ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತವೇ ಬದುಕು

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

 ಡಾ. ಎಂ. ಬಾಲಮುರಳಿಕೃಷ್ಣ ಕರ್ನಾಟಕ ಸಂಗೀತದ ಮೇರು ಗಾಯಕ. ಆಂಧ್ರದಲ್ಲಿ ಹುಟ್ಟಿ, ನಮ್ಮ ದಾಸರ ಪದಗಳನ್ನು ತಮ್ಮದಾಗಿಸಿಕೊಂಡು ತಮಿಳುನಾಡಿನಲ್ಲಿ ನೆಲೆನಿಂತು ದಕ್ಷಿಣಾದಿ ಸಂಗೀತದ ಸೊಬಗು ಹೆಚ್ಚಿಸಿದ ವಾಗ್ಗೇಯಕಾರ. ತ್ಯಾಗರಾಜರ ಪರಂಪರೆಯ 5ನೇ ತಲೆಮಾರಿನ ಶಿಷ್ಯರು ಇವರು.

ಜಗತ್ತಿನಾದ್ಯಂತ ಸಂಚರಿಸಿ 25 ಸಾವಿರಕ್ಕೂ ಹೆಚ್ಚು ಕಛೇರಿಗಳನ್ನು ನಡೆಸಿಕೊಟ್ಟಿರುವ ಬಾಲಮುರಳಿ ತಾಲೀಮಿನ ಹಂಗಿಗೆ ಬಿದ್ದಿಲ್ಲ. ವೇದಿಕೆ ಏರುವವರೆಗೂ ಹೇಗೆ ಹಾಡುತ್ತೇನೆ, ಯಾವ ರಾಗ ಅಪ್ಪಿಕೊಳ್ಳುತ್ತೇನೆ ಎಂದು ತಮಗೂ ಗೊತ್ತಿರುವುದಿಲ್ಲ ಎನ್ನುತ್ತಾರೆ ಈ ದಿಗ್ಗಜ.
ಕರ್ನಾಟಕ ಸಂಗೀತದ ಮೂಲ 72 ಮೇಳಕರ್ತ ರಾಗಗಳಲ್ಲಿ ಸಂಗೀತ ಸಂಯೋಜಿಸಿರುವ ಮುರಳಿ ಹಲವು ಹೊಸ ರಾಗಗಳನ್ನೂ ಕಂಡುಹಿಡಿದಿದ್ದಾರೆ. ರಾಗಗಳೇ ಇವರನ್ನು ಹುಡುಕಿಕೊಂಡು ಬರುತ್ತದೆ ಎಂಬ ಪ್ರತೀತಿಯೂ ಇದೆ.

ಬಂಗಾಲಿಯಲ್ಲಿ ರವೀಂದ್ರ ಸಂಗೀತ, ಫ್ರೆಂಚ್ ಗಾಯನ ಸೇರಿದಂತೆ ಭಾರತದ, ವಿದೇಶಗಳ ಎಷ್ಟೋ ಭಾಷೆಗಳಲ್ಲಿ ಹಾಡಿದ್ದಾರೆ. 81ರ ಇಳಿ ವಯಸ್ಸಿನಲ್ಲಿ 18ರ ತರುಣರಂತೆ ಪುಟಿದೇಳುವ ಅವರದ್ದು ಸದಾ ಪ್ರಯೋಗಕ್ಕೆ ತೆರೆದುಕೊಂಡ ಮನಸ್ಸು.

`ಸ್ಪರ್ಶ ಪ್ರತಿಷ್ಠಾನ~ದ ಸಹಾಯಾರ್ಥ ಪ್ರತಿಭಾವಂತ ಪಿಟೀಲು ವಾದಕಿ ಡಾ. ಜ್ಯೋತ್ಸ್ನಾ ಶ್ರೀಕಾಂತ್ ಜತೆ ಶನಿವಾರ `ಫ್ಯೂಷನ್ ಸಂಗೀತ ಸಂಜೆ~ಯಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದ ಬಾಲಮುರಳಿ ನಗರದ ಪ್ರೇಕ್ಷಕರಿಗೆ ಸಂಗೀತ ರಸದೌತಣ ನೀಡಿದರು.
ಪ್ರಬುದ್ಧ ತಾಳವಾದ್ಯ ಮತ್ತು ಪಾಶ್ಚಿಮಾತ್ಯ ಕಲಾವಿದರ ಡ್ರಮ್ಸ, ಗಿಟಾರ್ ವಾದನದೊಂದಿಗೆ ಕರ್ನಾಟಕ ಸಂಗೀತ, ಪಾಶ್ಚಿಮಾತ್ಯ ಸಂಗೀತದೊಂದಿಗೆ ಹಾಲು-ಜೇನಿನಂತೆ ಹೇಗೆ ಬೆರೆಯಬಲ್ಲದು ಎಂದು ತೋರಿಸಿಕೊಟ್ಟರು.

ಬಾಲಮುರಳಿ ಒಡ್ಡಿದ ಪಂಥಾಹ್ವಾನ ಒಪ್ಪಿಕೊಂಡಂತೆ ಅವರ ಸಿರಿ ಕಂಠದಿಂದ ಹೊಮ್ಮಿದ ಕೃತಿಗಳಿಗೆ ಸಮನಾಗಿ ಪಿಟೀಲು ನುಡಿಸಿದ ಜ್ಯೋತ್ಸ್ನಾಗೆ ಪ್ರೇಕ್ಷಕರ ಕರತಾಡನ. ಕಿಕ್ಕಿರಿದು ತುಂಬಿದ್ದ ರವೀಂದ್ರ ಕಲಾಕ್ಷೇತ್ರದ ಗೋಡೆ, ಗೋಡೆಯೂ ಧನ್ಯ, ಧನ್ಯ ಎಂಬಂತೆ ಈ ಸಂಗೀತ ಕಛೇರಿ ನಡೆಯಿತು.

ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರಕ್ಕೆ ಬಂದಿದ್ದ ಬಾಲಮುರಳಿ `ಮೆಟ್ರೊ~ ದೊಂದಿಗೆ ನಡೆಸಿದ ಚುಟುಕು ಮಾತುಕತೆ ಇಲ್ಲಿದೆ.

-ಸಂಗೀತ ಅಂದರೆ ಏನು?
ಸಂಗೀತ ಅಂದರೆ ಜೀವನ. ಸಂಗೀತ ಅಂದರೆ ಲಯ ಮತ್ತು ಶಬ್ದ. ಲಯ ಮತ್ತು ಶಬ್ದವಿಲ್ಲದೇ ಈ ವಿಶ್ವವೇ ಇಲ್ಲ. ನೀವು ಮೆಟ್ಟಿಲು ಹತ್ತುವಾಗಲೂ ಯಾವ ಲಯದಲ್ಲಿ ಏರಬೇಕು ಎಂದು ನಿರ್ಧರಿಸಿಯೇ ಹತ್ತುತ್ತೀರಿ. ನೀವು ಮಾತನಾಡುವುದು, ಬರೆಯುವುದು ಎಲ್ಲದರಲ್ಲೂ ಲಯ ಮತ್ತು ಶಬ್ದ ಇರುತ್ತದೆ. ಅಂದರೆ ಸಂಗೀತವಿರುತ್ತದೆ. ಮೃತ ದೇಹದಲ್ಲಿ ಮಾತ್ರ ಸಂಗೀತ ಸ್ತಬ್ಧವಾಗಿರುತ್ತದೆ.

-ಕರ್ನಾಟಕ ಸಂಗೀತದ ನೀವು ಹಿಂದೂಸ್ತಾನಿ ದಿಗ್ಗಜರಾದ ಪಂಡಿತ್ ಜಸರಾಜ್, ದಿಂ. ಭೀಮಸೇನ ಜೋಶಿ ಅವರ ಜತೆಗೂ ಜುಗಲ್‌ಬಂದಿ ನಡೆಸಿದ್ದೀರಿ. ಆ ಅನುಭವ ?
ನನ್ನ ದೃಷ್ಟಿಯಲ್ಲಿ ಸಂಗೀತದಲ್ಲಿ ಭೇದ ಇಲ್ಲವೇ ಇಲ್ಲ. ಅದಕ್ಕೆ ಭಾಷೆಯೂ ಇಲ್ಲ. ಕರ್ನಾಟಕ, ಹಿಂದೂಸ್ತಾನಿ ಎಂಬ ಭೇದವೂ ಸಲ್ಲ. `ಕರ್ಣೇಷು ಅಟತಿ ಇತಿ~ ಕರ್ನಾಟಕ. ಕಿವಿಗೆ ಹಿತವಾದುದ್ದು, ಮಧುರವಾದದ್ದು ಎಲ್ಲವನ್ನೂ ನಾನು ಕರ್ನಾಟಕ ಸಂಗೀತ ಎಂದೇ ಕರೆಯುತ್ತೇನೆ.

ಜೋಶಿ ಜತೆಗೆ ಹಾಡಿದ್ದರಿಂದ ಅವರನ್ನು ಅರಿಯಲು ಸಾಧ್ಯವಾಯಿತು. ಅವರ ಜತೆ ಸ್ನೇಹ ಬೆಳೆಯಿತು. ಜಸರಾಜ್ ಜತೆಗೂ ಒಳ್ಳೆಯ `ರ‌್ಯಾಪೊ~ ಇದೆ. ಪ್ರತಿಯೊಬ್ಬರ ವ್ಯಕ್ತಿತ್ವವೂ ವಿಶಿಷ್ಟವಾಗಿರುತ್ತದೆ. ವಿಭಿನ್ನವಾಗಿರುತ್ತದೆ. ಹಿಂದೂಸ್ತಾನಿ, ಕರ್ನಾಟಕ ಸಂಗೀತದ ನಡುವಿನ ವ್ಯತ್ಯಾಸವೂ ಅಷ್ಟಕ್ಕೇ ಸೀಮಿತ.

-ವಿದೇಶಿ ಸಂಗೀತಗಾರರ ಜತೆಗೂ ವೇದಿಕೆ ಹಂಚಿಕೊಂಡಿದ್ದೀರಿ. ವಿದೇಶಿ ಭಾಷೆಗಳಲ್ಲೂ ಹಾಡಿದ್ದೀರಿ. ಇದು ಹೇಗೆ ಸಾಧ್ಯ ?
ಜಗತ್ತಿನ ಯಾವುದೇ ಭಾಷೆಯಲ್ಲಿ ಹಾಡಲು ಈಗಲೂ ಸಿದ್ಧ. ಯುರೋಪ್‌ನಲ್ಲಿ ಕರ್ನಾಟಕ ಸಂಗೀತ ಕಛೇರಿ ನಡೆದಾಗ ಫ್ರೆಂಚ್ ವ್ಯಕ್ತಿಯೊಬ್ಬರು ಇದು ಸಾಧ್ಯವೇ ಇಲ್ಲ ಎಂದರು. ಫ್ರೆಂಚ್ ಭಾಷೆಯಲ್ಲಿ ಹಾಡುವಂತೆ ಸವಾಲು ಒಡ್ಡಿದರು. ಗೀತೆ ನೀಡಿದರು. ಮಧ್ಯವಿರಾಮದಲ್ಲಿ ಗ್ರೀನ್‌ರೂಮ್‌ನಲ್ಲಿ ಕುಳಿತು ಐದು ನಿಮಿಷ ತಾಲೀಮು ಮಾಡಿದೆ. ವೇದಿಕೆಯಲ್ಲಿ ಹಾಡಿದಾಗ ನಿಲ್ಲದ ಚಪ್ಪಾಳೆ.

ಕರ್ನಾಟಕ ಸಂಗೀತ ವಿಶ್ವದ ಎಲ್ಲ ಸಂಗೀತ ಪ್ರಕಾರಗಳಿಗೆ ತಾಯಿ ಎಂದು ನಾನು ನಂಬುತ್ತೇನೆ. ಅದು ಎಲ್ಲವನ್ನೂ ಒಳಗೊಂಡಿದೆ. ಈ ಸಂಗೀತ ಕಲಿತವರು ಜಗತ್ತಿನ ಯಾವುದೇ ಸಂಗೀತ ಹಾಡಬಲ್ಲರು, ನುಡಿಸಬಲ್ಲರು. ಆದರೆ, ವಿದೇಶಿ ಕಲಾವಿದರಿಗೆ ನಮ್ಮ ಸಂಗೀತ ಹಾಡಲು ಸಾಧ್ಯವಿಲ್ಲ.

-ಇತ್ತೀಚಿನ ದಿನಗಳಲ್ಲಿ ಸಂಗೀತ ಪರಂಪರೆ ಕಲುಷಿತವಾಗುತ್ತಿದೆ ಅನಿಸುತ್ತಿದೆಯೇ? ಯುವ ಕಲಾವಿದರಲ್ಲಿ ನಿಮ್ಮ ತಲೆಮಾರಿಗಿದ್ದಷ್ಟು ಶ್ರದ್ಧೆ ಇದೆಯೇ?
ನನಗೆ ಹಾಗನಿಸಿಲ್ಲ. ಸಂಪ್ರದಾಯ ಅಂದರೆ ಹಳೆಯದ್ದಕ್ಕೆ ಹೊಸದನ್ನು ಕೂಡಿಸುವುದು (ಟ್ರೇಡಿಷನ್ ಮೀನ್ಸ್ ಎಡಿಷನ್). ಎಡಿಷನ್ ಇಲ್ಲದೇ ಟ್ರೇಡಿಷನ್ ಇಲ್ಲ. ಸಂಗೀತ ಕ್ಷೇತ್ರದಲ್ಲಿ ಈಗ ಹೊಸ ಪ್ರಯೋಗಗಳು ಆಗುತ್ತಿವೆ. ಅದು ಸ್ವಾಗತಾರ್ಹ.

-ಸಂಗೀತದ ಹೊರತಾಗಿ ನಿಮ್ಮ ಹಾಬಿ?
ಡಿಶುಂ...ಡಿಶುಂ...ಚಿತ್ರ ತುಂಬಾ ಇಷ್ಟ. ಅದನ್ನು ನನಗೆ ಮಾಡಲು ಸಾಧ್ಯವಿಲ್ಲ. ನನಗೆ ಮಾಡಲು ಸಾಧ್ಯವಿಲ್ಲದ್ದನ್ನು ಆನಂದಿಸುತ್ತೇನೆ. ಕಾರ್ಡ್ಸ್, ಕೇರಂ ಸಹ ಆಡುತ್ತೇನೆ.

-70 ವರ್ಷಗಳ ಸಂಗೀತ ಜೀವನದಲ್ಲಿ ನಿಮಗೆ ಅತ್ಯಂತ ತೃಪ್ತಿ ಕೊಟ್ಟ ಘಳಿಗೆ?
ಕೇರಳದಲ್ಲಿ ಒಮ್ಮೆ ಸಂಗೀತ ಕಛೇರಿ ನಡೆಯುತ್ತಿತ್ತು. ಕಲ್ಯಾಣಿ ರಾಗವನ್ನು ಮನತುಂಬಿ ಹಾಡುತ್ತಿದೆ. ದೊಡ್ಡ ಜನಸಂದಣಿ. ಸಭಾಂಗಣದ ಹಿಂಭಾಗದಿಂದ ಪುಟ್ಟ ಬಾಲಕಿಯೊಬ್ಬಳು ವೇದಿಕೆಯತ್ತ ನಡೆದು ಬಂದಳು. ಜನ ತಾವಾಗಿಯೇ ಆಕೆಗೆ ಜಾಗ ಬಿಟ್ಟರು. ವೇದಿಕೆ ಏರಿ ನನ್ನ ಪಕ್ಕವೇ ಕುಳಿತುಕೊಂಡಳು. ಆ ಹಾಡು ಮುಗಿಯುವ ಹೊತ್ತಿಗೆ ಆಕೆ ಮಾಯವಾಗಿದ್ದಳು. ತಾಯಿ ಕಲ್ಯಾಣಿಯೇ ಆಕೆಯ ರೂಪದಲ್ಲಿ ಬಂದಿರಬಹುದೋ ಎಂಬ ಸೋಜಿಗ ನನ್ನಲ್ಲಿದೆ. ಅಲ್ಲಿದ್ದ ಜನ ಈ ಘಟನೆಗೆ ಸಾಕ್ಷಿಯಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT