ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಂಘರ್ಷದ ಜೀವನ'ಕ್ಕೆ ಸಂದ ಜಯ

Last Updated 17 ಡಿಸೆಂಬರ್ 2012, 6:06 IST
ಅಕ್ಷರ ಗಾತ್ರ

ವಿಜಾಪುರ: ಈತ ಉದಯೋನ್ಮುಖ ಚಿತ್ರಕಲಾವಿದ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಅಜ್ಜನ ಆಸರೆಯಲ್ಲಿ ಬೆಳೆಯುತ್ತಿರುವ ಈ ಯುವಕನಿಗೆ ಸಾಧಿಸುವ ಛಲ. ಕ್ಯಾಮಲಿನ್ ಆರ್ಟ್ ಫೌಂಡೇಶನ್ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಎರಡು ಪ್ರಶಸ್ತಿ ಬಾಚಿಕೊಂಡು ನಗೆ ಬೀರುತ್ತಿದ್ದಾನೆ.

ಹೀಗೆ `ಕೈ ಚಳಕ' ಪ್ರದರ್ಶಿಸಿದ ಯುವಕನ ಹೆಸರು ಶ್ರೀಕಾಂತ ರವಿ ರಜಪೂತ. ಇಲ್ಲಿಯ ಸಿಂದಗಿ ರಸ್ತೆಯ ಅಲ್ಲಾಪುರ ತಾಂಡಾದ ನಿವಾಸಿ. ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ ಸಿದ್ಧೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಬಿ.ವಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ.

ಕ್ಯಾಮಲಿನ್ ಆರ್ಟ್ ಫೌಂಡೇಶನ್ ಪ್ರತಿ ವರ್ಷವೂ ವೃತ್ತಿನಿರತ ಚಿತ್ರಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸುತ್ತದೆ. ಅಕ್ರಾಲಿಕ್, ತೈಲವರ್ಣ, ಜಲವರ್ಣ ಹಾಗೂ ಮಿಶ್ರ ಮಾಧ್ಯಮದಲ್ಲಿ ಒಂದೊಂದು ಪ್ರಶಸ್ತಿ ನೀಡುತ್ತದೆ. ಈ ವರ್ಷದ ವಿದ್ಯಾರ್ಥಿ ವಿಭಾಗದ  ಸ್ಪರ್ಧೆಯಲ್ಲಿ ಶ್ರೀಕಾಂತನು ಅಕ್ರಾಲಿಕ್ ಮತ್ತು ತೈಲವರ್ಣ ಎರಡೂ ಮಾಧ್ಯಮದಲ್ಲಿ ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾನೆ.

ಅಕ್ರಾಲಿಕ್ ಮಾಧ್ಯಮದಲ್ಲಿ ಈತ ಆಯ್ದುಕೊಂಡ ಕಲಾಕೃತಿಯ ಶೀರ್ಷಿಕೆ `ಜೀವನ ಒಂದು ಸಂಘರ್ಷ'. ಒಬ್ಬ ವ್ಯಕ್ತಿ ತನ್ನ ಹಾಗೂ ತನ್ನ ಕುಟುಂಬದವರ ಜೀವನ ನಿರ್ವಹಣೆಗೆ ಏನೆಲ್ಲ ಕಷ್ಟ ಪಡುತ್ತಾನೆ ಎಂಬುದು ಈ ಚಿತ್ರದ ವಸ್ತು ವಿಷಯ.

`ಈ ಚಿತ್ರದಲ್ಲಿ ಒಬ್ಬ ಕೂಲಿ ಕಾರ್ಮಿಕ ತ್ರಿಚಕ್ರ ಸೈಕಲ್‌ನಲ್ಲಿ ಒಂಬತ್ತು ಸಿಂಟೆಕ್ಸ್‌ಗಳನ್ನು ಹೇರಿಕೊಂಡು ಸಾಗಿಸುತ್ತಿದ್ದಾನೆ. ಆತನ ಬದುಕು ಅಕ್ಷರಶಃ ಕತ್ತೆಯಂತೆಯೇ ಭಾರ ಹೊತ್ತು ಸಾಗಿಸುವುದಾಗಿದೆ.  ಅದಕ್ಕಾಗಿಯೇ ಈ ಚಿತ್ರದ ಒಂದು ಬದಿಯಲ್ಲಿ ಕತ್ತೆಯ ಚಿತ್ರವನ್ನೂ ಸಾಂಕೇತಿಕವಾಗಿ ಚಿತ್ರಿಸಿದ್ದೇನೆ. ಇದು ವಿಭಿನ್ನ ಅಲೋಚನೆಯ ಚಿತ್ರವಾಗಿದೆ' ಎನ್ನುತ್ತಾನೆ ಶ್ರೀಕಾಂತ.

ಶೀರ್ಷಿಕೆ ರಹಿತ ತೈಲವರ್ಣ ಚಿತ್ರವೂ ಶ್ರೀಕಾಂತನಿಗೆ ಪ್ರಥಮ ಬಹುಮಾನ ತಂದುಕೊಟ್ಟಿದೆ. ಈ ಚಿತ್ರದಲ್ಲಿ ಸುಂದರವಾದ ಯುವತಿಯ ದೇಹವನ್ನು ಮೂರು ತುಂಡಾಗಿ ವಿಭಜಿಸಿ ರಚಿಸಲಾಗಿದೆ. ಬಣ್ಣದ ಸಂಯೋಜನೆ ಅದ್ಭುತವಾಗಿದೆ.

`ಕ್ಯಾಮಲಿನ್ ಆರ್ಟ್ ಫೌಂಡೇಶನ್ ಸಂಘಟಿಸಿದ್ದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳನ್ನೊಳಗೊಂಡ ದಕ್ಷಿಣ ಭಾರತ ಮಟ್ಟದ ಈ ಸ್ಪರ್ಧೆಯಲ್ಲಿ 7,000 ಕಲಾಕೃತಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 70 ಕಲಾಕೃತಿ ಆಯ್ಕೆಯಾಗಿವೆ.

ವಿದ್ಯಾರ್ಥಿ ವಿಭಾಗದಲ್ಲಿ ಆಯ್ಕೆಯಾದ 13 ಕಲಾಕೃತಿಗಳಲ್ಲಿ ಎರಡು ಕಲಾಕೃತಿ ಶ್ರೀಕಾಂತ ರಜಪೂತ ಅವರದ್ದಾಗಿವೆ' ಎಂದು ಸಿದ್ಧೇಶ್ವರ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಎಸ್. ಕಡೇಮನಿ, ಉಪನ್ಯಾಸಕ ಎಂ.ಎಂ. ಕನ್ನೂರ ಹೇಳುತ್ತಾರೆ.

`ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಒಟ್ಟಾರೆ 20 ಸಾವಿರ ನಗದು, 20 ಸಾವಿರ ಮೌಲ್ಯದ ಚಿತ್ರಕಲಾ ಪರಿಕರಗಳನ್ನು ನೀಡಿ ಶ್ರೀಕಾಂತನನ್ನು ಸನ್ಮಾನಿಸಲಾಗಿದೆ. ಈ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಕ್ಯಾಮಲಿನ್ ಆರ್ಟ್ ಫೌಂಡೇಶನ್‌ನವರು ಸಂಘಟಿಸುವ ಯುರೋಪ್ ಆರ್ಟ್ ಟೂರ್-2013ಕ್ಕೆ ಈತನಿಗೆ ಆಹ್ವಾನ ನೀಡಿದ್ದಾರೆ' ಎಂದು ಅವರು ಹೆಮ್ಮೆ ಪಡುತ್ತಾರೆ.

`ಧರ್ಮಸ್ಥಳದಲ್ಲಿ ನಡೆದ ಅಂಚೆ-ಕುಂಚ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದೇನೆ. ಈ ಸ್ಪರ್ಧೆಯ 12 ಪ್ರಶಸ್ತಿಗಾಗಿ 12 ಸಾವಿರ ಕಲಾಕೃತಿಗಳು ಸಲ್ಲಿಕೆಯಾಗಿದ್ದವು. ವಿಜ್ಞಾನದ ಕ್ರಾಂತಿ ಶೀರ್ಷಿಕೆಯ ನನ್ನ ಕಲಾಕೃತಿಗೆ ಪ್ರಥಮ ಬಹುಮಾನ ಬಂದಿತ್ತು. ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿ ಬಂದಿವೆ' ಎಂದು ಶ್ರೀಕಾಂತ ಸಂಭ್ರಮಿಸುತ್ತಾನೆ.

ಅಜ್ಜ-ಅಜ್ಜಿ, ತಾಯಿ, ತಮ್ಮ, ತಂಗಿಯ ಜೊತೆ ಬಡತನದಲ್ಲಿಯೇ ಸವಾಲಿನ ಜೀವನ ಸಾಗಿಸುತ್ತಿರುವ ಶ್ರೀಕಾಂತನಿಗೆ `ಜೀವನ ಒಂದು ಸಂಘರ್ಷ' ವಸ್ತು ವಿಷಯದ ಚಿತ್ರವೂ ಬಹುಮಾನ ತಂದುಕೊಟ್ಟಿದೆ!
ಶ್ರೀಕಾಂತನಿಗೆ (ಮೊ.8553735794) ಬೆಂಗಳೂರಿನಲ್ಲಿ ಎಂ.ಎಫ್.ಎ. (ಮಾಸ್ಟರ್ ಆಫ್ ಆರ್ಟ್ಸ್) ಮಾಡುವ ಬಯಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT