ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆ ಇಲ್ಲದಿದ್ದರೆ ಮತಾಂತರ

Last Updated 7 ಫೆಬ್ರುವರಿ 2011, 10:15 IST
ಅಕ್ಷರ ಗಾತ್ರ

ವಿಜಾಪುರ: ‘ದುಷ್ಟ ರಾಜಕೀಯ ಶಕ್ತಿಗಳಿಂದ ಧರ್ಮದ ವಿಘಟನೆಯಾಗಿದೆ. ಹಿಂದೂಗಳು ಎಚ್ಚೆತ್ತುಕೊಂಡು ಸಂಘಟಿತರಾಗದಿದ್ದರೆ ಮತ್ತೆ ಗುಲಾಮಗಿರಿಗೆ ಒಳಗಾಗುವ ಇಲ್ಲವೆ ಮತಾಂತರ ಹೊಂದುವುದು ಅನಿವಾರ್ಯವಾದೀತು’ ಎಂದು ಹಿಂದೂ ಜನಜಾಗೃತಿ ಸಮಿತಿಯ ಮುಖಂಡ ವಿನಯ ಪಾನವಳಕರ ಎಚ್ಚರಿಸಿದರು.ಹಿಂದೂ ಜನಜಾಗೃತಿ ಸಮಿತಿಯಿಂದ ಭಾನುವಾರ ಸಂಜೆ ಇಲ್ಲಿಯ ದರಬಾರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು.

‘ಮುಸ್ಲಿಂರು ಧಾರ್ಮಿಕವಾಗಿ ಜಾಗೃತಿ ಹೊಂದಿದ್ದರಿಂದಲೇ ಎರಡು ರಾಷ್ಟ್ರಗಳನ್ನು ನಿರ್ಮಿಸಿಕೊಂಡರು. ಹಿಂದೂಗಳು ಒಟ್ಟಾಗಿ ಶಕ್ತಿ ಮತ್ತು ಯುಕ್ತಿಯಿಂದ ಹಿಂದೂ ರಾಷ್ಟ್ರವನ್ನು ಉಳಿಸಿಕೊಳ್ಳಬೇಕಿದೆ. ನಮ್ಮಲ್ಲಿ ಧರ್ಮನಿಷ್ಠೆ ಇದ್ದರೆ ಛತ್ರಪತಿ ಶಿವಾಜಿ ಮಹಾರಾಜರಂತೆ ಯಾವುದೇ ಧರ್ಮಯುದ್ಧದಲ್ಲಿ ಜಯ ಸಾಧಿಸಬಹುದಾಗಿದೆ’ ಎಂದರು.

‘ಸರ್ಕಾರಗಳಿಗೆ ಜನತೆ-ದೇಶದ ಸುರಕ್ಷತೆಯ ಚಿಂತೆ ಇಲ್ಲ. ಕೇವಲ ಅಧಿಕಾರ ಉಳಿಸಿಕೊಳ್ಳುವುದು ಹಾಗೂ ಅಕ್ರಮ ಸಂಪತ್ತು ಗಳಿಸುವುದು ಅವರ ಕಾಯಕವಾಗಿದೆ. ಇಟಲಿಯಲ್ಲಿ ಜನಿಸಿ ಈ ಮಣ್ಣಿನ ಮಹಿಮೆಯನ್ನು ಅರಿಯದ ರಾಹುಲ್ ಗಾಂಧಿ ಹಿಂದೂ ಸಂಘಟನೆಗಳ ವಿರುದ್ಧ ಮಾತನಾಡುತ್ತಿರುವುದು ಮೂರ್ಖತನ. ಮಹಾತ್ಮ ಗಾಂಧೀಜಿ ಸ್ಥಾಪಿಸಿದ ಕಾಂಗ್ರೆಸ್ ಪಕ್ಷ ಈಗ ಮಹಾಭ್ರಷ್ಟವಾಗಿದೆ. ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಸರ್ಕಾರವನ್ನು ಅರಬ್ಬಿ ಸಮುದ್ರಕ್ಕೆ ಎಸೆಯಬೇಕಿದೆ’ ಎಂದು ವಾಗ್ದಾಳಿ ನಡೆಸಿದರು.

‘ಬ್ರಿಟೀಷರು ಹಿಂದೂ ಧರ್ಮದ ಸರ್ವನಾಶಕ್ಕೆ ಯತ್ನಿಸಿದರು. ಈಗಲೂ ಅದು ಮುಂದುವರೆದಿದೆ. ನಾವು ಧರ್ಮ ಬಿಟ್ಟಿದ್ದರಿಂದಲೇ ಈ ತರಹದ ಗುಲಾಮಗಿರಿಯನ್ನು ಎದುರಿಸಬೇಕಾಗಿ ಬಂದಿದೆ. ಧರ್ಮದಿಂದಲೇ ರಾಷ್ಟ್ರ ನಿರ್ಮಾಣ ಸಾಧ್ಯ. ಅದಕ್ಕಾಗಿ ಎಲ್ಲರೂ ಧರ್ಮದ ಆಚರಣೆಯಲ್ಲಿ ತೊಡಗಬೇಕು’ ಎಂದು ಕರೆ ನೀಡಿದರು.ಸನಾತನ ಸಂಸ್ಥೆಯ ವಕ್ತಾರೆ ಸ್ಫೂರ್ತಿ ಬೆನಕನವಾರಿ ಮಾತನಾಡಿ, ‘ಹಿಂದೂ ಧರ್ಮ ಈಗ ಎದುರಿಸುತ್ತಿರುವ ಎಲ್ಲ ಸಂಕಷ್ಟಗಳಿಗೆ ಜಾತ್ಯತೀತ ರಾಜಕಾರಣಿಗಳೇ ಕಾರಣ. ದೇಶ ಹಾಗೂ ಧರ್ಮ ನಿಷ್ಠ ರಾಜಕಾರಣಿಗಳನ್ನು ನಾವು ರೂಪಿಸಬೇಕಿದೆ’ ಎಂದರು.

ಇಲ್ಲದ ಕೇಸರಿ ಭಯೋತ್ಪಾದನೆಯನ್ನು ಸಾಬೀತು ಪಡಿಸಲಿಕ್ಕಾಗಿಯೇ ಪೊಲೀಸರು ಸನಾತನ ಸಂಸ್ಥೆಯ ಸಾಧಕರಿಗೆ ಕಿರುಕುಳ ನೀಡಿದರು. ಈ ಅಗ್ನಿ ಪರೀಕ್ಷೆಯಲ್ಲಿ ಸನಾತನ ಸಂಸ್ಥೆ ಪಾಸಾಗಿದೆ ಎಂದರು.‘ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಅಸಂಘಟಿತರಾಗಿದ್ದೇವೆ. ಅದಕ್ಕಾಗಿ ಹಿಂಸೆಯನ್ನು ಅನುಭವಿಸಬೇಕಾಗಿದೆ. ಈ ಪುಣ್ಯಭೂಮಿಯಲ್ಲಿ ಸಂತರ ಅಪಮಾನ ನಡೆಯುತ್ತಿದೆ. ಹಿಂದೂಗಳ ಮೇಲೆ ಆಗಿರುವ ಅನ್ಯಾಯಕ್ಕೆ ಪ್ರತಿಕಾರ ಮಾಡಬೇಕಿದೆ.
 
ಹಿಂದೂಗಳನ್ನು ಈ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುತ್ತಿದ್ದಾರೆ. ನಾವು ಎಷ್ಟು ದಿನ ಅವಮಾನ ಸಹಿಸುವುದು? ನಮಗೆ ಈಗ ಧರ್ಮ ಹಿಂದೂಗಳ ಅವಶ್ಯಕತೆ ಇಲ್ಲ. ದೇಶರಕ್ಷಣೆಗಾಗಿ ಹೋರಾಡುವ ಕರ್ಮ ಹಿಂದೂಗಳ ಅವಶ್ಯಕತೆ ಇದೆ’ ಎಂದರು.ಆಂದೋಲ ಶ್ರೀ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸನಾತನ ಸಂಸ್ಥೆಯ ‘ಅಗ್ನಿಹೋತ್ರ’ ಗ್ರಂಥವನ್ನು ಬಿಡುಗಡೆ ಮಾಡಿದರು. ಸ್ಫೂರ್ತಿ ಬೆನಕನವಾರಿ, ವಿನಯ ಪಾನವಲಕರ ಅವರಿಗೆ ಖಡ್ಗ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT