ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜನಿಯ ಭರತನಾಟ್ಯ ರಂಜನೆ

ನಾದನೃತ್ಯ
Last Updated 2 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ರಂಗದ ಮೇಲೆ ತನ್ಮಯತೆಯಿಂದ ನರ್ತಿಸುತ್ತಿದ್ದ ಹದಿಮೂರರ ಬಾಲೆ ಸಂಜನಿ ಬಿ.ರಾವ್, ಕಲಾರಸಿಕರ ನೋಟದ ಕೇಂದ್ರಬಿಂದುವಾಗಿದ್ದಳು.

ಬೆಂಗಳೂರಿನ  ಜೆ.ಎಸ್.ಎಸ್. ಕಲಾ ಮಂದಿರದಲ್ಲಿ ಈಚೆಗೆ ನಡೆದ ಈ ಭರತನಾಟ್ಯ ಕಲಾವಿದೆಯ ‘ರಂಗ ಪ್ರವೇಶ’ ಕಾರ್ಯಕ್ರಮವು ವೈವಿಧ್ಯಪೂರ್ಣ ನೃತ್ಯ ಪ್ರಸ್ತುತಿಯಿಂದ ಆಕರ್ಷಕವಾಗಿತ್ತು.

ಗುರು ಸುಭದ್ರಾ ಪ್ರಭು ಅವರಲ್ಲಿ ನಾಟ್ಯಾಭ್ಯಾಸ ಮಾಡಿದ ಈ ಪುಟ್ಟ ಕಲಾವಿದೆ ಪ್ರತಿಭಾ ಪ್ರದರ್ಶನದಲ್ಲಿ ತನ್ನ ವಯಸ್ಸಿಗೂ ಮೀರಿದ ಹಿರಿಮೆಯನ್ನು ಪ್ರಕಟಗೊಳಿಸಿದಳು.


ನೃತ್ಯಾರ್ಪಣೆಯ ಮೊದಲ ಪ್ರಾರ್ಥನೆಯಾಗಿ ನೃತ್ಯದೇವನಾದ ಆ ನಟರಾಜ, ನೃತ್ಯಗುರು, ಸಹವಾದಕರು ಹಾಗೂ  ಕಲಾರಸಿಕರಿಗೆ ಸಲ್ಲಿಸುವ ಹಾರ್ದಿಕ ನಮನವೇ ‘ಪುಷ್ಪಾಂಜಲಿ’.

ಹಸನ್ಮುಖದಿಂದ  ರಂಗ ಪ್ರವೇಶಿಸಿದ ಸಂಜನಿ ನಟರಾಜ ಸ್ತುತಿಯನ್ನು (ರಾಗ–  ಗಂಭೀರನಾಟ, ಆದಿತಾಳ) ಸುಂದರ ಜತಿಗಳ ಮೂಲಕ ನೃತ್ಯ ಆರಂಭಿಸಿದಳು. ಅನಂತರ ಖಂಡಛಾಪು ತಾಳದ ‘ಶ್ರೀ ವಿಘ್ನ ರಾಜಾಂಭುಜೆ’ ಎಂಬ ಗಣೇಶ ಸ್ತುತಿಗೆ ಚುರುಕಿನಿಂದ ಹೆಜ್ಜೆಗಳನ್ನು ಹಾಕುತ್ತಾ ಗಣಪನ ಅನೇಕ ಅಪೂರ್ವ ಭಂಗಿಗಳನ್ನು ಪ್ರದರ್ಶಿಸಿದಳು.

ಕೃತಿಯಿಂದ ಕೃತಿಗೆ ಭಿನ್ನ ಆಯಾಮವನ್ನು ತೋರುತ್ತ ಸಾಗಿದ ನಾಟ್ಯಗತಿ ನಿಧಾನವಾಗಿ ವೇಗವನ್ನು ಪಡೆದುಕೊಂಡಿತು.

ಕಲಾವಿದೆಯ ಮುಖದ ವರ್ಚಸ್ಸು, ಗೆಲುವು ಹೆಚ್ಚಾಗುತ್ತ ಹೋದದ್ದು ವಿಶೇಷ.  ನೃತ್ತ  ಪ್ರಧಾನ ಜತಿಸ್ವರವನ್ನು (ರಾಗ-ಕಲ್ಯಾಣಿ, ತಾಳ-ರೂಪಕ) ಲೀಲಾಜಾಲವಾಗಿ ನಿಭಾಯಿಸುತ್ತಾ, ಕಣ್ಮನ ಸೆಳೆವ ಅಂಗಶುದ್ಧ ಭಾವ-ಭಂಗಿಗಳಲ್ಲಿ ಸಂಜನಿ ತನ್ನ ಛಾಪು ಮೂಡಿಸಿದಳು.

ರಂಗದ ತುಂಬ ನವನವೋನ್ಮೆಷಶಾಲಿನಿಯಾಗಿ ಉತ್ಸಾಹಪೂರ್ಣ ಭ್ರಮರಿಗಳ ಅಡವುಗಳಲ್ಲಿ ಲವಲವಿಕೆಯಿಂದ ನರ್ತಿಸಿದ್ದು ಆನಂದ ತಂದಿತು.

ಮೊದಲಿನ ಪ್ರಸ್ತುತಿಗಳಲ್ಲಿದ್ದ ಜತಿಸ್ವರಗಳು ಮುದ ನೀಡಿದಂತೆ, ಮುಂದೆ ಮೇಳವಿಸಿದ್ದು ಕಲಾವಿದೆಯ ಭಾವಪೂರ್ಣ ಅಭಿನಯ.

ನೃತ್ತ-ನೃತ್ಯಗಳ ಅಚ್ಚುಕಟ್ಟಾದ ಪ್ರಸ್ತುತಿ. ರಾಗಮಾಲಿಕೆಯ ‘ಸರಸಿಜಾಕ್ಷುಲು ಜಳಕ ಮಾಡೆ’ (ಮಿಶ್ರಛಾಪು ತಾಳ) ಎಂಬ ‘ಶಬ್ದ’ದ ನೃತ್ಯಭಾಗದಲ್ಲಿ ಕಲಾವಿದೆಯ ಭಾವಪೂರ್ಣ ಮುಖಾಭಿವ್ಯಕ್ತಿ  ಅನನ್ಯವಾಗಿತ್ತು.  ತುಂಟ ಕೃಷ್ಣನ ಬಾಲಲೀಲೆಗಳ ಸಂಚಾರಿ ಭಾಗದ ಅಭಿನಯವೂ  ಸುಮನೋಹರವಾಗಿತ್ತು. ಖಚಿತ  ಹಸ್ತಮುದ್ರೆ, ಪದಚಲನೆಗಳಿಂದ  ಸಂಜನಿ ಮುದ ನೀಡಿದಳು.

ಅನಂತರ ಸಂಕೀರ್ಣವಾದ ‘ವರ್ಣ’- ‘ಸ್ವಾಮಿ ನಾನುಂದ ನಡಿಮೈ’ (ರಚನೆ- ಪಾಪನಾಶನಂ ಶಿವನ್) ನಾಟಕುರಂಜಿ ರಾಗದಲ್ಲಿ (ಆದಿತಾಳ) ಸರ್ವವಂದಿತನಾದ ಮಹಿಮಾನ್ವಿತ ಆ ಶಿವನ ಸವಿವರ ಸುಂದರ ವರ್ಣನೆ ಹಾಗೂ ಅವನ ಜನಪ್ರಿಯ ನಾಟ್ಯವನ್ನು ಕಣ್ಣಿಗೆ ಕಟ್ಟುವಂತೆ ಸಾಕ್ಷಾತ್ಕರಿಸಿದಳು. ಪಲ್ಲವಿ, ಅನುಪಲ್ಲವಿ, ಚರಣಗಳಿಂದ ಕೂಡಿದ ಐದು ಜತಿಗಳ ಈ ಸಂಕೀರ್ಣ ವರ್ಣವನ್ನು ವೈವಿಧ್ಯಮಯ ಭಾವ ಭಂಗಿಗಳಿಂದ ಅಭಿವ್ಯಕ್ತಿಸಿದಳು.

ತಂಜಾವೂರು ಶಂಕರೈಯರ್,  ರೇವತಿ ರಾಗದಲ್ಲಿ ರಚಿಸಿದ ‘ಮಹಾದೇವ ಶಿವ ಶಂಭೋ’ ಕೃತಿಗೆ ನರ್ತಿಸುವಾಗ ಕಲಾವಿದೆ ಅರ್ಪಣಾ ಮನೋಭಾವದ ಸುಂದರ ಅಭಿವ್ಯಕ್ತಿ ನೀಡಿದಳು.

ಮುಂದಿನ ಪ್ರಸ್ತುತಿಯಲ್ಲಿ ರೌದ್ರಭಾವ ಪ್ರಧಾನವಾದ ಚೈತನ್ಯಪೂರ್ಣ ಅಭಿನಯದ ಮಹಿಷಾಸುರ ಮರ್ದಿನಿಯ ಅಪರಾವತಾರವಾಗಿ ಸಂಜನಿ ಕಲಾಸಕ್ತರ ಮನಸೂರೆಗೊಂಡಳು.

‘ಜಯದುರ್ಗೆ ದುರ್ಗತಿ ಪರಿಹಾರಿಣಿ’ ಎಂದು ಭಕ್ತಿಭಾವದಿಂದ ದೇವಿಸ್ತುತಿ ಮಾಡುತ್ತಾ, ಮಹಿಷಾಸುರನ ವಿಕಟ ಅಟ್ಟಹಾಸವನ್ನು ವೇಗದ  ಪದಗತಿಗಳಿಂದ  ರೌದ್ರ ನರ್ತನ ಸಾಕಾರಗೊಳಿಸಿ ಕಲಾ ರಸಿಕರ ಮೆಚ್ಚುಗೆಗೆ ಪಾತ್ರವಾದಳು.

ಪುರಂದರ ದಾಸರ ‘ಜಗನ್ಮೋಹನಾನೆ  ಕೃಷ್ಣ’ (ರಾಗ-ಷಣ್ಮುಖಪ್ರಿಯ) ಕೃತಿಯಲ್ಲಿ ಶ್ರೀಕೃಷ್ಣ ಕಾಳಿಂಗಮರ್ದನ ಮಾಡುವ ಸಂಚಾರಿಯಲ್ಲಿ ಕಲಾವಿದೆ ಹಾಕಿದ ಮಂಡಿ ಭ್ರಮರಿ ಅಡವುಗಳು ಅಮೋಘವಾಗಿದ್ದವು. ಕಾಳಿಂಗನ ನೆತ್ತಿಯ ಮೇಲೆ ನರ್ತನವಾಡುವ ನೃತ್ತ-ನೃತ್ಯ, ಅಭಿನಯಗಳು ಅತ್ಯಂತ ಸುಂದರವಾಗಿದ್ದವು.

ರಾಗ ಬೃಂದಾವನ ಸಾರಂಗದ ‘ಯಮುನಾ ತೀರ ವಿಹಾರಿ’ಯ ಚೈತನ್ಯಪೂರ್ಣ ಅಭಿನಯದಲ್ಲಿ ಕಲಾವಿದೆ ತನ್ನ ಅಪಾರ ಲಯ ಜ್ಞಾನ ಮತ್ತು ಸ್ಮರಣ ಶಕ್ತಿಗಳ ಬಲದಿಂದ ಗುರು ಸುಭದ್ರಾ ಪ್ರಭು ಧಾರೆಯೆರೆದ ವಿದ್ಯೆಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ ತಿಲ್ಲಾನದೊಂದಿಗೆ ನೃತ್ಯ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.

ಹಿನ್ನಲೆಯ ವಾದ್ಯ ಸಹಕಾರದಲ್ಲಿ ಸುಭದ್ರಾ ಪ್ರಭು (ನಟುವಾಂಗ), ಸಂಗೀತ (ರಮಾ ಜಗನ್ನಾಥ್), ಪ್ರಸನ್ನಸಿಂಹ (ಮೃದಂಗ), ಕೊಳಲು (ಕಾರ್ತಿಕ್), ಸೋಮಣ್ಣ (ಪಿಟೀಲು) ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT