬುವಿರಲ್ಲ; ಅವಗುಣ ಬಿಡಲಿಲ್ಲ
ಕಾವಿಯನುಟ್ಟು ತಿರುಗುವಿರಲ್ಲ; ಕಾಮವ ಬಿಡಲಿಲ್ಲ~

ಪ್ರಸ್ತುತ ಸಮಾಜದಲ್ಲಿ `ಸ್ವಾಮೀಜಿ~ ಎನಿಸಿಕೊಂಡವರಲ್ಲಿ ಕೆಲವರು ಮಾಡುವ ಅನಾಚಾರವನ್ನು ಕೂಡ ಅಂದು ದಾಸರು ರಚಿಸಿದ ಕೃತಿ ಹೇಗೆ ಬಿಂಬಿಸುತ್ತದೆ ಎಂಬುದಕ್ಕೆ ಅವರು ರಚಿಸಿದ ಕೃತಿಯ ಈ ಮೇಲಿನ ಸಾಲುಗಳೇ ಉದಾಹರಣೆ.

`ಸತ್ಯವಂತರಿಗಿದು ಕಾಲವಲ್ಲ; ದುಷ್ಟಜನರಿಗಿದು ಸುಭೀಕ್ಷ ಕಾಲ...~ ಇಂದಿನ ಸಮಾಜದಲ್ಲಿ ದಿನನಿತ್ಯ ನಡೆಯುವ ಮೋಸ, ವಂಚನೆಯಿಂದ ನಿಜವಾದ ಅಪರಾಧಿ ಪಾರಾಗಿ ಏನೂ ಅರಿಯದ ಮುಗ್ಧರು ಹೇಗೆ ತಪ್ಪಿತಸ್ತರಾಗಬೇಕಾಗುತ್ತದೆ ಎಂಬುದು ಕೂಡ ಅವರ ಈ ಕೃತಿಯಲ್ಲಿ ಸೊಗಸಾಗಿ ಬಿಂಬಿತವಾಗಿದೆ. ಅವರ ಬಹುತೇಕ ಎಲ್ಲ ಕೃತಿಗಳೂ ಹೀಗೆ ಅರ್ಥಗರ್ಭಿತ. ಸಂಗೀತದ ಮೂಲಕವೇ ಜ್ಞಾನ ದಾಸೋಹ, ಭಕ್ತಿಯ ಪುಳಕ ದಾಸರ ಪದಗಳ ವೈಶಿಷ್ಟ್ಯ. 

ಸಂಗೀತ ಬಾಲಪಾಠ

ಕರ್ನಾಟಕ ಸಂಗೀತದಲ್ಲಿ ಸರಳೆ ವರಸೆ, ಜಂಟಿ ವರಸೆ, ದಾಟು ವರಸೆ, ಅಲಂಕಾರ, ಗೀತೆಗಳು, ಲಕ್ಷಣ ಗೀತೆಗಳು (ರಾಗದ ಸಂಪೂರ್ಣ ಸಾರವನ್ನು ಹಂತಹಂತವಾಗಿ ವಿವರಿಸುವ ವಿಶಿಷ್ಟ ಸಂಗೀತ ಪ್ರಕಾರ) ಎಂಬ ಪ್ರಕಾರಗಳನ್ನು ರಚಿಸಿ, ಅದನ್ನೇ ಶಾಸ್ತ್ರೀಯ ಸಂಗೀತದ ಬಾಲಪಾಠವನ್ನಾಗಿ ರೂಪಿಸಿದವರು ಈ ಮಹಾನುಭಾವರು. ಇಂದಿಗೂ ಸಂಗೀತದ ವಿದ್ಯಾರ್ಥಿಗಳು `ಸರಿಗಮಪದನಿಸ~ ಸಪ್ತಸ್ವರಗಳಿಂದ ಕೂಡಿದ ಸಂಗೀತಾಭ್ಯಾಸ ಆರಂಭಿಸುವುದು ಸರಳೆ ವರಸೆಯಿಂದಲೇ. ಈ ಬಾಲಪಾಠವನ್ನು ಸರಳವಾದ ಮೇಳಕರ್ತ ರಾಗ `ಮಾಯಾಮಾಳವಗೌಳ~ದಲ್ಲಿ ರಚಿಸಿದ್ದಲ್ಲದೆ ಸುಪ್ರಸಿದ್ಧ `ಮಲಹರಿ~ ರಾಗ (ಜನ್ಯ ರಾಗ) ದಲ್ಲಿ ಗೀತೆ ಮತ್ತು ಪಿಳ್ಳಾರಿ ಗೀತೆಗಳನ್ನು ರಚಿಸಿರುವುದು ಇಂದಿಗೂ ಜನಪ್ರಿಯವೇ. ಈ ಸುಮಧುರ ರಾಗಕ್ಕೆ ಸಂಗೀತ ಶಾಸ್ತ್ರದ ಸೂಳಾದಿ ಸಪ್ತತಾಳಗಳನ್ನು ನಿರ್ದೇಶಿಸಿದವರೂ ಪುರಂದರದಾಸರೇ.

ಕರ್ನಾಟಕದ ಗಡಿಯಲ್ಲಿರುವ ಪುರಂದರಗಢದಲ್ಲಿ ಜನಿಸಿರುವ ದಾಸರು, ಜೀವನದುದ್ದಕ್ಕೂ ಸಾಮಾಜಿಕ ಕಳಕಳಿಯುಳ್ಳ ಸಾವಿರಾರು ದೇವರನಾಮಗಳನ್ನು, ಪದ, ಜಾವಳಿ, ಉಗಾಭೋಗಗಳನ್ನು ರಚಿಸಿ ದಾಸಾನುದಾಸರಾದರು. `ದಾಸರೆಂದರೆ ಪುರಂದರದಾಸರಯ್ಯಾ...~ ಎಂದು ತಮ್ಮ ಗುರುಗಳಾದ ವ್ಯಾಸರಾಯರಿಂದ ಹೊಗಳಿಸಿಕೊಂಡರು.

ಮಹಾರಾಷ್ಟ್ರದ ಸೋಲಾಪುರದ ಭೀಮಾ ನದಿ ದಂಡೆಯಲ್ಲಿರುವ ತೀರ್ಥ ಕ್ಷೇತ್ರ ಪಂಡರಾಪುರದ ವಿಠಲ (ವಿಷ್ಣು)ನ ಭಕ್ತರಾದ ಪುರಂದರದಾಸರಿಗೆ ಅವರ ಗುರುಗಳಾದ ವ್ಯಾಸರಾಯರು ನೀಡಿದ ಅಂಕಿತ `ಪುರಂದರ ವಿಠಲ~ ಎಂಬುದು. ದಾಸರ ಸಾಮಾಜಿಕ ಕಳಕಳಿ, ಸುಧಾರಣೆಯಿಂದ ಪ್ರೇರಿತರಾದ ಗುರು ವ್ಯಾಸರಾಯರು ತಮ್ಮ ಪೀಠವನ್ನೇ ಪುರಂದರ ದಾಸರಿಗೆ ತ್ಯಾಗ ಮಾಡುತ್ತಾರೆ. ಇದನ್ನು ನಯವಾಗಿ ತಿರಸ್ಕರಿಸಿ, ಜನರ ಜತೆಯೇ ಬೆರೆಯುವ ಅದಮ್ಯ ಉತ್ಸಾಹ, ಹಂಬಲದಿಂದ ಅಧಿಕಾರದಿಂದ ದೂರ ಉಳಿದರು. ಜನರೊಂದಿಗೆ ಬೆರೆತರು. ಸಂಗೀತ ಕ್ಷೇತ್ರದಲ್ಲಿ ಎಲ್ಲರ ಆರಾಧಕರಾದರು. ಇಂದು (ಜನವರಿ 23) ಪುರಂದರ ದಾಸರ ಆರಾಧನಾ ದಿನ. ಈ ಸಂದರ್ಭದಲ್ಲಿ ಸಂಗೀತ ಪಿತಾಮಹನಿಗಿದೋ ನಮನ..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT