ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ಅಸ್ತವ್ಯಸ್ತ: ಪರದಾಡಿದ ಜನತೆ

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತ ಹಾಗೂ ಕೆ.ಆರ್.ವೃತ್ತಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ವಕೀಲರು ಬಿಎಂಟಿಸಿ ಬಸ್‌ಗಳೂ ಸೇರಿದಂತೆ ಎಲ್ಲಾ ವಾಹನಗಳನ್ನೂ ಬಲವಂತವಾಗಿ ತಡೆದರು.
ಪ್ರತಿಭಟನೆಯಿಂದ ಉಂಟಾದ ಸಂಚಾರ ದಟ್ಟಣೆಯಿಂದ ಮೆಜೆಸ್ಟಿಕ್‌ನಿಂದ ಹೊರಡಬೇಕಾದ ಬಸ್‌ಗಳೆಲ್ಲವೂ ಅಲ್ಲಿಯೇ ಉಳಿಯುವಂತಾಯಿತು.

ಅಲ್ಲದೇ ಮೆಜೆಸ್ಟಿಕ್‌ಗೆ ಬರಬೇಕಾದ ಬಸ್‌ಗಳೆಲ್ಲವೂ ಮೈಸೂರು ಬ್ಯಾಂಕ್ ವೃತ್ತದಿಂದಲೇ ತಲುಪಬೇಕಾದ್ದರಿಂದ ಬಸ್‌ಗಳು ಬೇರೆ ದಾರಿ ಹಿಡಿದು ಪ್ರಯಾಸದಿಂದ ಮೆಜೆಸ್ಟಿಕ್ ತಲುಪಬೇಕಾಯಿತು. ಇದರಿಂದ ನಗರದ ವಿವಿಧ ಭಾಗಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ವಕೀಲರಿಗೆ ಹಿಡಿಶಾಪ ಹಾಕಿದರು.

ಸಂಜೆ 6 ಗಂಟೆಯಾದರೂ ವಕೀಲರು ಪ್ರತಿಭಟನಾ ಸ್ಥಳವನ್ನು ಬಿಟ್ಟು ಕದಲದೇ ಇದ್ದುದರಿಂದ ಪ್ರಯಾಣಿಕರು ಕಾರ್ಪೊರೇಷನ್ ಬಳಿ ಇಳಿದು ಮೆಜೆಸ್ಟಿಕ್‌ವರೆಗೆ ನಡೆದೇ ಸಾಗುತ್ತಿದ್ದ ದೃಶ್ಯ ಕಂಡುಬಂತು. ನಡೆದು ಸಾಗುತ್ತಿದ್ದ ಪ್ರಯಾಣಿಕರು ಪ್ರತಿಭಟನೆ ನಡೆಸುತ್ತಿದ್ದ ವಕೀಲರ ಕಡೆಗೆ ನೋಡಿ ಬೈದುಕೊಂಡು ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಂಗವಿಕಲರು, ವೃದ್ಧರು, ರೋಗಿಗಳು ಮಕ್ಕಳೂ ಸೇರಿದಂತೆ ಅನೇಕರು ವಕೀಲರ ಪ್ರತಿಭಟನೆಯಿಂದ ತೊಂದರೆ ಪಡುವಂತಾಯಿತು.

ಸಂಜೆ ಏಳು ಗಂಟೆಯ ವೇಳೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಹನ ಸಂಚಾರ ಆರಂಭವಾದರೂ ವಕೀಲರ ಒಂದಷ್ಟು ಗುಂಪುಗಳು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಕೂಗಾಡುತ್ತಿದ್ದ ದೃಶ್ಯ ಕಂಡ ಸಾರ್ವಜನಿಕರು ವಕೀಲರ ವರ್ತನೆಯನ್ನು ಮನದಲ್ಲೇ ಶಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT