ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆಗಳ ಪಾತ್ರ ಮಹತ್ತರ

Last Updated 11 ಅಕ್ಟೋಬರ್ 2012, 5:45 IST
ಅಕ್ಷರ ಗಾತ್ರ

ಯಾದಗಿರಿ: ಜನಪರ ಹೋರಾಟಗಳಲ್ಲಿ ಸಂಘಟನೆಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಶಾಸಕ ಡಾ. ಎ.ಬಿ. ಮಾಲಕರಡ್ಡಿ ಹೇಳಿದರು.ಬುಧವಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಉದ್ಭವಿಸಿರುವ ಕಾವೇರಿ ನೀರಿನ ಸಮಸ್ಯೆಯಂತೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೃಷ್ಣಾ ಮತ್ತು ಭೀಮಾ ನದಿ ನೀರಿನ ಸಮಸ್ಯೆಗಳಿವೆ. ಸಮಗ್ರ ರಾಜ್ಯದ ಸಮಸ್ಯೆಗಳಿಗೂ ಸ್ಪಂದಿಸಿ ಹೋರಾಟದ ಮೂಲಕ ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆ ಬಾರಿಸುವಲ್ಲಿ ಸಂಘಟನೆಗಳು ಸಾಕಷ್ಟು ಕೆಲಸ ಮಡುತ್ತಿವೆ ಎಂದರು.

ಅಧಿಕಾರಕ್ಕೆ ಬರುವ ಪೂರ್ವದಲ್ಲಿ ರಾಜಕೀಯ ಪಕ್ಷಗಳು ಜನತೆಗೆ ಕೊಟ್ಟ ಆಶ್ವಾಸನೆಗಳನ್ನು ಮರೆಯುತ್ತಿವೆ. ಇದರಿಂದಾಗಿ ಶ್ರೀಸಾಮಾನ್ಯನ ಸಮಸ್ಯೆಗಳು ಪರಿಹಾರವಾಗದೇ ಉಳಿಯುತ್ತವೆ. ಅಂತಹ ಸಮಯದಲ್ಲಿ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿ ಜನತೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಾಗರತ್ನಾ ಕುಪ್ಪಿ, ಗ್ರಾಮೀಣ ಪ್ರದೇಶದ ಜನತೆ ಮುಗ್ಧರಾಗಿದ್ದಾರೆ. ಹೋರಾಟಗಾರರು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅಂಥವರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಬೇಕು. ಹೈದರಾಬಾದ್ ಕರ್ನಾಟಕಕ್ಕೆ ಅವಶ್ಯವಾಗಿದ್ದ ಸಂವಿಧಾನದ 371 ನೇ ಕಲಂ ತಿದ್ದಪಡಿಗಾಗಿ ಈ ಭಾಗದ ಎಲ್ಲ ಸಂಘಟನೆಗಳು ಸತತ ಹೋರಾಟ ನಡೆಸಿದ ಪರಿಣಾಮ ಕೇಂದ್ರದಿಂದ ನ್ಯಾಯ ಸಿಗಲು ಸಾಧ್ಯವಾಯಿತು. ಸಂಘಟನೆಗಳಲ್ಲಿ ಮಹಿಳೆಯರು ಸಕ್ರೀಯವಾಗಿ ಭಾಗವಹಿಸಬೇಕು ಎಂದರು.

ಜೆಡಿಎಸ್ ಮುಖಂಡ ಶ್ರೀನಿವಾಸರಡ್ಡಿ ಚನ್ನೂರ, ನಾಡಿನ ನೆಲ, ಜಲದ ವಿಷಯದಲ್ಲಿ ರಾಜ್ಯದ ಹಿತಕ್ಕೆ ಧಕ್ಕೆ ಬಂದಾಗ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಂತಹ ಸಂಘಟನೆಗಳು ಉಗ್ರ ಹೋರಾಟ ನಡೆಸುತ್ತಿವೆ ಎಂದು ಹೇಳಿದರು. 

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶಗೌಡ, ಬಿಎಸ್ಸಾರ್ ಕಾಂಗ್ರೆಸ್ ಜಿಲ್ಲಾ ಸಂಚಾಲಕ ಆರ್. ಚನ್ನಬಸ್ಸು ವನದುರ್ಗ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವಯ್ಯೊ ಸ್ವಾಮಿ, ಮರೆಪ್ಪ ಬಿಳಾರ್, ಸುರೇಶ ಜೈನ್, ಚನ್ನಕೇಶವಗೌಡ ಬಾಣತಿಹಾಳ, ಅನಿಲ ಕರಾಟೆ, ಕೃಷ್ಣಮೂರ್ತಿ ಕುಲಕರ್ಣಿ, ಅಂಬ್ರೇಶ್ ಬಿಲ್ಲವ್, ರವಿ ಮುದ್ನಾಳ, ರಾಜು ಹಿರೇಮಠ, ಖಾಜಾ ಮೈನುದ್ದೀನ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಗೂಳಿ, ಮತ್ತಿತರರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಇಲ್ಲಿಯ ಮೈಲಾಪುರ ಅಗಸಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದವರೆಗೆ ಅದ್ದೂರಿ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT