ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗ್ರಾಮ್ ನೌಕೆಯಲ್ಲಿ ರಕ್ಷಣಾ ಕಸರತ್ತು

Last Updated 27 ಫೆಬ್ರುವರಿ 2011, 10:00 IST
ಅಕ್ಷರ ಗಾತ್ರ

ಮಂಗಳೂರು: ಪಣಂಬೂರಿನ ಎನ್‌ಎಂಪಿಟಿ ಬಂದರಿನಿಂದ 15 ನಾಟಿಕಲ್ ಮೈಲ್ (28 ಕಿ.ಮೀ.) ದೂರದಲ್ಲಿ ಸಾಗುತ್ತಿದ್ದಂತೆ ಕರಾವಳಿ ರಕ್ಷಣಾ ಪಡೆಯ ‘ಸಂಗ್ರಾಮ್’ನೌಕೆಯ ಲೈಟ್ ಮೆಷಿನ್ ಗನ್‌ನಿಂದ ಏಕಾಏಕಿ ಗುಂಡುಗಳು ಸಿಡಿದವು. ನೀಲಾಕಾಶದಲ್ಲಿ ಶರವೇಗದಲ್ಲಿ ಧಾವಿಸಿದ ಹೆಲಿಕಾಪ್ಟರ್ ‘ಚೇತಕ್’ ಸಮುದ್ರಕ್ಕೆ ಬಿದ್ದವನೊಬ್ಬನನ್ನು ರಕ್ಷಿಸಿ ದಡಕ್ಕೆ ಕರೆದೊಯ್ಯಿತು. ರಕ್ಷಣಾ ವಿಮಾನ ‘ಡಾರ್ನಿಯರ್’ ಕಿವಿಕೊರೆಯುವ ಸದ್ದು ಮೊಳಗಿಸುತ್ತಾ ನೌಕೆಗೆ ಗಿರಕಿ ಹೊಡೆಯಿತು.ಅರಬ್ಬೀ ಸಮುದ್ರದಲ್ಲಿ ನಡೆಯವ ರಕ್ಷಣಾ ಕಾರ್ಯಾಚರಣೆ ಪರಿಚಯಿಸುವ ಸಲುವಾಗಿ ಕರಾವಳಿ ರಕ್ಷಣಾ ಪಡೆ ಶನಿವಾರ ಅರಬ್ಬೀ ಸಮುದ್ರದಲ್ಲಿ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆಯ ಮೈನವಿರೇಳಿಸುವ ಕ್ಷಣಗಳಿವು.

ಎನ್‌ಎಂಪಿಟಿ ಬಂದರಿನಿಂದ ಬೆಳಿಗ್ಗೆ 9.30ಕ್ಕೆ ಹೊರಟ ‘ಸಂಗ್ರಾಮ್’ ನೌಕೆ, ಒಡಲೊಳಗೆ ತುಂಬಿಕೊಂಡಿದ್ದ ಪ್ರಯಾಣಿಕರಿಗೆ ಕಡಲಲೆಗಳ ನಡುವೆ ಕರಾವಳಿ ರಕ್ಷಣಾ ಪಡೆ ನಡೆಸುವ ಕಾರ್ಯಾಚರಣೆಯ ರೋಚಕ ಅನುಭವಗಳನ್ನು ಒಂದೊಂದಾಗಿ ಪರಿಚಯಿಸುತ್ತಾ ಮುಂದೆಸಾಗಿತು. ನೌಕೆ ಏರಿದವರ ಪೈಕಿ ಬಹುತೇಕರು ನಗರದ ಗಣ್ಯ ವ್ಯಕ್ತಿಗಳು. ಅದರಲ್ಲೂ ಅನೇಕರು ಹಡಗು ಏರಿದ್ದು ಇದೇ ಮೊದಲು. ‘ಸಂಗ್ರಾಮ್’ ಓಲಾಡುತ್ತಾ ಎನ್‌ಎಂಪಿಟಿಯ ಜೆಟ್ಟಿ ಬಿಟ್ಟು ಸಾಗುವಾಗಲೇ ಕೇಕೆ ಗಗನ ಮುಟ್ಟಿತ್ತು.

ಎದೆಯಲ್ಲಿ ತಲ್ಲಣ: ಕುಟುಂಬ ಸಮೇತ ‘ನೌಕೆ’ ವಿಹಾರಕ್ಕೆ ಬಂದಿದ್ದ ಅಧಿಕಾರಿಗಳು ಪರಿವಾರದ ಜತೆ ಹರಟುತ್ತಾ ಸಾಗುತ್ತಿದ್ದಾಗ ಏಕಾಏಕಿ ಮೊಳಗಿದ ಗುಂಡಿನ ಸುರಿಮಳೆಯ ಸದ್ದು ಗುಂಡಿಗೆ ಬಡಿತ ಅರೆಕ್ಷಣ ನಿಲ್ಲುವಂತೆ ಮಾಡಿತ್ತು. ಎಲ್ಲರೂ ನಿಬ್ಬೆರಗಾಗಿ ಗುಂಡು ಸಿಡಿಯುತ್ತಿದ್ದ ಎಲ್‌ವಿ ಮೆಷಿನ್‌ಗನ್ ನತ್ತ ಕತ್ತು ಹೊರಳಿಸಿದರು.

‘ದೇಶದ ಕರಾವಳಿ ವ್ಯಾಪ್ತಿಗೆ ನೌಕೆಗಳು ಅಥವಾ ದೊಣಿಗಳು ಅಕ್ರಮವಾಗಿ ಪರವೇಶಿಸಿರುವುದು ಕಂಡು ಬಂದರೆ ಎಚ್ಚರಿಕೆ ರವಾನಿಸುತ್ತೇವೆ. ಅದಕ್ಕೆ ಸೂಕ್ತ ಸ್ಪಂದನೆ ಸಿಗದಿದ್ದಾಗ ಅವುಗಳತ್ತ ಗುಂಡು ಹಾರಿಸುವುದು ಅನಿವಾರ್ಯ. ಕೆಲವೊಮ್ಮೆ ಕಳ್ಳಸಾಗಾಟಗಾರರತ್ತಲೂ ಗುಂಡು ಸಿಡಿಸಬೇಕಾಗುತ್ತದೆ’ ಎಂದು  ಕರಾವಳಿ ರಕ್ಷಣಾ ಪಡೆಯ ಡೆಪ್ಯುಟಿ ಕಮಾಂಡಂಟ್ ರಾಜೇಂದರ್ ಸಿಂಗ್ ಸಪಲ್ ವಿವರಿಸಿದರು. 

ಸಮುದ್ರಕ್ಕೆ ಬಿದ್ದವನ ರಕ್ಷಣೆ: ಸ್ವಲ್ಪಹೊತ್ತಿನಲ್ಲೇ ಗೋವಾದಿಂದ ಆಗಮಿಸಿದ ‘ಚೇತಕ್’ ಹೆಲಿಕಾಪ್ಟರ್ ‘ಸಂಗ್ರಾಮ್’ಗೆ ಸುತ್ತು ಹೊಡೆಯಲಾರಂಭಿಸಿತು. ಇನ್ನೇನು ನೌಕೆಗೆ ಅಪ್ಪಳಿಸಿ ಬಿಟ್ಟಿತೇನೋ ಎಂಬಷ್ಟು ಸಮೀಪದಲ್ಲಿ ಹೆಲಿಕಾಪ್ಟರ್ ಹಾದು ಹೋದಾಗ ಅಲ್ಲಿದ್ದವರ ಎದೆಯಲ್ಲಿ ತಣ್ಣನೆಯ ಕಂಪನ ಸೃಷ್ಟಿಯಾಯಿತು. ನೋಡು ನೊಡುತ್ತಿದ್ದಂತೆ ಹೆಲಿಕಾಪ್ಟರ್‌ನಿಂದ ಒಬ್ಬ ಸಮುದ್ರಕ್ಕೆ ಜಿಗಿದ.

ಸಮುದ್ರಕ್ಕೆ ಬಿದ್ದವನೊಬ್ಬನನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಯಿತು. ಹಡಗು ಮುಳುಗುವಾಗ ಹೇಗೆ ಅಮೂಲ್ಯ ದಾಖಲೆಗಳನ್ನು ಸ್ವತ್ತುಗಳನ್ನು ರವಾನಿಲಾಗುತ್ತದೆ ಎಂಬುದರ ಪ್ರಾತ್ಯಕ್ಷಿಕೆಯೂ ನಡೆಯಿತು. ನಾನಾ ಕೋನಗಳಲ್ಲಿ ಹೆಲಿಕಾಪ್ಟರ್ ಪ್ರದರ್ಶಿಸಿದ ಕಸರತ್ತು ಪ್ರಯಾಣಿಕರ ಮನದೊಳಗೆ ಚಿರಸ್ಥಾಯಿಯಾಗಿ ದಾಖಲಾಯಿತು. ಕೆಲವೇ ಹೊತ್ತಿನಲ್ಲಿ ಕೊಚ್ಚಿಯಿಂದ ಆಗಮಿಸಿದ ‘ಡಾರ್ನಿಯರ್’ ರಕ್ಷಣಾ ವಿಮಾನ ನೌಕೆಗೆ ಮೂರು ಸುತ್ತು ಹಾಕಿ ನಿರ್ಗಮಿಸಿತು.  ಸಮುದ್ರದಲ್ಲಿ ಸಿಕ್ಕಿ ಬೀಳುವ ಮೀನುಗಾರರನ್ನು ಹೇಗೆ ಸಂರಕ್ಷಿಸಲಾಗುತ್ತದೆ ಎಂಬುದನ್ನೂ ನಾವೀಕರು ತೋರಿಸಿಕೊಟ್ಟರು.

ಅಧಿಕಾರಿಗಳು ನೀಡಿದ ಲಘು ಉಪಹಾರ ಸೇವಿಸುವಷ್ಟರಲ್ಲೇ ಸೂರ್ಯ  ನೆತ್ತಿಗೇರಿದ್ದ. ಸುಡು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಕೆಲವರು ಕೆಳಗಿನ ಅಂತಸ್ತಿಗೆ ಇಳಿದಿದ್ದರು.
ಎನ್‌ಎಂಪಿಟಿ ಬಂದರಿನೊಳಗೆ ಪ್ರವೇಶಿಸಲು ಅನುಮತಿ ದೊರೆಯುವಾಗ ವಿಳಂಬವಾಗಿದ್ದರಿಂದ ಪ್ರಯಾಣಿಕರಿಗೆ ಒಂದು ತಾಸಿನಷ್ಟು ಹೆಚ್ಚು ಕಾಲ ನೌಕೆಯಲ್ಲೇ ಉಳಿಯುವ ‘ಯೋಗ’ ಒದಗಿತು.ಎನ್‌ಎಂಪಿಟಿಯ ಕಬಿನಿ ಹಾಗೂ ಶಾಂಭವಿ ಟಗ್‌ಗಳು ಸಂಗ್ರಾಮ್ ದಡ ಸೇರುವುದಕ್ಕೆ ನೆರವಾದವು. ನೌಕೆಯಿಂದ ಇಳಿದ ಬಹುತೇಕರು ಸಂತಸದಿಂದ ಹೆಜ್ಜೆ ಹಾಕಿದರು.

ಸಮುದಾಯ ಸಂಪರ್ಕಕ್ಕಾಗಿ...: ಕರಾವಳಿ ರಕ್ಷಣಾ ಪಡೆ ಫೆಬ್ರುವರಿ ತಿಂಗಳಲ್ಲಿ ಸಮುದಾಯ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಇಂದು ಸ್ಥಳೀಯ ಅಧಿಕಾರಿಗಳು, ಮೀನುಗಾರರ ಸಮುದಾಯದವರನ್ನು ಸಂಗ್ರಾಮ್ ನೌಕೆಯಲ್ಲಿ ಕರೆದೊಯ್ದು ನಮ್ಮ ಕಾರ್ಯಾಚರಣೆ ಬಗ್ಗೆ ವಿವರಿಸಿದ್ದೇವೆ. ಈ ಬಾರಿ ರಕ್ತದಾನ, ವಿದ್ಯಾರ್ಥಿಗಳಿಗೆ ಸ್ಪರ್ಧೆ, ಮೀನುಗಾರರ ಜತೆ ಸ್ನೇಹ ಬೆಳೆಸುವ ಸಲುವಾಗಿ ಮಂಗಳೂರಿನಿಂದ ಕಾರವಾರದವರೆಗೆ ಸೈಕಲ್ ರ್ಯಾಲಿ ಹಮ್ಮಿಕೊಂಡಿದ್ದೆವು’ ಎಂದು ಕರಾವಳಿ ತಟರಕ್ಷಣಾ ಪಡೆಯ ಕಮಾಂಡಂಟ್ ಪದಂಶೇಖರ್ ಝಾ ತಿಳಿಸಿದರು. ಜಿಲ್ಲಾಧಿಕಾರಿ ಸುಬೊಧ್ ಯಾದವ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ತಹಸೀಲ್ದಾರ್ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT