ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ಪಥದ ಕರ್ಮಯೋಗಿ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಅವರು ಅಕ್ಷರಶಃ ಕರ್ಮಯೋಗಿ. ಅವರ ಸಾಧನೆಗಳು ಅನನ್ಯ. ಅವರೆಂದೂ ಯಶಸ್ಸಿನ ಬೆನ್ನು ಹತ್ತಿ ಹೋಗಲಿಲ್ಲ. ಬದಲಾಗಿ ಯಶಸ್ಸುಗಳೇ ಅವರನ್ನು ಅರಸಿಕೊಂಡು ಬಂದವು. 79ರ ಈ ಇಳಿವಯಸ್ಸಿನ್ಲ್ಲಲೂ ಪುಟಿದೇಳುವ ಅದಮ್ಯ ಉತ್ಸಾಹಿ. ಎಂಜಿನಿಯರಿಂಗ್ ಕೌಶಲ್ಯದ ಈ ಸಾಧಕ ಭಾರತದ `ಸಂಚಾರ ಪಥ~ಕ್ಕೆ ಹೊಸ ಭಾಷ್ಯ ಬರೆದರು. ದೆಹಲಿ ಮೆಟ್ರೊ ರೈಲು ಯೋಜನೆಯನ್ನು ಸಾಕಾರಗೊಳಿಸುವ ಮೂಲಕ ಆಧುನಿಕ ನಗರ ಸಂಚಾರ ವ್ಯವಸ್ಥೆಯ ಭೂಪಟದಲ್ಲಿ ಮಹತ್ವದ ದಾಖಲೆ ನಿರ್ಮಿಸಿದರು. ನಿವೃತ್ತಿಯ ನಂತರವೇ ಈ ಸಾಧನೆಗಳನ್ನು ಮಾಡುವ ಮೂಲಕ `ವೃದ್ಧಾಪ್ಯ~ ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂಬುದನ್ನು ತೋರಿಸಿಕೊಟ್ಟರು. ಕೊಂಕಣ ರೈಲ್ವೆ, ದೆಹಲಿ ಮೆಟ್ರೊ ಮೂಲಕ ದೇಶದ ಉದ್ದಗಲದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಹೆಸರು ಗಳಿಸಿದರು.

ಅವರೇ `ಭಾರತದ ಮೆಟ್ರೊ ಮ್ಯಾನ್~ ಎಂದೇ ಹೆಸರಾದ ಎಲಾಟ್ಟುವಳಪ್ಪಿಲ್ ಶ್ರೀಧರನ್.  ದೆಹಲಿ ಮೆಟ್ರೊ ರೈಲ್ ಕಾರ್ಪೊರೇಷನ್‌ನ (ಡಿಎಂಆರ್‌ಸಿ) ವ್ಯವಸ್ಥಾಪಕ ನಿರ್ದೇಶಕರಾಗಿ 14 ವರ್ಷಗಳ ಸುದೀರ್ಘ ಸೇವೆಯ ಬಳಿಕ ಕಳೆದ ಡಿ. 31 ರಂದು ನಿವೃತ್ತಿ ಹೊಂದಿದಾಗ ದಣಿವರಿಯದ ಈ ಸಾಧಕನ  ಮುಖದಲ್ಲಿ ಸಂತೃಪ್ತ ಭಾವ ತುಂಬಿ ತುಳುಕುತ್ತಿತ್ತು.

ನೀಲಕಂಠನ್ ಮೂಸ್ ಮತ್ತು ಎಲಾಟ್ಟುವಳಪ್ಪಿಲ್ ಅಮ್ಮಾಳು ಅಮ್ಮ ಅವರ ಎಂಟು ಮಕ್ಕಳಲ್ಲಿ ಕಿರಿಯವರಾದ ಇ. ಶ್ರೀಧರನ್ ಜನಿಸಿದ್ದು 1932ರ ಜೂನ್ 12ರಂದು. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕರುಗಪುತ್ತೂರು ಅವರು ಕುಟುಂಬದ ಮೂಲ. ಪಾಲಕ್ಕಾಡ್‌ನಲ್ಲಿ ಆರಂಭಿಕ ವಿದ್ಯಾಭ್ಯಾಸ ಮಾಡಿದ್ದ ಶ್ರೀಧರನ್ ಆಂಧ್ರಪ್ರದೇಶದ ಕಾಕಿನಾಡದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದರು. ಕೋಯಿಕ್ಕೋಡ್‌ನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದ ಅವರು, ಒಂದು ವರ್ಷ ಮುಂಬೈನ `ಬಂದರು ಟ್ರಸ್ಟ್~ನಲ್ಲಿ ಅಪ್ರೆಂಟಿಸ್ ಆಗಿ ಕಾರ್ಯ ನಿರ್ವಹಿಸಿದ್ದರು.

1954ರ ಡಿಸೆಂಬರ್ 17ರಂದು ರೈಲ್ವೆ ಇಲಾಖೆ ಸೇರಿದ ಶ್ರೀಧರನ್ ರೈಲ್ವೆಯ ಹಲವು ಚಾರಿತ್ರಿಕ ಘಟನೆಗಳಿಗೆ ಕಾರಣೀಭೂತರಾದರು. ಮಂಗಳೂರು-ಹಾಸನ ರೈಲುಮಾರ್ಗ, ರಾಮೇಶ್ವರದ ಪಾಂಬನ್ ಸೇತುವೆ ನಿರ್ಮಾಣ, ಕೊಂಕಣ ರೈಲು ಮಾರ್ಗ, ದೆಹಲಿಯ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದ ಮೆಟ್ರೊ ರೈಲು ಅವರ ಸಾಧನೆಯ ಮೈಲುಗಲ್ಲುಗಳು.

1963ರಲ್ಲಿ ರಾಮೇಶ್ವರಂನ ಪಾಂಬನ್ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋದಾಗ ಅಂದಿನ ರೈಲ್ವೆ ಸಚಿವ ಎಸ್. ಕೆ. ಪಾಟೀಲ್ ಹೊಸ ಸೇತುವೆ ನಿರ್ಮಾಣಕ್ಕೆ ಇಲಾಖೆಗೆ ಆರು ತಿಂಗಳ ಗಡುವು ನೀಡಿದ್ದರು. ಆದರೆ ರೈಲ್ವೆ ಜನರಲ್ ಮ್ಯಾನೇಜರ್ ಆ ಗಡುವನ್ನು ಮೂರು ತಿಂಗಳಿಗೆ ಇಳಿಸಿದರಲ್ಲದೆ 2 ಕಿ.ಮೀ. ಉದ್ದದ ಸೇತುವೆ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದ 31ರ ಹರೆಯದ ಶ್ರೀಧರನ್ ಅವರಿಗೆ ವಹಿಸಿದರು. ಅದನ್ನು ಸವಾಲಾಗಿ ಸ್ವೀಕರಿಸಿದ ಶ್ರೀಧರನ್ ಕೇವಲ 45 ದಿನಗಳಲ್ಲಿ ಹೊಸ ಸೇತುವೆ ಕಟ್ಟಿದರು. ಅಂದಿನಿಂದ ಶ್ರೀಧರನ್ ಹೆಸರಿನ ಜತೆಗೆ `ಪಾಂಬನ್~ ಎಂಬ ನಾಮಧೇಯವೂ ಸೇರಿಕೊಂಡಿತು. ಈ ಮಹತ್ ಸಾಧನೆಗೆ ಅವರು ರೈಲ್ವೆ ಸಚಿವರ ಪ್ರಶಸ್ತಿಗೆ ಪಾತ್ರರಾದರು.

1954ರಲ್ಲಿ ದಕ್ಷಿಣ ರೈಲ್ವೆಯಲ್ಲಿ ಪ್ರೊಬೆಷನರಿ ಅಸಿಸ್ಟೆಂಟ್ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದ್ದ ಶ್ರೀಧರನ್, 1981ರಲ್ಲಿ ಮುಖ್ಯ ಎಂಜಿನಿಯರ್,1987ರಲ್ಲಿ ಜನರಲ್ ಮ್ಯಾನೇಜರ್, 1989ರಲ್ಲಿ ರೈಲ್ವೆ ಬೋರ್ಡ್‌ನ ಸದಸ್ಯರೂ ಆದರು. 1990ರಲ್ಲಿ ಅವರು ರೈಲ್ವೆಯಿಂದ ನಿವೃತ್ತಿ ಹೊಂದಿದ ಬಳಿಕವೂ ಅವರು ಸುಮ್ಮನೆ ಕೂರಲಿಲ್ಲ.

ನಿವೃತ್ತಿಯ ಬಳಿಕ ಅವರು  ಮಾಡಿದ ಸಾಧನೆಗಳೇ ಹೆಚ್ಚು. ಅಂದಿನ ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಶ್ರೀಧರನ್ ಅವರ ಸೇವೆಯ ಅಗತ್ಯವನ್ನು ಮನಗಂಡರು.  ಅದೇ ವರ್ಷ ಶ್ರೀಧರನ್ ಕೊಂಕಣ ರೈಲ್ವೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಹಲವು ವಿಷಯಗಳಲ್ಲಿ ಕೊಂಕಣ ರೈಲ್ವೆ ವಿಶಿಷ್ಟ ಯೋಜನೆಯಾಗಿತ್ತು.

760 ಕಿ.ಮೀ. ಉದ್ದದ ಹಾದಿಯಲ್ಲಿನ 93 ಸುರಂಗ ಮಾರ್ಗಗಳು, 150ಕ್ಕೂ ಹೆಚ್ಚು ಸೇತುವೆಗಳು ಶ್ರೀಧರನ್ ಅವರಿಗೆ ಭಾರೀ ಸವಾಲನ್ನೊಡ್ಡಿದ್ದವು. ಜತೆಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಅಡಚಣೆಗಳು, ಹತ್ತಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು, ಧರಣಿ, ಸತ್ಯಾಗ್ರಹಗಳು, ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ ಇತ್ಯಾದಿ ಅನೇಕ ವಿವಾದಗಳು ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಆದರೆ ಕೈಗೆತ್ತಿಕೊಂಡ ಕೆಲಸದಿಂದ ಹಿಂದೆ ಸರಿಯದ ಶ್ರೀಧರನ್ ಛಲಬಿಡದ ತ್ರಿವಿಕ್ರಮನಂತೆ ಎಲ್ಲ ವಿವಾದಗಳಿಗೂ ತಾರ್ಕಿಕ ಅಂತ್ಯ ತೋರಿಸಿದರು. ಯೋಜನೆ ಕಾರ್ಯರೂಪಕ್ಕೆ ತರಲು ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾದಾಗ ಸಾರ್ವಜನಿಕರಿಂದ ಬಂಡವಾಳ ಕ್ರೋಡೀಕರಿಸುವ ಸಲಹೆ ನೀಡಿ ಅದನ್ನು ಕಾರ್ಯರೂಪಕ್ಕೆ ತಂದರು. ಏಳು ವರ್ಷಗಳ ಗಡುವಿನಲ್ಲೇ ಯೋಜನೆ ಮುಕ್ತಾಯಗೊಂಡಾಗ ಮುಂಬೈ ಮಂಗಳೂರು ನಡುವಿನ ಅಂತರ  ಮೂರನೇ ಒಂದರಷ್ಟು ಕಡಿಮೆಯಾಗಿತ್ತು.

ಮ್ಯಾನೇಜ್‌ಮೆಂಟ್ ಪದವಿ ಗಳಿಸದಿದ್ದರೂ ಕೊಂಕಣ ರೈಲ್ವೆಯಂತಹ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಶ್ರೀಧರನ್ ಉತ್ತಮ ಮ್ಯಾನೇಜರ್ ಎನಿಸಿಕೊಂಡರು.  ಸವಾಲುಗಳನ್ನು ಸ್ವೀಕರಿಸುವ ಛಾತಿಯೇ ಅವರ ಯಶಸ್ಸಿಗೆ ಕಾರಣವಾಯಿತಲ್ಲದೆ, ವೃತ್ತಿ ಜೀವನದ ಉದ್ದಕ್ಕೂ ಪಾಲಿಸಿಕೊಂಡು ಬಂದ ನಿಷ್ಠೆ, ಪ್ರಾಮಾಣಿಕತೆ, ಸಮಯಪ್ರಜ್ಞೆ ಅವರ  ಯಶಸ್ಸಿಗೆ ಬೆನ್ನೆಲುಬಾಗಿ ನಿಂತವು.

ಶ್ರೀಧರನ್ ಸಾಧನೆಗಳ ಟ್ರ್ಯಾಕ್ ಇಲ್ಲಿಗೇ ಮುಗಿಯುವುದಿಲ್ಲ. ಕೊಂಕಣ ರೈಲ್ವೆ ಯೋಜನೆ ಮುಗಿದದ್ದೇ ತಡ, 1997ರಲ್ಲಿ ಡಿಎಂಆರ್‌ಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ದೆಹಲಿ ಮೆಟ್ರೊ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಅವರ ಹೆಗಲೇರಿತು.

ಕೈಗೆತ್ತಿಕೊಂಡ ಯೋಜನೆಯನ್ನು ನಿಗದಿತ ಸಮಯದಲ್ಲಿ  ಮಾಡಿ ಮುಗಿಸುವುದದರಲ್ಲಿ ಶ್ರೀಧರನ್ ಎತ್ತಿದ ಕೈ. 2005ರಲ್ಲಿ  ನಿವೃತ್ತಿ ಹೊಂದುವುದಾಗಿ ಶ್ರೀಧರನ್ ಘೋಷಿಸಿದರೂ ಅವರ ಸೇವಾ ಅವಧಿಯನ್ನು ಇನ್ನೂ ಮೂರು ವರ್ಷಗಳಿಗೆ ವಿಸ್ತರಿಸಲಾಯಿತು. 2009ರಲ್ಲಿ ದೆಹಲಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದ ಸಮಯದಲ್ಲಿ ಪಿಲ್ಲರ್ ಒಂದು ಕುಸಿದುಬಿತ್ತು. ಆ ಲೋಪಕ್ಕೆ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ಸಲ್ಲಿಸಿ ಹುದ್ದೆಯ ಘನತೆ ಮೆರೆದರು.

ಆದರೆ ಶ್ರೀಧರನ್ ಅವರ ಕಾರ್ಯದಕ್ಷತೆಯನ್ನು ಅರಿತಿದ್ದ ಸರ್ಕಾರ ರಾಜೀನಾಮೆಯನ್ನು ತಿರಸ್ಕರಿಸಿತು. ಮೆಟ್ರೊದ ಎರಡನೇ ಹಂತದ ಯೋಜನೆ ಪೂರ್ಣಗೊಂಡ ಬಳಿಕ ಸೇವೆಯಿಂದ ವಿರಮಿಸುವುದಾಗಿ ಅವರು ಹೇಳಿದರು. ಹದಿನಾಲ್ಕು ವರ್ಷಗಳ ಸುದೀರ್ಘ ಸೇವೆಯ ಫಲವಾಗಿ ಇಂದು 190 ಕಿ.ಮೀ ಉದ್ದದ ದೆಹಲಿ ಮೆಟ್ರೊ ರೈಲು ಯೋಜನೆ ಕಾರ್ಯರೂಪಕ್ಕೆ ಬಂದಿದೆ. ದೆಹಲಿ ಮೆಟ್ರೊ ರೈಲುಗಳಲ್ಲಿ ಈಗ ನಿತ್ಯ ಸುಮಾರು 18 ಲಕ್ಷ ಜನರು ಪ್ರಯಾಣಿಸುತ್ತಾರೆ. ರಾಜಧಾನಿಯ ಸಂಚಾರ ವ್ಯವಸ್ಥೆ ಸುಗಮಗೊಂಡಿದೆ.
ಪ್ರತಿ ದಿನ ಬೆಳಿಗ್ಗೆ 8.45ಕ್ಕೆ ಕಚೇರಿಗೆ ಹಾಜರಾಗುತ್ತಿದ್ದ ಶ್ರೀಧರನ್ ಅವರ ಸಮಯಪ್ರಜ್ಞೆ ಇತರರಿಗೆ ಮಾದರಿ. ನಿಗದಿತ ಗಡುವಿನೊಳಗೆ ಯೋಜನೆಯನ್ನು ಪೂರ್ಣಗೊಳಿಸುವುದಕ್ಕೆ ಅವರು ಬದ್ಧರಾಗಿದ್ದರು. ಸಮಯದ ಪ್ರಾಮುಖ್ಯತೆ ತಿಳಿಸುವ ಮೂಲಕ ಗಡುವು ಸಮೀಪಿಸುತ್ತಿದೆ ಎಂದು  ಸಹೋದ್ಯೋಗಿಗಳಿಗೆ ನೆನಪಿಸಲು ಮೆಟ್ರೊ ಕಚೇರಿಯಲ್ಲಿ ಡಿಜಿಟಲ್ ಗಡಿಯಾರವನ್ನು ಇರಿಸಿದ್ದರು.

ಪಾಲಕ್ಕಾಡ್‌ನ ಹಳ್ಳಿಯೊಂದರ, ಸಾಧಾರಣ ಕುಟುಂಬದ ವ್ಯಕ್ತಿಯೊಬ್ಬ ನಿಷ್ಠೆ ಮತ್ತು ಕಾರ್ಯದಕ್ಷತೆಯಿಂದ  ಉತ್ತುಂಗ ಸ್ಥಾನಕ್ಕೆ ಏರಿದರೂ ಅವರು  ಪ್ರಚಾರಪ್ರಿಯರಲ್ಲ. ಕೊಂಕಣ ರೈಲ್ವೆ ಯೋಜನೆ ಅನುಷ್ಠಾನ ಸಮಯದಲ್ಲಿ  ಅವರು ಬಹಳಷ್ಟು ಟೀಕೆಗೊಳಗಾಗಿದ್ದರು. ಆದರೆ ಅದು ಅವರ ಕಾರ್ಯ ಸಾಧನೆಗೆ ಅಡ್ಡಿಯಾಗಲಿಲ್ಲ. ದೆಹಲಿ ಮೆಟ್ರೊ ದುರಂತ ಬಿಟ್ಟರೆ ಅವರೆಂದೂ ವಿವಾದಕ್ಕೆ ಗುರಿಯಾಗಲಿಲ್ಲ. `ನನ್ನ ಮೇಲಿನ ನಂಬಿಕೆಯಿಂದ ಸರ್ಕಾರ ನೀಡಿದ ಜವಾಬ್ದಾರಿಯನ್ನು ಅರಿತು ನಿಷ್ಠೆಯಿಂದ ಕೊನೆಯವರೆಗೂ ಅದನ್ನು ಪಾಲಿಸಿಕೊಂಡು ಬಂದೆ~ ಎನ್ನುವ ಶ್ರೀಧರನ್ ಅವರ ಮಾತಿನಲ್ಲಿ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಮಾಡಿ ಮುಗಿಸಿದ ಸಂತೃಪ್ತಿ ಇದೆ. ಸೂಕ್ತ ಕೆಲಸಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆಯೇ ತಮ್ಮ ಯಶಸ್ಸಿನ ಗುಟ್ಟು ಎನ್ನುವ ಅವರು ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿದರು.

ಅವರ ಸಾಧನೆಗಾಗಿ ಅನೇಕ ಪ್ರಶಸ್ತಿ ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ. ಭಾರತ ಸರ್ಕಾರದ ಪದ್ಮಶ್ರೀ, ಪದ್ಮವಿಭೂಷಣ, ಫ್ರಾನ್ಸ್ ಸರ್ಕಾರದ `ನೈಟ್ ಆಫ್ ದಿ ಲೀಜನ್ ಆಫ್ ಆನರ್~ ಇವುಗಳಲ್ಲಿ ಮುಖ್ಯವಾದದ್ದು.

ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಶಿಸ್ತು ಮತ್ತು ನಿಷ್ಠೆಗೆ ತಂದೆ ನೀಲಕಂಠನ್ ಮೂಸ್ ಅವರ ಪ್ರಭಾವ ಕಾರಣ ಎಂದು  ಶ್ರೀಧರನ್ ಮನಬಿಚ್ಚಿ ಹೇಳಿಕೊಂಡಿದ್ದಾರೆ.  ತಮ್ಮ  ಸಾಧನೆಗೆ ನಿತ್ಯವೂ ಭಗವದ್ಗೀತೆ ಪಾರಾಯಣ, ಧ್ಯಾನ, ಯೋಗ ಮತ್ತು ಪ್ರಾರ್ಥನೆಯನ್ನು ಅಳವಡಿಸಿಕೊಂಡಿದ್ದೇ ಕಾರಣ ಎನ್ನುತ್ತಾರೆ. ಇದೀಗ ದೆಹಲಿ ಮೆಟ್ರೊದ ಸಾರಥ್ಯವನ್ನು ಮಂಗೂ ಸಿಂಗ್ ಅವರಿಗೆ ಹಸ್ತಾಂತರಿಸುವ ಮೂಲಕ ದೆಹಲಿಗೆ ವಿದಾಯ ಹೇಳಲ್ದ್ದಿದಾರೆ.

ಒಂದರ ಸಾಧನೆಗೆ ಇನ್ನೊಂದರ ತ್ಯಾಗ ಅಗತ್ಯ ಎನ್ನುವ ಅವರು ನಿವೃತ್ತಿ ಬದುಕಿನಲ್ಲಿ  ಉಪನಿಷತ್ ಮತ್ತು ಇತರ ವೇದಗಳ ಅಧ್ಯಯನ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
2010ರಲ್ಲಿ ಬೈಪಾಸ್ ಸರ್ಜರಿ ಒಳಗಾಗಿದ್ದನ್ನು ಹೊರತುಪಡಿಸಿದರೆ 79ರ ಇಳಿವಯಸ್ಸಿನಲ್ಲೂ ಶ್ರೀಧರನ್ ಆರೋಗ್ಯವಂತರಾಗಿದ್ದಾರೆ. ನಿವೃತ್ತಿ ಜೀವನವನ್ನು ಕೇರಳದ ಪೊನ್ನಾನಿ ಮತ್ತು ಪಟ್ಟಾಂಬಿಯಲ್ಲಿ ಕಳೆಯಲಿಚ್ಚಿಸಿರುವ ಅವರು ಮರಳಿ ಗೂಡಿಗೆ ಸಾಗುತ್ತಿದ್ದಾರೆ. ಯುಮನಾ ತೀರ (ದೆಹಲಿ)ದಿಂದ  ಅವರ ಹುಟ್ಟೂರಿನ ಸಮೀಪ ಹರಿಯುವ ನಿಳಾ ನದಿಯ ತೀರದಲ್ಲಿ ಅವರು ವಿಶ್ರಾಂತ ಜೀವನ ನಡೆಸಲು ಅಣಿಯಾಗುತ್ತಿದ್ದಾರೆ.

ಶ್ರೀಧರನ್ ಅವರ ಸೇವೆಯನ್ನು ಬಳಸಿಕೊಳ್ಳಲು ಕೇರಳ ಸರ್ಕಾರ ಆಲೋಚಿಸುತ್ತಿದೆ. ಕೊಚ್ಚಿ ಮೆಟ್ರೊ ರೈಲು ಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಸರ್ಕಾರ ಅವರನ್ನು ಒತ್ತಾಯಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT