ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತರಾಗಲು ಬಲಿಜ ಸಮಾಜಕ್ಕೆ ಕರೆ

Last Updated 4 ಜುಲೈ 2012, 9:20 IST
ಅಕ್ಷರ ಗಾತ್ರ

ಹಿರಿಯೂರು: ಮನಸ್ಸು ಮತ್ತು ವಯಸ್ಸು ಎರಡೂ ದೇವರು ಕೊಟ್ಟ ವರ. ಗುರುವಿಗೆ ಗುಲಾಮರಾಗಿ ಭಕ್ತಿ-ಭಾವದಿಂದ ಮನಸ್ಸಿನ ಹಸಿವು ನೀಗಿಸಿಕೊಂಡು ಯೋಗ್ಯವಾದ ಬದುಕು ಸಾಗಿಸಬೇಕು ಎಂದು ಸಾಹಿತಿ ಕವಿತ ಕೃಷ್ಣ ಕರೆ ನೀಡಿದರು.

ನಗರದ ಲಕ್ಷ್ಮಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲ್ಲೂಕು ಬಲಿಜ ಸಂಘ, ಮಹಿಳಾ ಘಟಕದ ವತಿಯಿಂದ ನಡೆದ ಯೋಗಿ ನಾರೇಯಣರ ತತ್ವ ಚಿಂತನೆ ಹಾಗೂ ಬಲಿಜ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೈವಾರದಲ್ಲಿ ಜನಿಸಿದ ಯೋಗಿನಾರೇಯಣರು ತಮ್ಮ ಕಾಯಕತತ್ವದ ಚಿಂತನೆಯಿಂದ ಎಲ್ಲರ ಮನೆ ಮಾತಾಗಿದ್ದಾರೆ. ಬಳೆಯ ವ್ಯಾಪಾರ ಮಾಡುತ್ತಿದ್ದ ಅವರು ಬಳೆ ತೊಡುತ್ತಿದ್ದ ಮುತ್ತೈದೆಯರಲ್ಲಿ ಲಕ್ಷ್ಮೀ- ಸರಸ್ವತಿಯರನ್ನು ಕಾಣುತ್ತಿದ್ದರು. ಮಾನವರಲ್ಲಿ ದೈವತ್ವ ಕಂಡ ಮಹನೀಯರು ಅವರು. ತ್ರಿಕಾಲ ಜ್ಞಾನಿಗಳಾಗಿ ಜಗತ್ತಿಗೆ ಆಧ್ಯಾತ್ಮ ಬೋಧನೆ ಮಾಡಿದರು. ಸಾಮಾನ್ಯರಾಗಿ ಹುಟ್ಟಿದ್ದ ಅವರು ಬರಡು ಭೂಮಿಯಲ್ಲಿ ಗಂಗೆಯನ್ನು ಚಿಮ್ಮಿಸಿ ಜನರ ಬದುಕು ಹಸನಾಗಿಸಿದವರು ಎಂದು ತಿಳಿಸಿದರು.

ಬಲಿಜ ಜನಾಂಗದ ಮಹಿಳಾ ವಿಭಾಗದ ಅಧ್ಯಕ್ಷೆ ಮೋಹಿನಿ ಶ್ರೀನಿವಾಸ್ ಮಾತನಾಡಿ, ಬಲಿಜ ಸಮಾಜ ಮುಂದೆ ಬರಬೇಕಾದರೆ ಸಂಘಟಿತರಾಗಬೇಕು. ಜನಾಂಗದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಆಧ್ಯಾತ್ಮಿಕ ಚಿಂತನೆ ಕೇವಲ ವಯಸ್ಸಾದವರಿಗೆ ಮಾತ್ರ ಎಂಬ ಧೋರಣೆ ಸಲ್ಲದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಎ. ರಾಜು ಮಾತನಾಡಿ, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸುವ ಮೂಲಕ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಲಾಗುವುದು. ಜನಾಂಗಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಎಚ್.ವಿ. ಶ್ರೀನಿವಾಸ್, ಎಚ್.ಪಿ. ರಾಜು, ಬಿ. ಕೆಂಚಪ್ಪ, ಬಿ.ವಿ. ಮಾಧವ, ವೈ.ಕೆ.ಎಚ್. ಕೇಶವಮೂರ್ತಿ, ವೈ.ಕೆ.ಎಚ್. ರಾಜಣ್ಣ, ಯಳನಾಡು ಅಂಜನಪ್ಪ, ಪಿ.ಆರ್. ವಿಶ್ವನಾಥಯ್ಯ, ಟಿ.ಜಿ. ನಾರಾಯಣಸ್ವಾಮಿ, ನಂದಿನಿ ಬಾಬು, ಎಂ.ಎಲ್. ಅಶೋಕ್‌ಬಾಬು, ಟಿ. ಅಣ್ಣೇಶ್‌ಕುಮಾರ್, ಎಚ್.ಆರ್. ಮಹೇಶ್, ರವಿ. ರಾಮಕೃಷ್ಣಪ್ಪ, ಮಂಜುನಾಥ್, ಎಸ್. ಮಂಜುನಾಥ್, ಜಯರಾಮಪ್ಪ, ದಿವಾಕರ್, ಯಳನಾಡು ತಿಮ್ಮಶೆಟ್ಟಿ, ರಮೇಶ್, ಸುರೇಶ್, ಪ್ರಭಾಕರ್, ಮಂಜುಳಾ, ನಾಗರತ್ನಮ್ಮ, ಜಯಮ್ಮ ಹಾಜರಿದ್ದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಚ್.ಎನ್. ನರಸಿಂಹಯ್ಯ ಸ್ವಾಗತಿಸಿದರು. ಟಿ. ಮಂಜುಳಾ ವಂದಿಸಿದರು. ಬಿ.ಜಿ. ಪದ್ಮನಾಭ್ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಗೆ ಆಯ್ಕೆ
ಕರ್ನಾಟಕ ರಾಜ್ಯ ಆಹಾರ ನಾಗರಿಕ ಸರಬರಾಜು ಪಡಿತರ ಹಾಗೂ ಅಡಿಗೆ ಅನಿಲ ಗ್ರಾಹಕರ ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸಿ.ಎಚ್. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಎನ್. ಹನುಮಂತರಾಯಪ್ಪ (ರಾಜ್ಯ ಘಟಕದ ಕಾರ್ಯಾಧ್ಯಕ್ಷ), ಚಂದು (ರಾಜ್ಯ ಸಂಚಾಲಕ), ದುರುಗೇಶ್ (ಜಿಲ್ಲಾ ಸಂಚಾಲಕ), ಕೇಶವಮೂರ್ತಿ (ನಗರ ಅಧ್ಯಕ್ಷ), ಶಾಹಿದಾ ಬಾನು (ಅಲ್ಪಸಂಖ್ಯಾತರ ಮಹಿಳಾ ವಿಭಾಗದ ಅಧ್ಯಕ್ಷೆ), ಕುಮಾರನಾಯ್ಕ (ತಾಲ್ಲೂಕು ಅಧ್ಯಕ್ಷ) ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT