ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ ಪಾಲಿಸಿರಿ

Last Updated 22 ಜನವರಿ 2011, 9:55 IST
ಅಕ್ಷರ ಗಾತ್ರ

ಬೆಳಗಾವಿ: ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲೇ ರಸ್ತೆ ಸುರಕ್ಷತೆಯ ಕುರಿತು ಸಂಪೂರ್ಣ ಜ್ಞಾನ ಹೊಂದುವುದು ಹಾಗೂ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ಶುಕ್ರವಾರ ಇಲ್ಲಿ ತಿಳಿಸಿದರು.

ರಸ್ತೆ ಸುರಕ್ಷತೆ ಉದ್ದೇಶದಿಂದ ಹಮ್ಮಿಕೊಂಡಿರುವ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂಚಾರ ನಿಯಮ ಪಾಲನೆ ಉದ್ದೇಶದಿಂದ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಅವರಿಗೆ ನಾಗರಿಕರು ಸಹಕಾರ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದರು.

ಮುಖ್ಯವಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಬರುವ ಆಟೋಗಳು, ಪಾಲಕರು ಸಂಚಾರ ನಿಯಮ ಪಾಲಿಸುತ್ತಿಲ್ಲ. ಅದರಿಂದ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ ಕುರಿತು ವಿಶ್ವಾಸ ಹುಟ್ಟುತ್ತಿಲ್ಲ. ಹಿರಿಯರಂತೆ ಅವರೂ ವರ್ತಿಸಲು ಅದು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಶಾಲಾ ಮಟ್ಟದಲ್ಲಿ ಸಂಚಾರ ನಿಯಮ ಕುರಿತು ಅರಿತುಕೊಳ್ಳುವ ಜತೆಗೆ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಜತೆಗೆ ಇತರರಿಗೂ ಈ ಸಂಬಂಧ ತಿಳಿಹೇಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸೂಚಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ವಿದ್ಯಾರ್ಥಿ ಜಾಗೃತಿಗಾಗಿ ರಸ್ತೆ ಸುರಕ್ಷತಾ ಸಂಘಗಳನ್ನು ರಚಿಸಲಾಗಿದೆ. ರಸ್ತೆ ಸುರಕ್ಷತೆ ಬಗ್ಗೆ ನಾಲ್ಕು ದಿನಗಳ ತರಬೇತಿ ನೀಡಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ. ಇಂತಹ ಸಂಘಗಳು ಈ ಹಿಂದೆ ಬೆಂಗಳೂರಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಬೆಳಗಾವಿಯಲ್ಲೂ ಅಂತಹ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದರು.

ಮುಖ್ಯವಾಗಿ ಸಂಚಾರ ನಿಯಮ ಉಲ್ಲಂಘನೆಯಿಂದ ಅಪಘಾತ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಜನರ ಜೀವಕ್ಕೆ ಅದು ಅಪಾಯ ತಂದೊಡ್ಡಬಹುದು. ಅದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.

ಸಂಚಾರ ನಿಯಮ ಉಲ್ಲಂಘನೆ ಆಗುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬಹುದಾಗಿದೆ. ಈ ಸಂಬಂಧ ಎಲ್ಲ ಸಹಕಾರ ನೀಡಲು ಇಲಾಖೆ ಸಿದ್ಧವಿದೆ. ಪೊಲೀಸ್ ನಿಯಂತ್ರಣ ಕಚೇರಿ (100) ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಯದೀಪ ಸಿದ್ದಣ್ಣವರ, ಸಿದ್ದರಾಮೇಶ್ವರ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಡಿ. ಪಾಟೀಲ ಮಾತನಾಡಿ ಸಂಚಾರಿ ನಿಯಮ ಪಾಲನೆಯ ಅಗತ್ಯತೆ ವಿವರಿಸಿದರು.

ಟ್ರಾಫಿಕ್ ಇನ್ಸ್‌ಪೆಕ್ಟರ್ ಎಂ. ಶಿವಶಂಕರ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಲಾ ಮಕ್ಕಳಿಗೆ ಸಂಚಾರಿ ನಿಯಮ ಕುರಿತು ಮಾಹಿತಿ ನೀಡುವ ಉದ್ದೇಶವಿದೆ ಎಂದರು.
ನಗರದ ಶರ್ಮನ್ ಹೈಸ್ಕೂಲ್, ಕೇಂದ್ರೀಯ ವಿದ್ಯಾಲಯ, ಭರತೇಶ, ಜೆ.ಎ. ಹೈಸ್ಕೂಲ್ ವಿದ್ಯಾರ್ಥಿಗಳ ಸಂಘಗಳನ್ನು ರಚಿಸಿ ನಾಲ್ಕು ದಿನಗಳ ತರಬೇತಿ ನೀಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಡಿಎಸ್‌ಪಿ  ಜಿ.ಎಂ. ದೇಸೂರ ಸ್ವಾಗತಿಸಿದರು. ಪಿಎಸ್‌ಐ ಎಸ್.ಎಂ. ಪಾಟೀಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪಿಎಸ್‌ಐ ನೀಲಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT