ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷ

ಕಥೆ
Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ
-ಏಸು ಕ್ರಿಸ್ತ

ಮೈ ನಡುಗಿಸುವ ಕೆಟ್ಟ ಚಳಿ ಜೊತೆಗೆ ಎದುರಿಗಿರುವುದು ಕಾಣುವುದೇ ಇಲ್ಲ ಅನ್ನುವಂತಹಾ ಕೆಟ್ಟ ಕತ್ತಲು. ಇದರಲ್ಲಿಯೇ ಕುಜ್ನೇರ್ ಸಾಲು, ಗಂಟೆ ಕಂಬದ ಬಳಿ ಬಂದವನು ಸಣ್ಣಗೆ ಬೆವತು ಹೋದ. ಬೆಳಗಿನ ಜಾವ ಐದು ಗಂಟೆಗೆಲ್ಲ ಆತ ಪ್ರಾರ್ಥನೆಯ ಗಂಟೆ ಹೊಡೆಯುವುದು ರೂಢಿ. ಗಂಟೆ ಕಂಬದ ನಡುವೆ ತೂಗು ಬಿದ್ದ ಹಗ್ಗವನ್ನ ಬಿಚ್ಚಿಕೊಂಡು ಅದನ್ನ ಕೈಯಲ್ಲಿ ಹಿಡಿದು ಮೂರು ಮೂರು ಬಾರಿ ಹೊಡೆದು ನಂತರ ನಿಲ್ಲದೆ ಉದ್ದ ಗಂಟೆ ಹೊಡೆದರೆ ಅದು ಪ್ರಾರ್ಥನೆಯ ಗಂಟೆ. ಈ ಸದ್ದಿಗೆ ಜನ ಎಚ್ಚೆತ್ತು ದೇವರ ಪೀಠದ ಮುಂದೆ ಮೇಣದ ಬತ್ತಿ ಹಚ್ಚಿ ಪ್ರಾರ್ಥಿಸುತ್ತಾರೆ ಅನ್ನುವ ನಂಬಿಕೆ ಅವನದು, ಹೀಗೆಂದೇ ಅವನು ಕೆಟ್ಟ ಚಳಿಯಲ್ಲಿ, ಕೆಟ್ಟ ಕತ್ತಲೆಯಲ್ಲಿ ಕೆಟ್ಟ ಮಳೆಯಲ್ಲಿ ಅಲ್ಲಿಗೆ ಬರುತ್ತಾನೆ. ಬಂದವನು ಗಂಟೆ ಹೊಡೆಯುವ ಕಾಯಕವನ್ನ ತಪ್ಪದೆ ಮಾಡುತ್ತಾನೆ.

ಇಂದೂ ಹೀಗೆಂದೇ ಬಂದವ ಗಂಟೆ ಕಂಬಕ್ಕೆ ಅಷ್ಟು ದೂರದಲ್ಲಿ ಬೆಚ್ಚಿ ನಿಂತ. ಸಣ್ಣಗೆ ಬೆವರಿದ. `ಜೇಸು ಮರಿ ಜೋಸೆಫರೆ ನನ್ನನ್ನ ಕಾಪಾಡಿ' ಎಂದು ಮೊರೆ ಇಟ್ಟ. ಮುಂದೆ ಹೋಗುವುದೋ ಇಲ್ಲ ಹಿಂತಿರುಗಿ ಕೂಜ್ನಗೆ ಹೋಗುವುದೋ ಅನ್ನುವುದು ತಿಳಿಯದೆ ಕಂಗಾಲಾಗಿ ನಿಂತಾಗ `ಸಾಲು ಮಾಮ್' ಎಂಬ ದನಿ ಕೇಳಿಸಿತು. ಮೈ ನಡುಕ ಹತೋಟಿಗೆ ಬಂದು ಈತ `ಪಾದಿಗಾರಾನು' ಎಂದು ತೊದಲಿದ. `ಹೌದು ನಾನೆ' ಎಂದಿತು ಗಂಟೆ ಕಂಬದ ಬಳಿ ನಿಂತ ಆ ಅಸ್ಪಷ್ಟ ವ್ಯಕ್ತಿ. ಅದು ಮುಂದಿನ ಮಾತನ್ನು ಜೋಡಿಸಿತು ಕೂಡ.

`ಹೋಗು ಈ ಚಳಿಯಲ್ಲಿ ಬೆಚ್ಚಗೆ ಕಂಬಳಿ ಹೊದ್ದು ಮಲಗು... ಜನರಿಗಾಗಿ ನೀನು ಗಂಟೆ ಹೊಡೆಯೋದು ನಿಜ... ಆದರೆ ಯಾರು ಎದ್ದಿರುತ್ತಾರೆ... ಯಾರು ಪ್ರಾರ್ಥನೆಗೆ ಸಿದ್ಧರಾಗುತ್ತಾರೆ... ಹೋಗು... ಹೋಗು...'

ಪಾದರಿಯ ಈ ಮಾತಿನಲ್ಲಿ ಅಪಾರವಾದ ವೇದನೆ ಇತ್ತು, ಮಡುಗಟ್ಟಿದ ನೋವಿತ್ತು.

ಗಂಟೆ ಕಂಬದ ಬಳಿ ನಿಂತ ಪಾದರಿ ಅಲ್ಲಿಂದ ತಮ್ಮ ಬಂಗಲೆಯತ್ತ ನಡೆದಾಗ ಸಾಲು ನಿಧಾನವಾಗಿ ತನ್ನ ಕೂಜ್ನ ಕಡೆಗೆ ಹೆಜ್ಜೆ ಹಾಕಿದ.
ಪಾದರಿಗಳು ಹೇಳಿದ್ದು ನಿಜವೇ. ತಾನು ಚಳಿ, ಮಳೆ, ಕತ್ತಲು ಅನ್ನದೆ ನಸುಕಿನಲ್ಲಿ ಎದ್ದು, ಸಿಹಿ ನಿದ್ದೆ ಬಿಟ್ಟು ಇಲ್ಲಿ ಬಂದು ಇಗರ್ಜಿ ಗಂಟೆ ಹೊಡೆಯಬೇಕು. ಆದರೆ ಜನ ಏಳುವುದೇ ಇಲ್ಲ. ಎಲ್ಲೋ ಕೆಲ ಮುದುಕರು ಮುದುಕಿಯರು ಇಗರ್ಜಿ ಗಂಟೆ ಕಿವಿಗೆ ಬಿದ್ದ ತಕ್ಷಣ ಹಾಸಿಗೆ ಅಡಿಯಲ್ಲಿ ಇರಿಸಿದ ಜಪಸರ ಕೈಗೆ ತೆಗೆದು ಕೊಂಡು, ಹಾಸಿಗೆಯ ಮೇಲೆ ಕುಳಿತು ಕೊಂಡೇ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ, ತಾನು ಗಂಟೆ ಹೊಡೆಯದಿದ್ದರೂ ಅವರು ಪ್ರಾರ್ಥನೆ ಸಲ್ಲಿಸುವುದನ್ನು ನಿಲ್ಲಿಸುವುದಿಲ್ಲ, ಆದರೆ ಯುವಕ ಯುವತಿಯರು, ಮಧ್ಯ ವಯಸ್ಕರು ಎಲ್ಲಿ ಏಳುತ್ತಾರೆ? ಅಂದರೆ ತಾನು ಹೀಗೆ ಎದ್ದು ಬಂದು ಗಂಟೆ ಹೊಡೆದರೂ ಪ್ರಯೋಜನ ಏನು? ಅವನು ಕೂಜ್ನನತ್ತ ತಿರುಗಿದ. ಹೀಗೆ ಬಳಸಿಕೊಂಡು ಆತ ಕೂಜ್ನನತ್ತ ಹೋಗುವಾಗ ಇತ್ತೀಚೆಗೆ ಪಾದರಿಗಳು ಹೀಗೆ ಮಾತನಾಡುತ್ತಿರುವುದು ಅಚ್ಚರಿ ಅನಿಸಿತು. ಆದರೂ ಅವರು ನಿಜವನ್ನೇ ಆಡುತ್ತಿದ್ದಾರೆ ಅಲ್ಲವೆ ಅನಿಸದೆ ಇರಲಿಲ್ಲ.

ಆತ ಮೇಲಿನ ಚಿಲಕಕ್ಕೆ ಸಿಕ್ಕಿಸಿದ ಬಾಗಿಲ ಕೊಂಡಿ ಕಳಚಿ ಕೂಜ್ನ ಒಳಗೆ ಕಾಲಿರಿಸಿದ. 

***
ಹೊರಗೆಲ್ಲ ತಿಳಿ ಬೆಳಕು ಹರಡಿ, ಇಗರ್ಜಿ ಮಂದ ಬೆಳಕಿನಲ್ಲಿ ಮಿಂದು ಅದೊಂದು ಬಗೆಯ ದಿವ್ಯತೆಯನ್ನು ಅಲ್ಲೆಲ್ಲ ಹರಡಿರುವಾಗ ತಮ್ಮ ತಲೆಯ ಮೇಲಿನ ಟೋಪಿಯನ್ನು ತೆಗೆದು ಕಂಕುಳಿಗೆ ಇರಿಸಿಕೊಂಡು ನಿವೃತ್ತ ಆರ್.ಐ. (ರೆವಿನ್ಯೂ ಇನ್‌ಸ್ಪೆಕ್ಟರ್) ಬೋನಾ ರಾಡ್ರಿಗಸ್ ಇಗರ್ಜಿ ಮುಂದಿನ ಗೇಟು ತಳ್ಳಿಕೊಂಡು ಒಳಬಂದರು. ಇದು ಅವರ ದಿನ ನಿತ್ಯದ ಕೆಲಸ. ಅವರು ಸರಕಾರಿ ಕೆಲಸದಿಂದ ನಿವೃತ್ತರಾಗಿ ಆಗಲೇ ಎಂಟು ವರ್ಷಗಳು ಉರುಳಿವೆ. ನಿವೃತ್ತಿಯ ಸಮಯಕ್ಕೆ ಅವರು ಕೆಳ ಕೇರಿಯಲ್ಲಿ ನಾಲ್ಕು ಮನೆ, ಕಂಬಳಿ ಕೊಪ್ಪದಲ್ಲಿ ಒಂದು ನಾಲ್ಕು ಎಕರೆ ಜಮೀನು, ಹೆಂಡತಿ ಮಕ್ಕಳ ಮೈ ಮೇಲೆ ಸೇರುಗಟ್ಟಲೆ ಬಂಗಾರ, ಎಲ್ಲ ಮಾಡಿದ್ದರು. ಈಗ ಅವರು ನಿಶ್ಚಿಂತ ವ್ಯಕ್ತಿ. ಯಾರ ಕಾಟವಿಲ್ಲ ಯಾರ ಹಂಗಿಲ್ಲ ಅನ್ನುವ ಹಾಗೆ ಬದುಕಿದ್ದಾರೆ. ಸರ್ಕಾರಿ ಕೆಲಸದ ಮೇಲೆ ಇದ್ದಾಗ ಅವರ ಕಣ್ಣಲ್ಲಿ ರಕ್ತವೇ ಇರಲಿಲ್ಲ. ಇನ್ನು ಕಣ್ಣೀರು ಅನ್ನುವುದು ಅವರಿಗೆ ತಿಳಿದಿರಲಿಲ್ಲ. ಪಾಪ, ಅನುಕಂಪ, ಕರುಣೆ, ಅನ್ನುವುದು ಅವರಿಗೆ ಗೊತ್ತೇ ಇರಲಿಲ್ಲ. ತಮ್ಮಲ್ಲಿಗೆ ಕೆಲಸ ಮಾಡಿಸಿಕೊಂಡು ಹೋಗಲು ಬಂದವರನ್ನು ಬೋನ ಸಾಹೇಬರು ವಿವಿಧ ರೀತಿಯಲ್ಲಿ ಸುಲಿದದ್ದು ಈಗ ಒಂದು ಇತಿಹಾಸವೇ.

ಇಗರ್ಜಿಯ ಮುಂದೆ ಬಂದವರೇ ಅವರು ಶಿಲುಬೆಯ ವಂದನೆ ಸಲ್ಲಿಸಿ ಕುಜ್ನೇರನ ಮನೆಯ ಕಡೆ ತಿರುಗಿದರು. ಅಲ್ಲಿ ಇರುವ ಬೀಗದ ಕೈಯನ್ನು ತಂದು ಇಗರ್ಜಿಯ ಬಾಗಿಲು. ಕಿಟಕಿ ಬಾಗಿಲು ತೆಗೆಯ ಬೇಕು, ನಂತರ ಇಗರ್ಜಿ ಬಾಗಿಲ ಹತ್ತಿರದ ದಿವ್ಯ ತೀರ್ಥದ ಬಟ್ಟಲಲ್ಲಿ ತೀರ್ಥ ಇದೆಯೋ ನೋಡಿ, ದೇವರ ಪೀಠದ ಮೇಲಿನ ಬಟ್ಟೆ ಬದಲಾಯಿಸಿ, ಹೂ ಕುಂಡಕ್ಕೆ ಹೊಸ ಹೂವು ಇರಿಸಿ, ಪವಿತ್ರ ದೀಪಕ್ಕೆ ಎಣ್ಣೆ ಹಾಕಿ, ಮೇಣದ ಬತ್ತಿಗಳನ್ನ ಹೊಸದಾಗಿ ಹೊತ್ತಿಸಿ, ಪಾದರಿ ಮುಂದೆ ಸಲ್ಲಿಸಲಿರುವ ಬಲಿ ಪೂಜೆಗೆ ಎಲ್ಲ ವ್ಯವಸ್ಥೆ ಮಾಡಬೇಕು.

ಈ ಕೆಲಸವನ್ನು ಈ ಎಂಟು ವರ್ಷಗಳಿಂದ ಅವರು ಮಾಡಿಕೊಂಡು ಬಂದಿದ್ದರು. ಅವರ ಈ ಕೆಲಸದಿಂದಾಗಿ ಅವರಿಗೆ ಜನ ಗೌರವ ನೀಡುತ್ತಿದ್ದರು, ಸಂತ ಬೋನ, ಲ್ಹಾನ ಫಾದರ್ (ಚಿಕ್ಕ ಪಾದರಿ), ಭಾಗ್ಯವಂತ್, ಎಂದೆಲ್ಲ ಕರೆಯುತ್ತಿದ್ದರು. ಈ ಬಗೆಯ ಮಾತುಗಳಿಂದ ಅವರಿಗೆ ಸಂತಸವಾಗುತ್ತಿತ್ತು ಕೂಡ. ಅವರ ಭಕ್ತಿ ಮತ್ತೂ ಹೆಚ್ಚುತ್ತಿತ್ತು. ಅಲ್ಲದೆ ತಮ್ಮ ಜನರನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿತ್ತು. ಒಂದು ರೀತಿಯಲ್ಲಿ ಸಮಾಜದ ಮೇಲೆ ಹಿರಿತನವನ್ನು ಅವರು ಸಾಧಿಸಿದ್ದರು ಕೂಡ. ಜೊತೆಗೆ ಧರ್ಮ ಕೇಂದ್ರದ ಬಿಷಪ್ ಗುರುಗಳು ಅವರ ಮೇಲೆ ತುಂಬಾ ಭರವಸೆ ಇರಿಸಿ ಇವರಿಗೆ ಬಡ ಕ್ರೈಸ್ತರಿಗೆ ಮನೆ ಕಟ್ಟುವ ಜವಾಬ್ದಾರಿಯನ್ನ ವಹಿಸಿದ್ದರು. ನಿವೃತ್ತರಾದ ಮೇಲೆ ಈ ಬಗೆಯ ಯಾವುದೇ ಕೆಲಸ ಇಲ್ಲದೆ ಅಂಗೈ ಕೆರೆಯುತ್ತಿದ್ದುದರಿಂದ, ಈ ತುರಿಕೆ ಕಡಿಮೆಯಾಗಿ ಅವರು ನೆಮ್ಮದಿಯಿಂದ ಇದ್ದರು. ಜೊತೆಗೆ ನೆಹರು ಬಡಾವಣೆಯಲ್ಲಿ ಖಾಲಿಯಾಗಿದ್ದ ಅವರ ನಿವೇಶನದಲ್ಲಿ ಒಂದು ಮನೆ ಎದ್ದು ನಿಲ್ಲತೊಡಗಿತ್ತು. ಆ ಕೆಲಸ ಜೊತೆಯಲ್ಲಿ ಇಗರ್ಜಿ ಕೆಲಸವನ್ನ ಕೂಡ ಅವರು ಕೈಗೆತ್ತಿಕೊಂಡಿದ್ದರು.      ಹೀಗಾಗಿ ಬೆಳಿಗ್ಗೆ ಬೇಗ ಎದ್ದು ಇಲ್ಲಿ ದೇವರ ಕೆಲಸ ಮಾಡಲು ಅವರು ಧಾವಿಸಿ ಬರುತ್ತಿದ್ದರು. ಆದರೆ ಇಂದು ಕೂಜ್ನ ಕಡೆಗೆ ತಿರುಗಿದ ಅವರನ್ನು ಅವರಿಗಾಗಿ ಕಾದು ನಿಂತಂತೆ ಇದ್ದ ಪಾದರಿ ಇಗರ್ಜಿ ಬಾಗಿಲಲ್ಲಿಯೇ ತಡೆದು ನಿಲ್ಲಿಸಿದರು.

`ರಾಡ್ರಿಗಸ್, ಇನ್ನು ಇದು ಬೇಡ... ನೀವಿಲ್ಲಿ ಬಂದು ಲ್ಹಾನ ಫಾದರ್ ಸ್ಥಾನವನ್ನ ಅಲಂಕರಿಸೋದು ನಿಲ್ಲಿಸಿಬಿಡಿ... ಇಗರ್ಜಿ ಕೆಲಸ ಮಾಡಲಿಕ್ಕೆ ನಾನೀದೀನಿ...'

ಮುಖದ ಮೇಲೆ ಹೊಡೆದಂತೆ ಪಾದರಿ ಹೇಳಲು, ಮುಂದೆ ಏನು ಮಾಡಬೇಕು ಅನ್ನುವುದು ತಿಳಿಯದೆ ಬೋನ ಅಲ್ಲಿ ನಿಂತರು. ನಿಧಾನವಾಗಿ ಇಗರ್ಜಿಗೆ ಬೆನ್ನು ಮಾಡಿ ಅವರು ಮನೆಯ ದಾರಿ ಹಿಡಿದರು.

***
ಹತ್ತು ಗಂಟೆ ಆದಾಗ ಸೆರಗನ್ನು ತಲೆಯ ಮೇಲೆ ಹೊದ್ದು ಜೂಲಿಯಾನ ಇಗರ್ಜಿ ಮುಂದಿನ ಗೇಟ ತಳ್ಳಿಕೊಂಡು ಒಳ ಬಂದಳು. ಪಾದರಿ ಬಂಗಲೆ ಮೆಟ್ಟಿಲು ಏರಿ ಮೃದುವಾಗಿ ಬಂಗಲೆ ಬಾಗಿಲನ್ನು ಕಟಕಟಿಸಿದಾಗ ತುಸು ಹೊತ್ತಿನ ನಂತರ ಅದು ತೆರೆದುಕೊಂಡಿತು. ತಲೆಯನ್ನು ಮಾತ್ರ ಹೊರಹಾಕಿದ ಪಾದರಿ `ಬಾ ಜೂಲಿಯಾನ' ಎಂದರು.

ಜೂಲಿಯಾನ ಊರಿನ ಸರ್ಕಾರಿ ಆಸ್ಪತ್ರೆಯ ನರ್ಸ್. ಇವಳ ಗಂಡ ಒಂದು ತಿಂಗಳ ಹಿಂದೆ ತೀರಿಕೊಂಡ ಜಾನಿ ಬ್ಯಾಪ್ಟಿಷ್ಟ. ಈತ ಸಾಯುವುದಕ್ಕೂ ಎರಡು ತಿಂಗಳ ಮೊದಲು ಜೂಲಿಯಾನ ತನ್ನ ಮದುವೆಯ ಇಪ್ಪತ್ತೈದು ವರ್ಷಗಳ ಜುಬುಲಿಯನ್ನು ಏರ್ಪಡಿಸಿಕೊಂಡಿದ್ದಳು. ಊರಿನ ಲಯನ್ಸ್ ಕ್ಲಬ್ಬಿನ ಸಭಾ ಭವನದಲ್ಲಿ ಅದ್ದೂರಿ ಸಮಾರಂಭ ಏರ್ಪಾಟಾಗಿತ್ತು. ಸರ್ಕಾರಿ ಆಸ್ಪತ್ರೆಯ ವೈದ್ಯರೇ ಅಲ್ಲದೆ ಊರಿನ ಖಾಸಗಿ ನರ್ಸಿಂಗ್ ಹೋಂ ವೈದ್ಯರು, ಸರಕಾರಿ ಅಧಿಕಾರಿಗಳು, ಊರಿನ ಶ್ರಿಮಂತ ಜನ ಸಾಕಷ್ಟು ಬಂದು ಸಮಾರಂಭವನ್ನು ಯಶಸ್ವಿಗೊಳಿಸಿದ್ದರು. ಬಂದವರೆಲ್ಲ ಜೂಲಿಯಾನಳನ್ನ ಅಪ್ಪಿ, ಮುದ್ದಾಡಿದರು. ಬಹಳ ವರ್ಷಗಳ ಸ್ನೇಹವೋ ಗೆಳೆತನವೋ ಅನ್ನುವ ಹಾಗೆ ಅವಳ ಜೊತೆಯಲ್ಲಿ ವರ್ತಿಸಿದರು. ಅವಳ ಗಂಡ ಬ್ಯಾಪ್ಟಿಷ್ಟ ಲೆಕ್ಕಕ್ಕೇ ಇಲ್ಲ ಅನ್ನುವ ಹಾಗೆ ಮೂಲೆಯಲ್ಲಿ ಕುಳಿತಿದ್ದ. ಅಂದಿನ ಆ ಸಮಾರಂಭದ ಕೇಂದ್ರ ಬಿಂದುವಾಗಿದ್ದವಳೇ ಜೂಲಿಯಾನ. ಇವಳು ಬಂದವರಿಗೆಲ್ಲ ಉಪಚರಿಸಿ, ಮತ್ತೆ ಮತ್ತೆ ಅವರಿಗೆ ಬಡಿಸಿ, `ತೆಗೆದುಕೊಳ್ಳಿ, ತೆಗೆದುಕೊಳ್ಳಿ' ಎಂದು ಉಪಚಾರ ಮಾಡಿ ಇಡೀ ಸಮಾರಂಭದಲ್ಲಿ ಮಿಂಚಿ ಮಾಯವಾಗಿದ್ದಳು.

ಈ ಜುಬುಲಿಯಾದ ಒಂದು ತಿಂಗಳಿಗೆ ಬ್ಯಾಪ್ಟಿಷ್ಟ ತೀರಿಕೊಂಡ. ಜೂಲಿಯಾನಾಗೆ ಸಾಂತ್ವನ ಹೇಳಲು ಮತ್ತೆ ಜನ ಬಂದರು. ನಾಲ್ಕು ದಿನ ಜೂಲಿಯಾನ ಸರಳ ಉಡುಪು ಧರಿಸಿ ತಿರುಗಾಡಿದಳು. ಹೂವು ಮೇಣದ ಬತ್ತಿ ತೆಗೆದುಕೊಂಡು ಹೋಗಿ ಗಂಡನ ಸಮಾಧಿಗೆ ಅರ್ಪಿಸಿ ಬಂದಳು. ಇದೀಗ ಅವಳು ಮತ್ತೆ ಬದಲಾಗಿದ್ದಾಳೆ.

ಬಂಗಲೆಯ ಬಾಗಿಲಿಗೆ ಬಂದ ಅವಳನ್ನು ಕುತೂಹಲದಿಂದ ನೋಡಿದರು ಪಾದರಿ.

`ಏನು ಜೂಲಿಯಾನ?'

`ಅವರು ನನ್ನ ಒಂಟಿ ಮಾಡಿ ಹೋದರು ಫಾದರ್'

ಆಕೆ ಬಿಕ್ಕಿದಳು. ಅವಳ ಕಣ್ಣ ಅಂಚಿಗೆ ಒಂದು ನೀರ ಹನಿ ಬಂದು ನಿಂತು ಹೊರಗೆ ಧುಮುಕಲೋ ಬೇಡವೋ ಎಂಬಂತೆ ತುಳುಕಾಡಿತು. ಆಕೆ ಕೈ ಸಂಚಿಯಿಂದ ನೂರರ ಒಂದು ನೋಟನ್ನು ಹೊರ ತೆಗೆದು ಪಾದರಿಗಳ ಮೇಜಿನ ಮೇಲೆ ಇರಿಸಿದಳು.

`ಈ ತಿಂಗಳ ಹದಿನೈದಕ್ಕೆ ಒಂದು ಮರಣದ ಗಾಯನ ಪೂಜೆ ಕೊಡಬೇಕು ಫಾದರ್, ಆವತ್ತು ಮನೇಲಿ ಒಂದು ಜಪಮಾಲೆ ಪ್ರಾರ್ಥನೆ ಇದೆ... ಅದಕ್ಕೆ ನೀವು ಬರಬೇಕು... ಊರಿನ ಕೆಲವರನ್ನು ನಾನು ಕರೆದಿದ್ದೇನೆ... ಅವರಿಗೆ ಸದ್ಗತಿ ದೊರೆಯುವ ಹಾಗೆ ತಾವು ಬಂದು...'
`ಇಲ್ಲ ಇಲ್ಲ ಪೂಜೆ, ಸದ್ಗತಿ, ಏನೂ ಇಲ್ಲ... ನೀನು ಹೋಗು... ಹೋಗು...'

ಪಾದರಿ ಕೆಂಪಗಾಗಿ ಕಿರುಚಾಡಿ ಒಳಹೋಗಿ ತಮ್ಮ ಕೋಣೆಯ ಬಾಗಿಲು ಹಾಕಿಕೊಂಡರು.

ಜೂಲಿಯಾನ ಬಹಳ ಹೊತ್ತು ಅಲ್ಲಿ ನಿಂತಿದ್ದು ನಿಧಾನವಾಗಿ ಮನೆಯತ್ತ ನಡೆದಳು.

***
ಸಂಜೆಯಾದಾಗ ಪಾದರಿಯ ಬಂಗಲೆಗೆ ಬಂದವ ವಿದ್ಯುತ್ ನಿಗಮದ ಅಧೀಕ್ಷಕ ಸಾಲ್ವಾದೋರ. ಬರುವಾಗಲೇ ಸಿಹಿ ಮೈಸೂರು ಪಾಕಿನ ಒಂದು ಕೇಜಿ ಡಬ್ಬ ತಂದು ಪಾದರಿಯ ಮುಂದಿಟ್ಟ. ಅವನ ಕ್ರಿಯೆಯಲ್ಲಿ ಸಂಭ್ರಮವಿತ್ತು.

`ಏನು ಸಮಾಚಾರ?'

`ನಿಮಗೆ ಗೊತ್ತಿಲ್ಲ ಅಂತ ಕಾಣಿಸುತ್ತೆ ಫಾದರ್, ದೇವರ ಕೃಪೆಯಿಂದ ನನಗೆ ಹತ್ತು ವರ್ಷಗಳ ನಂತರ ಗಂಡು ಮಗುವಾಗಿದೆ'.
`ಓ ಮರೆತಿದ್ದೆ' ಎಂದರು ಪಾದರಿ.

ಈಗ ಸುಮಾರು ಒಂದು ತಿಂಗಳ ಹಿಂದೆಯೇ ಕುಜ್ನೇರ್ ಸಾಲು ಈ ಸುದ್ದಿ ತಂದಿದ್ದ.

`ಪಾದಿಗಾರಾನು... ಸಾಲ್ವದೋರರಿಗೆ ಕೊನೆಗೂ ಒಂದು ಗಂಡು ಮಗುವಾಯ್ತು...'

`ಕೊನೆಗೂ ಅಂದರೆ...'

`ಹತ್ತು ವರ್ಷ ಆಗಿತ್ತು ಪಾದಿಗಾರಾನೂ.... ಹರಕೆ, ಯಾತ್ರೆ, ಜಪಮಾಲೆ ಪ್ರಾರ್ಥನೆ, ವೆಲಾಂಗಣಿಗೆ ತಲೆಕೂದಲು, ಕೊಟ್ಟಕ್ಕೆ ಹೋಗಿ ಉಪವಾಸ ಎಲ್ಲ ಆಗಿತ್ತು... ಗಂಡ ಹೆಂಡತಿ ತುಂಬಾ ಕಷ್ಟ ಪಟ್ಟರು... ಕೊನೆಗೂ...'

`ಮಗು ಚೆನ್ನಾಗಿದೆ ಅಲ್ವಾ?'

`ಹೌದು... ವೈಜೀಣ್ ಕಾರ್ಮಿಲೀನ ಹೆರಿಗೆ ಮಾಡಿಸಿದರು... ಮಗು ಚೆನ್ನಾಗಿದೆಯಂತೆ... ಆದರೆ ಸಾಲ್ವದೋರನ ಬಾಸ್ ಯಾರಿದಾನೆ ಅವನದ್ದೇ ಮೂಗು ಕಣ್ಣು...'

ಅಲ್ಲಿಗೆ ಮಾತು ಮುಗಿಸಿದ್ದರು ಫಾದರ್. ಅದೆಲ್ಲ ಈಗ ನೆನಪಿಗೆ ಬಂದಿತು ಅವರಿಗೆ. ಅವರು ಸಾಲ್ವದೊರನತ್ತ ತಿರುಗಿ ಕೇಳಿದರು.
`ಈಗ ಏನು ಬಂದದ್ದು?'

`ಮುಂದಿನ ಭಾನುವಾರ ಮಗುವಿನ ನಾಮಕರಣ ಇರಿಸಿಕೊಂಡಿದ್ದೇನೆ ಫಾದರ್... ಈ ಕ್ರಿಶ್ಚಿಯನಿಂಗ್ ಸೆರಿಮೊನಿಗೆ ನಮ್ಮ ಕಚೇರಿಯವರೆಲ್ಲ ಬರತಿದಾರೆ... ಆವತ್ತು ನೀವು ಮಗೂನ ಕ್ರಿಸ್ತನ ಕೃಪೆಗೆ ಬರಮಾಡಿಕೊಳ್ಳಬೇಕು... ಹಾಗೇ ಸಮಾರಂಭಕ್ಕೆ ಬಂದು ಮಗು ಮತ್ತು ತಾಯಿಯನ್ನು ಆಶೀರ್ವದಿಸಬೇಕು...'

ಫಾದರ್ ತುಳಿಸಿಕೊಂಡ ಹಾವಿನಂತೆ ಕೆರಳಿ ನಿಂತರು. ಅವನು ತಂದ ಸಿಹಿಯ ಪೊಟ್ಟಣವನ್ನು ಅವನ ಕೈಗೆ ತುರುಕಿ- `ಹೊರಟು ಹೋಗು ಇಲ್ಲಿಂದ... ಇಲ್ಲಿ ನಿಲ್ಲಬೇಡ' ಎಂದು ಅಬ್ಬರಿಸಿದರು. ಸಾಲ್ವದೋರ ಅವರ ಜೊತೆಯಲ್ಲಿ ಇನ್ನೊಂದು ಮಾತನಾಡದೆ ಬಂಗಲೆಯಿಂದ ಹೊರಬಿದ್ದ.

***
ಸಂಜೆಯಾದಾಗ ಪಾದರಿಗಳ ಬಳಿ ಬಂದವನು ಮಾರ್ಟಿನ್ ಸೋಜ. ಅವನಿಗೆ ಸಿಮಿತ್ರಿಯಲ್ಲಿ ತನ್ನ ತಂದೆಯ ಸಮಾಧಿ ಕಟ್ಟಲು ಜಾಗ ಬೇಕಿತ್ತು.

`ಹಣ ಎಷ್ಟೇ ಆಗಲಿ ಫಾದರ್, ನನ್ನ ತಂದೆಗೆ ಒಂದು ಸಮಾಧಿ ಕಟ್ಟಿಸಬೇಕು ಫಾದರ್, ಅಮೃತ ಶಿಲೆ ಸ್ಲ್ಯಾಬುಗಳನ್ನ ಹಾಸಿ ಸಿಮಿತ್ರಿಯಲ್ಲಿ ಮತ್ತೊಂದಿಲ್ಲ ಅನ್ನುವ ಹಾಗೆ ಕಟ್ಟಿಸಬೇಕು... ನನ್ನ ತಂದೆಗೆ ನಾನು ಸಲ್ಲಿಸುವ ಒಂದ ಸೇವೆ... ಶ್ರಿಮಂತವಾದ ಒಂದು ಸಮಾಧಿ'.

`ನಿಲ್ಲು ಮಾರ್ಟಿನಾ... ನಿನ್ನ ತಂದೆ ಅಂದರೆ...'

`ನಿಮಗೆ ಮರೆತು ಹೋಗಿರಬೇಕು ಫಾದರ್...'

`ಇಲ್ಲ ಮರೆತಿಲ್ಲ... ನೀನು ಅವರನ್ನು ಮನೆಯಲ್ಲಿ ಇರಿಸಿಕೊಳ್ಳಲು ಕಷ್ಟವಾಗುತ್ತೆ ಅಂತ ಹಳ್ಳಿಯ ನಿನ್ನ ಜಮೀನಿನ ಹತ್ತಿರದ ಒಂದು ಗುಡಿಸಲಿನಲ್ಲಿ ಇರಿಸಿದ್ದಿ ಅಲ್ಲವೆ... ಮುದುಕ ನೋಡಿಕೊಳ್ಳುವವರು ಇಲ್ಲದೆ ನಾಲ್ಕು ದಿನ ನರಳಿ ನರಳಿ ಸತ್ತರು...'

`ಆದರೂ ಫಾದರ್ ಸತ್ತ ಮೇಲೆ ಅವರಿಗೆ ಸದ್ಗತಿ ಸಿಗಲಿ ಅಂತ ಸುಂದರವಾಗಿರುವ ಒಂದು ಸಮಾಧಿ ಮಾಡಿಸಬೇಕು ಅಂತ ನನ್ನ ಆಸೆ... ಅದೆಷ್ಟೇ ಖರ್ಚು ಆಗಲಿ...'

ಪಾದರಿ ಬಾಗಿಲತ್ತ ಹೆಜ್ಜೆ ಇರಿಸಿ ಸಿಟ್ಟಿನಿಂದ ನುಡಿದರು- `ಇಲ್ಲ ನಿನ್ನ ತಂದೆಯ ಸಮಾಧಿಯನ್ನು ನೀನು ಮಾಡಿದ್ದೀಯಲ್ಲ... ಸಾಕು... ಇನ್ನು ಅದನ್ನ ಕಟ್ಟಿಸಲಿಕ್ಕೆ ನಾನು ಅನುಮತಿ ಕೊಡೋದಿಲ್ಲ... ನೀನಿನ್ನು ಹೋಗಬಹುದು...'

ಅವರು ಮಾರ್ಟಿನ್‌ಗೆ ಬಾಗಿಲು ತೆರೆದುಕೊಟ್ಟರು.

ಮಾರ್ಟಿನ್ ಹೊರಬರುತ್ತಿರಲು ಬಾಗಿಲು ಮುಚ್ಚಿಕೊಂಡಿತು.

ಮಾರ್ಟಿನ್ ಮೆಟ್ಟಿಲು ಇಳಿಯುತ್ತ ಗೊಣಗಿಕೊಂಡ.

***
ಈಗ ಆ ಊರಿನ ಜನ ಒಂದು ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇಲ್ಲಿಯ ಪಾದರಿಯನ್ನು ಏನಾದರೂ ಮಾಡಿ ಇಲ್ಲಿಂದ ಬೇರೆ ಊರಿಗೆ ವರ್ಗ ಮಾಡಿಸಬೇಕು ಎಂದು ನಿರ್ಧರಿಸಿದ್ದಾರೆ. ಇದಕ್ಕೆ ಮೊದಲ ಪ್ರಯತ್ನ ಅನ್ನುವ ಹಾಗೆ ಧರ್ಮ ಕೇಂದ್ರದ ಬಿಷಪ್ ಗುರುಗಳನ್ನು ಕಾಣಬೇಕು ಅನ್ನುವ ನಿರ್ಧಾರ ಮಾಡಿದ್ದಾರೆ. ಇದರ ನೇತೃತ್ವವನ್ನು ನಿವೃತ್ತ ರೆವಿನ್ಯೂ ಇನ್‌ಸ್ಪೆಕ್ಟರ್ ಬೋನಾ ರಾಡ್ರಿಗಸ್ ವಹಿಸಿದ್ದಾರೆ.

ಇವರ ಜೊತೆಗೆ ಜೂಲಿಯಾನ, ಅಧೀಕ್ಷಕ ಸಾಲ್ವಾದೋರ, ಸೈಮನ್ ಪಿರೇರಾ, ಮಾರ್ಟಿನ್ ಸೋಜಾ, ಆಲ್ಬರ್ಟ ಡಿಸೋಜ ಮೊದಲಾದವರು ಇದ್ದಾರೆ. ಸದ್ಯದಲ್ಲಿಯೇ ಒಂದು ಭಾನುವಾರ ನೋಡಿ ಬಿಷಪ್ಪರಲ್ಲಿ ಹೋಗುವ ವಿಚಾರದಲ್ಲಿ ಇವರಿದ್ದಾರೆ. ಆದರೆ ಪಾದರಿಯ ಕುಜ್ನೇರ್ ಸಾಲುಗೆ ಈ ವಿಷಯ ಹಿಡಿಸುತ್ತಿಲ್ಲ. `ಪಾದರಿ ಊರಿನಲ್ಲಿಯೇ ಇರಲಿ' ಎಂದು ಆತ ದಿನ ನಿತ್ಯದ ಜಪಸರ ಪ್ರಾರ್ಥನೆಯಲ್ಲಿ ಒಂದು ಪರಲೋಕ ಮಂತ್ರ, ಮೂರು ನಮೋರಾಣಿ ಮಂತ್ರ ತಪ್ಪದೆ ಜಪಿಸುತ್ತಾನೆ. ಹೀಗೆ ತಾನು ಪ್ರಾರ್ಥನೆ ಸಲ್ಲಿಸುವುದರ ಬಗ್ಗೆ ಅವನು ಪಾದರಿಗಳ ಮುಂದೆ ನುಡಿದಾಗ ಅವರು ತಿಳಿಯಾಗಿ ನಕ್ಕರು. `

ದೇವರು ಕೂಡ ಇಂತಹ ಪ್ರಾರ್ಥನೆ ಕೇಳುತ್ತಾನೆ ಅನ್ನುವುದರ ಬಗ್ಗೆ ನನಗೆ ಅನುಮಾನ ಇದೆ' ಎಂದರು. ಅವರ ತಿಳಿನಗೆ ತುಸು ಭಾರವಾಗಿ ಮುಖದ ಮೇಲೆ ತೂಗಾಡಿತು. 

(ಕುಜ್ನೇರ-ಅಡಿಗೆ ಮಾಡುವಾತ, ಕೂಜ್ನ-ಅಡಿಗೆ ಮನೆ, ಪಾದಿಗಾರಾನು-ಪಾದರಿಗಳೇ ಅನ್ನುವ ಹಾಗೆ. ವೈಜೀಣ್-ಸೂಲಗಿತ್ತಿ, ಸಿಮಿತ್ರಿ-ಸ್ಮಶಾನ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT