ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತವೆಂದರೆ ಬರೀ ಹಾಡುಗಾರಿಕೆಯಲ್ಲ: ಪಂ.ರಾಜೀವ್

ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿ ಪ್ರದಾನ
Last Updated 25 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಧಾರವಾಡ: 'ಸಂಗೀತವೆಂದರೆ ಕೇವಲ ಹಾಡುಗಾರಿಕೆಯಲ್ಲ. ವಾದ್ಯ ಸಂಗೀತ ಕೂಡಾ ಸಂಗೀತವೇ. ಆ ಕಲಾವಿದರನ್ನು ಸರ್ಕಾರ ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ' ಎಂದು ಖ್ಯಾತ ಸರೋದ ವಾದಕ ಪಂ.ರಾಜೀವ ತಾರಾನಾಥ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ಕೊಡಮಾಡುವ ರಾಷ್ಟ್ರೀಯ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, 'ಸರೋದ ಮತ್ತು ತಬಲಾ ವಾದಕರಿಗೂ ಪ್ರಶಸ್ತಿ ನೀಡಿರುವುದು ಅಭಿನಂದನೀಯ. ಧಾರವಾಡದಲ್ಲಿಯೂ ಹಲವು ವಾದ್ಯಗಳನ್ನು ನುಡಿಸುವ ಪ್ರತಿಭಾವಂತರಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ' ಎಂದರು.

'ರಾಜಗುರು ಒಬ್ಬ ಶ್ರೇಷ್ಠ ಗಾಯಕ. ಬಾಲಕನಿದ್ದಾಗ ಅವರ ಗಾಯನವನ್ನು ಕೇಳುವ ಅವಕಾಶ ಸಿಕ್ಕಿತ್ತು. ಈಗ ಅವರ ನೆನಪಿನಲ್ಲಿ ನೀಡುವ ಪ್ರಶಸ್ತಿ ದೊರೆಯುವ ಮೂಲಕ ಬದುಕಿನ ಒಂದು ವೃತ್ತ ಪೂರ್ಣಗೊಂಡಿದೆ. ಧನ್ಯತಾಭಾವ ಮೂಡಿಸಿದೆ. ಅವರ ನೆನಪಿನಲ್ಲಿ ನಡೆಯುವ ಕಾರ್ಯಕ್ರಮಗಳು ಮುಂದಿನ ಪೀಳಿಗೆಯ ಸಂಗೀತಗಾರರಿಗೆ ಪ್ರೇರಣೆಯಾಗಲಿ' ಎಂದು ಹೇಳಿದರು.

ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ, 'ಮರಾಠಿಯಲ್ಲಿ ರಂಗಸಂಗೀತಕ್ಕೆ ವಿಶೇಷ ಪ್ರಾಧಾನ್ಯತೆ ಇರುವಂತೆ ಕನ್ನಡದಲ್ಲಿ ವಚನಗಳಿಗೆ ವಿಶೇಷ ಸ್ಥಾನವಿದೆ. ವಚನ ಹಾಡುಗಾರಿಕೆ ಇಂದು ದೊಡ್ಡ ಪ್ರಕಾರವಾಗಿ ಬೆಳೆದಿದೆ. ಅದು ಕನ್ನಡದ ವೈಶಿಷ್ಟ್ಯ. ವಚನ ಸಂಗೀತಕ್ಕಾಗಿಯೇ ಪ್ರಶಸ್ತಿಯೊಂದನ್ನು ಟ್ರಸ್ಟ್ ಆರಂಭಿಸಬೇಕು' ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, 'ಮನುಷ್ಯ ನಿರಂತರವಾಗಿ ಆನಂದದ ಹುಡುಕಾಟದಲ್ಲಿ ಇರುತ್ತಾನೆ. ಸಾಹಿತ್ಯ, ಸಂಗೀತ ಮತ್ತು ಕಲೆಗಳು ನೀಡುವ ಆನಂದ ಅನುಪಮವಾದದ್ದು. ಸಂಗೀತ ಕೇವಲ ಮನರಂಜನೆಗೆ ಎನ್ನುವ ಭಾವನೆ ಸಲ್ಲದು. ಅದು ಬದುಕಿನ ಆನಂದದ ತರಂಗಗಳನ್ನು ಉದ್ದೀಪಿಸುವ ಸಾಧನ. ಸಂಗೀತಗಾರರು ಮನಸ್ಸನ್ನು ಆಳುವ ಸಾಮ್ರಾಟರು. ಬೇರೆ ಸಾಮ್ರಾಜ್ಯಗಳು ಅಳಿದರೂ, ಸಂಗೀತಗಾರರು ಕಟ್ಟಿದ ಸಾಮ್ರಾಜ್ಯ ಅಳಿಯಲು ಸಾಧ್ಯವಿಲ್ಲ. ಭೌತಿಕವಾಗಿ ಶ್ರೇಷ್ಠ ಸಂಗೀತಗಾರರು ನಮ್ಮಂದಿಗಿರದಿದ್ದರೂ, ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ. ಅಂಥ ಶ್ರೇಷ್ಠ ಸಂಗೀತಗಾರರಲ್ಲಿ ರಾಜಗುರು ಒಬ್ಬರು' ಎಂದರು.

ಯುವ ತಬಲಾಪಟು ಅನುಬ್ರತ್ ಚಟರ್ಜಿ ಮತ್ತು ಗಾಯಕ ಕೌಶಿಕ ಐತಾಳ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಸಮ್ಮಾನವು ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕ, ಯುವ ಪ್ರಶಸ್ತಿಯು ತಲಾ 25,000 ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT