ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

Last Updated 7 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ತಾಲ್ಲೂಕಿನ ಹೆಬ್ಬಳ್ಳ ಜಲಾಶಯ ಕೋಡಿಬಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಸಮೀಪದಲ್ಲಿರುವ ಬೆಳಗನಹಳ್ಳಿ ಮತ್ತು ತೊರವಳ್ಳಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ಇದರಿಂದಾಗಿ ಎರಡು ಗ್ರಾಮಗಳ ಜನರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ರೋಗಿಗಳು ಮತ್ತು ಕೂಲಿಕಾರ್ಮಿಕರು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುವವರು ತೊಂದರೆಗೊಳಗಾಗಿದ್ದಾರೆ.

ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೆಬ್ಬಳ್ಳ ಜಲಾಶಯದ ನದಿ ಹಾದು ಹೋಗಿದ್ದು, ಈ ನದಿಗೆ ಚಿಕ್ಕದಾಗಿ ಸೇತುವೆಯನ್ನು ಹಿಂದೆ ನಿರ್ಮಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಸೇತುವೆಯ ಮೇಲೆ ನೀರು ಹರಿಯುತ್ತದೆ. ಇದರಿಂದ ಈ ಭಾಗದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದೆ.

ವರ್ಷದಲ್ಲಿ ಹಲವು ಬಾರಿ ಸೇತುವೆ ಮುಳುಗಡೆಯಾಗುವುದರಿಂದ ಪದೇ ಪದೇ ಪಟ್ಟಣದ ಸಂಪರ್ಕ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಅನಿವಾರ್ಯವಾಗಿ ಪಟ್ಟಣಕ್ಕೆ ಬರಲೇ ಬೇಕಾದರೆ 10 ಕಿಮೀ ಸುತ್ತಬೇಕು.

ಸೇತುವೆ ಮೇಲೆ ನೀರು ಹರಿಯುವುದು ತಿಳಿಯದ ದ್ವಿಚಕ್ರ ವಾಹನ ಸವಾರರು ಇಲ್ಲಿ ಬಿದ್ದ ಹಲವಾರು ನಿದರ್ಶನಗಳು ಇವೆ. ಆದರೂ ತಾಲ್ಲೂಕು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಈ ಗ್ರಾಮಗಳಿಗೆ ಸಾರಿಗೆ ಸಂಸ್ಥೆ ಬಸ್ಸು ಓಡಾಡುತ್ತಿವೆ.

ಮಳೆ ಬಂದು ನದಿ ತುಂಬಿ ಹರಿದರೆ ಈ ಬಸ್ಸುಗಳು ಬರುವುದೇ ಇಲ್ಲ.ಆದ್ದರಿಂದ ಹೆಬ್ಬಳ್ಳ ಜಲಾಶಯದ ಈ ಸೇತುವೆಯನ್ನು ಎತ್ತರಿಸಿದರೆ ಈ ಭಾಗದ ಗ್ರಾಮಗಳೂ ಸೇರಿದಂತೆ ಎಚ್.ಡಿ.ಕೋಟೆಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸಬಹುದು. ಇದರಿಂದ ಪಟ್ಟಣದಿಂದ ಮೈಸೂರಿಗೆ ನಾಲ್ಕೈದು ಕಿ.ಮೀ ಅಂತರ ಕಡಿಮೆಯಾಗುತ್ತದೆ.
ಈ ಸೇತುವೆಯನ್ನು ನಿರ್ಮಿಸಲು ಹಿಂದಿನಿಂದಲೂ ಒತ್ತಾಯ ಮಾಡುತ್ತಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಮಾಜಿ ಸಚಿವ ಎಂ.ಶಿವಣ್ಣನವರ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಈ ಸೇತುವೆಯನ್ನು ನಿರ್ಮಾಣ ಮಾಡಲು ಅಂದಾಜು ಪಟ್ಟಿಯನ್ನು ತಯಾರಿಸಿತ್ತು. ಆದರೆ ಕಾಮಗಾರಿಗೆ ಚಾಲನೆ ನೀಡಲು ಇಲಾಖೆಯಲ್ಲಿ ಹಣದ ಕೊರತೆಯಿಂದಾಗಿ ಯೋಜನೆ ನೆಗುದಿಗೆ ಬಿದ್ದಿತು.

ಈ ಭಾಗದ ಜನರ ಪ್ರಮುಖ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಸದಸ್ಯ ಬೆಳಗನಹಳ್ಳಿ ಶಿವರಾಜು ಮತ್ತು ತೊರವಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಮರಿಸಿದ್ದನಾಯಕ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT